ಫೆಬ್ರವರಿ 10ರಿಂದ ರಾಜ್ಯದಲ್ಲಿ ಮೂರು ದಿನ ರಾಹುಲ್ ಚುನಾವಣಾ ಪ್ರಚಾರ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿಯವರು ಮೊದಲ ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ 3 ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ರಾಹುಲ್ ರಾಜ್ಯ ಪ್ರವಾಸ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿ. ಪರಮೇಶ್ವರ್ ಅವರು, ರಾಹುಲ್ ಗಾಂಧಿಯವರು ಮೂರು ದಿನಗಳ ಕಾಲ ಫೆ.10, 11, 12 ರಂದು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಭೇಟಿ ವೇಳೆ ಮೆಗಾ ರ್ಯಾಲಿ ಹಾಗೂ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆಂದು ಹೇಳಿದ್ದಾರೆ.
ಫೆ.10ರಂದು ರಾಜ್ಯ ಪ್ರವಾಸಕ್ಕೆ ಆಗಮಿಸಲಿರುವ ರಾಹುಲ್ ಅವರು, ಹೊಸಪೇಟೆಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ಅವರನ್ನು ಹಂಪಿಗೆ ಕರೆದೊಯ್ಯುವ ಪ್ರಸ್ತಾವನೆಯಿದೆ ಎಂದು ತಿಳಿಸಿದ್ದಾರೆ.