ಮಠದ ಆಸ್ತಿ ಭಕ್ತರೇ ಹೊರತು ಹಣ, ಸಂಪತ್ತು, ಚರಾಸ್ತಿಗಳಲ್ಲ:ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು.
ಜಗಳೂರು :ಇಲ್ಲಿನ ತರಳಬಾಳು ಹುಣ್ಣಿಮೆ ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕಾಲದ ಮಿತಿಯಿಂದಾಗಿ ನಮ್ಮ ಭಾವನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶರಣರು ಕಟ್ಟಬಯಸಿದ ಐಕ್ಯತೆಯ ಸಮಾಜಕ್ಕೆ ಸರಿಯಾದ ಉದಾಹರಣೆ ಈ ತರಳಬಾಳು ಹುಣ್ಣಿಮೆಯ ವೇದಿಕೆ. ಇಲ್ಲಿರುವ ಸಮರಸ, ಐಕ್ಯಭಾವನೆ ನಿಮ್ಮ ನಿಮ್ಮ ಊರುಗಳಲ್ಲೂ ನಿರ್ಮಾಣವಾದರೆ ಹುಣ್ಣಿಮೆ ನಡೆದದ್ದಕ್ಕೂ ಸಾರ್ಥಕವಾಗುವುದು. ಧರ್ಮ ಮತ್ತು ಕಾನೂನುಗಳಲ್ಲಿ ಯವುದು ದೊಡ್ಡದು ಎಂದರೆ ನೀವು ಧರ್ಮ ದೊಡ್ಡದು ಎಂದು ಹೇಳುವಿರಿ. ಆದರೆ ಅದು ಹೇಗೆ ದೊಡ್ಡದು ಎಂದು ವಿಶ್ಲೇಷಣೆ ಮಾಡಲು ಕಷ್ಟವಾಗಬಹುದು. ಆದರೆ ವ್ಯಾವಹಾರಿಕವಾಗಿ ವಿವರಿಸಿ ಹೇಳಿದಾಗ ನಿಮಗೆ ಕಾನೂನಿಗಿಂತ ಧರ್ಮ ದೊಡ್ಡದು ಎನ್ನುವುದು ಅರ್ಥವಾಗುವುದು. ಮಠದ ಆಸ್ತಿ ಶಿಷ್ಯರೇ ಹೊರತು ಹಣ, ಸಂಪತ್ತು, ಚರಾಸ್ತಿಗಳಲ್ಲ. ಕಾನೂನಿನಲ್ಲಿ ಹೃದಯ ಭಾವನೆಗಳಗೆ ಸ್ಥಾನವಿಲ್ಲ. ಧರ್ಮ ದೊಡ್ಡದು ನಿಜ; ಆದರೆ ಚಿಕ್ಕದು ಎಂದೂ ಅರ್ಥವಲ್ಲ. ಧರ್ಮದಲ್ಲಿರುವ ಆದರ್ಶ ತತ್ವಗಳನ್ನು ಕಾನೂನಿನಲ್ಲಿ ಸೇರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀಮಠ ಪಟ್ಟಾಧ್ಯಕ್ಷರಾದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು , ನ್ಯಾಯಮೂರ್ತಿ ಮೋಹನ ಶಾಂತನಗೌಡರು , ಭಾರತ ಸರ್ಕಾರದ ಕೌಶಲ್ಯ – ಉದ್ಯಮಶೀಲತಾ ರಾಜ್ಯ ಸಚಿವರಾದ ಅನಂತಕುಮಾರ ಹೆಗಡೆ ,ತರೀಕೆರೆ ಮಾಜಿ ಶಾಸಕರಾದ ಡಿ ಎಸ್ ಸುರೇಶ್, ಖ್ಯಾತ ಹೃದಯ ತಜ್ಞರು ಮತ್ತು ಅಂಕಣಕಾರರಾದ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಮತ್ತಿತರರು ಉಪಸ್ಥಿತರಿದ್ದರು.