ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಕೊಪ್ಪಳ ಗವಿಸಿದ್ದೇಶ್ವರ ಮಹಾರಥೋತ್ಸವ.
ಕೊಪ್ಪಳ: ಉತ್ತರ ಕರ್ನಾಟಕದ ಆರಾಧ್ಯ ದೈವಗಳಲ್ಲಿ ಒಂದಾದ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಮಹಾರಥೋತ್ಸವ ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಾಯಂಕಾಲ 6 ಗಂಟೆ ವೇಳೆಗೆ ಸಾಮಾಜಿಕ ಹೋರಾಟಗಾರ “ಅಣ್ಣಾ ಹಜಾರೆ” ಧ್ವಜಾರೋಹಣ ನೆರವೇರಿಸುವ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.
ಚೀಕೇನಕೊಪ್ಪದ ಶರಣರು ಮತ್ತು ಅವರ ತಂಡ ‘ಜಯ ಗವಿಸಿದ್ದೇಶ, ಜಯ ಗವಿಸಿದ್ದೇಶ…’ ಎಂದು ಜಯಘೋಷದ ಹಾಡುಗಳನ್ನು ಹಾಡುತ್ತಿದ್ದಂತೆಯೇ ಜಾತ್ರಾ ಮೈದಾನದಲ್ಲಿ ಸೇರಿದ್ದ ಭಕ್ತರು ಗವಿಸಿದ್ದೇಶ್ವರನ ಉತ್ಸವ ಮೂರ್ತಿ ಹೊತ್ತಿದ್ದ ಮಹಾರಥವನ್ನು ಎಳೆದರು. ವಾದ್ಯ ಮೇಳಗಳು, ಭಕ್ತರ ಹರ್ಷೋದ್ಗಾರ ರಥದ ಚಲನೆಗೆ ಸಾಥ್ ನೀಡಿದವು.
ಜಾತ್ರಾ ಮೈದಾನ, ಗವಿಮಠದ ಗುಡ್ಡ, ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ಮೇಲೆ ನಿಂತ ಜನರು ರಥೋತ್ಸವದ ಅದ್ಭುತವಾದ ನೋಟವನ್ನು ನೋಡಿ ಪಾವನರಾದರು.