ಯೋಗ ಕಲಿಕೆಗೆ ಅನುಮತಿ ನೀಡಿದ ಸೌದಿ ಅರೇಬಿಯಾ ಸರ್ಕಾರ
ನವದೆಹಲಿ: ಸೌದಿ ಅರೇಬಿಯಾ ಸರ್ಕಾರವು ಯೋಗ ಕಲಿಕೆ ಮತ್ತು ಬೋಧನೆಗೆ ಸಮ್ಮತಿ ನೀಡಿದೆ. ಈ ಮೂಲಕ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಸೌದಿ ಅರೇಬಿಯಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಯೋಗವನ್ನು ಕ್ರೀಡಾ ಚಟುವಟಿಕೆಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದರಿಂದಾಗಿ ಸೌದಿ ಅರೇಬಿಯಾದಲ್ಲಿ ಯಾರು ಬೇಕಾದರೂ ಲೈಸನ್ಸ್ ಪಡೆದು ಯೋಗವನ್ನು ಕಲಿಯಬಹುದು ಮತ್ತು ಕಲಿಸಬಹುದಾಗಿದೆ.
ಸೌದಿ ಅರೇಬಿಯಾ ಯೋಗಕ್ಕೆ ಮಾನ್ಯತೆ ನೀಡುವಲ್ಲಿ ಸೌದಿಯ ಮಹಿಳೆ ನೌಫಾ ಮಾರ್ವಾಯಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಯೋಗ ಶಿಕ್ಷಕಿಯಾಗಿರುವ ಮಾರ್ವಾಯಿ ಅವರು ಯೋಗ ಹಾಗೂ ಧರ್ಮದ ನಡುವೆ ಯಾವುದೇ ಸಂಘರ್ಷಗಳಿಲ್ಲ ಎಂದು ನಂಬಿದ್ದಾರೆ. ನೌಫಾ ಸೌದಿ ಅರೇಬಿಯಾದಿಂದ ಪ್ರಮಾಣೀಕರಿಸಲಾದ ಮೊದಲ ಯೋಗ ಶಿಕ್ಷಕಿ ಎಂಬ ಹೆಮ್ಮೆಗೂ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಜಾರ್ಖಂಡ್ನಲ್ಲಿ ಮುಸ್ಲಿಂ ಯೋಗ ಶಿಕ್ಷಕಿ ವಿರುದ್ಧ ಯೋಗಾಭ್ಯಾಸ ಮಾಡದಂತೆ ಫತ್ವಾ ಹೊರಡಿಸಲಾಗಿತ್ತು. ಜತೆಗೆ ಕೆಲವರು ಆಕೆಯ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸೌದಿ ಸರ್ಕಾರ ಯೋಗಾಭ್ಯಾಸಕ್ಕೆ ಮನ್ನಣೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.