ಅತೀ ಎತ್ತರದ ಪ್ರದೇಶದಲ್ಲಿರುವ ತಿಕೋಟಾ ಕೆರೆಯನ್ನು ತುಂಬಿಸಿ ಅಸಾಧ್ಯವೆನಿಸಿದ್ದನ್ನು ಮಾಡಿ ತೋರಿಸಿದ ಕರುನಾಡ ಭಗೀರಥ.
ವಿಜಯಪುರ:ಜಿಲ್ಲೆಯ ಅತೀ ಎತ್ತರದ ಪ್ರದೇಶವಾದ ತಿಕೋಟಾ ಕೆರೆಗೆ ದೂರದ ಕೃಷ್ಣಾ ನದಿಯಿಂದ ನೀರನ್ನು ಬೃಹತ್ ಪೈಪುಗಳ ಮೂಲಕ ತಂದು ತುಂಬಿಸಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರಾದ ಎಂ ಬಿ ಪಾಟೀಲರು ಇಂದು ಕೆರೆಗೆ ಗಂಗಾಪೂಜೆ ನೆರೇರಿಸಿ, ಬಾಗಿನ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ ಬಿ ಪಾಟೀಲರು “ಅತಿ ಎತ್ತರದ ಪ್ರದೇಶದಲ್ಲಿರುವ ತಿಕೋಟಾ ಕೆರೆಗೆ ನೀರು ತುಂಬಿಸುವೆ ಎಂದಾಗ ಬಹಳ ಜನ ಇದು ಮೂರ್ಖತನ ಎಂದಿದ್ದರು. ಆದರೆ ಈಗ ಅಸಾಧ್ಯ ಎನಿಸಿದ್ದನ್ನು ಮಾಡಿ ತೋರಿಸಿದ್ದೇನೆ. ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರಕ್ಕಿಂತಲೂ ಮೂರುಪಟ್ಟು ಹೆಚ್ಚು ಕೆಲಸ ಮಾಡಿ, ಅನುದಾನ ನೀಡಿ ತೋರಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಹಿಂದಿನ ಬಿಜೆಪಿ ಸರ್ಕಾರ ನೀರಾವರಿ ಯೋಜನೆಗಳಿಗೆ ರೂ.18 ಸಾವಿರ ಕೋಟಿ ನೀಡಿದ್ದರೆ, ನಮ್ಮ ಈಗಿನ ಸರ್ಕಾರದ ಅವಧಿಯಲ್ಲಿ ಈಗಾಗಲೇ ರೂ.53 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಇದನ್ನು ತುಲನೆ ಮಾಡಿದಾಗ ನೀರಾವರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ನಾವು ಎಷ್ಟು ಮುಂದಿದ್ದೇವೆ ಎಂದು ತಿಳಿಯುತ್ತದೆ,” ಎಂದರು.
ಮುಂದುವರೆದು, “30 ವರ್ಷಗಳಿಂದ ನೆನೆಗುದಿಗೆ ಬಿದ್ದದ್ದ ಉಡುಪಿಯ ವಾರಾಹಿ ಯೋಜನೆಯನ್ನು ನಾವು ಪೂರ್ಣಗೊಳಿಸಿದ್ದೇವೆ. ಭದ್ರ ಮೇಲ್ದಂಡೆ, ಸಿಂಗಟಾಲೂರು, ಎತ್ತಿನಹೊಳೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಲಪ್ರಭಾ, ಕೃಷ್ಣಾ, ಕಾವೇರಿ ನಾಲೆಗಳ ಆಧುನೀಕರಣ ಮಾಡುತ್ತಿದ್ದೇವೆ. ನಾರಾಯಣಪುರ ಎಡದಂಡೆ ಕಾಲುವೆಗಳ ಆಧುನೀಕರಣಕ್ಕೆ ರೂ.3,800 ಕೋಟಿ ನೀಡಿದ್ದೇವೆ.”
“ಮಹದಾಯಿ ನದಿಯ 7 ಟಿ.ಎಂ.ಸಿ. ನೀರಿಗಾಗಿ ನಾಲ್ಕು ಜಿಲ್ಲೆಗಳಲ್ಲಿ ಹೋರಾಟ ನಡೆಯುತ್ತಿದೆ. ವಿಜಯಪುರ ಜಿಲ್ಲೆಯ ಅತ್ಯಂತ ಎತ್ತರದ ಪ್ರದೇಶ ತಿಕೋಟಾ ಹೋಬಳಿಗೆ ತುಬಚಿ-ಬಬಲೇಶ್ವರ ಯೋಜನೆಯಲ್ಲಿ 6.5 ಟಿ.ಎಂ.ಸಿ. ನೀರೊದಗಿಸಿ, ರೂ.3,800 ಕೋಟಿ ಅನುದಾನ ನೀಡಿದ್ದೇವೆ. ಇದಕ್ಕೆ ಕಾರಣ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು. ಅವರು ಈ ಭೂಮಿಗೆ ಒಂದು ಬೊಗಸೆ ನೀರು ಕೊಟ್ಟರೆ, ಇದು ಅಮೇರಿಕಾದ ಕ್ಯಾಲಿಫೋರ್ನಿಯಾವನ್ನು ಮೀರಿಸುತ್ತದೆ ಎಂದು 13-14 ವರ್ಷಗಳ ಹಿಂದೆ ಇದೇ ತಿಕೋಟಾದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.ಅವರ ಮಾತನ್ನು ಪಾಲಿಸಿದ ತೃಪ್ತಿ ನನಗಿದೆ,”ಎಂದರು.