UK Suddi
The news is by your side.

ಅರ್ಥ ಕಳೆದುಕೊಳ್ಳುತ್ತಿರುವ ಟಿವಿ ಚರ್ಚೆಗಳು

ಇತ್ತೀಚೆಗೆ ನಡೆದುಹೋದ ಒಂದು ಘಟನೆಯಿಂದಲೇ ಈ ಮಾತನ್ನು ಆರಂಭಿಸಬಹುದು. ಒಂದು ಸುದ್ದಿವಾಹಿನಿಯವರು ಕನ್ನಡದ ಒಬ್ಬ ಸಿನೆಮಾ ನಿರ್ದೇಶಕರಿಗೆ ಫೋನ್ ಮಾಡಿ ಅಂದು ಸಂಜೆ ತಮ್ಮ ವಾಹಿನಿಯಲ್ಲಿ ಒಂದು ಡಿಬೇಟ್ ಇರುವುದಾಗಿಯೂ ಅದರಲ್ಲಿ ನಿರ್ದೇಶಕರು ಪಾಲ್ಗೊಳ್ಳಬೇಕೆಂದೂ ಹೇಳಿದರು. ಚರ್ಚೆಯ ವಿಷಯ: ಜಿಎಸ್‌ಟಿ. ನಿರ್ದೇಶಕರು ತಾನು ಜಿಎಸ್‌ಟಿಯ ಪರ ಇರುವುದಾಗಿಯೂ ಟಿವಿ ಚರ್ಚೆಯಲ್ಲಿ ಭಾಗವಹಿಸಲು ತಯಾರಿರುವುದಾಗಿಯೂ ಸ್ಪಷ್ಟವಾಗಿ ತಿಳಿಸಿದರು. ಆದರೆ ಸಂಜೆ ಅವರಿಗೆ ಬರಬೇಕಿದ್ದ ಕಾರ್ಯಕ್ರಮ ದೃಢೀಕರಣದ ಕರೆ ಬರಲಿಲ್ಲ. ಟಿವಿ ಚರ್ಚೆಯಲ್ಲಿ ಪಾಲ್ಗೊಳ್ಳಲೆಂದು ತನ್ನ ಬೇರೆ ಕೆಲಸಗಳನ್ನೆಲ್ಲ ಬದಿಗೊತ್ತಿ ತಯಾರಾಗಿ ಕೂತಿದ್ದ ನಿರ್ದೇಶಕರು ಫೋನ್ ಕರೆ ಬರುತ್ತದೆಂದು ಕಾದು ನಿರಾಶರಾಗಿ ಕೊನೆಗೆ ತಾನೇ ಟಿವಿ ಕಚೇರಿಗೆ ಫೋನ್ ಮಾಡಿದಾಗ ಅತ್ತಣಿಂದ ಬಂದ ಉತ್ತರ: ನಮಗೆ ಜಿಎಸ್‌ಟಿಯ ವಿರುದ್ಧವಾಗಿ ಮಾತಾಡುವವರು ಬೇಕಾಗಿತ್ತು.

ನೀವು ಅದರ ಪರವಾಗಿ ಮಾತಾಡುತ್ತೇನೆ ಎಂದು ಹೇಳಿದ್ದರಿಂದ ನಿಮ್ಮ ಕೈ ಬಿಟ್ಟಿದ್ದೇವೆ. ನೀವು ಕಾರ್ಯಕ್ರಮಕ್ಕೆ ಬರಬೇಕಾಗಿಲ್ಲ. ಕುಪಿತರಾದ ಆ ನಿರ್ದೇಶಕರು ತನ್ನ ಅನುಭವವನ್ನು ಜಾಲತಾಣದಲ್ಲಿ ಹಂಚಿಕೊಂಡಾಗ, ಟಿವಿ ಚರ್ಚೆಗಳಲ್ಲಿ ಪರದೆ ಹಿಂದೆ ನಡೆಯುವ ಚಟುವಟಿಕೆಗಳ ಪರಿಚಯ ಇರದ ಬಹಳಷ್ಟು ಸಾಮಾನ್ಯ ಜನಕ್ಕೆ ಹೊಸ ವಿಷಯವೊಂದು ತಿಳಿದಂತಾಯಿತು. ನಾನು ಟಿವಿ ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ. ಹಾಗಾಗಿ ಈ ಲೇಖನ ಬರೆಯಲು ಅರ್ಹತೆ ಗಳಿಸಿದ್ದೇನೆಂಬ ನಂಬಿಕೆಯಲ್ಲಿ ಮುಂದಿನ ಮಾತುಗಳನ್ನು ಹೇಳುತ್ತಿದ್ದೇನೆ. 90ರ ದಶಕದಲ್ಲಿ, ದೇಶದ ಬಹುತೇಕ ಮನೆಗಳಲ್ಲಿ ದೂರದರ್ಶನವೊಂದೇ ಹೊರಜಗತ್ತಿಗೆ ಕಿಟಕಿಯಾಗಿದ್ದ ಕಾಲದಲ್ಲಿ, ಟಿವಿ ಡಿಬೇಟ್ ಎಂಬ ಪರಿಕಲ್ಪನೆಯೇ ಭಾರತದಲ್ಲಿ ಇರಲಿಲ್ಲ. 2000ನೇ ಇಸವಿಯ ಹೊತ್ತಿಗೆ ನಮ್ಮಲ್ಲಿ ನಿಧಾನವಾಗಿ ಸುದ್ದಿವಾಹಿನಿಗಳ (ನ್ಯೂಸ್ ಚಾನೆಲ್) ಭರಾಟೆ ಪ್ರಾರಂಭವಾಯಿತು.

ಎನ್‌ಡಿಟಿವಿ, ಸಿಎನ್‌ಎನ್, ನ್ಯೂಸ್ 18 ಮುಂತಾದ ವಾಹಿನಿಗಳು ಪ್ರಾರಂಭವಾಗಿ ದಿನದ 24 ಗಂಟೆಯೂ ಸುದ್ದಿ ಕೊಡುವ ಭರವಸೆಯೊಂದಿಗೆ ಜನರನ್ನು ಸೆಳೆಯತೊಡಗಿದವು. ಅದುವರೆಗೆ ಮುದ್ರಣ ಮಾಧ್ಯಮವನ್ನು ಮಾತ್ರ ನೆಚ್ಚಿಕೊಂಡಿದ್ದ ಇಂಡಿಯಾ ಟುಡೇ, ಟೈಮ್ಸ್‌ ಆಫ್ ಇಂಡಿಯಾ-ದಂಥ ಪತ್ರಿಕೆಗಳು ಕೂಡ ತಾಜಾ ಸುದ್ದಿ ಕೊಡಲಿಕ್ಕೆಂದು ತಂತಮ್ಮ ಸುದ್ದಿವಾಹಿನಿಗಳನ್ನು ಪ್ರಾರಂಭಿಸಿದವು. ಚಾನೆಲ್‌ಗಳೇನೋ ದಿನದ 24 ತಾಸು ಸುದ್ದಿ ಬಿತ್ತರಿಸುತ್ತವೆ; ಆದರೆ ಅಷ್ಟೊಂದು ಸುದ್ದಿಗಳು ಜಗತ್ತಿನಲ್ಲಿ ನಡೆಯುತ್ತಿರಬೇಕಲ್ಲ! ಭಾರತದ ವೀಕ್ಷಕ ಅತ್ಯಂತ ಚ್ಯೂಸಿ. ಆತನಿಗೆ ಅದೆಲ್ಲೋ ಡೆನ್ಮಾರ್ಕಿನ ಬೀದಿಯಲ್ಲಿ, ಆಸ್ಟ್ರೇಲಿಯದ ಕಾಡಿನಲ್ಲಿ, ಆಂಡೀಸ್ ಬೆಟ್ಟದಲ್ಲಿ ಸಂಭವಿಸಿದ ಘಟನೆಯ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ. ಅವನದೇನಿದ್ದರೂ ಸ್ವದೇಶೀ ಭಾವ ಮಾತ್ರ! ಅಂದರೆ ಭಾರತದೊಳಗೆ ನಡೆದ ಸುದ್ದಿಗಳಷ್ಟೇ ಅವನನ್ನು ಹೆಚ್ಚು ಆಕರ್ಷಿಸುತ್ತವೆ. ಅದರಲ್ಲೂ ನೆಗೆಟಿವ್ ಸುದ್ದಿಗಳಿಗೆ ವೀಕ್ಷಕರು ಹೆಚ್ಚು ಸ್ಪಂದಿಸುತ್ತಾರೆ.

ಎಲ್ಲೋ ದಲಿತರನ್ನು ಬೀದಿಯಲ್ಲಿ ಕೆಡವಿದರು, ಹೆಂಗಸೊಬ್ಬಳನ್ನು ಹಾಡುಹಗಲೇ ಅತ್ಯಾಚಾರ ಮಾಡಲಾಯಿತು, ಅನೈತಿಕ ಸಂಬಂಧ ಬಹಿರಂಗವಾಗಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು.. ಇವೇ ಮುಂತಾದ ಸುದ್ದಿಗಳು, ಜನರು ಬಯಸುತ್ತಾರೆ ಎಂಬ ಕಾರಣಕ್ಕಾಗಿ, ಟಿವಿಗಳಲ್ಲಿ ವಿಜೃಂಭಿಸತೊಡಗಿದವು. ಜನ ಅವನ್ನು ನೋಡುವುದು ಕುತೂಹಲದಿಂದ ಇರಬಹುದು, ಸಿಟ್ಟಿನಿಂದಲೂ ಇರಬಹುದು. ಆದರೆ ಆ ಮೂಲಕ ಟಿವಿವಾಹಿನಿಯ ಟಿಆರ್‌ಪಿಯನ್ನಂತೂ ಎತ್ತರಿಸುತ್ತಾರೆ ಎಂಬುದು ಗೊತ್ತಾದ ಮೇಲೆ ವಾಹಿನಿಗಳು ಅಂಥ ಸುದ್ದಿಗಳಿಗೇ ಹೆಚ್ಚಿನ ಸ್ಪೇಸ್ ಕೊಡತೊಡಗಿದವು. ಆದರೆ.. ಎಲ್ಲ ಸುದ್ದಿವಾಹಿನಿಗಳೂ ಅದೇ ಮಾದರಿಯನ್ನು ಅನುಸರಿಸತೊಡಗಿದಾಗ ಅವಕ್ಕಿಂತ ಭಿನ್ನವಾದದ್ದನ್ನು ಜನರಿಗೆ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಆಗ ಹುಟ್ಟಿದ್ದು ಟಿವಿ ಚರ್ಚೆ.

ಚರ್ಚೆಗಳ ಸ್ವರೂಪ ಇಂದು ಹೇಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಒಬ್ಬ ನಿರೂಪಕ, ಅಥವಾ ಆ್ಯಂಕರ್. ಆತನ ಜೊತೆ ನಾಲ್ಕರಿಂದ ಹತ್ತರವರೆಗೆ ಚರ್ಚಾಪಟುಗಳು. ನಿರೂಪಕ ಮೊದಲು ಚರ್ಚಾಪಟುಗಳನ್ನು ಪರಿಚಯಿಸಿ ಅಂದಿನ ಚರ್ಚೆಯ ವಿಷಯವನ್ನು ಪ್ರಸ್ತಾಪಿಸಿ ಪ್ರಾಸ್ತಾವಿಕವಾಗಿ ಒಂದಷ್ಟು ಮಾತಾಡುತ್ತಾನೆ. ಅದಾಗಿ ಹತ್ತು ನಿಮಿಷ ಕಳೆದು ನೋಡಿದರೆ ಅದು ಟಿವಿ ಸ್ಟುಡಿಯೋನೋ ಅಥವಾ ರಣರಂಗವೋ ಎಂದು ಗೊಂದಲವಾಗುವಂತೆ ಅಲ್ಲಿದ್ದವರೆಲ್ಲ ಕಿತ್ತಾಡುತ್ತಿರುತ್ತಾರೆ! ಯಾರು ದೊಡ್ಡ ಗಂಟಲಲ್ಲಿ ಚೀರಾಡುತ್ತಾನೋ ಆತನ ಮುಖಕ್ಕೆ ಕ್ಯಾಮೆರಾ ತಿರುಗುತ್ತದೆ. ಒಬ್ಬರ ಮಾತನ್ನು ತಡೆಯುವ, ಅಥವಾ ಬೇರೆಯವರು ಏನು ಮಾತಾಡುತ್ತಾರೆಂಬುದನ್ನು ಊಹಿಸಿದಂತೆ ತರ್ಕದ ಪಾಯಿಂಟುಗಳನ್ನು ಹಾಕುತ್ತಾ ಹೋಗುವ ಮಾತಿನ ಪ್ರದರ್ಶನವೇ ಚರ್ಚೆ ಎಂಬಲ್ಲಿಗೆ ಇಂದಿನ ಟಿವಿ ಡಿಬೇಟ್‌ಗಳು ಬಂದಿವೆ. ಚರ್ಚೆ ನಡೆಯುವಾಗ ಅದರ ಟಿಆರ್‌ಪಿ ಹೆಚ್ಚಿಸಲು ಟಿವಿಗಳು ಏನೆಲ್ಲ ಮಾಡುತ್ತವೆ?

ಮೊದಲನೆಯದಾಗಿ ಜನರಿಗೆ ಗೊಂದಲವಾಗುವಂಥ ಶೀರ್ಷಿಕೆ ಇಡುತ್ತವೆ. ಇಡೀ ಚರ್ಚೆಯನ್ನು ನೋಡಿದ ಮೇಲೆ, ಆ ಚರ್ಚೆಗೂ ಕೊಟ್ಟ ಶೀರ್ಷಿಕೆಗೂ ಏನು ಸಂಬಂಧ ಎಂದು ವೀಕ್ಷಕ ಯೋಚಿಸುವಂತಾಗುತ್ತದೆ. ಇದನ್ನು ಜಾಲತಾಣಗಳ ಈ ಹೊಸ ಜಮಾನಾದಲ್ಲಿ ಕ್ಲಿಕ್‌ಬೈಟಿಂಗ್ ಎನ್ನುತ್ತಾರೆ. ಆಕರ್ಷಕ, ಆಘಾತಕಾರೀ ಶೀರ್ಷಿಕೆ ಕೊಟ್ಟು ಓದುಗ/ನೋಡುಗರ ದಾರಿ ತಪ್ಪಿಸುವುದು ಮತ್ತು ಅವರು ಈ ಸುದ್ದಿಗಳನ್ನು ಓದುವಂತೆ/ನೋಡುವಂತೆ ಮಾಡುವುದು ಇದರ ಉದ್ದೇಶ. ಎರಡನೆಯದಾಗಿ, ಚರ್ಚೆಯಾಗಬೇಕಾದ ಸಂಗತಿಯೇ ಅಲ್ಲವೆನ್ನುವಂಥ ಕ್ಷುದ್ರ ವಿಷಯಗಳನ್ನು ಇಟ್ಟುಕೊಂಡೂ ಪ್ರಳಯಸ್ವರೂಪಿ ಚರ್ಚೆಗಳು ಆಗುವಂತೆ ಮಾಡುವುದು. ಯಾವುದೋ ನಟ ಇನ್ಯಾವುದೋ ನಟಿಯ ಜತೆಗಿದ್ದ ಫೋಟೋ ಅನ್ನು ಮತ್ಯಾವುದೋ ನಟಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಳು ಎಂಬ ವಿಷಯಕ್ಕೆ ಸುದ್ದಿವಾಹಿನಿಗಳು ಮೂರ್ನಾಲ್ಕು ದಿನ ಚರ್ಚೆ ಮಾಡಿದ್ದಿದೆ.

ಅಂಥ ಸಂಗತಿಗಳು ನಿಜವಾಗಿಯೂ ಜನಸಾಮಾನ್ಯರ ಬಾಳನ್ನು ಅಣುವಿನಷ್ಟಾದರೂ ಪ್ರಭಾವಗೊಳಿಸುತ್ತವೆಯೇ? ಮೂರನೆಯದಾಗಿ, ತಮಗೆ ಬೇಕಾದ ಜನರನ್ನಷ್ಟೇ ಕೂರಿಸಿ, ತಾವು ತೋರಿಸಬಯಸಿದ ಕ್ಲಿಪ್ಪಿಂಗ್/ನ್ಯೂಸ್ ಅನ್ನಷ್ಟೇ ತೋರಿಸಿ ಜನರಲ್ಲಿ ತಾವು ರೂಪಿಸಬಯಸಿದ ಅಭಿಪ್ರಾಯ ಮೂಡುವಂತೆ ಮಾಡುವುದು. ಇಲ್ಲಿ ನಿಜ ಸಂಗತಿ ಏನು? ನಿಜವಾಗಿಯೂ ಸ್ಥಳದಲ್ಲಿ ನಡೆದ ಘಟನೆ ಯಾವುದು? ಎಂಬ ವಿವರಗಳು ಯಾರಿಗೂ ಬೇಕಾಗಿಲ್ಲ. ಆ ಕ್ಷಣಕ್ಕೆ ಅದೊಂದು ಸೆನ್ಸೇಶನಲ್ ಸುದ್ದಿಯನ್ನು ನಾವೇ ಮೊತ್ತಮೊದಲಾಗಿ ಬ್ರೇಕ್ ಮಾಡಿ ಅದರ ಬಗ್ಗೆ ಚರ್ಚೆ ಹಮ್ಮಿಕೊಂಡಿದ್ದೇವೆ ಎಂಬುದನ್ನು ತೋರಿಸುವ ಧಾವಂತ ಸುದ್ದಿವಾಹಿನಿಗಳಿಗೆ ಇರುತ್ತದೆ.

ಇನ್ನು ಟಿವಿ ಚರ್ಚೆಗಳಿಗೆ ವ್ಯಕ್ತಿಗಳನ್ನು ಹೇಗೆ ಆರಿಸಲಾಗುತ್ತದೆ? ವ್ಯಕ್ತಿಯ ವೈಯಕ್ತಿಕ ಆಸಕ್ತಿಯ ಕ್ಷೇತ್ರ ಯಾವುದು ಎಂಬುದು ಅಷ್ಟೇನೂ ಮುಖ್ಯವಾಗುವುದಿಲ್ಲ. ಆತ ಚೆನ್ನಾಗಿ ಮಾತಾಡಬಲ್ಲನಾ ಇಲ್ಲವಾ ಎಂಬುದಷ್ಟೇ ಮುಖ್ಯ. ನಾಲ್ಕು ಜನಕ್ಕೆ ಗೊತ್ತಿರುವ ಮುಖ, ಸೆಲೆಬ್ರಿಟಿ, ಅರಳು ಹುರಿದಂತೆ ಮಾತಾಡಬಲ್ಲ, ಅಕ್ಕಪಕ್ಕದವರನ್ನು ಬಾಯಿ ಮುಚ್ಚಿಸಿ ವಿಜೃಂಭಿಸಬಲ್ಲ ಎಂಬಷ್ಟು ಅರ್ಹತೆಗಳಿದ್ದರೆ ಸಾಕು, ಯಾರು ಬೇಕಾದರೂ ಚರ್ಚೆಗಳಲ್ಲಿ ಭಾಗವಹಿಸಬಹುದು, ಯಾವ ವಿಷಯದ ಮೇಲಾದರೂ ತಜ್ಞರಂತೆ ಮಾತಾಡಬಹುದು.

ಇಲ್ಲಿ ವಿಷಯ ತಜ್ಞರಾಗಿರುವುದು ಮುಖ್ಯವಲ್ಲ; ಆದರೆ ತಜ್ಞರಂತೆ ಬಿಂಬಿಸಿಕೊಳ್ಳುವುದು ಮುಖ್ಯ. ಹಾಗಾಗಿ ಕೆಲವು ಚಾನೆಲ್‌ಗಳಲ್ಲಿ ಅವವೇ ಮುಖಗಳು ರಾಜಕೀಯ, ನ್ಯಾನೋಟೆಕ್ನಾಲಜಿ, ಬಸವತತ್ತ್ವ, ವೆಸೂವಿಯಸ್‌ನ ಅಗ್ನಿಪರ್ವತ, ಚಕ್ಕುಲಿ ಮಾಡುವ ಸುಲಭ ವಿಧಾನ.. ಹೀಗೆ ಎಲ್ಲಾ ವಿಷಯಗಳಲ್ಲೂ ತಜ್ಞರಾಗಿ ಕಾಣಿಸಿಕೊಳ್ಳುತ್ತಿರುತ್ತವೆ. ಇಂಥವರ ಇನ್ನೊಂದು ಬಲ ಏನೆಂದರೆ ತಮ್ಮ ಮಾತಿಗೆ ಪುಷ್ಟಿ ಕೊಡಲು ಅವರು ಬುದ್ಧನಿಂದ ಮೋದಿಯವರೆಗೆ, ಅಲ್ಲಮನಿಂದ ಒಬಾಮನವರೆಗೆ ಎಲ್ಲರ ಮಾತುಗಳನ್ನೂ ಕೋಟ್ ಮಾಡುತ್ತಿರುತ್ತಾರೆ. ತಮ್ಮ ಮಾತಿಗೆ ಯಾವಯಾವುದೋ ದಾಖಲೆಗಳನ್ನು ಹೇಳುತ್ತಿರುತ್ತಾರೆ. ಆ ಕ್ಷಣಕ್ಕೆ ತಮ್ಮ ಪ್ರತಿಸ್ಪರ್ಧಿಯನ್ನು ಬಾಯಿ ಮುಚ್ಚಿಸುವ ಕಲೆ ಅವರಿಗೆ ಕರಗತ. ಇಂಥ ಪರಿಣಿತರೇ ಬಹುಸಂಖ್ಯಾತರಾಗಿಬಿಟ್ಟರೆ ಆ ಚರ್ಚೆ ಬೇಗ ಹಳ್ಳ ಹಿಡಿಯುವುದು ಖಂಡಿತ. ಹತ್ತು-ಹದಿನೈದು ನಿಮಿಷಗಳಲ್ಲಿ ಎಲ್ಲವೂ ಕಲಸುಮೇಲೋಗರವಾಗಿ ನೋಡುಗನಿಗೆ ಆ ಚರ್ಚೆಯ ಒಂದಂಶವೂ ಸ್ಪಷ್ಟವಾಗುವುದಿಲ್ಲ. ಅಂಥವನ್ನು ಗಲಾಟೆ, ಶಬ್ದಮಾಲಿನ್ಯ ಎನ್ನುವುದು ಮೇಲು.

ಇಲ್ಲಿ ಟಿವಿ ಮಾಧ್ಯಮದ ಮಂದಿಯನ್ನು ಕೇಳಬೇಕಾದ ಕೆಲವು ಪ್ರಶ್ನೆಗಳಿವೆ. ಒಂದು – ಟಿವಿ ಡಿಬೇಟ್‌ಗಳಲ್ಲಿ ಹತ್ತಾರು ಜನರನ್ನು ತಂದು ಕೂರಿಸುವ ದರ್ದು ಏಕೆ? ಇಬ್ಬರನ್ನಷ್ಟೇ ಕೂರಿಸಿ ಅವರಿಂದ ವಿಷಯ ಹೊರಗೆಳೆದು ಜನರಿಗೆ ಕೊಡುವುದು ಸಾಧ್ಯವಿಲ್ಲವೇ? ಪ್ರತಿ ವಿಷಯಕ್ಕೂ ಪರ-ವಿರೋಧ ಎಂಬ ಎರಡು ಬಣ ಇರಲೇಬೇಕೆಂಬ ನಿಯಮ ಇದೆಯೇ? ಇಂಥಾದ್ದೇ ನಿಲುವು ತಳೆಯಬೇಕು ಎಂದು ಚರ್ಚೆಯಲ್ಲಿ ಪಾಲ್ಗೊಳ್ಳುವವರಿಗೆ ನಿಯಮ ಹಾಕುವುದು ಎಷ್ಟು ಸರಿ? ಎರಡನೆಯ ಪ್ರಶ್ನೆ – ಆರಿಸಿಕೊಳ್ಳುವ ವಿಷಯಗಳ ಗುಣಮಟ್ಟದ ಕುರಿತಾದದ್ದು. ನಮ್ಮ ದೇಶದಲ್ಲಿ ರಾಜಕಾರಣವೊಂದೇ ಜನರ ಆಸಕ್ತಿಯ ವಿಷಯ ಎಂದು ಏಕೆ ಭಾವಿಸುತ್ತೀರಿ?

ರಾಷ್ಟ್ರಪತಿಗಳು ಟಿಪ್ಪುವಿನ ಹೆಸರು ಹೇಳಿದರೇ ಇಲ್ಲವೇ? ಮಾತಿನ ಮಧ್ಯೆ ಕೆಮ್ಮಿದರೇ ಇಲ್ಲವೇ? ಎಂಬ ವಿಷಯ ಇಟ್ಟುಕೊಂಡು ಮೂರ್ನಾಲ್ಕು ತಾಸು ಚರ್ಚೆ ಮಾಡುವಂಥಾದ್ದು ಏನಿದೆ? ಪ್ರೈಮ್ ಟೈಮ್ ಟಿವಿ ಡಿಬೇಟ್ ಎಂದೊಡನೆ ಅದು ರಾಜಕೀಯವೇ ಇರಬೇಕು ಯಾಕೆ? ಪರಿಸರ, ನದಿ, ಬೆಟ್ಟ, ಮಳೆ, ಉದ್ಯಮ, ಬೆಳೆ, ರೈತ, ಸಿನೆಮಾ, ನಾಟಕ, ಸಮಾಜಸೇವೆ, ಶಿಕ್ಷಣ, ವಾಸ್ತುಶಿಲ್ಪ, ಮಹಿಳೆ, ಗ್ರಾಮೀಣ ಭಾರತ, ಸಾಹಸಕ್ರೀಡೆ ಮುಂತಾದವು ನಿಮ್ಮ ಪ್ರೈಮ್ ಟೈಮ್‌ನ ಚರ್ಚೆಯ ವಿಷಯಗಳು ಆಗುವುದೇ ಇಲ್ಲ ಯಾಕೆ? ಮೂರನೆಯ ಪ್ರಶ್ನೆ – ಚರ್ಚೆಗಳಲ್ಲಿ ಒಂದು ಸಭಾಶಿಸ್ತು ಇರುವಂತೆ ಯಾಕೆ ಮಾಡಬಾರದು ಎಂಬುದು. ಇಂದಿನ ಬಹುತೇಕ ಚರ್ಚೆಗಳು ವಾರದ ಸಂತೆಯಂತಿರುತ್ತವೆ. ಅಲ್ಲಿ ಯಾರು ದೊಡ್ಡ ದನಿಯಲ್ಲಿ ಕೂಗುತ್ತಾರೋ ಅವರದ್ದೇ ಹವಾ ಎನ್ನುವಂತಾಗಿದೆ.

ಚರ್ಚೆಗಳಲ್ಲಿ ಪರಸ್ಪರ ಗೌರವ ಕೊಡುವ ಶಿಸ್ತು ಕಳಚಿಬಿದ್ದು ಅದೆಷ್ಟೋ ಕಾಲವಾಯಿತು. ಪರಸ್ಪರ ದೂಷಣೆ, ಕೆಸರೆರಚಾಟ, ಒಬ್ಬನಿಗೆ ಇನ್ನೊಬ್ಬ ಟಾಂಗ್ ಕೊಡುವುದು, ಒಂದು ತಪ್ಪನ್ನು ಮುಚ್ಚಿ ಹಾಕಲು ಇನ್ನೊಂದು ತಪ್ಪನ್ನು ತೋರಿಸುವುದು, ನಾವು ಅದು ಮಾಡಿದೆವು ಅಂತೀರಲ್ಲಾ ನೀವು ಇದು ಮಾಡಿಲ್ಲವಾ ಎನ್ನುವುದು, ಸುಳ್ಳು ಕತೆಗಳನ್ನು ಸ್ಥಳದಲ್ಲೇ ಸೃಷ್ಟಿಸುವುದು, ದಾಖಲೆಗಳಿಲ್ಲದೆ ಮಾತಾಡುವುದು, ಪರಸ್ಪರ ವೈಯಕ್ತಿಕ ವಿವರಗಳನ್ನು ಹೊರತೆಗೆದು ಬಾಯಿ ಮುಚ್ಚಿಸಲು ಯತ್ನಿಸುವುದು, ವಿಷಯವನ್ನು ಬಿಟ್ಟು ಇನ್ನೇನೋ ಮಾತಾಡತೊಡಗುವುದು.. ಇವೆಲ್ಲ ಚರ್ಚೆಯ ನಾನಾರೂಪಗಳೆಂದು ಇಂದು ನಾವು ಒಪ್ಪಿಕೊಂಡು ಅಳವಡಿಸಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ! ಎಲ್ಲರಿಂದ ಸಮಾನ ದೂರದಲ್ಲಿ ನಿಂತು ವಿಷಯವನ್ನು ಸಮಗ್ರವಾಗಿ ಗ್ರಹಿಸಬೇಕಾದ ನಿರೂಪಕ ಕೂಡ ಕೆಲವೊಮ್ಮೆ ಆ ಚರ್ಚೆಯ ಭಾಗವೋ ಎಂಬಂತೆ ತನ್ನ ಅಭಿಪ್ರಾಯವನ್ನೂ ಹೇರತೊಡಗುತ್ತಾನೆ. ತಾನು ಬಯಸಿದ ಮಾತುಗಳಷ್ಟೇ ಚರ್ಚೆಯಲ್ಲಿ ಬರುವಂತೆ ಒತ್ತಾಯಿಸುತ್ತಾನೆ. ಯಾರಾದರೊಬ್ಬರು ವಿಷಯ ವಿಸ್ತರಣೆ ಮಾಡಿ ಚರ್ಚೆಯನ್ನು ಬೌದ್ಧಿಕವಾಗಿ ಎತ್ತರಿಸಲು ಯತ್ನಿಸಿದೊಡನೆ ನಿರೂಪಕರೇ ಅವರ ಮಾತು ತುಂಡರಿಸಿ, ಮತ್ತೊಂದು ಪ್ರಶ್ನೆ ಕೇಳಿ ಚರ್ಚೆಯ ದಾರಿ ತಪ್ಪಿಸುವುದು ಕೂಡ ಕೆಲವೊಮ್ಮೆ ನಡೆಯುತ್ತದೆ.

ಇನ್ನು ಕೆಲವು ಟಿವಿ ಚರ್ಚೆಗಳಲ್ಲಿ ಅದು ಚರ್ಚೆಯಲ್ಲ, ನಿರೂಪಕರ ಪ್ರತಿಭಾ ಪ್ರದರ್ಶನದ ವೇದಿಕೆ ಎಂಬ ಅನುಮಾನ ಮೂಡುತ್ತದೆ. ನಿರೂಪಕರೊಬ್ಬರೇ ಮಾತಾಡುತ್ತ, ಎಲ್ಲದರ ಮೇಲೂ ತನ್ನ ಅಂತಿಮ ನಿರ್ಣಯ ಹೇಳುತ್ತ, ಇಡೀ ಚರ್ಚೆಯನ್ನು ಏಕಪಾತ್ರಾಭಿನಯದ ಮಟ್ಟಕ್ಕೆ ಇಳಿಸಿಬಿಡುತ್ತಾರೆ. ಅಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳುವ ಯಾರಿಗೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ ಇರುವುದೇ ಇಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಚರ್ಚೆ ನಡೆದರೂ! ವೈಯಕ್ತಿಕವಾಗಿ ನನಗೆ ಈ ಬಗೆಯ ಚರ್ಚೆಗಳಿಂದ ಗುರುತಿಸಬಹುದಾದ ಪ್ರಯೋಜನವೇನೂ ಇಲ್ಲ ಅನ್ನಿಸತೊಡಗಿ ಅವುಗಳಿಂದ ದೂರ ಉಳಿದಿದ್ದೇನೆ.

ಇಂದು ನಡೆದ ಕುರುಕ್ಷೇತ್ರದಂಥ ಬಿಸಿಬಿಸಿ ಚರ್ಚೆಯನ್ನು ಕೂಡ ನಾಲ್ಕು ದಿನದ ನಂತರ ಮರೆಯುವ ಜನರಿರುವಾಗ, ಮತ್ತು ಎಂಥ ವಿಷಯವನ್ನು ಕೂಡ ಬೀದಿಜಗಳದ ಮಟ್ಟಕ್ಕೆ ತಂದು ಕಿತ್ತಾಡುತ್ತ ಚರ್ಚೆಯ ಆಶಯವನ್ನೇ ಚರ್ಚಾಪಟುಗಳು ಪುಡಿಗುಟ್ಟುತ್ತಿರುವಾಗ, ಅವುಗಳಲ್ಲಿ ಭಾಗವಹಿಸುವುದು ತಲೆಶೂಲೆಯನ್ನಷ್ಟೇ ತಂದೀತು ಹೊರತು ಬೇರೆ ಲಾಭವಿಲ್ಲ ಅನ್ನಿಸಿದೆ. ಚರ್ಚೆ ಎಂದರೆ ಇಂದು ವಿಷಯ ಮಂಥನ ಅಲ್ಲ. ಅಲ್ಲಿ ಚರ್ಚಿಸಿದ ಯಾರೊಬ್ಬರೂ ಬೇರೆಯವರ ವಿಚಾರಗಳನ್ನು ಅಂತಿಮವಾಗಿ ಒಪ್ಪುವುದಿಲ್ಲ. ಭಾಗವಹಿಸುವ ಎಲ್ಲರೂ ತಂತಮ್ಮ ಮಾತುಗಳನ್ನು ಆಡಲು ಬಂದಿರುತ್ತಾರೆಯೇ ಹೊರತು ಬೇರೆಯವರ ವಿಚಾರವನ್ನು ಕೇಳಲು ತಯಾರಿರುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಚರ್ಚೆಗಳಲ್ಲಿ ಬಾಯಿಗಳಿರುತ್ತವೆಯೇ ಹೊರತು ಕಿವಿಗಳಿರುವುದಿಲ್ಲ. ಇದು ಎರಡು ಗಂಟೆಯ ಸಾರ್ವಜನಿಕ ಮನರಂಜನೆ ಎಂಬ ನೆಲೆಯಲ್ಲಷ್ಟೇ ತೆಗೆದುಕೊಳ್ಳುವುದಾದರೆ ಚರ್ಚೆಯಲ್ಲಿ ಭಾಗವಹಿಸಿ ಭೀಷಣ ಭಾಷಣ ಕುಟ್ಟಿ ಬರಬಹುದು.

ಕೊನೆಯದಾಗಿ ಒಂದು ಪ್ರಸಂಗ ಹೇಳಿ ಈ ಬರಹವನ್ನು ಮುಗಿಸುವೆ. ಎರಡು ವರ್ಷದ ಹಿಂದೆ ಒಂದು ಟಿವಿ ಚರ್ಚೆಯಲ್ಲಿ ನಾನು ಮತ್ತು ರಾಜಕಾರಣಿ ಬಿ.ಟಿ. ಲಲಿತಾನಾಯಕ್ ಪಾಲ್ಗೊಂಡಿದ್ದೆವು. ಮೈಸೂರಿನ ಒಬ್ಬ ಸರಕಾರಿ ಸಾಹಿತಿಯ ಬಗ್ಗೆ ನಡೆಯುತ್ತಿದ್ದ ವಾದ-ವಾಗ್ವಾದ ಅದು. ಚರ್ಚೆಯ ನಡುವೆ ಕಮರ್ಷಿಯಲ್ ಬ್ರೇಕ್ ಸಮಯದಲ್ಲಿ, ಲಲಿತಾನಾಯಕ್ ಅನೌಪಚಾರಿಕವಾಗಿ ಮಾತಾಡುತ್ತ ಆ ಸಾಹಿತಿಗೆ ಬಾಯ್ತುಂಬ ಬಯ್ದು, ಅವನದ್ದು ಸಾಹಿತ್ಯವೇ ಅಲ್ಲ ಎಂದರು. ಆದರೆ, ಬ್ರೇಕ್ ಮುಗಿದು ಚರ್ಚೆ ಮುಂದುವರಿದಾಗ ಆ ಸಾಹಿತಿಯನ್ನು ಕುವೆಂಪು ಪಕ್ಕ ಇಡಬೇಕಾದ ವ್ಯಕ್ತಿತ್ವ ಎಂಬ ರೇಂಜಿಗೆ ಉಬ್ಬಿಸಿ ಹೊಗಳಿ ಸಮರ್ಥಿಸಿಕೊಳ್ಳುವುದನ್ನು ಮುಂದುವರಿಸಿದರು! ನೀವು ತೆರೆಯ ಮೇಲೆ ಕಾಣುವುದೆಲ್ಲ ನಿಜ ಎಂದು ಭ್ರಮಿಸಿದರೆ ಅದಕ್ಕಿಂತ ತಮಾಷೆ ಇನ್ನೊಂದಿಲ್ಲ!

-ರೋಹಿತ್ ಚಕ್ರತೀರ್ಥ


ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಿತ.

Comments