ಕಣ್ಮಣಿ.
ಕೆಂಪು ಕುಪ್ಪಸ ತೊಟ್ಟು
ಬಿಳೀ ಹೂವನೊಂದೊಂದ
ಅಲ್ಲಲ್ಲಿ ಟ್ಟು…
ಆಗೊಮ್ಮೆ ಈಗೊಮ್ಮೆ
ಅತ್ತಿತ್ತ ಅಲ್ಲಾಡುತ್ತ
ಹೋಗು ಬರುವವರತ್ತ
ಕೈ ಬೀಸಿ ಕರೆಯುತ್ತ
ಕಣ್ಮನ ತಣಿಸುವ ಇವಳ
ವೈಯಾರ ಎಷ್ಟೆಂದು?
ಬಣ್ಣಿಸಲಿ…?
ಮೈಮರೆತು ಮುಟ್ಟಿದರೆ
ಮೂರು ತಾಸು ಒದ್ದಾಡ
ಬೇಕು ಹಾಗೆಂದು
ಬಿಟ್ಟರೆ ನಡೆಯದು
ಭಾಳ ಆಯ್ತಂದರೆ
ಬಾಯೆಲ್ಲ ಹಾಳೆಂದೇ
ತಿಳಿಯಬೇಕು..
ತಾಯವ್ವ ಬಾಯವ್ವ
ಎಲ್ಲರಿಗೂ ಹಾಯವ್ವ
ಮಕ್ಕಳು ಮುದುಕರಿಗಂತೂ
ಸಾಕವ್ವಾ..ಆದರೂ.!
ಮನಿ ಮನಿಗೂ..
ಮತ್ತ ಬೇಕವ್ವಾ…
ಇಷ್ಟೆಲ್ಲಿದ್ದರೂ
ಕಪ್ಪು ಮಣ್ಣೊಳು..
ಹೂತು ಕತ್ತು ತಗ್ಗಿಸಿ
ಸರದಿಯೊಳು ನಿಂತು
ನೋಡುಗರ ಕಣ್ಮನ ಗಳಿಗೆ
ನೀಡುವ ಔತಣ
ಬಲು ಮೋಜು
ಹಸಿರು ಗಿಡದ
ಕೆಂಪು ಮೆಣಸಿನಕಾಯಿ.!
-ಲೀಲಾ ಕಲಕೋಟಿ