UK Suddi
The news is by your side.

ಭಾರತವನ್ನು ಸಂಪೂರ್ಣ ಬದಲಿಸುವ ತೀರ್ಪು !

ಅಪರಾಧಿಯೆಂದು ಘೋಷಿಸಲ್ಪಟ್ಟ ರಾಜಕಾರಣಿಗಳಿಗೆ ಚುನಾವಣೆಗೆ ನಿಲ್ಲದಿರುವಂತೆ ಶಾಶ್ವತ ನಿಷೇಧ ಹೇರುವ ಚುನಾವಣಾ ಆಯೋಗ ಹಾಗೂ ಸುಪ್ರೀಮ್ ಕೋರ್ಟ್ ಗಳ ನಿರ್ಧಾರವು ನಮ್ಮ ಮುಂದಿನ ಭಾರತವನ್ನು ಸಂಪೂರ್ಣ ಬದಲಿಸಲಿದೆ ಎಂದು ಹೇಳಬಹುದು. ದುಡ್ಡು ಚೆಲ್ಲಿ, ಗೂಂಡಾಗಿರಿ ಮಾಡಿ ಅಧಿಕಾರಕ್ಕೆ ಬಂದ ದುರುಳ ರಾಜಕಾರಣಿಗಳು ಆಡಳಿತ ಚುಕ್ಕಾಣಿಯನ್ನು ತಮ್ಮ ಮನಬಂದಂತೆ ತಿರುಗಿಸುತ್ತ ಜನಸಾಮಾನ್ಯರ ಬದುಕನ್ನು ಹೈರಾಣ ಮಾಡಿ ಬಿಟ್ಟಿದ್ದಾರೆ. ಇವರ ದುರಾಡಳಿತದ ವಿರುದ್ಧ ಪ್ರತಿಭಟಿಸಲಾಗದೆ, ಸುಮ್ಮನೆಯೂ ಇರಲಾರದೆ ಜನರು ಉಗುಳು ನುಂಗುತ್ತ ಬದುಕಬೇಕಾಗಿದೆ.
ಅಪರಾಧ ಮಾಡಿಯೂ ಜಾಮೀನಿನ ಮೇಲೆ ಹೊರಬಂದು ದಾರ್ಷ್ಟ್ಯದಿಂದ ಮೆರೆಯುತ್ತ ಇನ್ನೂ ಹೆಚ್ಚು ಅಪರಾಧ ಮಾಡುತ್ತಿದ್ದ ಜನರಿಗೆ ಈ ತೀರ್ಪು ಕಡಿವಾಣ ಹಾಕಲಿದೆ. ಒಮ್ಮೆ ಅಪರಾಧ ಸಾಬೀತಾದಲ್ಲಿ ಅಂಥವರನ್ನು ಆಜೀವಪರ್ಯಂತ ಚುನಾವಣೆಗೆ ನಿಲ್ಲದಂತೆ ಮಾಡುವುದೇ ಅತ್ಯಂತ ಸೂಕ್ತ. ಈ ನಿರ್ಧಾರ ತಳೆದ ಚುನಾವಣಾ ಆಯೋಗ ಮತ್ತು ಸುಪ್ರೀಮ್ ಕೋರ್ಟ್ ಗಳನ್ನು ಎಷ್ಟು ಹೊಗಳಿದರೂ ಸಾಲದು. 

ಅಲ್ಲದೆ ಇದೇ ಸಂದರ್ಭದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಒಂದೇ ವರ್ಷದಲ್ಲಿ ವಿಲೇವಾರಿ ಮಾಡುವ  ನಿರ್ಣಯವೂ ಕೂಡ ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ನಿರ್ಣಯ. ಇದರಿಂದ ದೇಶದ ಬೊಕ್ಕಸದ ಹೊರೆ ತಗ್ಗುವುದಲ್ಲದೆ ನ್ಯಾಯ ಕೇಳಿದವರಿಗೆ ಬದುಕಿರುವಾಗಲೇ ನ್ಯಾಯ ಸಿಕ್ಕಂತಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವು ಇಂಥ ಕೇಸುಗಳನ್ನು ಫಾಸ್ಟ್ ಟ್ರ್ಯಾಕ್ ಕೋರ್ಟಿಗೆ ಕಳುಹಿಸಿ ಆದಷ್ಟು ಬೇಗ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುವ ಕಾನೂನು ರಚಿಸಬೇಕು. ಇದು ದೇಶದ ಹಿತಾಸಕ್ತಿಯಿಂದ ಕೂಡಿದೆಯೆಂಬ ಸುಪ್ರೀಮ್ ಕೋರ್ಟಿನ ಹೇಳಿಕೆಯಲ್ಲಿ ಸತ್ಯವಿದೆ. 

ಅಪರಾಧಿ ರಾಜಕಾರಣಿಗಳು ಮೂಲೆಗುಂಪಾದರೆ ಅದಕ್ಕಿಂತ ಹೆಚ್ಚಿನ ಉಪಕಾರ ದೇಶಕ್ಕೆ ಯಾವುದಿದೆ? ಅವರು ಚುನಾವಣೆಗೆ ನಿಲ್ಲದಂತೆ ಶಾಶ್ವತ ನಿಷೇಧ ಹೇರಿದರೆ ಭಾರತ ವಿಶ್ವದಲ್ಲಿಯೇ ಇನ್ನೂ ಬಲಾಢ್ಯ ದೇಶವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.
-ಉಮೇಶ ಬೆಳಕೂಡ, ಮೂಡಲಗಿ

Comments