UK Suddi
The news is by your side.

ಸಂವಿಧಾನದ ಆಶಯದಂತೆ ನುಡಿದಂತೆ ನಡೆದು ರಾಜ್ಯದ ಅಭಿವೃದ್ಧಿ ಸಾಧಿಸಿದ್ದೇವೆ : ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ 

ಧಾರವಾಡ: ವ್ಯಕ್ತಿಗತ ಮತ್ತು ಸಮುದಾಯದ ಹಿತ ಸಾಧನೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಗಾಗಿ ಸಂವಿಧಾನ ರಚನಾಕಾರರು ಸಂವಿಧಾನದಲ್ಲಿ ವ್ಯಕ್ತಪಡಿಸಿದ ಆಶಯದಂತೆ, ನಮ್ಮ ಸರಕಾರ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದು ರಾಜ್ಯದ ಅಭಿವೃದ್ಧಿ ಸಾಧಿಸಿದ್ದೇವೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಹೇಳಿದರು. 

ಅವರು ಇಂದು ಧಾರವಾಡ ಜಿಲ್ಲಾ ಕ್ರೀಡಾಂಗಣದಲ್ಲಿ 69 ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ವಿವಿಧ ಪಡೆಗಳ ಪಥ ಸಂಚಲನ ವೀಕ್ಷಿಸಿ,  ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. 
ನುಡಿದಂತೆ ನಡೆಯುವ ಭರವಸೆಯೊಂದಿಗೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಕೊಟ್ಟ ಮಾತಿನಂತೆ ಸ್ವಚ್ಛ, ಶುದ್ಧ ಹಾಗೂ ದಕ್ಷ ಆಡಳಿತ ನೀಡುತ್ತಿದ್ದೇವೆ. 5ನೇ ವರ್ಷದಲ್ಲಿ ಮುಂದುವರೆದಿರುವ ಸರ್ಕಾರ ಶೇಕಡಾ 95 ಕ್ಕೂ ಹೆಚ್ಚು ಸಾಧನೆ ಮಾಡಿದೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ 165 ಭರವಸೆಗಳಲ್ಲಿ ಈಗಾಗಲೇ 155 ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ ಹೆಮ್ಮೆ ನಮಗಿದೆ ಎಂದು ಅವರು ಹೇಳಿದರು. 
ಅನ್ನಭಾಗ್ಯ ಯೋಜನೆಯಡಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಧಾರವಾಡ ಜಿಲ್ಲೆಯ 3 ಲಕ್ಷ 20 ಸಾವಿರ ಅರ್ಹ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ಸೇರಿದ ಸುಮಾರು 10 ಲಕ್ಷ ಅರ್ಹ ಫಲಾನುಭವಿಗಳಿಗೆ 3967.87 ಲಕ್ಷ ರೂ.ಗಳ ವೆಚ್ಚದಲ್ಲಿ ಉಚಿತ ಅಕ್ಕಿ ಹಾಗೂ ರಿಯಾಯಿತಿ ದರದಲ್ಲಿ ಆಹಾರಧಾನ್ಯ ಪೂರೈಸಲಾಗಿದೆ.
ಕೃಷಿಕರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿರುವ ಹಾಗೂ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪೂರಕವಾಗಿರುವ ಕೃಷಿಭಾಗ್ಯ ಯೋಜನೆಯಡಿ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ 5189 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 6044 ಕೃಷಿಹೊಂಡಗಳನ್ನು ನಿರ್ಮಿಸಲಾಗಿದೆ. ಸೂಕ್ಷ್ಮ ನೀರಾವರಿ ಯೋಜನೆಯಡಿ 17758 ರೈತರಿಗೆ ಸೇರಿದ 17825.5 ಹೆಕ್ಟೇರ್ ಭೂಮಿಯನ್ನು ಸೂಕ್ಷ್ಮ ನೀರಾವರಿಗೆ ಒಳಪಡಿಸಲಾಗಿದೆ. ಕೃಷಿ ಯಂತ್ರಧಾರೆ ಯೋಜನೆಯಡಿ ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು 7 ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಸಹಕಾರ ಬ್ಯಾಂಕುಗಳಲ್ಲಿನ 50 ಸಾವಿರ ರೂಪಾಯಿಗಳವರೆಗಿನ ಸಾಲವನ್ನು ನಮ್ಮ ಸರಕಾರ ಮನ್ನಾ ಮಾಡಿದೆ. ಇದರಿಂದ ಜಿಲ್ಲೆಯ ರೈತರ 7996.87 ಲಕ್ಷ ರೂ.ಸಾಲ ಮನ್ನಾ ಆಗಿದ್ದು, 22,207 ರೈತರು ಪ್ರಯೋಜನ ಪಡೆದಿದ್ದಾರೆ. ಜಿಲ್ಲೆಯ 97,653 ರೈತರಿಗೆ 38,232.50 ಲಕ್ಷ ರೂಪಾಯಿಗಳ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸಲಾಗಿದೆ.

ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ.ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸುಮಾರು 6 ಕೋಟಿ ಲಕ್ಷ ಲೀಟರ್ ಹಾಲು ಖರೀದಿಸಿ, 2520 ಲಕ್ಷ ರೂ.ಗಳಿಗೂ ಅಧಿಕ ಪ್ರೋತ್ಸಾಹಧನವನ್ನು 42,277 ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು. 

ಅಕ್ಷರದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 1 ರಿಂದ 10 ನೇ ತರಗತಿ ವರೆಗಿನ 1 ಲಕ್ಷ 91 ಸಾವಿರ ವಿದ್ಯಾರ್ಥಿಗಳಿಗೆ 1400 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮಧ್ಯಾಹ್ನದ ಬಿಸಿಯೂಟ ಮತ್ತು ಕೆನೆಭರಿತ ಹಾಲನ್ನು ವಿತರಿಸಲಾಗಿದೆ.

ನಾಡಿಗೆ, ದೇಶಕ್ಕೆ ಹಲವಾರು ಪ್ರತಿಭೆಗಳನ್ನು ನೀಡಿರುವ ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜು ಇದೀಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ರಾಜ್ಯ ಸರಕಾರವು ಶತಮಾನೋತ್ಸವ ಆಚರಣೆಗೆ 10 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ಸ್ಥಾಪನೆಗೆ ಕರ್ನಾಟಕ ಸರಕಾರವು 45 ಕೋಟಿ ರೂಪಾಯಿಗಳಿಗೂ ಅಧಿಕ ಅನುದಾನ ಒದಗಿಸಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಆವರಣದಲ್ಲಿ 1821 ಲಕ್ಷ ರೂ.ವೆಚ್ಚದಲ್ಲಿ ಕಾನೂನು ಶಾಲೆಯಕಟ್ಟಡ ಹಾಗೂ 173 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಅತಿಥಿ ಗೃಹ ನಿರ್ಮಿಸಲಾಗಿದೆ ಎಂದು ತಿಳಿಸಿದರು. 

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜಿಯಾಲಜಿಕಲ್ ಆರ್ಟ ಗ್ಯಾಲರಿ ನಿರ್ಮಿಸಲು 3 ಕೋಟಿ 25 ಲಕ್ಷಗಳನ್ನು ಮಂಜೂರು ಮಾಡಲಾಗಿದೆ ಮತ್ತು  ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿನ ಶಾಲೆಗಳ ಮಧ್ಯದಲ್ಲಿ ಇರುವ ಬೃಹತ್ ತಗ್ಗು ಪ್ರದೇಶವನ್ನು ಆಟದ ಮೈದಾನವನ್ನಾಗಿ ನಿರ್ಮಿಸಲು ಸುಮಾರು 3 ಕೋಟಿ ರೂಪಾಯಿಗಳನ್ನು ಇಲಾಖೆಯಿಂದ ಮಂಜೂರು ಮಾಡಲಾಗಿದೆ. 

ಜಿಲ್ಲೆಯಲ್ಲಿನ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 3857 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 299 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹಾಸ್ಟೇಲ್ ಸೌಲಭ್ಯ ದೊರಕದ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಪ್ರತಿ ತಿಂಗಳು 1500 ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಕಳೆದ 4 ವರ್ಷಗಳಲ್ಲಿ ಜಿಲ್ಲೆಯ 34777 ವಿದ್ಯಾರ್ಥಿಗಳಿಗೆ 1905 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. 

ಧಾರವಾಡದ ಜಿಲ್ಲಾ ಆಸ್ಪತ್ರೆ ಮತ್ತು ಕುಂದಗೋಳ, ಕಲಘಟಗಿ ಮತ್ತು ನವಲಗುಂದ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ, ಸ್ಕ್ಯಾನಿಂಗ್ ಯಂತ್ರಗಳು ಮತ್ತು ಜೆನೆರಿಕ್ ಔಷಧ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 7 ಪ್ಯಾರಾ ಮೆಡಿಕಲ್ ಕೋರ್ಸುಗಳನ್ನು ಆರಂಭಿಸಲಾಗಿದೆ. 7 ಡಿಎನ್‍ಬಿ ಕೋರ್ಸುಗಳನ್ನು ಆರಂಭಿಸಲು ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲೆಯ 07 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕುಂದಗೋಳ, ಕಲಘಟಗಿ ಹಾಗೂ ನವಲಗುಂದದ ಸಾರ್ವಜನಿಕ ಆಸ್ಪತ್ರೆಗಳನ್ನು ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಮೈಸೂರು ಮಿನರಲ್ಸ್ ಲಿಮಿಟೆಡ್ ಹಾಗೂ ವೈಶುದೀಪ ಫೌಂಡೇಶನರವರು ಕೊಡಮಾಡಿದ ಆಂಬ್ಯುಲೇನ್ಸ್‍ಗಳನ್ನು ಧಾರವಾಡ ತಾಲೂಕಿನ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಣೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳ ಮೂಲಕ ಮಧ್ಯಾಹ್ನದ ಬಿಸಿಯೂಟ ಹಾಗೂ ಆರೋಗ್ಯ ಇಲಾಖೆಯಿಂದ ಕಬ್ಬಿಣಾಂಶದ ಮಾತ್ರೆಗಳನ್ನು ನೀಡುವ ಮಾತೃಪೂರ್ಣ ಯೋಜನೆಯನ್ನು ಕಳೆದ ಅಕ್ಟೋಬರ್ 2 ರಿಂದ ಜಾರಿಗೊಳಿಸಲಾಗಿದೆ.ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 36,839 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸುಮಾರು 20 ಲಕ್ಷಕ್ಕೂ ಅಧಿಕ ಬಿಸಿಯೂಟಗಳನ್ನು ಪೂರೈಸಿ ಪ್ರತಿಶತ 74 ರಷ್ಟು ಸಾಧನೆ ಮಾಡಲಾಗಿದೆ. ಸ್ತ್ರೀಶಕ್ತಿ ಯೋಜನೆಯಡಿ ಜಿಲ್ಲೆಯ 12,095 ಸ್ತ್ರೀಶಕ್ತಿ ಗುಂಪುಗಳಿಗೆ 622.73 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಧನ ಹಂಚಿಕೆ ಮಾಡಲಾಗಿದೆ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಜಿಲ್ಲೆಯ ಪರಿಶಿಷ್ಠ ಜಾತಿಯ 2325 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ 755 ಲಕ್ಷ ರೂ.ಗಳ ನೆರವು ನೀಡಲಾಗಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಪರಿಶಿಷ್ಠ ಪಂಗಡಗಳಿಗೆ ಸೇರದ 919 ಫಲಾನುಭವಿಗಳಿಗೆ 453 ಲಕ್ಷ ರೂಪಾಯಿಗಳ ನೆರವು, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ 4618 ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ 1726 ಲಕ್ಷ ರೂಪಾಯಿಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 11206 ಫಲಾನುಭವಿಗಳಿಗೆ 2041 ಲಕ್ಷ ರೂಪಾಯಿಗಳ ನೆರವು ಒದಗಿಸಲಾಗಿದೆ.

ಜಿಲ್ಲೆಯಲ್ಲಿ ತಾಂಡಾ, ಮಜರೆಗಳನ್ನು ಹೊಸ ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೆ 9 ಹೊಸ ಕಂದಾಯ ಗ್ರಾಮಗಳನ್ನಾಗಿ ಅಧಿಸೂಚನೆ ಹೊರಡಿಸಲಾಗಿದೆ. ಇನ್ನೂ 9 ಹೊಸ ಕಂದಾಯ ಗ್ರಾಮಗಳ ಪರಿವರ್ತನೆ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಹಕ್ಕು ಕಾಯ್ದೆಯಡಿ 399 ಅರ್ಜಿಗಳು ಸ್ವೀಕೃತವಾಗಿದ್ದು, 344 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 45 ಫಲಾನುಭವಿಗಳಿಗೆ ಸ್ವಾಧೀನ ಪತ್ರಗಳನ್ನು ವಿತರಿಸಲಾಗಿದೆ.

ಆಧಾರ್ ಸಂಖ್ಯೆ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ತಂತ್ರಾಂಶದ ಮೂಲಕ ಬೆಳೆ ಪರಿಹಾರ ಪಾವತಿಸಲಾಗುತ್ತಿದೆ. 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 91,638 ರೈತ ಫಲಾನುಭವಿಗಳಿಗೆ 7502 ಲಕ್ಷ ರೂಪಾಯಿಗಳು ಹಾಗೂ ಹಿಂಗಾರು ಹಂಗಾಮಿನಲ್ಲಿ 94,541 ರೈತ ಫಲಾನುಭವಿಗಳಿಗೆ 7443 ಲಕ್ಷ ರೂ.ಪರಿಹಾರವನ್ನು ನೇರವಾಗಿ ಆರ್.ಟಿ.ಜಿ.ಎಸ್.ಮೂಲಕ ಪಾವತಿಸಲಾಗಿದೆ.

2017-18 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 2,38,251 ತಾಕುಗಳಲ್ಲಿನ ಬೆಳೆ ವಿವರಗಳನ್ನು ಭೌತಿಕವಾಗಿ ಕ್ಷೇತ್ರ ಭೇಟಿ ಮಾಡಿ ಮೊಬೈಲ್ ಆ್ಯಪ್ ಮೂಲಕ ದಾಖಲಿಸಲಾಗಿದೆ. ಈ ಕಾರ್ಯದಲ್ಲಿ ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸಿದ್ದನ್ನು ಗುರುತಿಸಿ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿರುವುದು ಸಂತಸದ ಸಂಗತಿಯಾಗಿದೆ.

94 ಸಿ ಮತ್ತು 94 ಸಿಸಿ ಅಕ್ರಮ -ಸಕ್ರಮ ಯೋಜನೆಯಡಿ ಜಿಲ್ಲೆಯಲ್ಲಿ 15,484 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅವುಗಳಲ್ಲಿ 10,762 ಅರ್ಜಿಗಳನ್ನುಇತ್ಯರ್ಥಪಡಿಸಲಾಗಿದೆ. ಬರುವ ಫೆಬ್ರವರಿ 4 ನೇ ತಾರೀಖಿನವರೆಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆಯಡಿ ಜಿಲ್ಲೆಯ 409 ಗ್ರಾಮಗಳ ಪೈಕಿ,257 ಗ್ರಾಮಗಳನ್ನು ಅಳತೆ ಕಾರ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅವುಗಳ ಪೈಕಿ 252 ಗ್ರಾಮಗಳ ಅಳತೆ ಕಾರ್ಯ ಪೂರ್ಣಗೊಂಡಿದೆ. 143 ಗ್ರಾಮಗಳ 21,225 ಹಿಡುವಳಿದಾರರಿಗೆ ಪಹಣಿ ಪತ್ರಿಕೆಗಳನ್ನು ಉಚಿತವಾಗಿ ವಿತರಿಸಲಾಗಿದೆ. ಕುಂದಗೋಳ ತಾಲ್ಲೂಕಿನ ಎಲ್ಲ 57 ಗ್ರಾಮಗಳಲ್ಲಿ ಪೋಡಿ ಕಾರ್ಯ ಪೂರ್ಣಗೊಂಡಿದ್ದು, ಈ ತಾಲ್ಲೂಕನ್ನು ಪೋಡಿಮುಕ್ತ ತಾಲ್ಲೂಕು ಎಂದು ಮುಖ್ಯಮಂತ್ರಿಗಳು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಘೋಷಿಸಿದ್ದಾರೆ.

ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ 875.13 ಲಕ್ಷ ರೂ.ವೆಚ್ಚದಲ್ಲಿ 375.97 ಕಿ.ಮೀ.ಉದ್ದದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 399.16 ಲಕ್ಷ ರೂ.ಗಳ ಅನುದಾನ ವಿನಿಯೋಗಿಸಿ, 141 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೆರೆ ಸಂಜೀವಿನಿ ಯೋಜನೆಯಡಿ 328.58 ಲಕ್ಷ ರೂ.ಗಳ ವೆಚ್ಚದಲ್ಲಿ 97 ಕೆರೆಗಳ 59,96,679 ಘನ ಮೀಟರ್ ಹೂಳು ತೆಗೆಯಲಾಗಿದೆ.

ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 23 ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತಿ ಗ್ರಾಮಕ್ಕೆ 1 ಕೋಟಿಯಂತೆ ಒಟ್ಟು 23 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿದೆ. ಎಸ್.ಎಫ್.ಸಿ., 13ನೇ ಹಣಕಾಸು, 14ನೇ ಹಣಕಾಸು, ನಗರೋತ್ಥಾನ ಹಾಗೂ ಮುಖ್ಯಮಂತ್ರಿಗಳ ನೂರು ಕೋಟಿ ವಿಶೇಷ ಅನುದಾನದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರಪಾಲಿಕೆ ವ್ಯಾಪ್ತಿಯ 132.41 ಕಿ.ಮೀ.ರಸ್ತೆಯನ್ನು 7665.73 ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 88.57 ಕಿ.ಮೀ.ಯಷ್ಟು ಚರಂಡಿ ನಿರ್ಮಾಣ ಕಾಮಗಾರಿಯನ್ನು 4072.98 ಲಕ್ಷ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಫುಟ್‍ಪಾತ್, ಉದ್ಯಾನವನ, ಸ್ಮಶಾನ, ಘನತ್ಯಾಜ್ಯ ವಿಲೇವಾರಿ ಘಟಕಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 9254 ಲಕ್ಷ ರೂ.ವಿನಿಯೋಗಿಸಲಾಗಿದೆ.

ಹುಬ್ಬಳ್ಳಿ ಧಾರವಾಡ ಸ್ಮಾರ್ಟ ಸಿಟಿ ಯೋಜನೆಯಡಿ ಅವಳಿನಗರಗಳಲ್ಲಿ 37 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 1662 ಕೋಟಿ ರೂ.ಗಳ ಪ್ರಮುಖ ಅಭಿವೃದ್ಧಿ ಯೋಜನೆಯಾಗಿದ್ದು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೇ.50 ರ ಅನುಪಾತದಲ್ಲಿ ಅನುದಾನ ಒಸಗಿಸುತ್ತವೆ.ಇಲ್ಲಿಯವರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ 216 ಕೋಟಿ ರೂ.ಗಳು ಬಿಡುಗಡೆಯಾಗಿರುತ್ತವೆ. ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ 800 ಜನ ಕುಳಿತುಕೊಂಡು ಧ್ಯಾನ ಮಾಡಲು 216 ಲಕ್ಷ ರೂ.ವೆಚ್ಚದಲ್ಲಿ ಪಿರಾಮಿಡ್ ಮಾದರಿಯ ಧ್ಯಾನಮಂದಿರ ನಿರ್ಮಿಸಲಾಗಿದೆ. ತುಪ್ಪರಿಹಳ್ಳದಿಂದ ಧಾರವಾಡ ತಾಲ್ಲೂಕಿನ ತಡಕೋಡ ಗ್ರಾಮದ ನೀರಾವರಿ ಕೆರೆ ಸೇರಿ ಒಟ್ಟು 9 ಕೆರೆಗಳನ್ನು ತುಂಬಿಸುವ 2250 ಲಕ್ಷ ರೂ.ಗಳ ಯೋಜನೆಗೆ ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಬೇಡ್ತಿಹಳ್ಳದಿಂದ ಕಲಘಟಗಿ ತಾಲೂಕಿನ 35 ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸುವ 125 ಕೋಟಿ ರೂ.ಗಳ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ. ವಿಸ್ತøತ ಯೋಜನಾ ವರದಿ ತಯಾರಿಕೆಗೆ ಸಲಹಾತ್ಮಕ ಏಜೆನ್ಸಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಹಾಯ್ದುಹೋಗಿರುವ 55 ಕಿ.ಮೀ.ಉದ್ದದ ಮಲಪ್ರಭಾ ಬಲದಂಡೆ ಕಾಲುವೆ ಆಧುನೀಕರಣಕ್ಕೆ ಒಟ್ಟು 445.28 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಕರ್ನಾಟಕ ಸ್ವಯಂ ಉದ್ಯೋಗ ಹಾಗೂ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ 104 ಫಲಾನುಭವಿಗಳಿಗೆ  ಸ್ವಯಂ ಉದ್ಯೋಗ ಕಲ್ಪಿಸಿ, 125.38 ಲಕ್ಷ ರೂ.ಗಳ ಸಹಾಯಧನ ವಿತರಿಸಲಾಗಿದೆ ಎಂದು ತಿಳಿಸಿದರು. 

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಮಧ್ಯೆ ತ್ವರಿತ ಸಾರಿಗೆ ಸಂಪರ್ಕಕ್ಕಾಗಿ ಹುಬ್ಬಳ್ಳಿ ಧಾರವಾಡ ಬಿಆರ್‍ಟಿಎಸ್ ಯೋಜನೆಯನ್ನು ಒಟ್ಟು 692 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ವಿಶ್ವಬ್ಯಾಂಕಿನಿಂದ 254 ಕೋಟಿ ರೂ.ಅನುದಾನ ಹಾಗೂ ಕರ್ನಾಟಕ ಸರಕಾರದಿಂದ 438 ಕೋಟಿ ಅನುದಾನ ಲಭ್ಯವಾಗಿದೆ. ಯೋಜನೆಯ ಒಟ್ಟು 35.04 ಕಿ.ಮೀ. ರಸ್ತೆ ಪೈಕಿ ಈಗಾಗಲೇ 23.65 ಕಿ.ಮೀ.ಯಷ್ಟು ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 

ಮೂಲಭೂತ ಸೌಲಭ್ಯ ಅಭಿವೃದ್ಧಿ ಯೋಜನೆಯಡಿ ರಾಜ್ಯ ಸರಕಾರದಿಂದ 366 ಕೋಟಿ ರೂ.ವಿನಿಯೋಗಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ.

ಜನ ಸಾಮಾನ್ಯರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದ್ದು, ನುಡಿದಂತೆ ನಡೆದು ಪ್ರಜೆಗಳ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವತ್ತ ದೃಢವಾದ ಹೆಜ್ಜೆಗಳನ್ನು ಇಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು. 
ಜಿಲ್ಲಾ ಸರ್ವೋತ್ತಮ ಪ್ರಶಸ್ತಿ : 

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಸರ್ವೋತ್ತಮ ಪ್ರಶಸ್ತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ, ಕಂದಾಯ ಇಲಾಖೆಯ ನವಲಗುಂದ ತಹಶೀಲ್ದಾರ ಎಚ್.ವಿ.ನವೀನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಧಾರವಾಡ ತಾಲೂಕಾ ಪಂಚಾಯತ್ ಸಹಾಯಕ ನಿರ್ದೇಶಕ ಪ್ರಶಾಂತ ಎಮ್ ತುರಕಾಣಿ, ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಸಜಾ ಗ್ರಾಮ ಲೆಕ್ಕಾಧಿಕಾರಿ ಬಿ.ಎಚ್.ವಿಜಯಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪಿಜಿ ವಿದ್ಯಾರ್ಥಿನಿಯರ ನಿಲಯದ ನಿಲಯಪಾಲಕಿ ಗೀತಾ.ಬಿ.ಹೂಗಾರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯ ಸಿಪಾಯಿ ಜೆ.ಬಿ.ಕದಂ ಅವರಿಗೆ ನೀಡಲಾಯಿತು. 

ಸಾಧಕರಿಗೆ ಸನ್ಮಾನ  : 


ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗೃಹ ರಕ್ಷಕ ದಳದ ಕೃಷ್ಣ.ಎಚ್.ಬ್ಯಾಡಗಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವೆಂಕಪ್ಪ ಪುಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜ್ಯೋತಿ ಸಣ್ಣಕ್ಕಿ, ಕ್ರೀಡಾ ಇಲಾಖೆಯ ಮಹಮ್ಮದಗೌಸ್ ಕಳಸಾಪೂರ ಮತ್ತು ಜವಾಹರ ನವೋದಯ ವಿದ್ಯಾಲಯದ ಹರ್ಷವರ್ಧನ ಅರಳಿಕಟ್ಟಿ ಹಾಗೂ ಸುಜೇಯ ತೇಗೂರ ಅವರನ್ನು ಸಚಿವರು ಸನ್ಮಾನಿಸಿದರು. 
ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ  :

ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಬಸವಂತೆಪ್ಪ ಮಡಿವಾಳರ, ಪೀರಸಾಬ ಬಂದೂನವರ, ಇಮಾಮಸಾಬ ಮುಲ್ಲಾ ಅವರನ್ನು ಸತ್ಕರಿಸಲಾಯಿತು. 

 
ಜೀವರಕ್ಷಕ ಪ್ರಶಸ್ತಿ : 

2017-18ನೇ ಸಾಲಿನ ಜೀವರಕ್ಷಕ ಪ್ರಶಸ್ತಿಯನ್ನು ನುಗ್ಗಿಕೇರಿ ಗ್ರಾಮದ ನಿಂಗಪ್ಪ ರುದ್ರಪ್ಪ ಕುಡವಕ್ಕಲಿಗಾರ ಅವರಿಗೆ ನೀಡಿ ಗೌರವಿಸಲಾಯಿತು. 

ಕರ್ನಾಟಕ ವಿಜನ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ : 

ಕರ್ನಾಟಕ ವಿಜನ್ 2025 ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪೇಂಟಿಂಗ್ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಕವಿವಿಯ ಆನಂದ ಕುರಿಯವರ(ಕನ್ನಡ) ಮತ್ತು ತೃಪ್ತಿ ಪಾಟೀಲ(ಇಂಗ್ಲೀಷ್) ಮತ್ತು ಪೇಂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನವಲಗುಂದದ ಎಂ.ಇ.ಬಿ ಗಲ್ರ್ಸ್ ಹೈಸ್ಕೂಲ್‍ನ ಕು.ನೇಹಾ ಪವಾರ ಮತ್ತು ಧಾರವಾಡದ ಕೆ.ಪಿ.ಇ.ಎಸ್ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯ ಕು.ಅಬ್ದುಲ್‍ಗನಿ ಶಿರಹಟ್ಟಿ ಅವರಿಗೆ ಐದು ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 

ಹುತ್ಮಾತ ಯೋಧನ ಕುಂಟುಬಕ್ಕೆ ಪರಿಹಾರ ವಿತರಣೆ :

ಕಳೆದ ಏಪ್ರೀಲ್‍ನಲ್ಲಿ ಜಮ್ಮು ಕಾಶ್ಮೀರದಲ್ಲಿ ವೀರ ಮರಣವನ್ನಪ್ಪಿದ ಸಿಆರ್‍ಪಿಎಫ್ ಯೋಧ ಹೊಸಯಲ್ಲಾಪುರದ ಬಸಪ್ಪ ಭಜಂತ್ರಿ ಅವರ ಕುಟುಂಬಕ್ಕೆ ರಾಜ್ಯ ಸರಕಾರ ನೀಡಿದ 20 ಲಕ್ಷ ರೂ.ಗಳ ಪರಿಹಾರದ ಚೆಕ್‍ನ್ನು ಸಚಿವರು ಇದೇ ಸಂದರ್ಭದಲ್ಲಿ ವಿತರಿಸಿದರು. 
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ,  ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆರ್ ಸ್ನೇಹಲ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಅವಳಿ ನಗರದ ಪೊಲೀಸ್ ಆಯುಕ್ತ ಎಮ್.ಎನ್.ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ ಸೇರಿದಂತೆ ಮತ್ತಿತರರು ಇದ್ದರು. 
ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಅಣುಕು ಯುದ್ಧ ಪ್ರದರ್ಶನ :


ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ 5 ಕರ್ನಾಟಕ ಎನ್ ಸಿ ಸಿ ಬಾಲಕಿಯರ ಬೆಟಾಲಿಯನ್ ಪ್ರದರ್ಶಿಸಿದ ಅಣುಕು ಯುದ್ಧ ಜನಮನಸೂರೆಗೊಂಡಿತು. 

ಕೃಪೆ:ಧಾರವಾಡ ವಾರ್ತಾ ಭವನ.

Comments