UK Suddi
The news is by your side.

ಇಂದಿನ  ಗಣರಾಜ್ಯ

ಭಾರತ ಮೂಲಭೂತವಾಗಿ ಒಂದು ಸ್ವತಂತ್ರ ಗಣರಾಜ್ಯ. ಯಾವುದೇ ಒಂದು ರಾಷ್ಟ್ರದಲ್ಲಿ ಯಾವ ವರ್ಗಕ್ಕೂ ವಿಶೇಷ ರಾಜಕೀಯ ಹಕ್ಕುಗಳಿಲ್ಲದ ಹಾಗೂ ಅಲ್ಲಿನ ಪ್ರತಿಯೊಬ್ಬ ವಯಸ್ಕರಿಗೂ ಸಂವಿಧಾನದ ನಿಭಂದನೆಗೊಳಪಟ್ಟ ಮತ ಚಲಾಯಿಸುವ ಅಧಿಕಾರವಿರುವಂಥ ಸ್ವತಂತ್ರ ಜನಗಳ ಸರ್ಕಾರವನ್ನು ಗಣರಾಜ್ಯ ಎನ್ನಲಾಗಿದೆ.
 ನಮ್ಮನ್ನು ನಾವು ಆಳಿಕೊಳ್ಳುವಂಥ ಶ್ರೇಷ್ಠ ಅಧಿಕಾರ ನೀಡುವ ಗಣರಾಜ್ಯದ ಮೂಲತತ್ವ ಸರ್ವರಲ್ಲೂ ಸಮಾನ ಹಿತ ಬಯಸುವುದು ಹಾಗೂ ಅಧಿಕಾರದಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯಾಗಿದೆ.

ಭಾರತದ ಸ್ವತಂತ್ರ ಚಳುವಳಿಯ ಸಂದರ್ಭದಲ್ಲಿ ಅಂದರೆ1930 ಜನವರಿ 26 ರಂದು ರಾಷ್ಪ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ದ ಧ್ಯೇಯವನ್ನು ಹಾಕಿಕೊಂಡಿತ್ತು.ಈ ದಿನವನ್ನು ಪೂರ್ಣ ಸ್ವರಾಜ್ ಎಂದೂ ಘೋಷಿಸಲಾಗಿತ್ತು. ಅದೇ ಕಾರಣಕ್ಕಾಗಿ ಸ್ವಾತಂತ್ರ್ಯಾನಂತರ ನಮ್ಮ ಸಂವಿಧಾನವನ್ನು 1950 ಜನವರಿ 26 ರಂದೇ ಜಾರಿಗೆ ತರಲಾಯಿತು. ಆ ಮೂಲಕ ಸಂವಿಧಾನದಲ್ಲಿ ಭಾರತವನ್ನು ಸ್ವತಂತ್ರ ಗಣರಾಜ್ಯವೆಂದು ಘೋಷಿಸಲಾಯಿತು.

ಭಾರತದ ಹೊರತಾಗಿ ಎಷ್ಟೋ ಪ್ರಜಾಪ್ರಭುತ್ವ ರಾಷ್ಟ್ರಗಳು ಗಣರಾಜ್ಯವಾಗಿದ್ದರೂ ಭಾರತದಲ್ಲಿ ಕೊಡಮಾಡಲಾದ ವಿಸ್ತ್ರತ ಅಧಿಕಾರವನ್ನು ಆ ರಾಷ್ಪ್ರಗಳು ಜನರಿಗೆ ನೀಡಿಲ್ಲ. ಆದರೆ ನಮ್ಮ ದೇಶದಲ್ಲಿ ಪ್ರಜೆಗಳೇ ಪ್ರಭುಗಳು. ಇಡೀ ವ್ಯವಸ್ಥೆಯ ಹಿಡಿತವೇ ನಮ್ಮ ಕೈಯಲ್ಲಿದ್ದಾಗ್ಯೂ ಸದ್ಯದ ನಮ್ಮ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿಕೊಂಡಾಗ ಇದು ಗಣರಾಜ್ಯವೇ ಎಂಬ ಅನುಮಾನ ಮೂಡದೇ ಇರದು.

ಸಾಮಾಜಿಕ ಹಿತ, ಸರ್ವರಲ್ಲೂ ಸಮಾನತೆ, ರಾಷ್ಪ್ರದ ಆರ್ಥಿಕಾಭಿವ್ರಧ್ಧಿಯಂಥ ಶ್ರೇಷ್ಠ ತತ್ವಾದರ್ಶಗಳನ್ನು ಮುಂದಿಟ್ಟುಕೊಂಡು ಒಂದು ರಾಜಕೀಯ ಪಕ್ಷದ ನಾಯಕರಾಗಿ, ಜನಸೇವೆಗೆ ಬಧ್ಧರಾಗಿ ಚುನಾವಣೆಯ ಮೂಲಕ ನಮ್ಮಿಂದಲೇ ಆಯ್ಕೆಯಾಗುವ ಪ್ರಜಾಪ್ರತಿನಿಧಿಗಳು ನಮ್ಮ ಗಣರಾಜ್ಯದ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಆ ಮೂಲಕ ಪ್ರಜೆಗಳೇ ರಾಷ್ಪ್ರದ ಆಡಳಿತದ ನಿರ್ಣಾಯಕರಾಗಿರುತ್ತಾರೆ. ಆದರೆ ಈ ಇಡೀ ವ್ಯವಸ್ಥೆ ಇಂದು ಪ್ರಜೆಗಳ ಕಲ್ಯಾಣದ ಹೊರತಾಗಿ ಪ್ರಜಾಪ್ರತಿನಿಧಿಗಳ ಕಲ್ಯಾಣವಾಗಿ ಮಾರ್ಪಟ್ಟಿರುವುದು ನಮ್ಮ ಆಯ್ಕೆಯ ವಿಫಲತೆಗೆ ಹಿಡಿದ ಕೈಗನ್ನಡಿಯಾಗಿದೆ. 

ಪ್ರಸ್ತುತ ನಮ್ಮ ಸಮಾಜದಲ್ಲಿನ ನಿತ್ಯದ ಚಟುವಟಿಕೆಗಳನ್ನು ಕಂಡಾಗ ಇಡೀ ವ್ಯವಸ್ಥೆಯ ಬಗ್ಗೆ ಅಸಹ್ಯ ಹುಟ್ಟಿಕೊಳ್ಳುತ್ತದೆ. ಹಣ,  ಅಧಿಕಾರ ಬಲ, ಸ್ವ ಪ್ರತಿಷ್ಠೆ, ಅಗೌರವ, ಪ್ರಜೆಗಳ ಬಗೆಗಿನ ತಿರಸ್ಕಾರ, ಅಸಂಸತ್ ಪದಗಳ ಬಳಕೆ ಇವೆಲ್ಲ ಇವತ್ತಿನ ಬಹುತೇಕ ರಾಜಕೀಯ ನಾಯಕರುಗಳ ಮಾನದಂಡಗಳಾಗಿವೆ. ಇಡೀ ವ್ಯವಸ್ಥೆಯ ನಿರ್ಣಾಯಕರಾದ ನಾವೂ(ಪ್ರಜೆಗಳು) ಸಹ ಬಿಡಿ ಕಾಸಿನ ಆಸೆಗಾಗಿ , ಅಲ್ಪ ತಿಳುವಳಿಕೆಯಿಂದಾಗಿ ಆಡಿಸುವವರ ಆಟದ ದಾಳಗಳಾಗಿ ನಮಗೆ ನಮ್ಮ ಸಂವಿಧಾನ ನೀಡಿದ ಶ್ರೆಷ್ಠತೆಯನ್ನೇ ಮರೆತು, ವಿವೇಚನಾ ಶಕ್ತಿಯೂ ಇಲ್ಲದಂತೆ ರಾಜಕೀಯ ನಾಯಕರುಗಳ ಹಿಂಬಾಲಕರಾಗಿದ್ದೇವೆ.

       ಹಿಂದೆ ಗುರು ಇಲ್ಲ

       ಮುಂದೆ ಗುರಿ ಇಲ್ಲ

 ಸಾಗಿದೆ ರಣಹೇಡಿಗಳ ಹಿಂಡು   

ಎನ್ನುವಂತಾಗಿದೆ ನಮ್ಮ ಸ್ಥಿತಿ. ಅಧಿಕಾರ ಪಡೆದುಕೊಂಡು ಗದ್ದುಗೆ ಏರುವುದೊಂದೇ ಇವತ್ತಿನ ನಾಯಕರುಗಳ ಮೂಲ ಉದ್ದೇಶ. ಇಂಥವರ ಕುತಂತ್ರಕ್ಕೆ ನಾವುಗಳು ಬಲಿಯಾಗದೇ ಎಚ್ಚೆತ್ತುಕೊಳ್ಳಬೇಕಿದೆ.ಮತ ಚಲಾವಣೆಯ ನಮ್ಮ ಸಂವಿಧಾನಿಕ ಹಕ್ಕನ್ನು ಹಣದಿಂದ ಕೊಂಡುಕೊಳ್ಳಲು ನಾವು ಅವಕಾಶ ನೀಡದೇ ಸ್ವಾಭಿಮಾನಿಗಳಾಗಿ ಸಧ್ರೃಡ ಸಮಾಜ ನಿರ್ಮಿಸುವಲ್ಲಿ ನಮ್ಮದೇ ಆದ ಅಳಿಲು ಸೇವೆ ನೀಡೋಣ.


-ಪ್ರತಿಭಾ  ಪಾಟೀಲ  ಬೀರಲದಿನ್ನಿ

ವಕೀಲರು 

ಬಸವನ ಬಾಗೇವಾಡಿ.


Comments