UK Suddi
The news is by your side.

ಜೊತೆಗೂಡಿ ಹೆಜ್ಜೆ ಹಾಕೋಣ ಜೀವ ನದಿಯ ದಡದವರೆಗೂ

ಅದೆಷ್ಟು ದಿನ ನಾನು ನಿನ್ನೊಂದಿಗೆ ಆ ಹೊಂಗೆಯ ಮರದ ಕೆಳಗೆ ನಿನ್ನ ಸವಿ ಮಾತಿನ ಮೋಡಿಯಲ್ಲಿ ಬಿದ್ದು ಎಲ್ಲವನ್ನೂ ಮರೆತು ಹೋಗಿದ್ದೇನೆ ಎಂದು ನೆನಪಿಲ್ಲ. ನಿನ್ನ ಸೊಂಪಾದ ಕೇಶ ರಾಶಿಯ ಸುಗಂಧದಲ್ಲಿ ಮೈ ಮರೆತು, ನಿನ್ನ ಜೊತೆ ಸಂಜೆ ಹೊತ್ತು ಕೂತು, ನಿನ್ನ ಬಿಸಿ ಉಸಿರಿನ ರಾಗದ ಆಲಾಪನೆ ಕೇಳಿಲ್ಲ ಹೇಳು ಗೆಳತಿಆ ಎಲ್ಲ ನೆನಪುಗಳ ಚಿತ್ರಶಾಲೆ ಇಂದು ನನ್ನ ಕಣ್ಣ ಮುಂದೆ ನಿಂತು ಕಣ್ಣೀರಿನಿಲ್ಲಿ ಕೈ ತೊಳೆಯುವ ಹಾಗೆ ಮಾಡಿದೆ. ಈ ಕಣ್ಣೀರಿನ ಹಿಂದಿರುವ ಕೈ ನಿನ್ನದೇ ಎಂದು ಬುದ್ಧಿ ಸಾರಿ ಸಾರಿ ಹೇಳುತ್ತಿದ್ದರೂ ಹಾಗಂತ ಹೇಳಲು ಮನಸ್ಸು ಒಪ್ಪುತ್ತಿಲ್ಲ. ಸಿಹಿ ನೆನಪುಗಳನ್ನು ದಿನವೂ ಒಂದೊಂದಾಗಿ ಕಟ್ಟಿ ದೊಡ್ಡ ಮೂಟೆಯಾದ ಮೇಲೆ ಹೀಗೆ ಒಮ್ಮಿಂದೊಮ್ಮೆಲೇ ನನ್ನನ್ನು ಬಿಟ್ಟು ಬೆನ್ನು ತೋರಿ ನಡೆದದ್ದು ಯಾವ ನ್ಯಾಯ ತಿಳಿಯುತ್ತಲೇ ಇಲ್ಲ. ನಿನ್ನ ಕಟ್ಟಿಕೊಟ್ಟ ಮಧುರ ನೆನಪುಗಳ ಮೂಟೆ ಬಿಚ್ಚಲೇಬಾರದು ಎಂದು ಅದೆಷ್ಟು ಬಾರಿ ಗಟ್ಟಿಯಾಗಿ ನಿರ್ಧರಿಸಿದರೂ ಮನಸ್ಸು ಹಿಡಿತಕ್ಕೆ ಸಿಗುವುದೇ ಇಲ್ಲ. ನನಗರಿವಿಲ್ಲದಂತೆ ನೀ ಕಟ್ಟಿಕೊಟ್ಟ ಸಿಹಿ ಸ್ಮರಣಿಯಂತಿರುವ ನೆನಪುಗಳ ಶಾಲೆಯಲ್ಲಿ ವಿಹರಿಸಲು ಸಜ್ಜಾಗಿರುತ್ತದೆ. ನಿನ್ನ ಸನಿಹ ಪದಗಳಲ್ಲಿ ಹಿಡಿದಲಾಗದಷ್ಟು ಸಂತಸ ತಂದಿದ್ದಂತೂ ನಿಜ. ಆದರೆ ಅದೇ ಸಂತಸ ಇಂದು ಕಣ್ಣ ಹನಿಗಳು ಧಾರಾಕಾರವಾಗಿ ಸುರಿಯುವಂತೆ ಮಾಡುತ್ತಿವೆ. ಜೀವ ಹಿಂಡುತ್ತಿವೆ.

ನಮ್ಮೀರ್ವರ ಸಂಜೆಯ ಶುಭ ಮಿಲನಕೆ ಮೂಕ ಸಾಕ್ಷಿಯಂತಿದ್ದ ಹೊಂಗೆಯ ನೆರಳಲ್ಲಿರುವ ದೊಡ್ಡ ಹೆಬ್ಬಂಡೆ ನನ್ನನ್ನು ಕಂಡು ತಾನೂ ಕಣ್ಣೀರಿಟ್ಟು ಸಾಂತ್ವನ ಹೇಳುತ್ತಿದೆ. ಇಂದಲ್ಲ ನಾಳೆ ಬಂದೇ ಬರುವಳು ನಿನ್ನ ಹುಡುಕಿಕೊಂಡು ನಿರಾಶನಾಗದಿರು ಎಂದು ಹೊಂಗೆಯಿಂದ ಸೂಸುವ ತಂಗಾಳಿ ಮೆಲ್ಲನೇ ಕಿವಿಯಲ್ಲಿ ಉಸುರಿ ಬಿರುಗಳಿಯಲ್ಲೂ ಆಸೆ ಬಿಡದಂತೆ ಹುರುದಿಂಬಿಸುತ್ತಿದೆ. ಕಠೋರತೆಗೆ ಹೆಸರಾದ ಬಂಡೆ ನನಗಾಗಿ ಕಣ್ಣೀರು ಹಾಕಿದೆ. ಹೊಂಗೆಯ ಮರವೂ ನಮ್ಮಿಬ್ಬರ ಪ್ರೀತಿಯ ಪರವಾಗಿಯೇ ಇದ್ದೇನೆ ಎನ್ನುವಂತೆ ದೃಢವಾಗಿ ನಿಂತಿದೆ. ಸೂರ್ಯ ತನ್ನ ಮೆಗೆ ಹೋಗುವ ಹೊತ್ತಿಗೆ ಸರಿಯಾಗಿ ಚಂದ್ರನೊಂದಿಗೆ ನಿನ್ನನ್ನು ಕಳುಹಿಸು ಎಂದೂ ದಿನವೂ ಬೇಡಿಕೊಳ್ಳುತ್ತೇನೆ ಎಷ್ಟೋ ಸಲ ಚಂದ್ರನಿಗೂ ತನ್ನ ಬೆಳದಿಂಗಳ ರಾತ್ರಿಯಾದರೂ ಜೊತೆಗೆ ನಿನ್ನನ್ನು ಕರೆದು ತಾ ಎಂದು ದುಂಬಾಲು ಬೀಳುತ್ತೇನೆ. ನನ್ನ ಕಾಟಕ್ಕೆ ಸುಸ್ತಾಗಿ ಚಂದಿರ ಮೋಡಗಳ ಮರೆಯಲ್ಲಿ ಹುದುಗಿಕೊಂಡು ಕಣ್ಣು ಮುಚ್ಚಾಲೆಯಾಟ ಆಡಿಸುತ್ತಾನೆ ನನ್ನನ್ನು ಸತಾಯಿಸಿ ಖುಷಿ ಪಡುತ್ತಾನೆ.ಮುಂದಿನ ಹುಣ್ಣಿಮೆಗೆ ಖಂಡಿತ ನಿನ್ನ ದರುಶನ ಮಾಡಿಸುತ್ತೇನೆ ಎಂದು ಟಾ ಟಾ ಹೇಳಿ ತಪ್ಪಿಸಿಕೊಳ್ಳುತ್ತಾನೆ. ಅವನಿಗೆ ನನ್ನ ಮೇಲೆ ಎಂದು ಕರುಣೆ ಬಂದು ನಿನ್ನನ್ನು ತನ್ನ ಜೊತೆ ಕರೆ ತರುವನೋ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ.

ಆಗಾಗ ಸುಳಿಯುವ ತಂಗಾಳಿ ನನ್ನ ನಿಟ್ಟುಸಿರಿಗೆ ಸ್ಪಂದಿಸಿ ನಿನ್ನವಳು ಚೆನ್ನಾಗಿಯೇ ಇರುವಳು ಎಂದು ಹೇಳಿ ಸಂಸದ ಅಲೆಯನ್ನು ಮೂಡಿಸುತ್ತದೆ. ಎಲ್ಲಿದ್ದಾಳೆ? ನಾನೇ ಹೋಗಿ ಭೇಟಿಯಾಗುವೆ ಎಂಬ ಪ್ರಶ್ನೆ ಕೇಳುವಷ್ಟರಲ್ಲಿ ತಾನಿಷ್ಟ ಪಡುವ ತರುಲತೆಗಳೊಂದಿಗೆ ಅರಳಿದ ಹೂಗಳೊಂದಿಗೆ ಬಿಜಿ ಆಗಿಬಿಡುತ್ತದೆ. ಸೀರೆಯುಟ್ಟ ನೀರೆಯರು ನೀರಿಗೆಂದು ನದಿಯ ದಡಕೆ ಬರುವರು. ಅದರಲ್ಲಿ ನಿನ್ನ ಗೆಳತಿಯರು ಕಂಡ ಮನಸ್ಸು ಮೋಡ ಕಂಡ ನವಿಲಿನಂತಾಗಿ ಕುಣಿಯುತ್ತ ಅವರೆಡೆಗೆ ಹೋಗಿ ಕೇಳಿದರೆ ಅವರೆಲ್ಲ ಗೊಳ್ಳ ಎಂದು ನಕ್ಕು ನನ್ನನ್ನು ಮತ್ತಷ್ಟು ಗೋಳು ಹುಯ್ದುಕೊಳ್ಳುತ್ತಾರೆ. ನೀ ನಿನ್ನ ಅಜ್ಜಿ ಊರಿಂದ ಬಂದು ಎರಡು ಮೂರು ದಿನಗಳಾಗಿವೆ. ನೀರಿಗೆ ಬೆಳಿಗ್ಗೆದ್ದು ಬಂದು ಹೋಗುತ್ತಿ ಎನ್ನುವ ಸುದ್ದಿಯನ್ನು ನಿನ್ನ ಆಪ್ತ ಗೆಳತಿಯೊಬ್ಬಳು ಹೇಳಿ ಮಿಂಚಿನಂತೆ ಮರೆಯಾದಳು. ಆ ಶುಭ ಸುದ್ದಿ ಕೇಳಿದಾಗಿನಿಂದ ಮನಸ್ಸು ಹಿಡಿತಕ್ಕೆ ಸಿಗುತ್ತಿಲ್ಲ. ಹೃದಯವೂ ಜಿಗಿಯುವ ಜಿಂಕೆಯಾಗಿದೆ.

ಇಷ್ಟು ದಿನ ಸತಾಯಿಸಿದ ನೀನು ಇಂದು ಹುಟ್ಟು ಬಾಲ ರವಿಯ ಕೈ ಹಿಡಿದು ಬಂದೇ ಬರುತ್ತೀಯಾ ಇಷ್ಟು ದಿನದ ಕಣ್ಣೀರಿಗೆ ಮುಕ್ತಿ ನೀಡುತ್ತಿಯಾ ನಮ್ಮಿಬ್ಬರ ಪ್ರೀತಿಯ ಗುಟ್ಟನ್ನು ಮನೆಯಲ್ಲಿ ರಟ್ಟು ಮಾಡಿ ಕನಸಿ ಲೋಕದಿಂದ ನನಸಿನ ಲೋಕಕ್ಕೆ ಜೊತೆಗಾತಿಯಾಗಿ ಕೊನೆಯುಸಿರುವವರೆಗೂ ಇರುತ್ತಿಯಾ, ಹೊಂಗೆಯ ನೆರಳಲ್ಲಿ ಆಡಿದ ಮಾತುಗಳನ್ನೆಲ್ಲ ಮೆಲಕು ಹಾಕುತ್ತ ಬೆಳದಿಂಗಳ ರಾತ್ರಿಯಲ್ಲಿ ಸವಿನೆನಪುಗಳ ಮೂಟೆ ಬಿಚ್ಚಿಕೊಂಡು ಒಂದೊಂದೇ ಸವಿಯೋಣ ಅನಗತ್ಯ ಅಂಜಿಕೆ ಬೇಡ. ಸಂಕೋಚದ ಮುದ್ದೆಯನ್ನು ಹಿಂದುಳಿಸಿ ಬಂದು ಬಿಡು. ನಿನ್ನೆಲ್ಲ ಗೊಂದಲ ಗೋಜಲುಗಳಿಗೆ ಉತ್ತರಿಸುವೆ. ನಿನಗೆ ತುಂಬಾ ತುಂಬಾ ಅಚ್ಚು ಮೆಚ್ಚಾದ ನನ್ನೊಂದಿಗೆ ಬಾಳಿ ಬದುಕಲು. ಮೋಡದ ಮರೆಯಲಿ ಇಣುಕಿ ಕಾಡುವ ಚಂದಿರನಂತೆ ಕಾಡದೇ ಜಗ ಬೆಳಗುವ ನೇಸರನೊಂದಿಗೆ ಬಂದು ಬಿಡು ಕೆರೆಯ ದಡಕೆ. ಜೊತೆಗೂಡಿ ಹೆಜ್ಜೆ ಹಾಕೋಣ ಜೀವ ನದಿಯ ದಡದವರೆಗೂ.
-ಜಯಶ್ರೀ.ಜೆ. ಅಬ್ಬಿಗೇರಿ, 9449234142


Comments