UK Suddi
The news is by your side.

69ನೇ ಗಣರಾಜ್ಯೋತ್ಸವ ದಿನದ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ದೇಶದಾದ್ಯಂತ 69ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಕ್ರವಾರ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ದೇಶದ ಎಲ್ಲಾ ಜನತೆಗೂ ಗಣರಾಜ್ಯೋತ್ಸವದ ದಿನದ ಶುಭಾಶಯಗಳು. ಜೈ ಹಿಂದ್ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೇ ಮೊದಲ ಬಾರಿ 10 ಆಸಿಯಾನ್ ದೇಶಗಳ ನಾಯಕರ ಸಮ್ಮುಖದಲ್ಲಿ ಇಂದು ದೇಶದ 69ನೇ ಗಣರಾಜ್ಯೋತ್ಸವ ವೈಭವದಿಂದ ನಡೆಯಲಿದೆ. ಈ ಹಿನ್ನಲೆಯಲ್ಲಿ ಮುಖ್ಯ ರಾಜಪಥದ ಸುತ್ತಮುತ್ತ ಭಾರೀ ಸರ್ಪಗಾವಲು ಏರ್ಪಡಿಸಲಾಗಿದೆ.
ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರ ಸಂಘಟನೆ) ದೇಶಗಳಾದ ಥಾಯ್ಲೆಂಡ್, ಇಂಡೋನೇಷ್ಯಾ, ಸಿಂಗಾಪುರ, ಬ್ರೂನಿ, ಲಾವೋಸ್, ಮ್ಯಾನ್ಮಾರ್, ಕಾಂಬೋಡಿಯಾ, ಮಲೇಷ್ಯಾ, ಫಿಲಿಪ್ಪೀನ್ಸ್ ಹಾಗೂ ವಿಯೆಟ್ನಾಂಗಳ ಗಣ್ಯರು ಈಗಾಗಲೇ ದೆಹಲಿಗೆ ಆಗಮಿಸಿದ್ದು, ರಾಜಪಥದಲ್ಲಿ ನಡೆಯಲಿರುವ ಸೇನಾಪಡೆಗಳ ತಾಲೀಮು, ಪಥಸಂಚಲನ, ಭಾರತದ ಸೇನಾ ಶಕ್ತಿ ಪ್ರದರ್ಶನ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಅನಾವರಣಗೊಳಿಸಲಿರುವ ಸ್ತಬ್ಧಚಿತ್ರಗಳನ್ನು ವೀಕ್ಷಿಸಲಿದ್ದಾರೆ.
ಪ್ರತೀ ಬಾರಿ ವಿದೇಶದ ಓರ್ವ ಗಣ್ಯರು ಗಣ ರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾರತಕ್ಕೆ ಬರುತ್ತಿದ್ದರು. ಆದರೆ ಈ ಬಾರಿ 10 ದೇಶಗಳ ಗಣ್ಯರು ಭಾಗವಹಿಸುತ್ತಿರುವ ವಿಶೇಷವಾಗಿದೆ.  ಹಲವು ಗಣ್ಯರು ಒಂದೆಡೆ ಸೇರುತ್ತಿರುವ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ. ದೆಹಲಿಯಾದ್ಯಂತ 50 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಹಾಗೂ ಗಗನಚುಂಬಿ ಕಟ್ಟಡಗಳಲ್ಲಿ ಆ್ಯಂಟಿ ಏರ್ ಕ್ರಾಫ್ಟ್ ಗನ್ ಅಳವಡಿಸಲಾಗಿದೆ. ಪಥಸಂಚನದ ವೇಳೆ ವಿಮಾನ ಹಾರಾಟವನ್ನೂ ನಿರ್ಬಂಧಿಸಲಾಗಿದೆ. ದೆಹಲಿಯಲ್ಲಿ ಪ್ರಮುಖ ಮಾರುಕಟ್ಟೆಗಳಲ್ಲಿ ಶ್ವಾನದಳಗಳು ತಪಾಸಣೆ ಕೈಗೊಂಡಿವೆ.

Comments