ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಿದ ಕೈಗೆ 2 ಚಿನ್ನದ ಪದಕ.
ಬೆಳಗಾವಿ:ಕಳೆದ ಒಂದು ದಶಕಗಳಿಂದ ಕಬ್ಬಿನ ಗದ್ದೆಯಲ್ಲಿ ಕೂಲಿ ಕೆಲಸ ಮಾಡುತ್ತಲೇ ಸ್ನಾತಕೋತ್ತರ ವಿಭಾಗದಲ್ಲಿ 2 ಚಿನ್ನದ ಪದಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಿದ್ದಾಪುರ ಗ್ರಾಮದ ಸದಾಶಿವ ಗಾಣಿಗೇರ.
ನಿನ್ನೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ 6ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ 2 ಚಿನ್ನದ ಪದಕ ಪಡೆದ ನಂತರ ಮಾತನಾಡಿದ ಸದಾಶಿವ ಗಾಣಿಗೇರ ತಮ್ಮ ಒಡಲಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ ‘ಹಂಗಾಮಿನಲ್ಲಿ ಕಬ್ಬು ಕಡಿಯುತ್ತೇನೆ. ರಜಾ ದಿನಗಳಲ್ಲಿ ಬೇರೆ ಬೇರೆ ಕೂಲಿ ಮಾಡಿಕೊಂಡು ಓದುತ್ತಿದ್ದೇನೆ.ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿದ್ದೇನೆ. ಭವಿಷ್ಯದಲ್ಲಿ ಪಿಜಿ,ಪಿ.ಎಚ್ಡಿ ಮುಗಿಸಿ ಉಪನ್ಯಾಸಕನಾಗಬೇಕೇಂದಿದ್ದೇನೆ”ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
‘ನಮ್ಮದು ಸ್ವಂತ ಇಂದಿಂಚು ಗದ್ದೆ ಇಲ್ಲಾ,ಬೇರೆಯವರ ಗದ್ದೆಗಳಲ್ಲಿ ಕೂಲಿ ಮಾಡಿದರಷ್ಟೇ ನಮ್ಮ ಜೀವನ ನಡೆಯುತ್ತದೆ,ಅಪ್ಪ– ಅಮ್ಮ ಕೂಲಿಗೆ ಹೋಗುತ್ತಿದ್ದರು. ನಾನು 6ನೇ ತರಗತಿಯಲ್ಲಿದ್ದಾಗ ಅಪ್ಪನಿಗೆ ಶಸ್ತ್ರಚಿಕಿತ್ಸೆ (ಕಿಡ್ನಿ ಸ್ಟೋನ್) ಆಯಿತು. ನಂತರ ಅವರಿಂದ ಕೆಲಸ ಮಾಡಲಾಗುತ್ತಿಲ್ಲ. ಹೀಗಾಗಿ, ನಾನು ಆಗಿನಿಂದಲೂ ದುಡಿಯುತ್ತಿದ್ದೇನೆ. ಕಬ್ಬು ಕಡಿಯುವ ಕೆಲಸ 4ರಿಂದ 5 ತಿಂಗಳವರೆಗೆ ಸಿಗುತ್ತದೆ. ಆಗ ನಿತ್ಯ 300 ರಿಂದ 400 ರುಪಾಯಿ ಗಳಿಸುತ್ತೇನೆ. ಈ ಹಣದಲ್ಲಿ ಕಾಲೇಜಿನ ಹಾಗೂ ಮನೆ ಖರ್ಚು ನೋಡಿಕೊಳ್ಳುತ್ತೇನೆ. ಕಬ್ಬಿನ ಹಂಗಾಮು ಮುಗಿದ ನಂತರದ ದಿನಗಳಲ್ಲಿ ಕಾಲೇಜಿಗೆ ಹೋಗುತ್ತಿದ್ದೆ. ರಜೆಯಲ್ಲಿ ಕೂಲಿ ಮಾಡುತ್ತಿದ್ದೆ. ರಾತ್ರಿ ವೇಳೆ ಓದಿಕೊಳ್ಳುತ್ತಿದ್ದೆ’ ಎಂದು ಕಬ್ಬಿನ ಗರಿಗಳು ಕೊಯ್ದಿರುವ ಕೈಯನ್ನು ತೋರಿಸಿ ಭಾವುಕರರಾದರು ಸದಾಶಿವ.
‘ಮನೆತನ ಸಾಗುವಗೋಸ್ಕರ ಅಪ್ಪ ಮಾಡಿದ ಒಂದಿಷ್ಟು ಸಾಲ ತೀರಿಸುವ ಜವಾಬ್ದಾರಿಯೂ ನನ್ನ ಮೇಲಿದೆ. ಇದಕ್ಕಾಗಿ ದುಡಿಯಲೇಬೇಕಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದೆ. ಹಾರೂಗೇರಿಯ ಎಸ್ವಿಎಸ್ ಕಾಲೇಜಿನಲ್ಲಿ ಪದವಿಯಲ್ಲಿ ಉನ್ನತ ಶ್ರೇಣಿ ಗಳಿಸಿದ್ದೆ. ಬಿ.ಇಡಿ ಕೂಡ ಮಾಡಿದ್ದೇನೆ.ನಾನು ಕುಟುಂಬದ ಮೊದಲ ಪದವೀಧರ ಹಾಗೂ ಅಕ್ಷರಸ್ಥನೂ ಹೌದು. ನಾನು ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎನ್ನುವುದೂ ಗೊತ್ತಿಲ್ಲದಷ್ಟು ಮುಗ್ಧರು ನನ್ನ ತಂದೆ ತಾಯಿ’ ಎಂದು ಹೇಳಿದರು.