ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ.
ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾಗೆ ಪರ್ಯಾಯವಾಗಿ ಜಾಗತಿಕ ಲಿಂಗಾಯತ ಮಹಾಸಭಾವನ್ನು ಅಸ್ತಿತ್ವಕ್ಕೆ ತರಲಾಗಿದೆ. ನೂತನ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಬಸವರಾಜ ಹೊರಟ್ಟಿ, ಕಾರ್ಯಾಧ್ಯಕ್ಷರಾಗಿ ಸಚಿವ ಎಂ.ಬಿ.ಪಾಟೀಲ್ ನೇಮಕಗೊಂಡಿದ್ದಾರೆ.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಗದಗ ಜಗದ್ಗುರು ಶ್ರೀ ಸಿದ್ದಲಿಂಗ ಸ್ವಾಮೀಜಿ , ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ , ಭಾಲ್ಕಿ ಬಸವಲಿಂಗ ಸ್ವಾಮೀಜಿ , ಲಿಂಗಾಯತ ಸಮಾಜದ ಸ್ವಾಮೀಜಿಗಳು, ಮುಖಂಡರ ಸಭೆ ನಡೆಯಿತು. ಪರಿಷತ್ ರಚನೆಯ ಸಾಧಕ-ಬಾಧಕಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ್ ಹೊರಟ್ಟಿ, ಎಸ್.ಎಂ.ಜಾಮದಾರ್ ಸೇರಿದಂತೆ ವಿವಿಧೆಡೆಯಿಂದ ಸ್ವಾಮೀಜಿಗಳು ಆಗಮಿಸಿದ್ದರು. ಸಭೆಯಲ್ಲಿ ಪರಿಷತ್ ಧ್ಯೇಯೋದ್ದೇಶಗಳ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಎಸ್.ಎಂ.ಜಾಮದಾರ್, ಬಸವಣ್ಣನ ಧರ್ಮದಲ್ಲಿ ಮಠಗಳೇ ಇಲ್ಲ. ಜಂಗಮ ಅನ್ನೋದು ಒಂದು ತತ್ವ. ಜಾಗತಿಕ ಲಿಂಗಾಯತ ಮಹಾಸಭಾ ಅಂತ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಎಸ್.ಎಂ.ಜಾಮದಾರ್ ಪ್ರಸ್ತಾಪ ಮಾಡಿದರು. ಇದಕ್ಕೆ ಸಭೆಯಲ್ಲಿ ಸಹಮತ ವ್ಯಕ್ತವಾಯಿತು.
ನಂತರ ಜಾಗತಿಕ ಲಿಂಗಾಯತ ಮಹಾಸಭಾ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಪೂರಕವಾಗಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾಗೆ ಸೆಡ್ಡು ಹೊಡೆಯುವಂತ ನೂತನ ಮಹಾಸಭಾವನ್ನು ಅಸ್ತಿತ್ವಕ್ಕೆ ತರಲಾಯಿತು.
ನಂತರ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕವನ್ನು ಸಚಿವ ಎಂ.ಬಿ.ಪಾಟೀಲ್ ಘೋಷಣೆ ಮಾಡಿದರು. ನಾವು ಹಿಂದೂಗಳಲ್ಲ, ನಾವು ಲಿಂಗಾಯತರು. ನಾವು ಹಿಂದೂಗಳ ವಿರೋಧಿಗಳು ಅಲ್ಲ. ನಾವು ಕಡೆಯ ಅಸ್ತ್ರವಾಗಿ ಜಾಗತಿಕ ಲಿಂಗಾಯತ ಮಹಾಸಭಾ ರಚನೆ ಮಾಡಿದ್ದೇವೆ ಎಂದು ನೂತನ ಮಹಾಸಭಾ ರಚನೆಯನ್ನು ಸಚಿವ ಎಂ.ಬಿ.ಪಾಟೀಲ್ ಸಮರ್ಥಿಸಿಕೊಂಡರು.
ಪದಾಧಿಕಾರಿಗಳ ಪಟ್ಟಿ:
ನೂತನ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಬಸವರಾಜ ಹೊರಟ್ಟಿಯವರನ್ನು ನೇಮಕಗೊಳಿಸಲಾಗಿದೆ. ಕಾರ್ಯಾಧ್ಯಕ್ಷರಾಗಿ ಸಚಿವ ಎಂ.ಬಿ.ಪಾಟೀಲ್, ಹಿರಿಯ ಉಪಾಧ್ಯಕ್ಷರಾಗಿ ಪ್ರಕಾಶ್ ಹುಕ್ಕೇರಿ, ಮಾಲಕರೆಡ್ಡಿ, ಅರವಿಂದ ಜತ್ತಿ, ಅಶೋಕ್ ಖೇಣಿ, ಶಂಕರ್ ಬಿದರಿ, ಬಿ.ಆರ್.ಪಾಟೀಲ್, ಅಶೋಕ್ ಪಟ್ಟಣ, ಎಂ.ಪಿ.ನಾಡಗೌಡ, ಬಸವರಾಜ ರಾಯರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್.ಎಂ.ಜಾಮದಾರ್, ಕಾರ್ಯಕಾರಿ ಸಮಿತಿಯಲ್ಲಿ ಚಂಪಾ, ವಿನಯ್ ಕುಲಕರ್ಣಿ, ಗೊ.ರು. ಚೆನ್ನಬಸಪ್ಪ, ರಾಜ್ಯ ಘಟಕದ ಅಧ್ಯಕ್ಷರಾಗಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ರನ್ನು ನೇಮಕಗೊಳಿಸಲಾಗಿದೆ.
ಇದೇ ಸಂದರ್ಭದಲ್ಲಿ ಬೆಳಗಾವಿ, ಧಾರವಾಡ, ದಾವಣಗೆರೆ ಮುಂತಾದ ಜಿಲ್ಲೆಗಳ ಅಖಿಲ ಭಾರತೀಯ ವೀರಶೈವ ಮಹಾಸಭೆಯ ಅಧ್ಯಕ್ಷರು ರಾಜೀನಾಮೆ ನೀಡಿ ಜಾಗತಿಕ ಲಿಂಗಾಯತ ಮಹಾಸಭೆಗೆ ತಮ್ಮ ಬೆಂಬಲವನ್ನು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಡಾ ಜೆ ಎಸ್ ಪಾಟೀಲ ಮತ್ತು ಶಶಿಕಾಂತ ಪಟ್ಟಣ ಅವರು ಇದ್ದಾರೆ.