UK Suddi
The news is by your side.

ಲಿಂಗಾಯತ ಧರ್ಮ ಮಾನ್ಯತೆ ಅಡ್ಡಿಗೆ ವೀರಶೈವರ ಷಡ್ಯಂತ್ರ.


ವೇದ ಶಾಸ್ತ್ರ ಆಗಮಗಳನ್ನು ಧಿಕ್ಕರಿಸಿದ ಮಹಾ ಸಮಾಜವಾದಿ ಸಮತೆಯ ಹರಿಕಾರ ಕ್ರಾಂತಿಕಾರಿ ಬಸವಣ್ಣನವರ ಜಯಂತಿಯಂದು  ವೇದ ಮಂತ್ರ   ಪಠಣ ಯಜ್ಞ ಹವನ  ಹೋಮ ಮಾಡುವ ದೊಡ್ಡ ಹುನ್ನಾರ ಬೆಂಗಳೂರಿನಲ್ಲಿ ನಡೆದದ್ದು ಒಂದು ದುರಂತವೇ ಸರಿ.
 “ವೇದಕ್ಕೆ ಒರೆ ಕಟ್ಟುವೆ ಶಾಸ್ತ್ರಕ್ಕೆ ನಿಗಳನಿಕ್ಕುವೆ 

ಆಗಮದ ಮೂಗ ಕೊಯ್ಯುವೆ ,

ನೋಡಯ್ಯ ಮಹಾದಾನಿ ಕೂಡಲ  ಸಂಗಮದೇವ ,

ಮಾದರ ಚೆನ್ನಯ್ಯನ ಮನೆ ಮಗ ನಾನಯ್ಯ,”
ವೇದಗಳಲ್ಲಿರುವ ವಿಷಯಗಳನ್ನು ಒಪ್ಪದ ಬಸವಣ್ಣ ಅವುಗಳಿಗೆ ಚರ್ಮದ ಒರೆ ಕಟ್ಟಿ ಹಾಕುವೆನು.ಶಾಸ್ತ್ರಕ್ಕೆ ನಿಗಳ ಅಂದರೆ ಕೀಲಿ ಹಾಕುವುದು ಅಂತ. ಆಗಮದ ಮೂಗ ಕೊಯ್ಯುವೆ., ಲಿಂಗ ಸಮಾಜ ಸಾಕ್ಷಿಯಾಗಿ ತಾನು ಮಾದಾರ ಚೆನ್ನಯನ ಮಗನು ಎಂದು ಅತ್ಯಂತ ಕಿಂಕರ ಭಾವದಿಂದ ಆತ್ಮ ನಿವೇದನೆ ಮಾಡಿಕೊಳ್ಳುತ್ತಾನೆ ಬಸವಣ್ಣ.
ಸನಾತನ ವ್ಯವಸ್ಥೆ ಜಿಡ್ಡುಗಟ್ಟಿ ಮಲೀನವಾಗಿ  ಮೃತಪ್ರಾಯ ಪರಿಸ್ಥಿತಿಯಲ್ಲಿ ಬಸವಣ್ಣ ಭಾರತ ದೇಶಕ್ಕೆ ಅದರಲ್ಲೂ ದಕ್ಷಿಣ ಭಾರತದ ಮೂಲನಿವಾಸಿಗಳ ಆಶಾ ದೀಪವಾಗಿ ಬಂದನು ಬಸವಣ್ಣ .
ಇದನ್ನು ಜನಪದಿಗರು ಸೊಗಸಾಗಿ ಹೀಗೆ ಹೇಳಿದ್ದಾರೆ.
ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು

ಮೊಗ್ಗು ಮಲ್ಲಿಗೆ ಅರಳ್ಯಾವ/

ಮೊಗ್ಗು ಮಲ್ಲಿಗೆ ಅರಳ್ಯಾವ /

ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ.
ಇದು ಜನಪದ ಕವಿಯು ಬಸವಣ್ಣನ ಆಗಮನವನ್ನು ಈ ರೀತಿ ವರ್ಣಿಸಿದ್ದಾನೆ .ಶತಮಾನದ ಶೋಷಣೆಗೆ ಕೊನೆಯ ಹೇಳಿ ಸರ್ವಕಾಲಿಕ ಸಾಮಾಜಿಕ ಸಮಾನತೆಯ ಸಮಾಜವನ್ನು ಕಟ್ಟಿ ಜಾಗತಿಕ ಮಟ್ಟದಲ್ಲಿ ಶ್ರೇಷ್ಟ ತತ್ವಜ್ಞಾನಿಯಾಗಿ  ಬಸವಣ್ಣ ಕಂಗೊಳಿಸುತ್ತಾನೆ.

ಬುದ್ಧನ ನಂತರ ಅವನಿಗಿಂತಲೂ ಹೆಚ್ಚಿನ ಕ್ರಾಂತಿಯ ಹೆಜ್ಜೆಯನಿಟ್ಟ ಬಸವಣ್ಣ ಭಾರತದಲ್ಲಿ ಹಿಂದೆಂದೂ ಕಾಣದ ಅಮೂಲ್ಯ ಬದಲಾವಣೆ ಕಂಡನು .

ಬಸವ ಧರ್ಮಕ್ಕೆ ಯಾವುದೇ ರಾಜಶ್ರಯವಿರಲಿಲ್ಲ . ಬುದ್ಧಧರ್ಮಕ್ಕೆ ಅಶೋಕ ಮತ್ತು ಆತನ ಸಾಮ್ರಾಜ್ಯವೇ ಆಶ್ರಯಕ್ಕೆ ನಿಂತು ಇಂತಹ ಬಸವ ಧರ್ಮಕ್ಕೆ ಆಶ್ರಯ ನಿಂತವರು ಈ ನೆಲದ ನಾಡಿನ ಸಾಮಾನ್ಯರು . ಬಸವಣ್ಣ ಸ್ಥಾಪಿಸಿದ ಚಳುವಳಿಗೆ ದಲಿತರು ಕಾರ್ಮಿಕರು ಬಡವರು  ಮಹಿಳೆಯರು ನಾಯಕರು.
ಹನ್ನೆರಡನೆಯ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಶರಣರು ದೇಶದ ಮೂಲೆ ಮೂಲೆಗೆ ಚದುರಿ ಹೋದರು.ಈ ಆಂದೋಲನವನ್ನು ಮುನ್ನೆಡಸಲು 

ನಾಯಕತ್ವದ  ಕೊರತೆಯಿತ್ತು. ಬಸವಣ್ಣನವರ ಅಗಾಧವಾದ ಪ್ರಭಾವ ಅಂದಿನ ಶೈವ  ಪ್ರಭೇದಗಳು ಕಾಳಾಮುಖಿ ಕಾಪಾಲಿಕರು ಬಸವಣ್ಣನವರ ಚಿಂತನೆಗಳನ್ನು ಮುಂದಿಟ್ಟಿಕೊಂಡು ಮಠಗಳ, ವ್ಯವಸ್ಥೆ ಆಶ್ರಮಗಳ ವ್ಯವಸ್ಥೆ ,ಸ್ವಾಮಿಗಳು ಹೀಗೆ ಯಾವುದನ್ನು ಬಸವಣ್ಣ ಖಂಡ ತುಂಡವಾಗಿ ವಿರೋಧಿಸಿದ್ದನೋ ಅದನ್ನೇ ಕೆಲ ಸನಾತನಿಗಳು ಲಿಂಗಾಯತ ಧರ್ಮದಲ್ಲಿ ತಂದಿರಿಸಿದರು.

ಬಸವಣ್ಣ ವರ್ಗ ವರ್ಣ ಲಿಂಗ ಭೇದ ಆಶ್ರಮ ಭೇದ ( MONARCHY) ಇವುಗಳನ್ನು ಸಂಪೂರ್ಣ ಧಿಕ್ಕರಿಸಿ ಅತ್ಯಂತ ಸರಳ ನೈಸರ್ಗಿಕ ಧಾರ್ಮಿಕ ಆಧ್ಯಾತ್ಮಿಕ ವ್ಯವಸ್ಥೆಯನ್ನು ಕಲ್ಪಿಸಿದ ಬಸವಣ್ಣ ಒಬ್ಬ ಶ್ರೇಷ್ಠ ದಾರ್ಶನಿಕ.ಜಗತ್ತಿನಲ್ಲಿ ಆಶ್ರಮಗಳನ್ನು ವಿರೋಧಿಸಿದ ಏಕೈಕ ಸಿದ್ಧಾಂತವೆಂದರೆ ಅದು ಶರಣ ಸಿದ್ಧಾಂತವಾಗಿದೆ. 
 ಜನ ಸೇವೆ ಮಾಡುವ ಚಮ್ಮಾರ ,ಡೋಹರ ,ಮಡಿವಾಳ, ಕಮ್ಮಾರ, ಕುಂಬಾರ ,ಒಕ್ಕಲಿಗ,ಬಡಿಗ ವಿಶ್ವಕರ್ಮಿ,ಉಪ್ಪಾರ ,ಮಾದಾರ ಮೇದಾರ,ನೇಕಾರ,ಮುಂತಾದ ಜನರನ್ನು ಅಸ್ಪ್ರಶ್ಯರೆಂದು ಪರಿಗಣಿಸಿ ಅವರನ್ನು ಸಮಾಜದಿಂದ ದೂರವಿಟ್ಟಿದ್ದರು. ಸುಲಿಗೆ ಶೋಷಣೆ ಮಾಡುತ್ತಾ ಸಂಸ್ಕೃತ ಮಂತ್ರ ಹೇಳಿ ಪೌರೋಹಿತ್ಯ ಮಾಡುವವರನ್ನು ಸಮಾಜ ದೊಡ್ಡವರೆಂದು ತಿಳಿದುಕೊಂಡ ಮೌಢ್ಯತನ ಅಂದಿನ ಸಮಾಜದ್ದಾಗಿತ್ತು.

ಇದನ್ನು ವಿರೋಧಿಸಿ ” ಕಾಸಿ ಕಮ್ಮಾರನಾದ ,ಬಿಸಿ ಮಡಿವಾಳನದ ,ಹಾಸನಿಕ್ಕಿ ಸಾಲಿಗನಾದ ವೇದವನ್ನೋದಿ ಹಾರವನದ ” ಎಂದು ಕಸುಬಿನಿಂದ ಜಾತಿ ನಿರ್ಮಾಣವಾಗಿವೆ ಎಂದು ಭಾರತದಲ್ಲಿ ಮೊಟ್ಟು ಮೊದಲು ಹೇಳಿದ ಸ್ವತಂತ್ರ ವಿಚಾರವಾದಿ ಬಸವಣ್ಣ .

ಆದರಷ್ಟೇ ಇಂದು ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದೆ.ಯಾರಿಗಾಗಿ ಬಸವಣ್ಣ ಶ್ರಮಿಸಿದನೋ ಅವರನ್ನು ಮತ್ತೆ ಇಂದು ಶೂದ್ರ ಪಟ್ಟ ಕಟ್ಟಿ ಸಮಾಜದಿಂದ ಹೊರಗೆ ಇಟ್ಟಿದ್ದೇವೆ.ಯಾವ  ಪೌರೋಹಿತ್ಯ ವ್ಯವಸ್ಥೆಯ ವಿರುದ್ಧ ಸೆಣಸಾಡಿದನೋ ಇಂದು ಅವರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಒಡೆಯರಾಗಿದ್ದಾರೆ. ವಿಪರ್ಯಾಸ ಆದರೂ ಸತ್ಯ.

ಹತ್ತನೆಯ ಶತಮಾನದಲ್ಲಿ ಬೌದ್ಧ ಧರ್ಮವು ಭಾರತವನ್ನು ಬಿಟ್ಟು ಚೀನಾ ,ಜಪಾನ ಮುಂತಾದ ಪೌರಾತ್ಯ ರಾಷ್ಟ್ರಗಳಲ್ಲಿ ನೆಲೆ ಕಾಣ ಹತ್ತಿತು .

ಬೌದ್ಧ ಧರ್ಮವನ್ನು ಗಡೀಪಾರು ಮಾಡಿದ್ದಾಯಿತು,ಈಗ ಲಿಂಗಾಯತವನ್ನು ಆಪೋಶನ ತೆಗೆದುಕೊಳ್ಳಲು ಹವಣಿಕೆ ಮಾಡುತ್ತಿರುವ ಶೈವ ಸಂಪ್ರದಾಯವಾದಿಗಳು  ಬಸವಣ್ಣನವರನ್ನು ಬಳಸಿಕೊಂಡು ತಮ್ಮ ಸನಾತನ ಪ್ರಾಬಲ್ಯ  ಮೆರೆಯಲು ಯತ್ನಿಸುತ್ತಿದ್ದಾರೆ .ಜನರನ್ನು ಸಹಸ್ರಮಾನಗಳಿಂದ ಮೌಢ್ಯದ ಮಾಯಾಜಾಲದಲ್ಲಿ ಬಂಧಿಸಿಟ್ಟಿರುವ ಸನಾತನ ಕಣ್ಕಟ್ಟು ಬೆರಗು ಮೂಡಿಸುವಂತದು.ಭಾರತದಲ್ಲಿ ಇಂದು ಅಸಹಿಷ್ಣುತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಲಿಂಗಾಯತ ವೀರಶೈವ ಗೊಂದಲ ವಿವಾದ ಬಗೆ ಹರೆಯದಾಗಿದೆ, ಕಾರಣ ಅವುಗಳಲ್ಲಿನ ತಾತ್ವಿಕ ಸೈದ್ಧಾಂತಿಕ ವ್ಯತ್ಯಾಸಗಳು ಅಜಗಜಾಂತರ .
ಲಿಂಗಾಯತ ಧರ್ಮ ಇತಿಹಾಸ ಮತ್ತು ಸತ್ಯಾ ಸತ್ಯತೆ:
1) ಇತಿಹಾಸ ಪುರುಷ ಬಸವಣ್ಣನವರೇ ಲಿಂಗಾಯತಕ್ಕೆ ಧರ್ಮಗುರು. ಸ್ಥಾವರಲಿಂಗೋದ್ಭವರು ಎನ್ನಲಾದ  ಕಾಲ್ಪನಿಕ ಪೌರಾಣಿಕ  ರೇಣುಕಾಚಾರ್ಯರೇ ವೀರಶೈವಕ್ಕೆ ಧರ್ಮಗುರು.

2) ಲಿಂಗಾಯತರಲ್ಲಿ 770 ಅಮರಗಣಂಗಳೆಲ್ಲ ನಾಯಕರು. ವೀರಶೈವರು 770 ಅಮರಗಣಂಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

3) ಲಿಂಗಾಯತರುಏಕದೇವೋಪಾಸಕರು. ಇಷ್ಟಲಿಂಗಯೋಗ ಅವರ ಪೂಜಾ ವಿಧಾನ. ಇಷ್ಟಲಿಂಗವು ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣ ಚೈತನ್ಯದ ಕುರುಹು. ಬಹುದೇವೋಪಾಸಕ ವೀರಶೈವರು ಗಣಪತಿ ನಂದಿ ವೀರಭದ್ರ ಶಿವ ಪಾರ್ವತಿ ಮೂರ್ತಿ ಪೂಜಕರು.

4) ಲಿಂಗಾಯತ ಧರ್ಮದಲ್ಲಿ ಯಜ್ಞ  ಹೋಮ, ಹವನ ಮತ್ತು ವೇದಘೋಷಗಳಿಲ್ಲ.ವೀರಶೈವರಲ್ಲಿ ಇವೆಲ್ಲವೂ ಆಚರಣೆಯಲ್ಲಿವೆ.

5) ಮೂಢನಂಬಿಕೆಯ ಆಗರಗಳಾದ ಜ್ಯೋತಿಷ ಮತ್ತು ಪಂಚಾಂಗವನ್ನು ಲಿಂಗಾಯತರು ನಂಬುವುದಿಲ್ಲ. ವೀರಶೈವರು ನಂಬುತ್ತಾರೆ.

6) ಲಿಂಗಾಯತರಿಗೆ ಆಚಾರವೇ ಸ್ವರ್ಗ, ಅನಾಚಾರವೇ ನರಕ. ವೀರಶೈವರು ಸ್ವರ್ಗ, ನರಕಗಳನ್ನು ನಂಬುತ್ತಾರೆ.

7) ಲಿಂಗಾಯತರದು ಅನುಭವಮಂಟಪ ಮಹಾಮನೆಯ ಸಿದ್ಧಾಂತ . ವೀರಶೈವರಿಗೆ ದೇವಾಲಯಗಳು ಬೇಕು.

8 ) ಲಿಂಗಾಯತರದು ಕಾಯಕ ಸಿದ್ಧಾಂತ. ವೀರಶೈವರದು ಕರ್ಮ ಸಿದ್ಧಾಂತ.

9) ಲಿಂಗಾಯತರ ಧರ್ಮಗ್ರಂಥ ವಚನ ಸಂಪುಟ. ವೀರಶೈವರ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ.(ಕಾಲ ನಿರ್ಣಯದ ಗೊಂದಲ-ಬಸವೋತ್ತರ ಕೃತಿ.)

10) ಅವೈದಿಕ ಲಿಂಗಾಯತರಿಗೆ ವಚನವೇ ಸರ್ವಸ್ವ. ವೇದಾಗಮಗಳನ್ನು ನಂಬುವ ವೀರಶೈವರು ವೈದಿಕ ಸಂಪ್ರದಾಯದವರು.

11) ಲಿಂಗಾಯತರಿಗೆ ಅರಿವೇ ಗುರು. ವೀರಶೈವರಲ್ಲಿ ಭಕ್ತರು ಗುರುವಿನ (ಆಚಾರ್ಯರ) ಗುಲಾಮರು.

12) ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ’ಎಂದು ಹೇಳಿದವರು. ವೀರಶೈವ ಪಂಚಾಚಾರ್ಯರಿಗೆ  ವೈಭವಪೂರಿತ ಪಲ್ಲಕ್ಕಿ ಬೇಕು.ಕಿರೀಟ ಸಿಂಹಾಸನ ಬೇಕು.

13) ಲಿಂಗಾಯತರದು ನಿರ್ಜಾತಿ ವ್ಯವಸ್ಥೆ. ಬಸವ ತತ್ತ್ವವನ್ನು ಜನ ಮನದಲ್ಲಿ ಮೂಡಿಸುವ ಲಿಂಗವಂತರು ಶರಣ ಜಂಗಮರಾಗಬಹುದು. ವೀರಶೈವರದು ಜಾತಿ ವ್ಯವಸ್ಥೆ. ಅವರ ಪ್ರಕಾರ ಜಾತಿ ಜಂಗಮರೇ ವೀರ ಮಹೇಶ್ವರದವರೇ  ಗುರುಗಳಾಗಬೇಕು.

14) ಲಿಂಗಾಯತರಿಗೆ ಪಂಚಸೂತಕಗಳಿಲ್ಲ. ವೀರಶೈವರಿಗೆ ಪಂಚಸೂತಕಗಳಿವೆ.

15) ಲಿಂಗಾಯತ ಬಸವಾದ್ವೈತ. ಶಿವ, ಗಂಗೆ, ಪಾರ್ವತಿ, ಮತ್ತು ಕೈಲಾಸ ನಂಬುವ ವೀರಶೈವ ದ್ವೈತ.
 ವೀರಶೈವರು ಪಂಚಾಚಾರ್ಯ ಸಂಪ್ರದಾಯವನ್ನು ಬಿಟ್ಟು ಬಸವಣ್ಣನವರೇ ಧರ್ಮಗುರು ಮತ್ತು ವಚನಗಳೇ ಧರ್ಮಗ್ರಂಥ ಎಂದು ಒಪ್ಪಿಕೊಂಡಾಗ ಮಾತ್ರ ಲಿಂಗಾಯತ ಸಮಾಜ ಒಂದಾಗಬಲ್ಲುದು. ಅವೈದಿಕ ಲಿಂಗಾಯತ ಮತ್ತು ವೈದಿಕ ವೀರಶೈವತದ್ವಿರುದ್ಧ ಸಿದ್ಧಾಂತಗಳ ಮೇಲೆ ನಿಂತಿರುವುದರಿಂದ ಒಂದಾಗಲು ಬೇರೆ ಮಾರ್ಗವೇ ಇಲ್ಲ. ಇರುವುದೊಂದೇ ಮಾರ್ಗ; ಬಸವಮಾರ್ಗ.

ವೀರಶೈವ ಪದ ಹರಿಹರ ರಾಘವಾ೦ಕ  ಕೆರೆ ಪದ್ಮರಸ ಚಾಮರಸರ ಕೃತಿಗಳಲ್ಲಿ ಕಂಡು ಬಂದಿಲ್ಲಾ ,1384  ಮೊದಲ ಬಾರಿ ಬಂದಿದೆ ಶಿವಾಗಮದಲ್ಲಿಯೂ ವೀರಶೈವ ಪದ ಬಂದಿಲ್ಲ .ಬಸವಣ್ಣನ ಹೊರತಾಗಿ ಲಿಂಗಾಯತ ಧರ್ಮಕ್ಕೆ ಇನ್ನೋಬ್ಬ  ಧಾರ್ಮ ಗುರುವಿಲ್ಲ .
ವೇದಗಳನ್ನೇ ಪ್ರಶ್ನಿಸಿದ ಬಸವಣ್ಣ:
ಓದಿದನು ಬಸವೇಶ 

ವೇದದೊಳಿಗಿನ ಹುಸಿಯಾ ,

 ಭೇದ  ಬೇಧನೆ ಬಿಚ್ಚಿಟ್ಟ , 

ಜನಪದಕೆ ತೈದುಂಡ ಜೀವಿ ಬಸವಣ್ಣ.
ವೇದಗಳಲ್ಲಿರುವ ಅಸತ್ಯವನ್ನು ಬಸವಣ್ಣ   ಬಯಲಿಗೆಳೆದನು. ಬಸವಣ್ಣನವರು ತಮ್ಮ  70 ವಚನಗಳಲ್ಲಿ   89 ಸಲ ವೇದಗಳನ್ನು ಖಂಡಿಸಿದ್ದಾನೆ ತಿರಸ್ಕರಿಸಿದ್ದಾನೆ.

ವೇದ ಆಗಮ ಶಾಸ್ತ್ರ ನಂಬಿದ ಸನಾತನರು ಅಸ್ಪ್ರಶ್ಯ ನೀತಿ ಪಾಲಿಸಿ ದಲಿತರನ್ನು ಪಂಚಮರನ್ನು ಪ್ರಾಣಿಗಳಂತೆ ಕೀಳಾಗಿ ಕಂಡಿದ್ದರು. ಆಗ ಬಸವಣ್ಣ ಪಂಚಮರ ದಲಿತರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ವೈದಿಕರಿಗೆ ಹೀಗೆ ಸವಾಲೆಸೆದನು.
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ !

ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ !

ಆಗಮ ಹೆರತೊಲಗಿ ಅಗಲಿದ್ದಿತಯ್ಯಾ !

ನಮ್ಮ ಕೂಡಲಸಂಗಯ್ಯನು

ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
ಪ್ರಾಣಿ ಬಲಿ ಅಂದಿನ ಕರಾಳ ವ್ಯವಸ್ಥೆಯ ಪ್ರಮುಖ ಅಂಗವಾಗಿತ್ತು. ಹಬ್ಬಕ್ಕೆ ತಂದ ಹೋತು  ಕುರಿಯನ್ನು ವೇದ ಸಾಕ್ಷಿಯಾಗಿ ಕೊಯ್ಯುತ್ತಿದ್ದರು..

ಪ್ರಾಣಿ ಹಿಂಸೆ ಮಹಾಪಾಪವೆಂದು ಮನಗಂಡ ಶರಣರು ದೇವರ ಹೆಸರಲ್ಲಿ ಪ್ರಾಣಿ ಬಲಿ ಮಾಡೋದನ್ನು  ಉಗ್ರವಾಗಿ ಖಂಡಿಸಿ ಪ್ರತಿಭಟಿಸಿದರು.
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು

ಎಲೆ ಹೋತೇ ಅಳು, ಕಂಡಾ !

ವೇದವನೋದಿದವರ ಮುಂದೆ ಅಳು, ಕಂಡಾ !

ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ !

ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
ಸಮಾಜವನ್ನೇ ಲಿಂಗ ಸ್ವರೂಪವಾಗಿ ಕಂಡು  ಅಲ್ಲಿರುವ ಸಕಲ ಜೀವಾತ್ಮಗಳಿಗೆ   ಲೇಸನ್ನೇ ಬಯಸುವ ಪರಿಶುದ್ಧ ಆಚರಣೆಯೇ ಜೀವನ .

ಕಾಯಕ ದಾಸೋಹ ತತ್ವವ ಮರೆತು ಬೇರೆಯಲ್ಲ ಬೋಧೆ ಮಾಡುವದರ ವಿರುದ್ಧ ಬಸವಣ್ಣ ತನ್ನ ಆಕ್ರೋಶ ವ್ಯಕ್ತ ಪಡಿಸಿದ್ದಾನೆ  .

ಆದಿ ಪುರಾಣ ಅಸುರರಿಗೆ ಮಾರಿ,

ವೇದಪುರಾಣ ಹೋತಿಂಗೆ ಮಾರಿ,

ರಾಮಪುರಾಣ ರಕ್ಕಸರಿಗೆ ಮಾರಿ,

ಭಾರತಪುರಾಣ ಗೋತ್ರಕ್ಕೆ ಮಾರಿ.

ಎಲ್ಲಾ ಪುರಾಣ ಕರ್ಮಕ್ಕೆ ಮೊದಲು,

ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ

ಕೂಡಲಸಂಗಮದೇವಾ.

ಸಾಮಾಜಿಕ ನಿರ್ವಹನ್ಗೆ ಪ್ರತಿಯಿಲ್ಲ ಅದಕ್ಕಿಂತ ಶ್ರೇಷ್ಠ ಕಾರ್ಯ ಇನ್ನೊಂದಿಲ್ಲ ಎನ್ನುವುದು ಬಸವಣ್ಣನವರ ನಿಲುವು .
ಲಿಂಗಾಯತ ಧರ್ಮವು ಸಾಂಸ್ಥಿಕರಣಗೊಂಡಿದ್ದೆ ಒಂದು ದೊಡ್ಡ ದುರಂತ:

ಎಲ್ಲ ಧರ್ಮಗಲ್ಲಿ ಅವರವರ ಧಾರ್ಮಿಕ ಆಚರಣೆಯ ವ್ಯವಸ್ಥೆ ಇದೆ. ಅಲ್ಲಿ ಚರ್ಚು ,ಮಸೀದೆ, ಗುರುದ್ವಾರ ,ಮಂದಿರ ,ವಿಹಾರಗಳು ಬಸದಿಗಳು ಆದರೆ ಶರಣ ಧರ್ಮಕ್ಕೆ ಭಕ್ತನ ಅಂಗಳವೇ ಕೈಲಾಸ .ಶರಣರು ಎಂದೂ  ಸ್ಥಾಯಿ ಭಾವವನ್ನು ಸೃಷ್ಟಿಸಲಿಲ್ಲ. .ಜಂಗಮ ಇದು ಬಸವಣ್ಣ ಮತ್ತು ಶರಣರು ಕೊಟ್ಟ ಶ್ರೇಷ್ಠ ಸಾಮಾಜಿಕ ವ್ಯವಸ್ಥೆ. ಕಾಯಕದಿಂದ ಬಂದ ಆದಾಯವನ್ನು   ದಾಸೋಹದ ಮೂಲಕ ಹಂಚುವುದು ಜಗತ್ತಿನ ಶ್ರೇಷ್ಠ ಆರ್ಥಿಕ ನೀತಿಗೆ ಮೀರಿದ ಸಮಾನತೆಯ ಸಿದ್ಧಾಂತವಾಗಿದೆ.

ಮರಕ್ಕೆ ಬಾಯಿ ಬೇರೆಂದು

ಬುಡಕ್ಕೆ ನೀರೆರದರೆ

ಮೇಲೆ ಪಲ್ಲವಿಸಿತ್ತು ನೋಡ

ಲಿಂಗದ ಬಾಯಿ ಜಂಗಮವೆಂದು ತಿಳಿದು

ನೀಡಿದರೆ ಸಕಲ ಇಷ್ಟಾರ್ಥವಪ್ಪುದು
ಇದಲ್ಲದೆ ಸ್ಥಾವರವನ್ನು ಗುಡಿ ವ್ಯವಸ್ಥೆಯನ್ನು ಕಟುವಾಗಿ ವಿರೋದಿಸಿದ ಶರಣರು ಮಠಗಳನ್ನು ಹೇಗೆ ಒಪ್ಪಿಕೊಂಡರು ಎನ್ನುವದು ಯಕ್ಷ ಪ್ರಶ್ನೆ? ಅಥವಾ ಕಲ್ಯಾಣ ಕ್ರಾಂತಿಯ ನಂತರ ಮಠಗಳ ವ್ಯವಸ್ಥೆ ಹುಟ್ಟಿಕೊಂಡವೆ ಎಂಬುದು ನಮ್ಮ ಸಂಶಯ .ಅಹುದು ಬಸವ ಪೂರ್ವಯುಗದಲಿದ್ದ ಅನೇಕ ಶೈವ ಪ್ರಭೆದಗಳಾದ ಕಾಳಮುಖಿ .ಲಕುಲಿಶ .ಕಾಪಾಲಿಕ ,ಮುಂತಾದ ಕೆಲ ಶೈವರು ಶರಣ ಸಂಸ್ಕೃತಿಯಲ್ಲಿ ಬಸವ ಧರ್ಮದಲ್ಲಿ ಸೇರಿಕೊಂಡು ಕಲ್ಯಾಣ ಕ್ರಾಂತಿಯ ನಂತರ ಈ ಶೈವ ಪ್ರಭೇದಗಳು ತಮ್ಮ ತಮ್ಮ ಅಸ್ತಿತ್ವ ಉಳುಸಿಕೊಳ್ಳಲು ಇಂತಹ ಮಠಗಳ ವ್ಯವಸ್ಥೆಯನ್ನು 17 ನೇ ಶತಮಾನದಲ್ಲಿ  ಹುಟ್ಟು ಹಾಕಿದವು .ಬರ ಸಟಗನ ಭಕ್ತಿ ದಿಟವೆಂದು ನಚ್ಚಲು ಬೇಡಮಠದೊಳಗಿನ ಬೆಕ್ಕು ಇಲಿಯ ಕಂಡು ಪುಟೀದನ್ತಾಯಿತ್ತು ಕಾಣ -ಎಂದು ಜೇಡರ  ದಾಸಿಮಯ್ಯ ಮಠಗಳ ವ್ಯವಸ್ಥೆಯನ್ನು ಅಂದಿನ ಡಾಂಭಿಕ   ಪದ್ದತಿಯನ್ನು ಟೀಕಿಸಿದ್ದಾರೆ .

ಇಂದು ಬಸವಣ್ಣ ಏ ಟಿ ಎಂ (  ATM ) ಕಾರ್ಡ್ ಆಗಿದ್ದಾನೆ -ಬಸವಣ್ಣನವರ ಫೋಟೋ ಇಟ್ಟು ಉದ್ಧಿಮೆ ಆರಂಭಿಸಿದ  ಗುರು ವಿರಕ್ತರು ನವ ಪೌರೋಹಿತ್ಯ ಪೋಷಿಸುವ ನಮ್ಮ ಮಠಾಧೀಶರು ಮಾತೆ ಅಕ್ಕ ಸ್ವಾಮಿಗಳು ಲಿಂಗಾಯತ ಧರ್ಮದ ಆಚರಣೆ ಪಾಲನೆಯ ಧಿಕ್ಕನ್ನೆ ಬದಲಿಸಿದ್ದಾರೆ.

ಜನರು ವಚನ ಸಾಹಿತ್ಯದ ಅಧ್ಯಯನವನ್ನು  ತೀವ್ರಗೊಳಿಸಿ ಇಂತಹ ಆಷಾಢಭೂತಿಗಳಿಗೆ ವಿಶ್ರಾಂತಿ ನೀಡಬೇಕು.

ಭಕ್ತ ಮೊದಲು ಇಂತಹ ವ್ಯವಸ್ಥೆಯಿಂದ ಮುಕ್ತನಾದಾಗ ಮಾತ್ರ ನಮಗೆ ಸ್ವತಂತ್ರ ಧರ್ಮದ ಪರಿಕಲ್ಪನೆ ಅರಿವಾಗುವುದು. ಇಲ್ಲದಿದ್ದರೆ ಶೋಷಣೆ ಮಾಡುವ ಸನಾತನಿಗಳಿಗೂ ನಮ್ಮ ಶ್ರೀಗಳು ಮತ್ತೆ ಅಕ್ಕನವರಿಗೂ ಯಾವುದೇ ವ್ಯತ್ಯಾಸವಿಲ್ಲ.ಪೌರೋಹಿತ್ಯವನ್ನು ವಿರೋಧಿಸುತ್ತ ಇನ್ನೊಂದು ನವ ಪೌರೋಹಿತ್ಯಕ್ಕೆ ನಾಂದಿ ಹಾಡುವ ನಮ್ಮ ಲಿಂಗಾಯತ ಧಾರ್ಮಿಕ ಮುಖಂಡರಿಂದ ಬಸವ ಧರ್ಮಕ್ಕೆ  ಕಂಟಕವೆಂದರೆ ತಪ್ಪಾಗಲಿಕ್ಕಿಲ್ಲ .

ಹೊನ್ನಿನೊಳಗೊಂದೊರೆಯ ಅನ್ನದೋಳಗೊಂದಗುಳ ,ವಸ್ತ್ರ (ಸೀರೆ) ದೊಳಗೊಂದ ಎಳೆಯ ಇಂದಿಂಗೆ ನಾಳಿಂಗೆ ಬೇಕೆಂದನಾದಡೆ ಆಣೆ ನಿಮ್ಮಾಣೆ ಎನ್ನುವ ಬಸವಣ್ಣನವರೆಲ್ಲಿ.?ಎಲ್ಲ ರೀತಿಯ ಹಣವನ್ನು ತಂದು ವ್ಯವಹಾರವ ಮಾಡಿ ಕಾಯಕ ದಾಸೋಹ ತತ್ವಕ್ಕೆ ದ್ರೋಹ ಬಗೆಯುವ  ಇವರೆಲ್ಲಿ.?
ಗುರುವಿರಕ್ತರ ಕದನ ಕೇವಲ ಬೂಟಾಟಿಕೆ ನಾಟಕಗಳು ಒಳಗೊಳಗೇ ಅಣ್ಣ ತಮ್ಮಂದಿರರು ಇವರು -ಬಹುತೇಕ ವಿರಕ್ತ ಪರಂಪರೆಯ ಮಠಾಧೀಶರು ಪಂಚ ಪೀಠದವರ ಕಡೆಗೆ ಒಲವಿದೆ . ಇನ್ನು ರಾಜಕೀಯಕರಣಗೊಂಡ ಲಿಂಗಾಯತ ಧರ್ಮ ಬೇಡಿಕೆ ಕೇವಲ ಕೆಲವರ ಅಣತಿಯಂತೆ ನಡೆಯುವಂತಾಗಿದೆ. ನಮಗೆ ಧರ್ಮ ಮಾನ್ಯತೆ ಮುಖ್ಯವಾಗಿದೆ. ಕೆಲ ಸ್ವಾಮಿಗಳು ವೀರಶೈವ ಲಿಂಗಾಯತ ಚರ್ಚೆಗೆ ಸವಾಲು ಹಾಕುತ್ತಾರೆ . ನಮ್ಮ ನಾಯಕರು ಅದನ್ನು ಒಪ್ಪಿಕೊಂಡು ಭರದಿಂದ ಸಿದ್ಧತೆ ಮಾಡುವುದು ಹುಚ್ಚು ಪ್ರಹಸನವಷ್ಟೇ . ಕ್ರಿಸ್ತ ಮುಸ್ಲಿಂ  ಬೌದ್ಧ ಜೈನ ಸಿಖ್ ಹಿಂದುಗಳಂತೆ ಲಿಂಗಾಯತ ಒಂದು ಸ್ವತಂತ್ರ ಧರ್ಮವು .ಲಿಂಗಾಯತರ ಒಳಪಂಗಡವಾದ ವೀರಶೈವವು ಧರ್ಮ ಸ್ಥಾನಮಾನ ಕೇಳೋದು ಅದನ್ನು ರುಜುವಾತು ಮಾಡುವುದು ಸಮಯ ಹರಣ .ಇದನ್ನು ಚುನಾವಣೆಗೆ ಬಳಸುತ್ತಿದ್ದಾರೆ ಎಂಬ ಬಲವಾದ ಆಪಾದನೆಗಳು ದಟ್ಟವಾಗಿಟ್ಟುರುವಾಗ ಲಿಂಗಾಯತ ಮುಖಂಡರು ಕೇಂದ್ರ ಸರಕಾರಕ್ಕೆ ಅಟಾರ್ನಿ ಜನರಲ್ ಆಫ್ ಇಂಡಿಯಾ AGI ,ಕಾನೂನು ಸಚಿವಾಲಯ ಅಲ್ಪ ಸಂಖ್ಯಾತ ಸಚಿವಾಲಯ ಮತ್ತು ಕಾರ್ಯಾಲಯ ಗೃಹ ಇಲಾಖೆ ಮತ್ತು ದೇಶದ ಪ್ರಧಾನಿಯವರಿಗೆ ಮಾನವೀಯ ಅರ್ಜಿಯನ್ನು ಇನ್ನು ಕೊಟ್ಟಿಲ್ಲ ಇದರಿಂದ ಅನೇಕ ಸಂಶಯಗಳು ಮೂಡುತ್ತಿವೆ.

ಖಾದಿ ಕಾವಿ ಗುರು ವಿರಕ್ತ ವೀರಶೈವರ  ಗುದ್ದಾಟದಲ್ಲಿ ಅಪ್ಪ ಬಸವಣ್ಣ ಸ್ಥಾಪಿತ ಲಿಂಗಾಯತ ಧರ್ಮಕ್ಕೆ ಕಂಟಕ ಬಂದಿದ್ದಂತೂ ನಿಜ. ಬಸವ ಭಕ್ತರು ಎಲ್ಲವನ್ನು ನೋಡುತ್ತಿದ್ದಾರೆ ಕೇವಲ ಪರಸ್ಪರ ಟಿಕೆ ದೂಷಣೆ ಆರೋಪ ಪ್ರತ್ಯಾರೋಪದಲ್ಲಿ ಕಾಲಕಳೆಯುವ  ಅಗತ್ಯವಿಲ್ಲ.

ಈ ಕೂಡಲೇ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಸಂಗ್ರಹಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೊಟ್ಟು ಕಾನೂನುನಾತ್ಮಕವಾಗಿ ಲಿಂಗಾಯತ ಧರ್ಮದ ಮಾನ್ಯತೆ ಪಡೆಯಬೇಕೆ ಹೊರತು ಮಠಗಳಲ್ಲಿ ವೀರಶೈವ ಹಾಗು ಲಿಂಗಾಯತ ಚರ್ಚಿಸುತ್ತ ಸಮಯ ಹರಣ ಮಾಡಬಾರದು.
-ಡಾ.ಶಶಿಕಾಂತ.ಪಟ್ಟಣ ಪುಣೆ


Comments