UK Suddi
The news is by your side.

ದೊಡವಾಡ: ಸಮರ್ಪಕ ಬಸ್ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ: ದೊಡವಾಡದಿಂದ ನಿತ್ಯ ಧಾರವಾಡ ಹಾಗೂ ಬೈಲಹೊಂಗಲಕ್ಕೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಕೆಲಸ ಕಾರ್ಯಗಳಿಗೆ ಸಂಚರಿಸುವ ಸಾರ್ವಜನಿಕರಿಗೆ ಸಮರ್ಪಕ ಬಸ್ ಸೌಕರ್ಯ ಒದಗಿಸದ ಬೈಲಹೊಂಗಲ ಕೆಎಸ್‍ಆರ್‍ಟಿಸಿ ಘಟಕದ ಅಧಿಕಾರಿಗಳ ವಿರುದ್ಧ ದೊಡವಾಡ, ನನಗುಡಿಕೊಪ್ಪ, ಗುಡಿಕಟ್ಟಿ ಗ್ರಾಮಗಳ ಕಾಲೇಜು ವಿದ್ಯಾರ್ಥಿಗಳ ಒಕ್ಕೂಟದವರು ಹಾಗೂ ಗ್ರಾಮಸ್ಥರೆಲ್ಲ ಸೇರಿ ಗ್ರಾಮದ ಕೊಪ್ಪದ ಅಗಸಿಯಲ್ಲಿ ಬಸ್ ಸಂಚಾರ ತಡೆದು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 6 ಗಂಟೆಯಿಂದಲೇ ಅಗಸಿಯ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಸಂಬಂದಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಬಳಿಕ ದೊಡವಾಡ ಪೋಲೀಸರ ಮಧ್ಯಸ್ಥಿಕೆಯಲ್ಲಿ ಬೈಲಹೊಂಗಲ ಘಟಕ ವ್ಯವಸ್ಥಾಪಕ ಸಂತೋಷ ಕಮತರವರನ್ನು ಕರೆಯಿಸಿ ಅವರಿಂದ ಒಂದು ವಾರದೊಳಗೆ ಸರಿಯಾದ ಸಮಯಕ್ಕೆ ಬಸ್ಸಿನ ಅನುಕೂಲ ಮಾಡಿಕೊಡಲಾಗುವುದೆಂದು ಲಿಖಿತ ಭರವಸೆ ಪಡೆದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಬಸ್‍ಗಳನ್ನು ಬಂದ್ ಮಾಡಿದ್ದರಿಂದ ಪರಊರಿಗೆ ತೆರಳುತ್ತಿದ್ದ ಸಾರ್ವಜನಿಕರು ತೊಂದರೆ ಅನುಭವಿಸಿದರೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡದ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕಿದರು.

ಗುಜರಿಗೆ ಹಾಕುವ ಸ್ಥಿತಿಯಲ್ಲಿರುವ ಡಕೋಟಾ ಬಸ್‍ಗಳನ್ನು ಈ ಮಾರ್ಗವಾಗಿ ಓಡಿಸುತ್ತಿದ್ದಾರೆ.ಇನ್ನೊಂದು ವಾರದಲ್ಲಿ ಉತ್ತಮ ಗಾಡಿಗಳನ್ನು ಸರಿಯಾದ ವೇಳಾಪಟ್ಟಿ ಪ್ರಕಾರ ಬಿಡದೆ ಹೋದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೆ ಹೊಣೆ.
-ಸಂಗಯ್ಯ ದಾಭಿಮಠ ತಾಪಂ ಸದಸ್ಯ

ಘಟಕ ವ್ಯವಸ್ಥಾಪಕರ ಲಿಖಿತ ಭರವಸೆಯಂತೆ ಸದ್ಯಕ್ಕೆ ಪ್ರತಿಭಟನೆ ಹಿಂಪಡೆಯುತ್ತಿದ್ದೇವೆ ಕೊಟ್ಟ ಮಾತಿಗೆ ತಪ್ಪಿದರೆ ಈ ಭಾಗದ ವಿದ್ಯಾರ್ಥಿಗಳು, ಗ್ರಾಮಸ್ಥರು ಕೂಡಿಕೊಂಡು ಬೈಲಹೊಂಗಲ ಘಟಕಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುತ್ತೇವೆ.
-ನಿಂಗಪ್ಪ ಚೌಡಣ್ಣವರ ಬಿಜೆಪಿ ರೈತ ಮುಖಂಡ.

Comments