ಸರಕಾರಿ ನೌಕರರನ್ನು ಓಲೈಸಲು ಮುಂದಾದ ಸಿದ್ದರಾಮಯ್ಯ; ಏನೇನು ಆಫರ್ ಕೊಡ್ತಾರೆ?
ಬೆಂಗಳೂರು: ಆರು ಲಕ್ಷಕ್ಕೂ ಹೆಚ್ಚಿನ ಸರ್ಕಾರಿ ನೌಕರರ ಓಲೈಕೆಗೆ ಮುಂದಾಗಿರುವ ಸಿದ್ದರಾಮಯ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ನಡುವೆ ಇರುವ ವೇತನ ತಾರತಮ್ಯವನ್ನು ಸರಿದೂಗಿಸುವ ನಿಟ್ಟಿನಲ್ಲಿ ಶೇ.24ರಿಂದ 30ರಷ್ಟು ವೇತನ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ.
ಈ ಮೂಲಕ ಚುನಾವಣೆ ಗಿಮಿಕ್ ಗೆ ಮುಂದಾಗಿರುವ ಮುಖ್ಯಮಂತ್ರಿ ರಾಜ್ಯದಲ್ಲಿರುವ ಸುಮಾರು 6.2 ಲಕ್ಷ ಸರ್ಕಾರಿ ನೌಕರರು ಮುಂದಿನ ತಿಂಗಳು ಮಂಡನೆಯಾಗಲಿರುವ ಬಜೆಟ್ನಲ್ಲಿ ಇದನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 10,800 ಕೋಟಿ ಹೊರೆಯಾಗಲಿದೆ.
ಈಗಾಗಲೇ ಎಲ್ಲ ಇಲಾಖೆಯ ಮುಖ್ಯಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿದ್ದು, 31ಕ್ಕೆ ಅಂತಿಮ ವರದಿಯನ್ನು ನೀಡಲಿದೆ. ಸರ್ಕಾರಿ ನೌಕರರಿಗೆ ಶೇ.24ರಿಂದ 30ರಷ್ಟು ವೇತನ ಏರಿಕೆಯಾಗಲಿದೆ. ಕೇಂದ್ರದ ಸರ್ಕಾರಿ ನೌಕರರಿಗೆ ಹೋಲಿಸಿದರೆ ಶೇ.65ರಷ್ಟು ವೇತನ ತಾರತಮ್ಯವಿದೆ ಎಂಬುದು ರಾಜ್ಯ ಸರ್ಕಾರಿ ನೌಕರರ ಅಸಮಾಧಾನವಾಗಿತ್ತು. ಇದೀಗ ವರದಿಯ ಶಿಫಾರಸ್ಸಿನಂತೆ ಹೆಚ್ಚಳ ಮಾಡಿದರೆ ಇನ್ನು 35ರಷ್ಟು ತಾರತಮ್ಯ ಇರಲಿದೆ.
ಒಂದು ವೇಳೆ ವರದಿಯ ಶಿಫಾರಸ್ಸಿನಂತೆ ಶೇ.24ರಿಂದ 30ರಷ್ಟು ವೇತನ ಹೆಚ್ಚಳವಾದರೆ ನೌಕರರ ವೇತನ 3000ದಿಂದ 12000ದವರೆಗೆ ಏರಿಕೆಯಾಗಲಿದೆ.
4ನೇ ಶನಿವಾರ ರಜೆ:
ಇನ್ನು ಸರ್ಕಾರಿ ನೌಕರರಿಗೆ ಇನ್ನು ಮುಂದೆ ಬ್ಯಾಂಕ್ ಸಿಬ್ಬಂದಿಗೆ ನೀಡುವಂತೆ ಪ್ರತಿ ತಿಂಗಳ 4ನೇ ಶನಿವಾರ ರಜೆ ಸಿಗಲಿದೆ. ನಾಲ್ಕು ಭಾನುವಾರಗಳ ಜೊತೆಗೆ ತಿಂಗಳ ಕೊನೆಯ ಶನಿವಾರವನ್ನು ಸರ್ಕಾರಿ ರಜೆ ಎಂದು ಘೋಷಿಸಲು ಸರ್ಕಾರ ತೀರ್ಮಾನಿಸಿದೆ.