ಕೇಂದ್ರ ಸರ್ಕಾರ ಕೋಟ್ಯಂತರ ರೂ ಅನುದಾನ ನೀಡಿದ್ದರೂ ಅದನ್ನು ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಸದೆ ಕಾಂಗ್ರೆಸ್ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ:ಯಡಿಯೂರಪ್ಪ
ಉತ್ತರ ಕನ್ನಡ:ಬಿಜೆಪಿಯ ಪರಿವರ್ತನಾ ಯಾತ್ರೆ ಕರಾವಳಿಯಲ್ಲಿ ಮುಂದುವರೆದಿದ್ದು 11ನೇ ದಿನವಾದ ಇಂದು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಕುಮಟಾ ವಿಧಾನ ಸಭಾ ಕ್ಷೇತ್ರದಲ್ಲಿ ಯಾತ್ರೆ ನಡೆಸುತ್ತಿದ್ದಾರೆ.
ಮೊದಲಿಗೆ ಮುರುಡೇಶ್ವರದಲ್ಲಿ ಪರಮೇಶ್ವರನ ದರ್ಶನ ಪಡೆದು ತಮ್ಮ ದಿನಚರಿಯನ್ನು ಆರಂಭಿಸಿದ ಅವರು ನಂತರ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರ ಉತ್ತರಕನ್ನಡ ಜಿಲ್ಲೆಯನ್ನು ಕಡೆಗಣಿಸಿರುವುದರ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಂತರ ಕುಮಟಾದಲ್ಲಿ ಆಯೋಜಿತವಾಗಿದ್ದ ಸುಸಜ್ಜಿತ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ನರೇಂದ್ರ ಮೋದಿಯವರ ಸರ್ಕಾರ ಕೋಟ್ಯಂತರ ರೂ ಅನುದಾನ ನೀಡಿದ್ದರೂ ಅದನ್ನು ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಸದೆ ಕಾಂಗ್ರೆಸ್ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆಪಾದಿಸಿದರು.
ಮುಖಂಡರುಗಳಾದ ಅನಂತ್ ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಶ್ರೀ ರಾಮುಲು, ಕುಮಾರ್ ಬಂಗಾರಪ್ಪ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.