UK Suddi
The news is by your side.

ಡಿ.ವ್ಹಿ. ಹಾಲಭಾವಿ ಅವರು ಅಪರೂಪದ ಚಿತ್ರಕಲಾ ಶಿಲ್ಪಿ:  ಡಾ.ಎಸ್.ಸಿ.ಪಾಟೀಲ ಅಭಿಪ್ರಾಯ.

ಧಾರವಾಡ : ತಮ್ಮ ಬದುಕಿನ ಉದ್ದಕ್ಕೂ ಶಿಸ್ತಿನ ಸಿಪಾಯಿಯಂತೆ ಬಾಳಿದ್ದ ಡಾ.ಡಿ.ವ್ಹಿ.ಹಾಲಭಾವಿ ಅವರು ಅಪರೂಪದ ಚಿತ್ರಕಲಾ ಶಿಲ್ಪಿ ಆಗಿದ್ದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್.ಸಿ.ಪಾಟೀಲ ಅವರು ಹೇಳಿದರು.  
ಧಾರವಾಡದ ಸರಕಾರಿ ಆರ್ಟ ಗ್ಯಾಲರಿಯಲ್ಲಿ ಧಾರವಾಡದ ಚಿತ್ರಕಲಾ ಶಿಲ್ಪಿ ಡಿ.ವ್ಹಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಕಲಾಗುರು ಶ್ರೀ ಡಿ.ವ್ಹಿ.ಹಾಲಭಾವಿ ಪುಣ್ಯಸ್ಮರಣೆ ಅಂಗವಾಗಿ ವಿಚಾರ ಸಂಕಿರಣ ಹಾಗೂ ಚಿತ್ರಕಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. 

ಡಿ.ವ್ಹಿ.ಹಾಲಭಾವಿ ಅವರು ಚಿತ್ರಕಲಾ ಶಿಕ್ಷಕರಾಗಿದ್ದಾಗ ವಿದ್ಯಾರ್ಥಿಗಳಿಗೆ ಪ್ರೀತಿ, ಪ್ರೋತ್ಸಾಹ ನೀಡುತ್ತಿದ್ದರು. ಅವರು ಕಲಾ ಸಾಹಿತ್ಯ, ಕಲಾ ಬರವಣಿಗೆ, ಕಲಾ ಸಂಗೀತ ಸೇರಿದಂತೆ ಕಲೆಯನ್ನು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸಿ ಕೃಷಿ ಮಾಡಿದ್ದಾರೆ ಎಂದು ಅವರು ಹೇಳಿದರು. 

ಹಾಲಭಾವಿ ರಾಷ್ಟ್ರೀಯ ಟ್ರಸ್ಟ್ ಇತರ ಟ್ರಸ್ಟ್‍ಗಳಿಗೆ ಮಾದರಿಯಾಗುವಂತೆ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಟ್ರಸ್ಟ್‍ದಿಂದ ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಬರಹಗಾರರನ್ನು ಗುರುತಿಸಿ ಅವರ ಕಲಾ ಗ್ರಂಥಗಳಿಗೆ ಪ್ರಶಸ್ತಿಯನ್ನು ನೀಡುವ ಯೋಜನೆ ಹಾಕಿಕೊಳ್ಳಬೇಕು. ಮತ್ತು ಸಾಹಿತ್ಯ ಕ್ಷೇತ್ರದಲ್ಲೂ ಕಲೆಯನ್ನು ಬಿಂಬಿಸಲು ವಿನೂತನವಾಗಿ ತಮ್ಮ ಬರಹಗಳಲ್ಲಿ ಕಲೆಯನ್ನು ವ್ಯಕ್ತಪಡಿಸುವ ಯುವ ಬರಹಗಾರರನ್ನು ಗುರುತಿಸಿ ಪುರಸ್ಕರಿಸುವ ಪರಂಪರೆಯನ್ನು ಹಾಲಭಾವಿ ಟ್ರಸ್ಟ್ ಬೆಳೆಸಬೇಕೆಂದು ಡಾ. ಎಸ್.ಸಿ.ಪಾಟೀಲ ತಿಳಿಸಿದರು.

ಇಂದಿನ ದಿನಗಳಲ್ಲಿ ಚಿತ್ರಕಲೆ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಅನುಭವಿ ಚಿತ್ರಕಲಾ ಶಿಕ್ಷಕರ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಾಲಭಾವಿ ಟ್ರಸ್ಟ್ ಗಮನಹರಿಸಿ ಅವರ ಬೇಡಿಕೆಯನ್ನು ಪೂರೈಸುವ ಯೋಜನೆ ಹಾಕಿಕೋಳ್ಳಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ “ಕರ್ನಾಟಕ ದೃಶ್ಯಕಲೆಯಲ್ಲಿ ದೈವಿಕಧ್ಯಾನ: ಪರಂಪರೆ ಮತ್ತು ಸಮಕಾಲೀನತೆ” ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ದೃಶ್ಯಕಲಾ ಇತಿಹಾಸಕಾರ ಹಾಗೂ ವಿಮರ್ಶಕ ಕೆ.ವಿ.ಸುಬ್ರಮಣ್ಯಂ ಅವರು ಆಳವಾದ ಅನ್ವಯಿಕ ಅಧ್ಯಯನವಿಲ್ಲದೆ ಮಾಡುವ ವಿಮರ್ಶೆ ಅಪಾಯಕಾರಿ ಮತ್ತು ಅಪ್ರಸ್ತುತವೆನಿಸುತ್ತದೆ ಎಂದು ಹೇಳಿದರು.

ಕಲಾವಿದ ಪ್ರಶ್ನೆ ಕೇಳುವ ಅದರಲ್ಲೂ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಮನೋಭಾವನೆ ಬೆಳಿಸಿಕೊಳ್ಳಬೇಕು. ಎಲ್ಲ ಕಾಲಮಾನದಲ್ಲೂ ಎಲ್ಲ ತರಹದ ಚಿಂತಕರು ಇರುತ್ತಾರೆ. ವಿಮರ್ಶಕನಿಗೆ ನಿನ್ನೆ, ಇಂದು ಮತ್ತು ನಾಳೆಯ ಪ್ರಜ್ಞೆ ಇರಬೇಕು ಮತ್ತು ಪರಂಪರೆಯ ಜ್ಞಾನವಿರಬೇಕು ಎಂದು ಕಲಾವಿಮರ್ಶಕ ಕೆ.ವಿ.ಸುಬ್ರಮಣ್ಯಂ ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ನೂತನವಾಗಿ ನೇಮಕಗೊಂಡಿರುವ ಡಾ.ರೇಣುಕಾ ಮಾರ್ಕಂಡೆಯ ಹಾಗೂ ಎಫ್.ವಿ.ಚಿಕ್ಕಮಠ ಅವರನ್ನು ಟ್ರಸ್ಟ್ ಪರವಾಗಿ ಸತ್ಕರಿಸಲಾಯಿತು.

ಹಾಲಭಾವಿ ಟ್ರಸ್ಟ್‍ನ ಸಂಸ್ಥಾಪಕ ಮಂಡಳಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟ್ರಸ್ಟ್ ಸದಸ್ಯರಾದ ಸುರೇಶ ಹಾಲಭಾವಿ ಅವರು ಸ್ವಾಗತಿಸಿದರು ಮತ್ತು ಬಿ.ಮಾರುತಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಎಮ್.ಆರ್.ಬಾಳಿಕಾಯಿ, ಸದಸ್ಯ ಕಾರ್ಯದರ್ಶಿ ಎಸ್.ಕೆ.ರಂಗಣ್ಣವರ ವೇದಿಕೆಯಲ್ಲಿ ಇದ್ದರು.

ರಾಜ್ಯದ ವಿವಿಧ ಚಿತ್ರಕಲಾ ಮಹಾವಿದ್ಯಾಲಯಗಳಿಂದ ಆಯ್ಕೆ ಮಾಡಿದ್ದ 20 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಟ್ರಸ್ಟ ಸದಸ್ಯ ಶ್ರೀಮತಿ ಪಾರ್ವತಿ ಹಾಲಭಾವಿ, ಸರಕಾರಿ ಆರ್ಟ ಗ್ಯಾಲರಿ ಮುಖ್ಯಸ್ಥ ಪ್ರೊ.ಎಸ್.ಕೆ.ಪತ್ತಾರ ಸೇರಿದಂತೆ ವಿವಿಧ ಗಣ್ಯರು, ಚಿತ್ರಕಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿದರು.

Comments