UK Suddi
The news is by your side.

ಆಧುನಿಕ ವಿವಾಹ (ಪ್ರಹಸನ) 

(ಮದುವೆ ಮಾಡಿಸುವ ಸುಪ್ರಸಿದ್ಧ ಏಜೆಂಟ್ ರಾಮಮೂರ್ತಿ ಅವರಿಗೆ ತಮ್ಮ ಹಳೆಯ ಸ್ನೇಹಿತ ಕೃಷ್ಣಮೂರ್ತಿ ಭೆಟಿಯಾಗುತ್ತಾರೆ.)

ಕೃಷ್ಣಮೂರ್ತಿ: ನಮಸ್ಕಾರ ರಾಮಯ್ಯನವರೆ!!!

ರಾಮಮೂರ್ತಿ: ಓಹೋ… ಕೃಷ್ಣಮೂರ್ತಿಯವರು!!! ನಮಸ್ಕಾರ ಸ್ವಾಮಿ, ಏನು…ಚೆನ್ನಾಗಿದ್ದೀರಾ?

ಕೃ: ಹೋ…ಚೆನ್ನಾಗಿದ್ದೀನಿ, ಅಂದ ಹಾಗೆ ನೀಮ್ಮ ಭೇಟಿನೇ ಆಗಿಲ್ಲ… ಎಲ್ಲಿದ್ದೀರಿ?

ರಾ: ಹೀಗ್ ಕೇಳಿ ಅಂತೀನಿ… ಅಲ್ಲಾ, ನನ್ನದೇನಿದೆ ಸ್ವಾಮಿ? ಆ ದೇವರ ದಯೆಯಿಂದ ಒಳ್ಳೆ ಬಿಜಿನೆಸ್ ಮಾಡ್ತಾ ಇದ್ದೀನಿ ನೋಡಿ.

ಕೃ: ಅಂದಹಾಗೆ, ನೀವು ಯಾವ್ ಬಿಜಿನೆಸ್ ಮಾಡ್ತಾ ಇದ್ದೀರಿ?

ರಾ: ಹೀಗ್ ಕೇಳಿ ಅಂತೇನಿ…ದೊಡ್ಡ ಬಿಜಿನೆಸ್ ಏನೂ ಅಲ್ಲ ಬಿಡಿ… ಕಲ್ಯಾಣ ಕಾರ್ಯ ಮಾಡಿಸೋದೇ ನನ್ನ ಬಿಜಿನೆಸ್ ನೋಡಿ… ಅದರಲ್ಲೆ ಸಾಕಷ್ಟು ಲಾಭ ಬರುತ್ತೆ ಸ್ವಾಮಿ… ನೀವೆ ನೋಡಿದ್ದ್ರಲ್ಲ ಸ್ವಾಮಿ ಮೊದಲು ನಾನೊಂದು ಸಣ್ಣ ಬಾಡಿಗೆ ಮನೆಯಲ್ಲಿದ್ದೆ. ಅದರೀಗ ಒಂದು ಒಳ್ಳೆ ಸೈಟ್ ಖರೀದಿಸಿ ಒಂದು ದೊಡ್ಡ ಬಂಗಲೆ ಕಟ್ಟಿಸಿದ್ದೇನೆ ನೋಡಿ ಸ್ವಾಮಿ…

ಕೃ: ಅಂದಹಾಗೆ ಒಳ್ಳೇಯದೆ ಆಯ್ತು ಬಿಡಿ… ಇದೆಲ್ಲಾ ಹೆಗಾಯ್ತು?

ರಾ: ಹೀಗ್ ಕೇಳಿ ಅಂತೀನಿ… ನಾನು ಮೊದ್ಲು ಕೆಲಸ ಇಲ್ಲದೆ ಹಾಗೇ ಅಲ್ಲಿಲ್ಲಿ ಅಲೀತಾ ಇದ್ದೆ. ಈಗ ’ವಧು ವರರ’ ಖರೀದಿ ಕೆಲಸ ಕೈಗೊಂಡಿದ್ದೇನೆ ನೋಡಿ!!!! ಈ ಕೆಲಸಕ್ಕೆ ಬಂಡವಾಳವೇನೂ ಬೇಕಿಲ್ಲ… ಕೇವಲ ಮಾತಿನ ಬಂಡವಾಳವಿದ್ದರೆ ಸಾಕು!!! ಮಾತಿನಲ್ಲೇ ಮನೆ ಕಟ್ಟಿ, ಮಾತಿನಲ್ಲೇ ಮದ್ವೆ ಮಾಡಿಸ್ಬಿಡಬಹುದು ಸ್ವಾಮಿ… ಈ ಕೆಲಸದಲ್ಲಿ ಬೇಕಾದಷ್ಟು ದುಡ್ಡು ಮಾಡಬಹುದು ಸ್ವಾಮಿ!!!

ಕೃ: ಅಂದಹಾಗೆ ನಿಮ್ಮ ಈ ಮಾತಿನಲ್ಲೇ ಮನೆ ಕಟ್ಟೊ ಕೆಲ್ಸ ನನಗೆನೊ ಸರಿಯಾಗಿ ತಿಳಿಲಿಲ್ಲಾ ನೋಡಿ.

ರಾ: ಹೀಗ್ಯಾಕ್ ಕೇಳ್ತೀರಿ ಅಂತೀನಿ! ನನ್ನ ಈ ಹೊಸ ಕಾಯಕದ ಬಗ್ಗೆ ಸುವಿಸ್ತಾರವಾಗಿ ಹೆಳ್ತೇನಿ ಕೇಳಿ.

ಕೃ: ಅಂದ ಹಾಗೆ ಅದೇನು ಅಂತಾ ಸ್ವಲ್ಪ ಬಿಡಿಸಿ ಹೇಳ್ರಲ್ಲಾ.

ರಾ: ಹೀಗ್ ಕೇಳಿ ಅಂತೀನಿ!  ಅದು ಇಷ್ತೇರಿ, ನಿಮಗೆ ಗೋತ್ತೇ ಇದೆಯಲ್ಲ, ಈಗಿನ ಕಾಲದ ಹುಡುಗರು, ಹುಡುಗಿಯ ಸೌಂದರ್ಯ, ಗುಣ, ರೀತಿ-ನೀತಿ ನಡತೆ ಇವನ್ನೆಲ್ಲಾ ನೋಡದೇ ಹುಡುಗಿ ಹೇಗೇ ಇಲಿ…. ಅವಳು ತರೋ ವರದಕ್ಷಣೆಯ ಮಾತ್ರ ಬಹಳಷ್ಟು ಇದ್ದರೆ ಸಾಕು ಎನ್ನುತ್ತಾರೆ. ವರದಕ್ಷಣೆಗಾಗಿಯೆ ಕೆಲವರು ಮದುವೆಯಾದರೆ, ಇನ್ನೂ ಕೆಲವರು ವರದಕ್ಷಣೆಯ ದೂರಾಲೋಚನೆ ಮಾಡಿ ಗಂಡು ಮಕ್ಕಳನ್ನು ಹೆತ್ತು ಸಿಹಿ ಹಂಚುತ್ತಾರೆ. ಇತ್ತಿಚೆಗಂತೂ ಕಾಲ ತುಂಬಾ ಕೆಟ್ಟೋಗಿದೆ ನೋಡಿ ಸ್ವಾಮಿ.

ಕೃ: ಅಂದ್ ಹಾಗೆ ಇದಂತೂ ಎಲ್ಲರಿಗೂ ಗೊತ್ತಿರೋ ವೀಷಯಾನೇ ಬಿಡಿ, ಇದರಲ್ಲಿ ನಿಮ್ಮ ಪಾತ್ರ ಏನು ಅಂತಾ ತಿಳೀತಾ ಇಲ್ಲ.

ರಾ: ಹೀಗ್ಯಾಕ್ ಕೇಳ್ತೀರಿ ಅಂತೀನಿ! ನೋಡಿ ನನ್ನ ಬಿಜಿನೆಸ್ ಬಗ್ಗೆ ಸುವಿಸ್ತಾರವಾಗಿ ಹೇಳ್ತೀನಿ ಕೇಳಿ. ನಾನು ಹೆಣ್ಣು ಹೆತ್ತವರ ಮನೆ ಮನೆಗೆ ಹೋಗ್ತೀನಿ. ಅಲ್ಲಿ ಅವರ ಜೋತೆ ಮಾತಾಡಿ, ನಿಮ್ಮ ಮಗಳಿಗೆ ಎಂತಹಾ ಗಂಡು ಬೇಕು?  S.S.L.C, P.U.C, UG or PG?  ಅಥವಾ ನೌಕರಿ ಮಾಡುವವನೋ, ಬಿಜಿನೆಸ್ ಮಾಡುವವನೋ ಎಂದೆಲ್ಲಾ ಕೇಳುತ್ತೇನೆ. ಅವರ ಅವರ ಇಷ್ಟದ ಪ್ರಕಾರ ವರ ಕೇಳ್ತಾರೆ…

ಕೃ: ಅಂದ್ ಹಾಗೆ ಇಷ್ಟೆಲ್ಲಾ ಹೇಳಿದಿರಲ್ಲಾ ಕಲಿಕೆಗೆ ಗಕ್ಕಂತೆ ಏನಾದರೊಂದು ವರದಕ್ಷಿಣೆ ಫ಼ಿಕ್ಸ್ ಮಾಡಿದಿರೋ ಹೇಗೆ?

ರಾ: ಹೀಗ್ ಕೇಳಿ ಅಂತೀನಿ! ಅದರಲ್ಲೇ ಇಓದು ನೋಡಿ ವಿಷೇಶ.  S.S.L.C  ವರನಿಗೆ ೧೦,೦೦೦ ರೂ, ೫ ತೊಲ ಬಂಗಾರ  P.U.C  ವರನಿಗೆ ೨೦,೦೦೦ ರೂ, ೧೦ ತೊಲ ಬಂಗಾರ, ಹೀಗೇ ಇನ್ನೂ ಹೆಚ್ಚೆಚ್ಚು ಕಲಿತವರಿಗೆ ಹೆಚ್ಚೆಚ್ಚು ಅಂತಾ ನಿಗಿದಿ ಪಡಿಸಲಾಗಿದೆ.

ಕೃ: ಏನ್ ಕಾಲ ಬಂತ್ರಯ್ಯಾ… ಕಷ್ಟಪಟ್ಟು ಪಡೆದ ಸರ್ಟಿಫ಼ಿಕೇಟನ್ನು ತಮ್ಮೊಂದಿಗೆ ಹಣಕ್ಕೆ ಮಾರಿಕೊಳ್ತಾರಲ್ಲ್ರಪ್ಪ…

ರಾ: ಹೀಗ್ ಯಾಕ್ ಅಂತಿರಿ ಅಂತೀನಿ… ಇದಿಷ್ಟೇ ಅಲ್ಲಾ ಸ್ವಾಮಿ, ನಾನು ಹುಡುಗರ ತಂದೆ-ತಾಯಿಯವರ ಹತ್ತಿರ ಮಾತನಾಡಿ, ಅವರ ಮಕ್ಕಳನ್ನು ಅವರವರ ಕಲೀಕೆಗೆ ತಕ್ಕಷ್ಟು ಹಣ ಕೊಟ್ಟು ಖರೀದಿಸುತ್ತೇನೆ. ನಂತರ ಆ ವರನಿಗೆ ಸರಿ ಹೊಂದುವ ವಧು ನೋಡಿ, ನಾನು ಖರೀದಿಸಿದ ಮೌಲ್ಯಕ್ಕಿಂತ ಹೆಚ್ಚಿಗೆ ಹಣವನ್ನು ವಧುವಿನ ತಂದೆ-ತಾಯಿಯವರಿಂದ ಪಡೆದು  ಮಾರುತ್ತೇನೆ.

ಕೃ: ಅಂದ್ ಹಾಗೆ ಮದ್ವೆ ಆದ ನಂತರ ಅವರಲ್ಲೇನಾದರೂ ಜಗಳ, ವರದಕ್ಷಣೆ ಕಿರುಕಳ ಹೀಗೆಲ್ಲಾ ಎನಾದರು ಸಮಸ್ಯೆ ಶುರುವಾದರೆ?

ರಾ: ಇದೇನ್ ಕೇಳ್ತೀರಿ ಅಂತೀನಿ! ನಾನು ವರನನ್ನು ಕೇವಲ ೬ ತಿಂಗಳು ಮಾತ್ರ ಗ್ಯಾರಂಟಿ ಕೊಡುತ್ತೇನೆ. ಅಲ್ಲಿಯವರೆಗೆ ಅವರ ಸಂಬಂಧ ಕಡಿಯದಂತೆ ನೋಡಿಕೊಳ್ಳುತ್ತೇನೆ.

ಕೃ: ಅಂದ್ ಹಾಗೆ ಕೇವಲ ಆರೇ ತಿಂಗಳೇಕೆ?

ರಾ: ಹೀಗ್ ಕೇಳಿ ಅಂತಿನಿ! ಆರೇ ತಿಂಗಳು ಗ್ಯಾರಂಟಿ ಯಾಕಂದ್ರೆ, ಮದುವೆಯಾದ ೬ ತಿಂಗಳೊಳಗೆ ಕಾನೂನು ವಿವಾಹ ವಿಚ್ಚೇದನವನ್ನು ನೀಡುವುದಿಲ್ಲ. ಅದ್ದರಿಂದ ನಾನೂ ಕೂಡಾ ಆರೇ ತಿಂಗಳು ಗ್ಯಾರಂಟಿ ಕೋಡ್ತೀನಿ.

ಕೃ: ಅಂದ್ ಹಾಗೆ ಈಗ ನಿಮ್ಮಲ್ಲಿ ಎಷ್ಟು ವರಗಳಿವೆ?

ರಾ: ಅದು ನನ್ನ ಸೆಕ್ರೆಟರಿಗೆ ಗೊತ್ತು. ಏಕೆಂದರೆ ಈಗ ನನ್ನ ಕೈಯಲ್ಲಿ ಐದು ಜನ ಏಜೆಂಟರು ಕೆಲಸ ಮಾಡ್ತಾಯಿದಾರೆ. ಅವರೆಲ್ಲ ಬಂದು ನನ್ನ ಸೆಕೆಟರಿಗೆ ದೈನಂದಿನ ಕಾರ್ಯಕಲಾಪಗಳ ವರದಿಯನ್ನು ಒಪ್ಪಿಸುತ್ತಾರೆ.

ಕೃ: ಅಂದ್ ಹಾಗೆ ಅವರಿಗೆ ನೀವು ಏಷ್ಟು ಸಂಬಳ ಕೊಡುತ್ತಿರಿ?

ರಾ: ಹೀಗ್ ಕೇಳಿ ಅಂತೀನಿ! ನೋಡಿ ಸ್ವಾಮಿ ಆ ಐದು ಜನರಿಗೂ ಒಂದೊಂದು ಹೊಂಡಾ ಗಾಡಿ ಕೊಡ್ಸಿದೆನೆ ಮತ್ತದಕ್ಕೆ ಪೆಟ್ರೋಲ್ ಖರ್ಚು ಕೂಡಾ ನಾನೇ ಕೊಡ್ತೇನೆ.  T.A D.A  ಕೊಡುತ್ತೆನೆ. ನಂತರ ಒಂದು ವರನಿಗೆ ಇಷ್ಟು ಅಂತ ಕಮೀಶನ್ ಕೂಡಾ ಗೊತ್ತುಮಾಡಿದಿನಿ.

ಕೃ: ಅಂದಹಾಗೆ… ಇದು ಹಣ ಬಹಳ ಆಗೊಲ್ವೇ?

ರಾ: ಹೀಗ್ಯಾಕ್ ಕೇಳ್ತೀರಿ ಅಂತೀನಿ! ಇಲ್ಲ್ನೋಡಿ ಸ್ವಾಮಿ..  T.A & D.A  ಅಂದ್ರೆ ಇದು ಹೆಸರಿಗೆ ಮಾತ್ರ… ಅವ್ರೆಲ್ಲಾ ವಧು-ವರರನ್ನು ನೋಡಲು ಹೋದ ಮನೆಯಲ್ಲೆ ತಿಂಡಿ-ಊಟ ಎಲ್ಲಾ ಆಗುತ್ತೇ… ಇನ್ನೇನು ಪೇಟ್ರೊಲಗೆ ಮಾತ್ರ ನಾನು ದುಡ್ಡ ಕೊಡ್ತೇನೆ.

ಕೃ: ಅಂದ್ ಹಾಗೆ ಪರವಾಗಿಲ್ಲ ಬಿಡಿ… ಒಳ್ಳೆಯ ಬಿಜಿನೆಸ್ ನೆ ಮಾಡ್ತಾಯಿದ್ದೀರಿ. ಎಲ್ಲಾ ಸೇರಿ ತಿಂಗಳಿಗೆ ನಿಮ್ಮ ವರಮಾನ ಎಷ್ಟಾಗಬಹುದು?

ರಾ: ಹೀಗೇನ್ ಕೇಳ್ತೀರಿ ಅಂತೀನಿ!!! ಅಷ್ಟೊಂದು ಬಹಳ ಏನೂ ಅಗೋದಿಲ್ಲ ಬಿಡಿ… ಒಂದ ೭೦ ರಿಂದ ೮೦ ಸಾವಿರ ಆಗುತ್ತೆ , ಎಲ್ಲಾ ಖರ್ಚು ತೆಗೆದು. 

ಕೃ: ಒಳ್ಳೆಯದು ರಾಮಮುರ್ತಿಯವರೆ… ನನಗೆ ಸ್ವಲ್ಪ ಕೆಲಸ ಇದೆ… ಮತ್ತೆ ಸಿಗೋನ… ನಮಸ್ಕಾರ ನಾನ್ ಬರ್ತಿನಿನ್ನ…

ರಾ: ಹೋಗಿ ಬನ್ನಿ… ನಮಸ್ಕಾರ…
.
.
.

.

ಮಹಾಂತೇಶ ವೀ. ಹೊಂಗಲ, ಗೋವನಕೊಪ್ಪ.

ಬೈಲಹೊಂಗಲ.

Comments