UK Suddi
The news is by your side.

ಎಮ್ಇಎಸ್ ಕರಾಳ ದಿನ ಯಾಕೆ ಆಚರಿಸಬೇಕು ?

ನವಂಬರ್ ಒಂದು ಕರ್ನಾಟಕ ರಾಜ್ಯೋತ್ಸವ. ಇದು ಇಡೀ ಕನ್ನಡ ನಾಡಿಗೆ ಸಂಬಂಧಿಸಿದ್ದು. ಕರ್ನಾಟಕ ರಾಜ್ಯ ಉದಯವಾದ ಸಂಕೇತವಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸುವುದು ಕನ್ನಡಿಗರ ಕರ್ತವ್ಯ. ಆದರೆ ಅದೇ ದಿನವೇ ಬೆಳಗಾವಿಯಲ್ಲಿ ಎಮ್ಇಎಸ್ ನವರು ಕರಾಳ ದಿನ ಆಚರಣೆ ಮಾಡುವುದು ಖಂಡನೀಯ. ಬೆಳಗಾವಿ ಯಾವ ರಾಜ್ಯಕ್ಕೆ ಸೇರಬೇಕೆಂಬ ವಿಷಯ ಸರ್ವೋಚ್ಛ ನ್ಯಾಯಾಲಯದಲ್ಲಿದೆ. ಗಡಿ ಸಮಸ್ಯೆ ಐವತ್ತು  ವರ್ಷಗಳಿಂದಲೂ ಇದೆ. ಸಮಸ್ಯೆಯನ್ನು ಜೀವಂತವಾಗಿಟ್ಟಿದ್ದು ಮಹಾರಾಷ್ಟ್ರ ರಾಜ್ಯವೇ. ಮಹಾರಾಷ್ಟ್ರದವರಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಬೆಳಗಾವಿ ವಿಷಯ ಬೇಕು. ವರ್ಷವೆಲ್ಲ ಸುಮ್ಮನೆ ಕುಳಿತಿರುವ ಎಮ್ಇಎಸ್ ನವರು ಕರ್ನಾಟಕ ರಾಜ್ಯೋತ್ಸವದಂದು ಮಾತ್ರ ಕರಾಳ ದಿನ ಆಚರಿಸಲು ತೊಡಗಿ ಗಡಿಭಾಗದಲ್ಲಿನ ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸುತ್ತಾರೆ. 

ಹಾಗೆ ನೋಡಿದರೆ ಮಹಾಜನ ಆಯೋಗವನ್ನು ನೇಮಕ ಮಾಡಿದ ಮಹಾರಾಷ್ಟ್ರವೇ ಆಯೋಗದ ವರದಿಯನ್ನು ಮಾನ್ಯ ಮಾಡದೇ ಇರುವುದು ಸರಿಯಲ್ಲ. ಕೇಂದ್ರ ಸರಕಾರ  ಹಾಗೂ ನ್ಯಾಯಾಲಯಗಳು  ಈ ಬಗ್ಗೆ ಆ ರಾಜ್ಯಕ್ಕೆ ಮನವರಿಕೆ ಮಾಡಿ ಛೀಮಾರಿ ಹಾಕಿ ಗಡಿಸಮಸ್ಯೆಯನ್ನು ಪರಿಹರಿಸಬೇಕು. ಅದಾಗದಿದ್ದರೆ ನ್ಯಾಯಾಲಯದ ತೀರ್ಪು  ಬರುವತನಕವಾದರೂ ಗಡಿಯಲ್ಲಿನ ಶಾಂತಿ ಕದಡದಂತೆ ಮರಾಠಿ ನಾಯಕರಿಗೆ ಸ್ಪಷ್ಟ ತಾಕೀತು ಮಾಡಬೇಕು. ನಮ್ಮ ರಾಜ್ಯೋತ್ಸವದ ದಿನ ಕರಾಳ ದಿನ ಆಚರಣೆ ಮಾಡಲು ಇವರಿಗೇನು ಹಕ್ಕಿದೆ? ಮಹಾರಾಷ್ಟ್ರದ ರಾಜ್ಯೋತ್ಸವದ ದಿನ ನಾವು ಕನ್ನಡಿಗರು ಗಡಿಭಾಗದಲ್ಲಿ ಕರಾಳ ದಿನ ಆಚರಿಸಿದರೆ ಇವರು ಸುಮ್ಮನಿರುವರೆ ?

ಮಹಾನಗರಪಾಲಿಕೆ ಮೇಲಿನ ಭಗವಾ ಧ್ವಜ, ಯಳ್ಳೂರಿನ ಗಡಿ ಕಲ್ಲಿನ ಪ್ರಕರಣಗಳಲ್ಲಿ ಹೀನಾಯವಾಗಿ ಹಿನ್ನಡೆ ಅನುಭವಿಸಿರುವ ಮರಾಠಿಯ ಕನ್ನಡ ದ್ರೋಹಿಗಳಿಗೆ ಇನ್ನೂ ಬುದ್ಧಿ ಬಂದಂತಿಲ್ಲ  ಆದರೂ ಗಡಿ ಸಮಸ್ಯೆ ಕೆದಕುತ್ತ ಕನ್ನಡ-ಮರಾಠಿ ಜನರ ಸೌಹಾರ್ದ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ. 

ಕರಾಳ ದಿನವನ್ನು ಸರಕಾರ, ಬೆಳಗಾವಿಗರಾದಿಯಾಗಿ  ಎಲ್ಲರೂ ಖಂಡಿಸಬೇಕು. ಜಿಲ್ಲಾಡಳಿತ ಮರಾಠಿಗರ ಈ ಕರಾಮತ್ತಿಗೆ ಅವಕಾಶ ಕೊಡಬಾರದು.
-ಉಮೇಶ ಬೆಳಕೂಡ, ಮೂಡಲಗಿ

Comments