UK Suddi
The news is by your side.

ರಾಯಚೂರಿಗೆ ಒಲಿದ ಐಐಐಟಿ ಕೇಂದ್ರ.

ರಾಯಚೂರಿನಲ್ಲಿ ಐಐಐಟಿ ಸ್ಥಾಪಿಸಲು ಅಧಿಕೃತ ಮಂಜೂರು ಪತ್ರ ನೀಡುವ ಮೂಲಕ ಕೇಂದ್ರ ಸರಕಾರವು ಹೈದರಾಬಾದ್‌ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆ ಈಡೇರಿಸಿದೆ. 

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಯಚೂರಿಗೆ ಐಐಐಟಿ ಮಂಜೂರು ಮಾಡಿರುವ ಪತ್ರವನ್ನು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತಕುಮಾರ್‌ಗೆ ನೀಡಿ ಮಾತನಾಡಿದ ಪ್ರಕಾಶ್‌ ಜಾವಡೇಕರ್‌ ”ಇದು ಹೈದರಾಬಾದ್‌ ಕರ್ನಾಟಕದ ಜನತೆಯ ಬಹು ದಿನಗಳ ಬೇಡಿಕೆ. ಸಚಿವ ಅನಂತಕುಮಾರ್‌ ಸೇರಿದಂತೆ ನಮ್ಮ ಪಕ್ಷದ ಅನೇಕ ಸಂಸದರು ಸಂಸತ್ತಿನ ಹೊರಗೆ ಮತ್ತು ಒಳಗೆ ರಾಯಚೂರಿಗೆ ಈ ಸಂಸ್ಥೆಯನ್ನು ಮಂಜೂರು ಮಾಡಲು ಶ್ರಮಿಸಿದ್ದಾರೆ, ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರೂ ಸಹ 

ಐಐಐಟಿ ಸ್ಥಾಪನೆ ಕುರಿತು ಹಲವು ಪತ್ರಗಳನ್ನು ಬರೆದಿದ್ದರು,” ಎಂದರು. 
”ಮಂಜೂರು ಪತ್ರವನ್ನು ರಾಜ್ಯ ಸರಕಾರದ ಮುಖ್ಯ ಕಾರ‍್ಯದರ್ಶಿಗೂ ಕಳಿಸಲಾಗಿದೆ. ಈ ಸಂಸ್ಥೆಗೆ ಅಗತ್ಯವಿರುವ ಭೂಮಿ ಒದಗಿಸುವುದು ಮತ್ತು ತಾತ್ಕಾಲಿಕವಾಗಿ ಸಂಸ್ಥೆಗೆ ಅಗತ್ಯವಿರುವ ಕಟ್ಟಡ ಒದಗಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕಿದೆ. ಈ ಸಂಸ್ಥೆ ಸ್ಥಾಪನೆಗೆ ಹಣಕಾಸಿನ ಕೊರತೆ ಇಲ್ಲ. ಫೆ.1ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಸಂಸ್ಥೆಗೆ ಅಗತ್ಯವಿರುವ ಅನುದಾನದ ಘೋಷಣೆ ಸೇರಿದಂತೆ ಕರ್ನಾಟಕಕ್ಕೆ ಇನ್ನೂ ಹಲವು ಘೋಷಣೆಗಳನ್ನು ನೀವು ನಿರೀಕ್ಷಿಸಬಹುದು,” ಎಂದು ನುಡಿದರು. 

ಇದು ಶೈಕ್ಷಣಿಕ ಮಹತ್ವದ ತೀರ್ಮಾನ, ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ. ಎಲ್ಲ ಪಕ್ಷಗಳ ಮುಖಂಡರು ಮತ್ತು ಆ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದ ಸಂತಸದ ಸಮಯವಿದು. ದೇಶದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಮೋದಿ ಸರಕಾರದ ಬದ್ಧತೆಯಾಗಿದೆ ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ. 
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್  ಐಐಐಟಿ ಸಂಸ್ಥೆಗಾಗಿ ರಾಜ್ಯ ಸರಕಾರ ಶೀಘ್ರ ಪ್ರಾಜೆಕ್ಟ್ ರಿಪೋರ್ಟ್‌ ಕೊಡಬೇಕು. ಅಗತ್ಯವಿರುವ ಭೂಮಿ ನೀಡಿ, ತಾತ್ಕಾಲಿಕ ಕಟ್ಟಡ ಒದಗಿಸುವ ಕೆಲಸವನ್ನು ಶೀಘ್ರ ಮಾಡಬೇಕು ಎಂದು ಹೇಳಿದರು.

Comments