ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹ
ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹ : ಜಿಲ್ಲಾ ಹೋರಾಟ ಚಾಲನಾ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ
ಬೆಳಗಾವಿ : ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿವರ್ತಿಸುವಂತೆ ಒತ್ತಾಯಿಸಿ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮೀತಿಯು ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿತು.
ಗೋಕಾಕ ನಗರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯ ಅವರನ್ನು ಇಲ್ಲಿಯ ಡಾಲರ್ಸ್ ಕಾಲನಿ ಹೆಲಿಪ್ಯಾಡ್ ಬಳಿ ಮನವಿ ಅರ್ಪಿಸಿದ ಜಿಲ್ಲಾ ಚಾಲನಾ ಸಮೀತಿಯ ಮುಖಂಡರುಗಳು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಹೊಸ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಾಲನಾ ಸಮೀತಿಯ ಅಧ್ಯಕ್ಷ ಮುರುಘರಾಜೇಂದ್ರ ಮಹಾಸ್ವಾಮಿಗಳು, ಆಡಳಿತಾತ್ಮಕ ದೃಷ್ಟಿಯಿಂದ ಗೋಕಾಕನ್ನು ಜಿಲ್ಲೆಯನ್ನಾಗಿಸುವುದು ಸೂಕ್ತವಾಗಿದೆ. ಹಿಂದಿನ ಮೂರು ಆಯೋಗಗಳು ಈ ಬಗ್ಗೆ ಆಗಿನ ಸರ್ಕಾರಗಳಿಗೆ ಶಿಫಾರಸ್ಸನ್ನು ಕೂಡ ಮಾಡಿದ್ದವು. ಅಲ್ಲದೇ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸಿ ಆದೇಶ ಹೊರಡಿಸಿದ್ದರು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಗೋಕಾಕ ಜಿಲ್ಲಾ ಕೇಂದ್ರವಾಗಲಿಕ್ಕೆ ಎಲ್ಲ ಅರ್ಹತೆ ಪಡೆದಿದೆ. ಜಿಲ್ಲೆಯನ್ನು ವಿಂಗಡಿಸಿ ಗೋಕಾಕ ಹೊಸ ಜಿಲ್ಲೆಯನ್ನಾಗಿ ಮಾಡಬೇಕು. ಈ ಹೊಸ ಜಿಲ್ಲೆಗೆ ಯಾವ ತಾಲೂಕುಗಳನ್ನಾದರೂ ಸೇರಿಸಿಕೊಳ್ಳಿ. ಒಟ್ಟಿನಲ್ಲಿ ದೊಡ್ಡದಾದ ಬೆಳಗಾವಿ ಜಿಲ್ಲೆಯನ್ನು ಅಭಿವೃದ್ಧಿ ದೃಷ್ಟಿಯಿಂದ ವಿಂಗಡಿಸಿ ಗೋಕಾಕ ಹೊಸ ಜಿಲ್ಲೆಯನ್ನಾಗಿ ಪರಿವರ್ತಿಸುವಂತೆ ಕೋರಿದರು. ಬೆಳಗಾವಿ ಜಿಲ್ಲೆಯು ಎರಡನೇ ರಾಜಧಾನಿಯಾಗಿದ್ದು ಜನಸಾಂದ್ರತೆಯಲ್ಲಿ ಅತೀ ದೊಡ್ಡದಾಗಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚಿನ ಗ್ರಾಮ ಪಂಚಾಯತಿಗಳನ್ನು ಹೊಂದಿದೆ. ಜಿಲ್ಲೆಯನ್ನು ವಿಭಜಿಸಿದರೆ ಬೆಳಗಾವಿಗೆ ಯಾವ ತೊಂದರೆಯೂ ಆಗುವುದಿಲ್ಲವೆಂದು ಸಿಎಂ ಸಿದ್ಧರಾಮಯ್ಯ ಅವರಿಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಈರಣ್ಣ ಕಡಾಡಿ ಮಾತನಾಡಿ, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿದರೆ ಗಡಿ ಸಮಸ್ಯೆಗೆ ಕನ್ನಡ ಹೋರಾಟಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ. ಬೆಳಗಾವಿಯನ್ನು ವಿಭಜಿಸಿದರೆ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಗೋಕಾಕ ಜಿಲ್ಲೆಯಾದರೆ ನಿಮ್ಮ ಸರ್ಕಾರದ ಅವಧಿಯಲ್ಲಿಯೇ ಆಗಬೇಕು. ಗೋಕಾಕ ನಾಗರೀಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿ ಹೊಸ ಜಿಲ್ಲೆಗಳ ರಚನೆಯಲ್ಲಿ ಗೋಕಾಕಕ್ಕೆ ಪ್ರಾಶಸ್ತ್ಯ ನೀಡಿ ನಮ್ಮ ಕನಸುಗಳನ್ನು ಸಾಕಾರಗೊಳಿಸುವಂತೆ ಮನವಿ ಮಾಡಿಕೊಂಡರು.
ಹುಣಶ್ಯಾಳ ಪಿಜಿ ನಿಜಗುಣ ದೇವರು, ಸುಣಧೋಳಿಯ ಶಿವಾನಂದ ಸ್ವಾಮಿಗಳು, ಹೂಲಿಕಟ್ಟಿಯ ಕುಮಾರ ದೇವರು, ಗೋಕಾಕ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವ್ಹಿ. ದೇಮಶೆಟ್ಟಿ, ಬಿಜೆಪಿ ಮುಖಂಡ ಅಶೋಕ ಪೂಜೇರಿ, ರಾಜ್ಯ ಸಹಕಾರ ಮಾರಾಟ ಮಂಡಳಿ ಉಪಾಧ್ಯಕ್ಷ ಬಸಗೌಡ ಪಾಟೀಲ(ನಾಗನೂರ), ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಎಸ್.ಎ. ಕೋತವಾಲ, ಸಿದ್ದಲಿಂಗ ದಳವಾಯಿ, ಹಿರಿಯ ನ್ಯಾಯವಾದಿ ಬಿ.ಆರ್. ಕೊಪ್ಪ, ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ರಾಮಣ್ಣಾ ಹುಕ್ಕೇರಿ, ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ಪರಶುರಾಮ ಭಗತ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಬಸವಂತ ಕಮತಿ, ಅಶೋಕ ಪರುಶೆಟ್ಟಿ, ಮುತ್ತೆಪ್ಪ ಕುಳ್ಳೂರ, ಹನಮಂತ ತೇರದಾಳ, ರಮೇಶ ಉಟಗಿ, ಈಶ್ವರ ಕತ್ತಿ, ಎಂ.ಆರ್.ಭೋವಿ, ಶ್ಯಾಮಾನಂದ ಪೂಜೇರಿ, ಸಿ.ಬಿ. ಗಿಡ್ಡನವರ, ಲಕ್ಷ್ಮಣ ಬೂದಿಗೊಪ್ಪ, ಅರವಿಂದ ದಳವಾಯಿ, ಮೂಡಲಗಿ ವಕೀಲರ ಸಂಘದ ಅಧ್ಯಕ್ಷ ಅಜ್ಜಪ್ಪ ಹುಣಶ್ಯಾಳ, ತಾಲೂಕಿನ ಎಲ್ಲ ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳು, ವರ್ತಕರು, ಸಹಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.