UK Suddi
The news is by your side.

ಮತದಾರರ ಜಾಗೃತಿಗಾಗಿ ಬೃಹತ್ ಮಾನವ ಸರಪಳಿ ನಿರ್ಮಾಸಿದ ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳು.

ಧಾರವಾಡ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ವವನ್ನು ಜನರಿಗೆ ತಿಳಿಸಲು ಜಿಲ್ಲೆಯ ಸುಮಾರು 20 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನಗರದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನ ಮಾಡಿದರು. 

ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೃಹತ್ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮವನ್ನು ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ  ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಪ್ರಜಾತಂತ್ರ ಬಲಪಡಿಸುವಲ್ಲಿ ಮತದಾರ ಮತ್ತು ಮತದಾನದ ಪಾತ್ರ ಬಹುಮುಖ್ಯವಾಗಿದ್ದು, ಇದರ ಮಹತ್ವವನ್ನು ಪ್ರತಿ ಕುಟುಂಬದ ಸದಸ್ಯರಿಗೆ ತಲುಪುವಂತೆ ಇಂದಿನ ಯುವ ಸಮುದಾಯ ಸಂದೇಶ ವಾಹಕರಂತೆ ಕಾರ್ಯನಿರ್ವಹಿಸಬೇಕು. ಮುಂಬರುವ ರಾಜ್ಯ ವಿಧಾನಸಭೆಗೆ ಜರಗುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಪ್ರೇರೆಪಿಸುವ ಮತ್ತು ಪ್ರೋತ್ಸಾಹಿಸುವ ಅಗತ್ಯವಿದೆ. ಮತದಾರರ ಪಟ್ಟಿಗೆ ತಿದ್ದುಪಡಿ ಸೇರಿದಂತೆ ಪರಿಷ್ಕರಣೆಗೆ ಮತ್ತು ಯುವ ಮತದಾರರ  ಹೆಸರು ನೋಂದಣಿಗೆ ಭಾರತ ಚುನಾವಣಾ ಆಯೋಗವು ಕಳೆದ ಜನೇವರಿ 22ರವರೆಗೆ ಕಾಲಾವಕಾಶ ನೀಡಿತ್ತು. ಸೇರ್ಪಡೆಯಾಗದೇ ಉಳಿದಿರುವ ಯುವ ಮತದಾರರಿಗೆ ಆನ್‍ಲೈನ ಮೂಲಕವೂ ನೋಂದಣಿ ಮಾಡಲು ಅವಕಾಶ ಇದ್ದು, ಇದೊಂದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿರುವ ವಿದ್ಯಾರ್ಥಿ, ಯುವ ಸಮೂಹ ಮತದಾರರ ಜಾಗೃತಿಯಲ್ಲಿಯೂ ತಮ್ಮ ಕರ್ತವ್ಯವನ್ನು ಸ್ವಯಂ ಪ್ರೇರಣೆಯಿಂದ ನಿರ್ವಹಿಸಬೇಕು. ಪ್ರತಿವಾರ ಆಯಾ ಶಾಲಾ ಕಾಲೇಜು ಮುಖ್ಯಸ್ಥರು ಬೆಳಿಗ್ಗೆ ಜರಗುವ ಪ್ರಾರ್ಥನಾ ಸಮಯದಲ್ಲಿ ಮತದಾನದ ಮಹತ್ವ ಕುರಿತು ಸಂದೇಶ ನೀಡಿ, ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

Comments