UK Suddi
The news is by your side.

ರಾಜ ರಾಣಿಯಂತೆ ನಾನು ನೀನು.

ಉತ್ಸವದಲ್ಲಿ ವಿಸ್ತಾರವಾಗಿ ಹಾಕಿದ ಪೆಂಡಾಲಿನಲ್ಲಿ ಭರ್ತಿಯಾಗಿ ಉಳಿದ ಜನ ಕಿಕ್ಕಿರಿದು ರಸ್ತೆಯುದ್ದಕ್ಕೂ ತುಂಬಿದ್ದರು. ರೇಷ್ಮೆ ಜರಿಯ ಲಂಗ ಅದಕ್ಕೊಪ್ಪುವ ಪುಗ್ಗಾ ರವಿಕೆ ತೊಟ್ಟು ಜಡೆ ಹೆಣೆದು ಅದಕ್ಕೆ ಘಮ ಘಮಿಸುವ ಮಲ್ಲಿಗೆ ಮಾಲೆ ಇಳಿಬಿಟ್ಟು ಅದರ ಮೇಲೊಂದು ಕೆಂಗುಲಾಬಿ ಮುಡಿದು ನಿಂತ ನಿನ್ನ ನೋಡಿದ ಕಣ್ಣ ರೆಪ್ಪೆಗಳು ಮುಚ್ಚಲೇ ಇಲ್ಲ. ಮನಸ್ಸು ನಿನ್ನ ಬಳಿ ಬರಲು ಹಟ ಹಿಡಿಯಿತು. ಜನಸ್ತೋಮದ ನಡುವೆ ಸರ್ಕಸ್ ಮಾಡುತ್ತ ಮಧ್ಯೆ ಎದ್ದು ಬರಲು ಸಾಧ್ಯವೇ ಇರಲಿಲ್ಲ. ಉತ್ಸವದಲ್ಲಿ ಪ್ರೇಮ ಗೀತೆಗಳ ಸ್ಪರ್ಧೆ ಜೋರಾಗಿಯೇ ನಡೆದಿತ್ತು. ನನ್ನ ಸುತ್ತ ನಿಂತಿದ್ದ ಗೆಳೆಯರೆಲ್ಲ ನಿನ್ನೆಡೆ ನೆಟ್ಟ ದೃಷ್ಟಿಗೆ ನಿನ್ನ ಕುರಿತಾದ ಮಾತುಗಳಿಗೆ ಅದೇಕೋ ಹೊಟ್ಟೆ ಉರಿಯುತ್ತಿತ್ತು. ನೀನು ನನ್ನ ಸ್ವತ್ತು ಎಂದು ಭಾಸವಾಗುತ್ತಿತ್ತು.
ದುಂಡನೆಯ ಮಲ್ಲಿಗೆಯ ಮುಖ ಗುಂಗುರಾದ ಕಪ್ಪು ಕೂದಲು ಸುರುಳಿ ಸುರುಳಿಯಾಗಿ ತಂಗಾಳಿಗೆ ಆ ಕಡೆ ಈ ಕಡೆಯೊಮ್ಮೆ ವಾಲುತ್ತಿತ್ತು. ಕೆಂದುಟಿಯ ಕಿರುನಗೆಗೆ ಯುವ ಹೃದಯಗಳೆಲ್ಲ ನಿನ್ನ ಬೆನ್ನು ಹತ್ತುವಂತಿತ್ತು. ನಿಂಬೆ ಹಣ್ಣಿನ ಮೈ ಬಣ್ಣ ನಿನ್ನ ಕಾಂತಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ದೇವರು ಅದೆಷ್ಟು ಪುರುಸೊತ್ತು ಮಾಡಿಕೊಂಡು ನಿನ್ನನ್ನು ಸೃಷ್ಟಿಸಿದನೋ ಚೆಲುವಿನ ರಾಶಿ ಮೈ ತಳೆದಂತಿದೆ. ಕಮಲ ದಳಗಳಂತಿದ್ದ ಕಂಗಳನ್ನು ಅರಳಿಸಿ ಭಾವ ಪೂರ್ಣವಾದ ಸುಮಧುರ ಕಂಠದಲ್ಲಿ ತಲೆದೂಗುತ್ತ ಹಾಡಿದ ರಾಜ ರಾಣಿಯಂತೆ ನಾನು ನೀನು ಎಂಬ ಹಾಡು ನನಗಾಗಿಯೇ ಹಾಡಿದಂತಿತ್ತು. ನಿನ್ನ ಕಂಠ ಸಿರಿಯಲ್ಲಿ ಆ ಹಾಡು ಕೇಳುತ್ತ ಪ್ರೀತಿಯ ಗುಂಗಿನಲ್ಲಿ ಮುಳುಗಿದ್ದ ನಾನು ಕಿವಿಗಡಚಿಕ್ಕುವ ಕರತಾಡನಗಳಿಂದ ತಿಳುವಿಗೆ ಬಂದೆ.

ಜನಸಂದಣಿಯಲ್ಲಿ ನುಸುಳಿ ಬಂದು ನಿನ್ನ ಉಸಿರು ನನಗೆ ಬಡಿಯುವಷ್ಟು ಹತ್ತಿರ ನಿಂತಾಗ ಸ್ವರ್ಗ ಮೂರೇ ಗೇಣು ಉಳಿದಿತ್ತು. ನನ್ನಂತೆ ಕುತೂಹಲಿಗಳಾಗಿ ನಿನ್ನ ಅಂದ ಸವಿಯುತ್ತಿದ್ದರು. ಕೆಲ ಪೋಲಿಗಳು ನಿನ್ನ ಹಾಡಿಗೆ ಮೆಚ್ಚಿಗೆ ಸೂಚಿಸಿ ಅಭಿನಂದನೆ ಹೇಳುವ ನೆಪದಲ್ಲಿ ಕೈ ಕುಲುಕುವ ಆಸೆಯನ್ನು ಹೊತ್ತು ನಿಂತಿದ್ದರು. ಅವರಿಗೆಲ್ಲ ನೀನು ನಮ್ರತೆಯಿಂದ ನಮಸ್ಕರಿಸಿದ ರೀತಿ ನಿನ್ನ ಜಾಣತನಕ್ಕೆ ಕೈ ಹಿಡಿದಂತಿತ್ತು. ಜನ ಚದುರಿದರು ನಾನು ಮಾತ್ರ ನಿನ್ನತ್ತಲೇ ನೋಡುತ್ತ ನಿಂತಿದ್ದೆ. ನನ್ನ ಗೆಳೆಯ ರಟ್ಟೆ ಹಿಡಿದೆಳೆದಾಗ ಎಚ್ಚೆತ್ತು ಅವನೊಡನೆ ಕಾಲೆಳೆಯುತ್ತ ನಡೆಯುತ್ತಿದ್ದಾಗ ನೋಟಕ್ಕೆ ಸಿಕ್ಕ ನನ್ನೆಡೆ ಮುಗಳ್ನಗೆ ಬೀರಿದೆ. ನೀನೇ ಮಾತನಾಡಿಸಿ ಹೆಸರು ಊರು ಕೇಳಿ ಕೈ ಕುಲುಕಿ ಹೋದಾಗಿನಿಂದ ಪದೇ ಪದೇ ನೆನಪಾದ ನಿನ್ನ ನೆನಪಿನಲ್ಲೇ ದಿನಗಳೆದಿದ್ದೇನೆ.

ನಾನು ನನ್ನಮ್ಮನ ಒಬ್ಬನೇ ಒಬ್ಬ ಮುದ್ದಿನ ಮಗ ಅವಳಿಗೆ ನೀನೇ ಮುದ್ದಿನ ಸೊಸೆಯಾಗಿ ಬಂದೇ ಬರುತ್ತಿಯಾ ಅಂತ ಒಳ ಮನಸ್ಸು ಹೇಳುತ್ತಿದೆ. ನಿನ್ನ ಕಂಡ ಕಣ್ಣು ಕನಸಿನ ಗೋಪುರವನ್ನೇ ಕಟ್ಟಿದೆ. ಉತ್ಸವವಾಗಿ ವರುಷ ಕಳೆಯಿತು. ನಾಳೆ ಮತ್ತೆ ಉತ್ಸವದ ಗದ್ದಲ ಊರಲ್ಲಿ. ಇಂದು ನೀ ಮುಡಿದ ಮಲ್ಲಿಗೆ ಕಂಪು ಊರೆಲ್ಲ ಹಬ್ಬಿದೆ. ಯಾರ ಕೈಯನ್ನೂ ಕುಲುಕದ ನೀನು ನನ್ನ ಕೈ ಕುಲುಕಿದಾಗಲೇ ನಿನಗೂ ನನ್ನ ಹಾಗೆ ಪ್ರೀತಿ ಶುರುವಾಗಿದೆ ಎಂದೆನಿಸಿತು.

ಉತ್ಸವದ ಗದ್ದಲದಲ್ಲಿ ನೀನೆಲ್ಲಿದ್ದರೂ ಕಣ್ಣುಗಳು ಪತ್ತೆ ಹಚ್ಚುತ್ತವೆ. ಹೋದ ವರ್ಷದಂತೆ ಉಂಡಾಡಿ ಪೋಲಿ ನಾನಲ್ಲ ನಾನೀಗ ದುಡಿಯುವ ಗಂಡಸು ನಿನ್ನನ್ನು ಮತ್ತು ವಾತ್ಸಲ್ಯದಿಂದ ಬೆಳೆಸಿದ ಅಮ್ಮನನ್ನು ನೋಡಿಕೊಳ್ಳುವ ಯೋಗ್ಯತೆ ನನಗಿದೆ. ಕಿಕ್ಕಿರಿದ ಜನಸ್ತೋಮದ ನಡುವೆ ನಿಂತಿರುವೆ. ಬಂದು ಬಿಡು ಗೆಳತಿ ಹಾಲು ಜೇನು ಬೆರತಂತೆ ಬೆರೆತು ಸಂಗೀತ ಸುಧೆಯ ಹೊನಲಲ್ಲಿ ಸುಮಧುರ ಯುಗಳ ಗೀತೆಗಳ ಗುನುಗುತ ಬಾಳೋಣ ರಾಜ ರಾಣಿಯಂತೆ ನಾನು ನೀನು.

-ಜಯಶ್ರೀ.ಜೆ. ಅಬ್ಬಿಗೇರಿ    

ಬೆಳಗಾವಿ

9449234142

Comments