UK Suddi
The news is by your side.

ಮುಗಳಖೋಡ: 10,054 ವಿವೇಕಾನಂದ ವೇಷಧಾರಿಗಳಿಂದ ವಿಶ್ವ ದಾಖಲೆ

ಬೆಳಗಾವಿ: ಜಿಲ್ಲೆಯ ಮುಗಳಖೋಡದ  ಆ ವೇದಿಕೆ ಸಂಪೂರ್ಣ ಕೇಸರಿಮಯವಾಗಿತ್ತು. ಖಾವಿ ಬಟ್ಟೆತೊಟ್ಟ ವಿದ್ಯಾರ್ಥಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಒಂದೇ ಕಡೆ ಸೇರಿ ಸ್ವಾಮಿ ವಿವೇಕಾನಂದರ ಸಂದೇಶ ಸಾರುತ್ತಿದ್ದರು. ಮಾತ್ರವಲ್ಲ, ಮೂರು ವಿಶ್ವಮಟ್ಟದ ದಾಖಲೆ ನಿರ್ಮಿಸಿ ಗಮನ ಸೆಳೆದರು.
ಸ್ವಾಮಿ ವಿವೇಕಾನಂದರ ಜನ್ಮದಿನದಂದೇ ಇಂಥ ಅಪರೂಪದ ಘಳಿಗೆ ಕಂಡುಬಂದಿದ್ದು ಮುಗಳಖೋಡದ ಜಿಡಗಾ ಮಠದಲ್ಲಿ ಶುಕ್ರವಾರ ನಡೆದ ಸಿದ್ಧರಾಮೇಶ್ವರ ಸಂಕಲ್ಪ  ಜಾತ್ರೆಯಲ್ಲಿ.

ರಾಯಪುರದಲ್ಲಿ ಎಂಟು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ 2,516  ವಿದ್ಯಾರ್ಥಿಗಳು ವಿವೇಕಾನಂದರ ವೇಷಧಾರಿಯಲ್ಲಿ ಕಾಣಿಸಿಕೊಂಡು ದಾಖಲೆ ನಿರ್ಮಿಸಿದ್ದರು. ಆದರೆ, ಇಂದು ಮುಗಳಖೋಡದಲ್ಲಿ ನಡೆದ ‘ಸಹಸ್ರ ಸಹಸ್ರ ವಿವೇಕ್ ಅವಾಹನಾ’ ಸಮಾರಂಭದಲ್ಲಿ  ಏಕಕಾಲಕ್ಕೆ 10,054  ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವೇಷಧಾರಿಯಲ್ಲಿ ಪಾಲ್ಗೊಂಡು ನೂತನ ದಾಖಲೆ ನಿರ್ಮಿಸಿದರು.

ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಗೋಲ್ಡನ್ ಬುಕ್ ರೆಕಾರ್ಡ್​ನಲ್ಲಿ ಇಲ್ಲಿನ ವಿವೇಕಾನಂದರ ವೇಷಧಾರಿಗಳ ದಾಖಲೆ ಸೇರ್ಪಡೆಯಾಯಿತು. ಜಿಡಗಾ ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿಯವರು ಗುಜರಾತ್ ರಾಜ್ಯದಿಂದ ಇಷ್ಟೊಂದು ವಿದ್ಯಾರ್ಥಿಗಳಿಗೆ ಖಾವಿ ಬಟ್ಟೆ ತರಿಸಿ ಧರಿಸಲು ನೀಡಿದ್ದರು.

ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಲೆಗೆ ಕೇಸರಿ ಪೇಟ ತೊಟ್ಟು, ಮೈತುಂಬ ಖಾವಿ ಬಟ್ಟೆ ಧರಿಸಿ ಕಣ್ಮನ ಸೆಳೆದರು. ಕೇವಲ ಬಟ್ಟೆ ಧರಿಸಿದೇ ಸ್ವಾಮಿ ವಿವೇಕಾನಂದರ ಹಾವಭಾವದಲ್ಲಿ ಅವರು ಗಮನಸೆಳೆದರು. ನಿಪ್ಪಾಣಿಯ ಸುನಿಲ ದಳವಿಯವರ 70 ಸದಸ್ಯರ ತಂಡವು ವಿದ್ಯಾರ್ಥಿಗಳಿಗೆ ಆಕರ್ಷಕವಾಗಿ ಪೇಟ ತೊಡಿಸಿದ್ದು ಇನ್ನೊಂದು ವಿಶೇಷ.

Comments