ಕರ್ನಾಟಕ ಬಂದ್:ಗದಗನಲ್ಲಿ ಮುಗಿಲು ಮುಟ್ಟಿದ ಆಕ್ರೋಶ.
ಗದಗ: ಮಹದಾಯಿ ಸಮಸ್ಯೆ ಇತ್ಯರ್ಥಕ್ಕಾಗಿ ಆಗ್ರಹಿಸಿ ಕನ್ನಡಪರ ಒಕ್ಕೂಟ ಹಾಗೂ ರೈತ ಸಂಘಟನೆಗಳು ಕರ್ನಾಟಕ್ ಬಂದಗೆ ಕರೆ ನೀಡಿದ ಹಿನ್ನೆಲೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನರಗುಂದದಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ.
ನಗರದ ಮುಳಗುಂದ ನಾಕಾ, ಮಹಾತ್ಮಾಗಾಂಧಿ ವೃತ್ತದಲ್ಲಿ ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಕೂಡಲೇ ಮಹದಾಯಿ ನೀರಿನ ವಿವಾದವನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಹುಬ್ಬಳ್ಳಿ -ವಿಜಯಪುರ ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಇದರಿಂದಾಗಿ ನೂರಾರು ವಾಹನಗಳು ನರಗುಂದ ನಗರದ ಹೊರವಲಯದಲ್ಲಿಯೇ ಠಿಕಾಣಿ ಹೂಡಿವೆ.
ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡಪರ, ರೈತಪರ ಸಂಘಟನೆಗಳಿಂದ ಬಂದ್ಗೆ ಬೆಂಬಲ ಸೂಚಿಸಿವೆ. ಪಟ್ಟಣದಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಬಸ್ ನಿಲ್ದಾಣ ಬಿಕೋ ಎನಿಸುತ್ತಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.