UK Suddi
The news is by your side.

ಶಿವಾರಾಧಕ  ಲಿಂಗಾಯತರು ಹಿಂದೂಗಳಲ್ಲ ಡಾ ಏನ್ ಜಿ ಮಹದೇವಪ್ಪನವರ ಅಭಿಪ್ರಾಯ  ಶುದ್ಧ ತಪ್ಪು.ಇಂದು ದಿನಾಂಕ 23 ಜನವರಿ 2018 ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಡಾ ಏನ್ ಜಿ ಮಹದೇವಪ್ಪನವರು ಹೊರಡಿಸಿದ ಕರ ಪಾತ್ರಗಳು ಅನೇಕ ಪ್ರಮಾದಗಳಿಂದಾ ಕೂಡಿವೆ.

ಕಲ್ಯಾಣದಲ್ಲಿ ವರ್ಗ ವರ್ಣ ಆಶ್ರಮ ಲಿಂಗ ಭೇದ ಹೊಡೆದು ಹಾಕಿ ಸಾರ್ವಕಾಲಿಕ ಸಮಕಾಲೀನ ಸಮತೆಯನ್ನು ನೀಡಿದ ಬಸವಣ್ಣ ಈ ನೆಲವು ಕಂಡ ಜಗತ್ತಿನ ಶ್ರೇಷ್ಠ 
ಸಮಾಜವಾದಿ ಚಿಂತಕ . ಶಿವ ನೆಂಬುದು ಚೈತನ್ಯ -ಅರಿವು ಜ್ಞಾನ ಮಂಗಳ ಎಂಬ ಪಾರಿಭಾಷಿಕ ಪದಗಳಲ್ಲಿ ಶರಣರು ಕಂಡಿದ್ದಾರೆ 
 
ಕಾಯದೊಳು ಗುರು ಲಿಂಗ ಜಂಗಮ 
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |
ದಾಯದೋರಿ ಸಮಸ್ತ ಭಕ್ತ ನಿ 
ಕಾಯವನು ಪಾವನವ ಮಾಡಿದ 
ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ||  ಚಾಮರಸ ( ಪ್ರಭು ಲಿಂಗ ಲೀಲೆ ).


ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ  ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.
ಸನಾತನದಲ್ಲಿ ಗುರು ಸರ್ವ ಶ್ರೇಷ್ಠ ಅವನಿಂದಲೇ ಮುಕ್ತಿ ದಾರಿ ತೋರುವ ನಿಜ ಗುರು ಹರನಿಗಿಂತಲೂ ಶ್ರೇಷ್ಠ ಇಂತಹ ಅನೇಕ ಕಲ್ಪನೆಗಳು  ಬಸವಣ್ಣನವರು ಕಿತ್ತೊಗೆದು ,ದೀಪದಿಂದ ದೀಪ ಹಚ್ಚುವ ಪರಿಕಲ್ಪನೆ ಅಥವಾ ಗುರು ತನ್ನ ಕಾರ್ಯ ನಿರ್ವಹಿಸಿ ತಾನು ಶಿಷ್ಯನಲ್ಲಿ ಒಂದಾಗಿ ತಾನು ಗುರು  ಆತ ಶಿಷ್ಯ ಎಂಬ ಬೇರೆ ಭಾವವನ್ನು ಸಂಪೂರ್ಣ ಕಳೆದು ಕೊಳ್ಳುತ್ತಾನೆ 
ಶರಣರು ತಾನು ಮತ್ತು ಶಿವ ಒಂದು ಎಂದು ಸಾಧಿಸಿದ ಮೊದಲ ಪುರುಷರು.ಉಭಯ ಭಾವವನ್ನು ಎಲ್ಲಿಯೂ ಪ್ರತಿಪಾದಿಸದೆ  ಅಂತಹ ಸಂದೇಹ ಗೊಂದಲಗಳನ್ನು ಕಿತ್ತು ಹಾಕಿದರು. ಮನುಷ್ಯ ತಾನು ತನ್ನ ಸುತ್ತಲಿನ ಜೀವ ಜಾಲದ ಚೈತನ್ಯವನ್ನು ಚಿತ್ಕಳೆಯನ್ನು ನಿರಾಕಾರದ ಶಿವನ ಪರಿಕಲ್ಪನೆಯನ್ನು ಸಾಕಾರ ಗೊಳಿಸಿ ,ಮತ್ತೆ ನಿರಾಕಾರದ ನಿರುಪಾಧಿಕ ತತ್ವದ ಆಧ್ಯಾತ್ಮಿಕ ಪಯಣಕ್ಕೆ ಕರೆದೊಯ್ಯುವುದೇ  ಶರಣ ಮಾರ್ಗ. 


ಜಂಗಮ ಪದ ಶರಣರು ಸಮಾಜವೆಂತಲೂ ತತ್ವ ನಿಷ್ಠ ಸಾಧಕರೆಂತಲೂ ಸಮಷ್ಟಿ ಎಂತಲೂ ಬಳಸಿ ಲಿಂಗವೇ ಜಂಗಮ ಎಂದೆನ್ನುತ್ತಾ  ವ್ಯಕ್ತಿ    ಸಮಷ್ಟಿಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದಾರೆ. ಬಸುರಿಗೆ ಮಾಡಿದ ಸುಖ ದುಃಖಗಳು ಶಿಶುವಿಗೆ ಮೂಲ ಎಂದು ಹೇಳಿ ಬಸುರಿ -ಇದು ಜಂಗಮ ಪರಿಕಲ್ಪನೆ ಶಿಶು ಭಕ್ತನಾಗುತ್ತಾನೆ .
ಇದೆ ರೀತಿ
 “ಮರಕ್ಕೆ ಬಾಯಿ ಬೇರೆಂದು ತಳೆಯಿಂಕೆ  ನೀರೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ ,
ಲಿಂಗದ ಬಾಯಿ ಜಂಗಮವೆಂದು 
ಪಡಿ ಪದಾರ್ಥವ ನೀಡಿದಡೆ 
ಮುಂದೆ  ಸಕಳಾರ್ಥವನಿವನು .
ಆ ಜಂಗಮ ಹರನೆಂದು ಕಂಡು ,
ನರನೆಂದು ಭಾವಿಸಿದೊಡೆ 
ನರಕ ತಪ್ಪದು ಕಾಣಾ ,ಕೂಡಲ ಸಂಗಮದೇವ
 .

 ಅತ್ಯಂತ ಸ್ಪಷ್ಟವಾಗಿ ನಿರೂಪಿಸಿದ ಲಿಂಗ ಜಂಗಮ ತತ್ವಗಳು ಇಲ್ಲಿ ಕಾಣುತ್ತೇವೆ. ಹೇಗೆ ಮರಕ್ಕೆ  ಬಾಯಿ ಬೇರೋ ಹಾಗೆ ಲಿಂಗದ ಬಾಯಿ ಜಂಗಮ ಅಂದರೆ ಸಮಾಜ .ಸಮಾಜದ ವ್ಯಕ್ತಿಯನ್ನು ಹರನೆಂದು ನಂಬಿ ಪ್ರೀತಿಯಿಂದ ನೋಡಬೇಕಾದವರು ನರನೆಂದು ಕಡೆಗಣಿಸಿದರೆ ಸ್ವರ್ಗವೂ   ಕೂಡಾ ನರಕವೇ ಎಂದು ಎಚ್ಚರಿಸಿದ್ದಾರೆ ಬಸವಣ್ಣನವರು. ಜಂಗಮ ಜಾತಿಯಲ್ಲ ಅದು ಸಮಾಜ .ಲಿಂಗ ತತ್ವವನ್ನು ಪ್ರಾಣದಲ್ಲಿ ಇತ್ತು ನಿರುಪಾದಿತವಾಗಿ ಗೌರವಿಸುವ ಸುಂದರ ಸಮತೆಯ ವ್ಯವಸ್ಥೆ- ಇಂತಹ ಸಮತೆಯ ಜಂಗಮ ವ್ಯವಸ್ಥೆಯನ್ನು ಬಸವಣ್ಣ ಮತ್ತು ಶರಣರು  ಅರಿತು ಆಚರಿಸಿದಲ್ಲದೆ ಅವರು ತಾವು ಕಂಡ ಸತ್ಯವನ್ನು ಮುಕ್ತ ವಚನಗಳಲ್ಲಿ ವ್ಯಕ್ತಗೊಳಿಸಿದ್ದಾರೆ.
ಅನುಭಾವವೇ ಜಂಗಮ -ಜಂಗಮವೂ ಕೂಡಾ ಉಪಾದಿತ ವ್ಯವಸ್ಥೆಯಲ್ಲ.ಜಂಗಮವು   ಜಾತಿಯೂ ಅಲ್ಲ ಜಂಗಮ ಒಂದು ಸಂಸ್ಥೆಯಲ್ಲ

ಶಿವನೆಂಬುದು   ದೇವರಲ್ಲ -ಲಿಂಗಾಯತರಲ್ಲಿ ಆರಾಧನೆಯಿಲ್ಲ:

ಶರಣರು ಶಿವ ಬೇರೆ ತಾನು ಬೇರೆ ಎಂದೆನ್ನಲಿಲ್ಲ . ಅಷ್ಟಾವರಣಗಳು ಪಂಚ ಮಹಾಭೂತಗಳ ಸಂಕೇತ ಅಲ್ಲಿ ಅಗ್ನಿ ತತ್ವ ವಾಯು ತತ್ವ ಅಪು ತತ್ವ ಜಲ ತತ್ವ ಹೀಗೆ ಅವುಗಳ ಅನುಗುಣವಾಗಿ ರುದ್ರಾಕ್ಷಿ ಎಂಬ ಅವತರಣಿಕೆಗಳನ್ನು ಧರಿಸಿದರು ಅವು ಕಡ್ಡಾಯವಲ್ಲ.
ಇಷ್ಟಲಿಂಗ ಪೂಜೆಯಲ್ಲ ಅದು ಲಿಂಗ ಯೋಗ . ಅಂಗ ಲಿಂಗ ಅರುವಿನ ಅನುಸಂಧಾನ . ಒಳ ಪಯಣದ ಸಾಧನ . 
ಇಲ್ಲಿ ಸಲ್ಲುವವ ಎಂದೆನ್ನುವುದು ಒಳಗಿನ ಚಿತ್ಕಳೆಗೆ ಸಮ್ಮತಿಯಾದದ್ದು ಬಾಹ್ಯ ಜಗತ್ತಿನ ಅಲ್ಲಿಯೂ ಸಲ್ಲುವ ಸನ್ಮಾರ್ಗ .

ಲಿಂಗಾಯತರದು ಏಕದೇವೋಪಾಸನೆಯಲ್ಲ:
ಮಾತು ಮಾನಗಳಿಂದತ್ತತ್ತ ಮೀರಿದ ಸಾತಿಶಯ ನಿರುಪಾಧಿತ ಲಿಂಗವೇ ಜ್ಯೋತಿ ಬೆಳಗುತಿದೆ ಎಂದು ನಿಜಗುಣ ಶಿವಯೋಗಿಗಳು ಹೇಳಿದ್ದಾರೆ.
ಅಂದರೆ ಲಿಂಗಾಯತರಲ್ಲಿ ಅರ್ಚನೆ ಪೂಜೆ ಆರಾಧನೆ ಉಪಾಸಣೆಗಳಿಲ್ಲ. ಅವುಗಳನ್ನು ವಿರೋಧಿಸಿದ್ದಾರೆ. ಒಬ್ಬ ಲಿಂಗಾಯತ ಲಕ್ಷ್ಮಿಯನ್ನು ಮಾತ್ರ ಪೂಜಿಸುವೆನು ತಾನು ಏಕದೇವೋಪಾಸನೆ ಎಂದರೆ ಅದು ಒಪ್ಪುತ್ತದೆಯೇ ? ಒಬ್ಬ ಗಣಪತಿ ಸರಸ್ವತಿ ಮಾತ್ರ ಪೂಜಿಸುವೆವು ಎನ್ನ ಬಹುದಲ್ಲ. ಕಾರಣ ಬಸವಣ್ಣನವರು ಸ್ಥಾಪಿಸಿದ 
ಲಿಂಗಾಯತ ಧರ್ಮದಲ್ಲಿ ಒಳಗಿನ ಅರುಹಿನ ಕುರುಹಾಗಿ ಮಾತ್ರ ಲಿಂಗವನ್ನು ಕಾಣಬೇಕು.
ನಮ್ಮ ಅನೇಕ ಮಠಗಳಲ್ಲಿ ಇನ್ನು ಯಜ್ಞ ಯಾಗಾದಿಗಳಿವೆ ಅಲ್ಲಿ ಜಾತಿ ಶ್ರೇಷ್ಠತೆ ಇದೆ. ಅಲ್ಲಿ ವೇದ ಪಾಠ ಶಾಲೆಗಳಿವೆ ಅಲ್ಲಿ ಅಯ್ಯಾಚಾರವಿದೆ .
ಆದರೆ   ಲಿಂಗಾಯತ ಧರ್ಮದಲ್ಲಿ ಮಠಗಳಿಲ್ಲ .
ತನ್ನ ತಾನರಿದೊಡೆ ತಾನೇ ದೇವಾ ಎಂದಿದ್ದಾತ್ರೆ ಶರಣರು.
ಅದೇ ರೀತಿ ನಾ ದೇವನಾಗಬಹುದಲ್ಲದೆ .ನೀ ದೇವಾ ನಾಗಬಹುದೇ ಎಂದು ಪ್ರಶ್ನಿಸಿದ್ದಾರೆ.
ಸಮಸ್ತ ಜೀವ ಜಾಲವೇ ಜಂಗಮ ಅದರ ಪೋಷಣೆ ರಕ್ಷಣೆಯೇ ಆರಾಧನೆ.


ಡಾ ಏನ್ ಜಿ  ಮಹದೇವಪ್ಪನವರು ಇನ್ನೊಬ್ಬರ ಬಾಯಿ ಮುಚ್ಚಿಸಲು ಹೋಗಿ ಲಿಂಗಾಯತ ಧರ್ಮದ ಉದಾತೀಕರಣದ ತತ್ವಕ್ಕೆ ಚ್ಯುತಿ ಎಸಗುವುದು ಬೇಡ.ಅವರೊಬ್ಬ ನಾಡು ಕಂಡ ಶ್ರೇಷ್ಠ ತತ್ವ ಶಾಸ್ತ್ರಜ್ಞರು ಆದರೆ ಅನುಭಾವದ ಹಿನ್ನೆಲೆಯಲ್ಲಿ ವಚನಗಳ ಆಧಾರದ ಮೇಲೆ ನಾವು ಚಿಂತಿಸಬೇಕು.
ಅವರು ರಚಿಸಿದ ಲಿಂಗಾಯತರು ಹಿಂದೂಗಳಲ್ಲ ಎನ್ನುವ ಪುಸ್ತಕದಲ್ಲಿಯೂ ಇಂತಹ ಕೆಲ ಪ್ರಮಾದಗಳು ಇವೆ.ಅಷ್ಟಾವರಣಗಳು ಭೌತಿಕ ಆವರಣಗಳಲ್ಲ .
ಅವರ ಬಗ್ಗೆ ನನಗೆ ತುಂಬಾ ಗೌರವ ಅಭಿಮಾನವಿದೆ ಆದರೆ ಹೀಗೆ ತಪ್ಪು ತಪ್ಪಾಗಿ ಬರೆದು ಗೊಂದಲಕ್ಕೆ ಸಮಾಜವನ್ನು ನೂಕುವುದು ಬೇಡ.

ವಿಶೇಷ ಸೂಚನೆ -ಚರ್ಚೆಗೆ ನಾನು ಸಿದ್ಧ 
——————————
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

Comments