UK Suddi
The news is by your side.

BRTS ಯೋಜನೆ  ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ನಾಡೋಜ ಡಾ: ಪಾಟೀಲ ಪುಟ್ಟಪ್ಪ.


ಹುಬ್ಬಳ್ಳಿ: ಆಮೆಗತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಹಾಗೂ ಸಾರ್ವಜನಿಕರಿಗೆ ಕಿರಿ ಕಿರಿ ಯಾಗಿ ಪರಿಣಮಿಸುತ್ತಿರುವ ಹುಬ್ಬಳ್ಳಿ ಧಾರವಾಡ ನಡುವಿನ ಬಹು ನಿರೀಕ್ಷಿತ ಬಿ.ಆರ್.ಟಿ.ಎಸ್ ಯೋಜನೆಯ ಅನುಷ್ಠಾನದ ಹಾಗೂ ಉಪಯೋಗಗಳ ಬಗ್ಗೆ ನಾಡೋಜ ಡಾ: ಪಾಟೀಲ ಪುಟ್ಟಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದು ಅದರ ಸಾರಾಂಶ ಈ ಕೆಳಗಿನಂತಿದೆ. 

“ಸನ್ಮಾನ್ಯರಾದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರಿಗೆ 

ಸಪ್ರೇಮ ವಂದನೆಗಳು ನಿಮ್ಮಲ್ಲಿ ನಾನು ಹೇಳಿಕೊಳ್ಳುವಂಥ ನನ್ನ ಸ್ವಂತದ ವಿಚಾರ ಒಂದೂ ಇಲ್ಲ. ನಾನು ಈ ಯಾವುದರ ಬಗ್ಗೆ ಬರೆದರೂ ಅದು ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ್ದಾಗಿದೆ. ಮುಖ್ಯಮಂತ್ರಿಗಳಾದ ನೀವು ಹುಬ್ಬಳ್ಳಿ-ಧಾರವಾಡಗಳ ನಡುವೆ ಸಾವಿರಾರು ಸಲ ಸಂಚರಿಸಿರಬಹುದು. ಅಲ್ಲಿಯ ರಸ್ತೆ ಕಾಮಗಾರಿಯ ಕೆಲಸ ಆಮೆ ವೇಗದಿಂದ ನಡೆದಿರುವುದು ನಿಮ್ಮ ಗಮನಕ್ಕೆ ಬಂದಿರುಬಹುದು. ಆ ಕೆಲಸ ಮಂದಗತಿಯಿಂದಲೇ ನಡೆದಿರಲಿ ಅಥವಾ ವೇಗ ಪಡೆದುಕೊಂಡೇ ನಡೆದಿರಬಹುದು. ಅದು ಪೂರ್ಣಗೊಂಡಾಗ ಆ ರಸ್ತೆಯು ಯಾರ ಉಪಯೋಗಕ್ಕೆ ಇದೆಯೋ ಏನೋ ಎಂದು ಹೇಳಬಲ್ಲವರು ಯಾರು ಇಲ್ಲ. ಆ ಕೆಲಸ ವಿಜಯಪುರದ ಬಾರಾಕಮಾನಿನ ಕೆಲಸದಂತೆ ನಡಿದಿದೆ. ಕೋಟ್ಯಾಂತರ ರೂಪಾಯಿಗಳನ್ನು ಆ ಕೆಲಕ್ಕೋಸುಗ ಖರ್ಚು ಮಾಡಲಾಗಿದೆ. ಆ ರಸ್ತೆಯಂತು ಕಾರ್ಯಯೋಗ್ಯವಾಗುತ್ತದೆ ಎಂದು ಹೇಳಬಲ್ಲವರು ಯಾರು ಇಲ್ಲ. ಅಹ್ಮದಾಬಾದ ಹಾಗೂ ಪುಣೆ ನಗರಗಳಲ್ಲಿ ಸ್ಥಾಪಿಸಲಾದ ಈ ಬಗೆಯ ರಸ್ತೆಗಳು ಕಾರ್ಯ ಯೋಗ್ಯವಾಗಿಲ್ಲ ಎಂದು ಅವುಗಳನ್ನು ಆರಂಭ ಮಾಡಿದ ಕೆಲ ದಿನಗಳಲ್ಲಿಯೇ ಕೋಟ್ಯಾಂತರ ರೂಪಾಯಿಗಳನ್ನು ಹಾಳು ಮಾಡಿ, ಆ ರಸ್ತೆಗಳನ್ನು ಕೈ ಬಿಡಲಾಗಿದೆ. 

ಸರಕಾರದಲ್ಲಿ ದಕ್ಷರಾದ ಇಂಜಿನೀಯರರು ಇದ್ದಾರೆ. ಈಗ ಹುಬ್ಬಳ್ಳಿ-ಧಾರವಾಡಗಳ ನಡುವೆ ಹಾಕಲಾಗುತ್ತಿರುವ ರಸ್ತೆ ಜನರ ಉಪಯೋಗಕ್ಕೆ ಬರುತ್ತದೆ ಎಂದು ಹೇಳಬಲ್ಲವರು ಯಾರಿದ್ದಾರೆ. ನಿಮ್ಮ ನಿರ್ಭಿಡವಾದ ಕಾರ್ಯದಲ್ಲಿ ಈ ರಸ್ತೆಯ ಕಡೆಗೆ ಗಮನ ಕೊಡುವುದು ಆಗದೇ ಇರಬಹುದು. ನಿಮ್ಮ ಜನನಿಬೀಡ ಕಾರ್ಯಗಳಿಗೋಸುಗ ರಾಜ್ಯದ ಲಕ್ಷಾಂತರ ಜನರು ನಿಮಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿರುತ್ತಾರೆ. ಕಾರ್ಯ ಯೋಗ್ಯವಲ್ಲದ ಈ ರಸ್ತೆ ನಿರ್ಮಾಣದಿಂದ ರಾಜ್ಯದ ಬಹು ಅಮೂಲ್ಯವಾದ ಹಣ ಮಾತ್ರ ಹಾಳಾಗುತ್ತಿರುವುದನ್ನು ತಪ್ಪಿಸುವುದು ಯಾರಿಂದಲೂ ಆಗಿಲ್ಲ. ಈಗ ನಡೆದಿರುವ ಕೆಲಸ ಅದು ನಡೆದಿರುವ ರೀತಿಯಲ್ಲೇ ನಡೆದರೆ ಯಾವ ಕಾಲದಲ್ಲಿ ಮುಗಿಯುತ್ತದೆ. ಜನರು, ವಾಹನ ಓಡಾಡುವ ರಸ್ತೆಯಲ್ಲಿ ಯಾವ ರೀತಿ ಹತ್ತುತ್ತಾರೆ ಹಾಗೂ ತಮ್ಮ ಪ್ರಯಾಣ ಮುಗಿಯುವುದರೊಳಗೆ ಎಷ್ಟು ಸಲ ಇಳಿಯುತ್ತಾರೆ. ಹಾಗೂ ಎಷ್ಟು ಸಲ ಮೇಲಕ್ಕೆ ಹತ್ತಿಕೊಂಡು ಹೋಗುತ್ತಾರೆ.ಆ ರಸ್ತೆಯ ಕಾರ್ಯ ಬಹು ಅದ್ವಾನವುಳ್ಳದ್ದಾಗಿದೆ. ಈ ಕಾರ್ಯ ಇನ್ನು ಎಷ್ಟು ವರ್ಷಗಳಲ್ಲಿ ನೆರವೇರುತ್ತದೆ. ಅದು ಬಸ್ಸುಗಳ ಸಂಚಾರಕ್ಕೆ ಯಾವ ರೀತಿಯಿಂದ ನೆರವಾಗುತ್ತದೆ. ಈ ಕಾರ್ಯವು ಜನರಿಗೆ ಉಪಯೋಗವಾಗುವಂತೆ ಮೇಲೆ ಹೋಗಿ ಕೆಳಗೆ ಬಂದು ಮತ್ತೆ ಮೇಲಕ್ಕೆ ಹೋಗಿ ಯಾವ ವರ್ಷದಲ್ಲಿ ಮತ್ತೆ ಕೆಳಗೆ ಇಳಿಯುತ್ತದೆ ನನಗಂತೂ ತಿಳಿಯದಂತೆ ಆಗಿದೆ. ಅದು ಕಾರ್ಯ ಯೋಗ್ಯವಾಗುತ್ತದೆ ಎನ್ನುವುದನ್ನು ಹೇಳಬಲ್ಲ ಪ್ರವೀಣರನ್ನು ಸರಕಾರವು ಇಲ್ಲಿ ಎಲ್ಲಿಂದ ಕರೆಸುತ್ತದೆ. 

ನಿಮ್ಮ ಕಾರ್ಯ ಬಾಹುಲ್ಯದಲ್ಲಿ ನಾನು ನಿಮಗೆ ತೊಂದರೆ ಕೊಟ್ಟ ಬಗ್ಗೆ ನನಗೆ ವ್ಯಥೆ ಎನಿಸುತ್ತದೆ. ಎಷ್ಟೋ ಸಾವಿರ ಕೋಟಿ ಹಣವು ಕಾಣದ ಕಡಲಲ್ಲಿ ಹಾಳಾಗಿ ಹೋಗುತ್ತದೆ ಎನ್ನುವ ವ್ಯಸನ ನನಗೆ ಇದೆ. ರಾಜ್ಯದ ಪ್ರತಿಯೊಂದು ಕಾಸಿನ ಹಣವು ದುರ್ಬಳಕೆ ಆಗದೆ ಸದ್ಭಳಕೆಯಾಗುತ್ತದೆ ಎನ್ನುವ ಭರವಸೆ ಬೇಕು. 

ಈ ಕಾರ್ಯದ ಕಡೆಗೆ ನೀವು ನಿಮ್ಮ ಬಹು ನಿಭೀಡ ಕಾರ್ಯದಲ್ಲಿಯೂ ಗಮನ ಹರಿಸುತ್ತೀರಿ ಎನ್ನುವ ನಂಬುಗೆ ನನಗೆ ಇದೆ” 
ತಮ್ಮ 

ಪಾಟೀಲ ಪುಟ್ಟಪ್ಪ.
ಈ ರೀತಿಯಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

Comments