UK Suddi
The news is by your side.

ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವಲ್ಲಿ ಮತದಾನ ಮಹತ್ವದ ಕಾರ್ಯವಾಗಿದೆ:ಎನ್ ಎಚ್ ನಾಗೂರ.

ಧಾರವಾಡ: ಚುನಾವಣೆ, ಮತದಾನದ ಮಹತ್ವ ಹಾಗೂ ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಮತದಾರರ ಪಾತ್ರ ಕುರಿತು ಜನ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್.ಎಚ್.ನಾಗೂರ ಅವರ ನೇತೃತ್ವದಲ್ಲಿ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿತ್ತು.

ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವಲ್ಲಿ ಮತದಾನ ಮಹತ್ವದ ಕಾರ್ಯವಾಗಿದೆ. ಅರ್ಹ ಮತದಾರರು ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸುವುದು ಅವರ ಕರ್ತವ್ಯವಾಗಿದೆ. ಬರುವ ಜ.22ರವರೆಗೆ ಭಾರತ ಚುನಾವಣಾ ಆಯೋಗವು ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶ ನೀಡಿದೆ. ಈ ಸದಾವಕಾಶವನ್ನು ಬಳಸಿಕೊಂಡು ಗ್ರಾಮದ ಪ್ರತಿಯೊಬ್ಬ ವಯಸ್ಕರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬೇಕೆಂದು ಅವರು ತಿಳಿಸಿದರು.

ಮತದಾನ ಮಹತ್ವದ ಕಾರ್ಯವಾಗಿರುವುದರಿಂದ ಯಾರು ಮತ ಚಲಾವಣೆಯಿಂದ ವಂಚಿತರಾಗದೆ ತಮ್ಮ ಮತ ಚಲಾಯಿಸಬೇಕು. ಮತ್ತು ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ, ಅರ್ಹರಿಗೆ ಮತ ಚಲಾಯಿಸಬೇಕೆಂದು ಅವರು ಹೇಳಿದರು.
ಕರಡಿಗುಡ್ಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತದಾನದ ಮಹತ್ವ, ಮತದಾರರ ಹೆಸರು ನೋಂದಣಿ, ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಮತದಾರರ ಪಾತ್ರ ಕುರಿತು ಭಿತ್ತಿಪತ್ರಗಳನ್ನು ಹಿಡಿದು ಗ್ರಾಮದ ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿದರು.
ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಪ್ರಭಾರ ಪ್ರಧಾನ ಗುರುಮಾತೆ ಶ್ರೀಮತಿ ಹೆಗಡೆ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Comments