ಕನ್ನಡ ನಾಡು ನುಡಿಗಾಗಿ ಹೋರಾಡಿದ ತಮ್ಮಣ್ಣಪ್ಪ ಚಿಕ್ಕೋಡಿ
ಬನಹಟ್ಟಿ: ಕನ್ನಡ ನಾಡು, ನುಡಿ ಮತ್ತು ಸಂಘಟನೆಯ ಸಲುವಾಗಿ ಹೋರಾಡಿದ ಹಲವಾರು ಮಹನೀಯರ ಸಾಲಿನಲ್ಲಿ ನಿಂತವರಲ್ಲಿ ತಮ್ಮಣ್ಣಪ್ಪ ಚಿಕ್ಕೋಡಿ ಒಬ್ಬರು.ಬನಹಟ್ಟಿಯಲ್ಲಿ ಇದ್ದುಕೊಂಡು ವಿಶಾಲ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು.
ಸ್ವತಃ ಸಾಹಿತಿಗಳಾಗಿದ್ದ ತಮ್ಮಣ್ಣಪ್ಪ ‘ರಾಮಲಿಂಗಸುತ’ ಎಂಬ ಅಂಕಿತದಲ್ಲಿ ಅವರು ಕವಿತೆಗಳನ್ನು ಬರೆಯುತ್ತಿದ್ದರು. ‘ಉಷಾ ಪರಿಣಯ’, ‘ಪ್ರಮೀಳಾ ಸ್ವಯಂವರ’, ‘ಗಿರಿಜಾ ಸ್ವಯಂವರ’, ‘ಭೀಮಸೇನ’ ಮತ್ತು ‘ಶಾರದಾ’ ಎಂಬ ನಾಟಕಗಳನ್ನು ರಚನೆ ಮಾಡಿದ್ದಾರೆ.
ತಮ್ಮಣ್ಣಪ್ಪ ಚಿಕ್ಕೋಡಿ ಹಾಗೂ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜತೆಗೂಡಿ ಮನೆಗಳ ಜಗಲಿಗಳ ಮೇಲೆ, ಗುಡಿ ಗುಂಡಾರ ಮತ್ತು ಮಠಗಳಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟು ಹಾಳಾಗಿ ಹೋಗುತ್ತಿದ್ದ ಸಾವಿರಾರು ವಚನಗಳನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ತಮ್ಮಣ್ಣಪ್ಪನವರ ಇಚ್ಛೆಯಂತೆ ಹಳಕಟ್ಟಿಯವರು ‘ಶಿವಾನುಭವ’ ಮತ್ತು‘ ನವ ಕರ್ನಾಟಕ’ (1917) ಪತ್ರಿಕೆಯನ್ನು ಆರಂಭ ಮಾಡುತ್ತಾರೆ. ತಮ್ಮಣ್ಣಪ್ಪನವರು ಹಳಕಟ್ಟಿಯವರಿಗೆ ತಮ್ಮ ಮಗಳನ್ನು ಕೊಟ್ಟಿದ್ದರು. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗ ತಮ್ಮಣ್ಣಪ್ಪ ಚಿಕ್ಕೋಡಿ ಅವರು ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳನ್ನು ಪ್ರತಿನಿಧಿಸಿದ್ದರು.
ಉತ್ತರ ಕರ್ನಾಟಕದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂಬ ವಿಷಯದ ಕುರಿತು ತಮ್ಮಣ್ಣಪ್ಪ ಅವರು ಮಂಡಿಸಿದ ಗೊತ್ತುವಳಿ ಅನ್ವಯ ಅಂದಿನ ಸರ್ಕಾರ 1950ರಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ನಿರ್ಣಯವನ್ನು ತೆಗೆದುಕೊಂಡಿತು.
ತಮ್ಮಣ್ಣಪ್ಪನವರು 1925ರಲ್ಲಿ ಬೆಳಗಾವಿಯಲ್ಲಿ ನಡೆದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾಗಿದ್ದರು. ಅದೇ ರೀತಿಯಾಗಿ 1928ರಲ್ಲಿ ಕಲಬುರ್ಗಿಯಲ್ಲಿ ನಡೆದ ಸಮ್ಮೇಳನದಲ್ಲಿ ಆಂಧ್ರ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ದ.ರಾ.ಬೇಂದ್ರೆ ಖಂಡಿಸಿದಾಗ ಅದನ್ನು ತಮ್ಮಣ್ಣಪ್ಪನವರ ಅನುಮೋದಿಸಿದ್ದರು. ನಂತರ ಚಿಕ್ಕೋಡಿ ಅವರು ಮಂಡಿಸಿದ್ದ ಗೊತ್ತುವಳಿಯನ್ನು ಮುದವೀಡು ಕೃಷ್ಣರಾಯರು ಅನುಮೋದಿಸಿದ್ದರು.
ಕನ್ನಡಕ್ಕೆ ಹೋರಾಡಿದ ಮಹಾನುಭವ ತಮ್ಮಣ್ಣಪ್ಪನವರ ಆರೋಗ್ಯ ಕ್ಷೀಣಿಸುತ್ತಿದ್ದ ಸಮಯದಲ್ಲಿ ಅವರು 14.11.1933ರಲ್ಲಿ ಮೃತ್ಯುಪತ್ರವನ್ನು ಬರೆಯಿಸುತ್ತಾರೆ. ರಬಕವಿಯಲ್ಲಿರುವ ತಮ್ಮ ಮನೆಯನ್ನು ಮಾರಿ ಅದರಿಂದ ಬಂದ ನಾಲ್ಕು ಸಾವಿರ ರೂಪಾಯಿಗಳನ್ನು ಬನಹಟ್ಟಿಯ ಹೈಸ್ಕೂಲ್ಗೆ ನೀಡಬೇಕು. ತಮ್ಮ ಬಳಿಯಿರುವ ಗ್ರಂಥಗಳನ್ನು ಬೆಳಗಾವಿಯ ಲಿಂಗರಾಜ ಕಾಲೇಜಿಗೆ ನೀಡಬೇಕು ಎಂದು ಬರೆಯಿಸಿದ್ದರು.
ಮೃತ್ಯುಪತ್ರ ಬರೆಯಿಸಿದ 22 ದಿನಗಳ ನಂತರ ಅಂದರೆ ಡಿಸೆಂಬರ್ 6ರಂದು 71ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮಣ್ಣಪ್ಪನವರ ಅಂದಿನ ಚಿಂತನೆಗಳು ಇಂದು ಸಾಕಾರಗೊಂಡಿವೆ. ಕನ್ನಡ ನಾಡು ನುಡಿಗಾಗಿ ಹೋರಾಡಿದ ತಮ್ಮಣ್ಣಪ್ಪ ಚಿಕ್ಕೋಡಿಯವರು ರಬಕವಿ ಬನಹಟ್ಟಿಗೆ ಮಾತ್ರ ಸೀಮಿತವಾಗಿರುವುದು ವಿಷಾದಕರ ಸಂಗತಿ. ಸ್ಥಳೀಯ ಜನತಾ ಶಿಕ್ಷಣ ಸಂಘವು ಪ್ರತಿವರ್ಷ ಅವರ ಪುಣ್ಯಸ್ಮರಣೆಯನ್ನು ವಿಶೇಷವಾಗಿ ಆಚರಿಸುತ್ತ ಬಂದಿದೆ.
ಇದೇ 6ರಂದು ತಮ್ಮಣ್ಣಪ್ಪ ಚಿಕ್ಕೋಡಿಯವರ 84ನೇ ಪುಣ್ಯ ಸ್ಮರಣೋತ್ಸವ. ಆ ನಿಮಿತ್ತವಾಗಿ ಈ ಲೇಖನ.