UK Suddi
The news is by your side.

ಮತದಾರರ ನೋಂದಣಿ ಮತ್ತು ಮತದಾರರ ಜಾಗೃತಿ ಸಭೆ.


ಧಾರವಾಡ: ಮುಂಬರುವ ವಿಧಾನಸಭಾ ಚುನಾವಣೆಗೆ ಮತದಾನದ ಅರ್ಹತೆ ಪಡೆಯಲು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಜ.22 ರವರೆಗೆ ಕಾಲಾವಕಾಶ ವಿಸ್ತರಣೆಯಾಗಿದ್ದು ಈ ಕುರಿತ ಮಾಹಿತಿಯನ್ನು  ಎಲ್ಲ ಜನಸಾಮಾನ್ಯರಿಗೆ ತಲುಪಿಸಲು ಸರಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕು.

ಮತದಾನದ ಜಾಗೃತಿ ಕುರಿತು ಜ.11 ರಂದು ಶಾಲೆ-ಕಾಲೇಜುಗಳ ಹಂತದಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲೆ,ನಿಬಂಧ ಸ್ಪರ್ಧೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸ್ನೇಹಲ್ ರಾಯಮಾನೆ ಹೇಳಿದರು.

ಜಿ.ಪಂ.ಕಚೇರಿ ಸಭಾಂಗಣದಲ್ಲಿಂದು ಸಂಜೆ ನಡೆದ ವ್ಯವಸ್ಥಿತ ಮತದಾರರ ನೋಂದಣಿ ಹಾಗೂ ಮತದಾರರ ಜಾಗೃತಿ ಸಮಿತಿ (ಸ್ವೀಪ್) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಚುನಾವಣಾ ಆಯೋಗವು ಜ.22 ರವರೆಗೆ ಮತದಾರರ ಯಾದಿ ಪರಿಷ್ಕರಣೆ ಕಾರ್ಯ ಮುಂದುವರೆಸಿದೆ. ಈ ಅವಧಿಯೊಳಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವವರು, ತಿದ್ದುಪಡಿ, ಹೆಸರು ತೆಗೆದು ಹಾಕುವ ಕಾರ್ಯ ನಡೆಯುವ ಬಗ್ಗೆ ಜನ ಜಾಗೃತಿ ಕಾರ್ಯ ಮುಂದುವರೆಯಬೇಕು.ಶಾಲೆ,ಕಾಲೇಜು,ಹಾಸ್ಟೇಲ್ ವಿದ್ಯಾರ್ಥಿಗಳ ಮೂಲಕ ಪಾಲಕರಲ್ಲಿ ,ಹಿರಿಯ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಪರಿಣಾಮಕಾರಿಯಾಗಲಿದೆ. ಈಗಾಗಲೇ ಜಿಲ್ಲೆಯ 359 ಪ್ರೌಢಶಾಲೆಗಳು,73 ಪದವಿ ಪೂರ್ವ ಕಾಲೇಜುಗಳು ಸೇರಿ  ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 430 ಕ್ಕೂ ಹೆಚ್ಚು ಮತದಾರರ ಸಾಕ್ಷರತಾ ಕ್ಲಬ್‍ಗಳನ್ನು ರಚಿಸಲಾಗಿದೆ. ಜ.11 ರಂದು ಶಾಲೆ-ಕಾಲೇಜು ಹಂತಗಳಲ್ಲಿ ನಡೆದ ನಿಬಂಧ , ಪೋಸ್ಟರ್ ರಚನೆ ಹಾಗೂ ಕೊಲಾಜ್ ಸ್ಪರ್ಧೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಜಿಲ್ಲಾ ಮಟ್ಟದಲ್ಲಿ ಜ.17 ರಂದು ಸ್ಪರ್ಧೆಗಳನ್ನು ಆಯೋಜಿಸಲಾಗುವದು. ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಭಿನ್ನವಾದ ಚಟುವಟಿಕೆಗಳನ್ನು ಏರ್ಪಡಿಸಲಾಗುವದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಹೆಚ್.ನಾಗೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ಎಂ.ದೊಡ್ಡಮನಿ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪುರುಷೋತ್ತಮ,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಸ್.ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು,ಜಿಲ್ಲೆಯ ಎಲ್ಲ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಾಗೂ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಮಂಜುನಾಥ ಡೊಳ್ಳಿನ ಸ್ವಾಗತಿಸಿ,ವಂದಿಸಿದರು.

ಕೃಪೆ:ಧಾರವಾಡ ವಾರ್ತಾ ಭವನ

Comments