UK Suddi
The news is by your side.

“ಬದುಕಿನಲ್ಲಿ ಬೆಂದವ,ಬಾಳಿನಲ್ಲಿ ಅನುಭವ ಹೊಂದಿರುವವರು ಬೇಂದ್ರೆ ಆಗಲು ಸಾಧ್ಯ”:ಅಂಬಿಕಾತನಯದತ್ತ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಿದರಿ.

ಧಾರವಾಡ:ಸಾಧನಕೇರಿಯ ಬೇಂದ್ರೆ ಭವನದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ 2018ರ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಬಾಗಲಕೋಟ ಜಿಲ್ಲೆ ಬೀಳಗಿಯ ಸಿದ್ದಪ್ಪ ಬಿದರಿಯವರಿಗೆ ನಾಡೋಜ ಚನ್ನವೀರ ಕಣವಿ ನೀಡಿ ಗೌರವಿಸಿದರು. ಪ್ರಶಸ್ತಿಯು 1 ಲಕ್ಷ ರೂ.ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿದ ನಂತರ ಸಿದ್ದಪ್ಪ ಬಿದರಿ ಮಾತನಾಡಿ, “ಬದುಕಿನಲ್ಲಿ ಬೆಂದವ,ಬಾಳಿನಲ್ಲಿ ಅನುಭವ ಹೊಂದಿರುವವರು ಬೇಂದ್ರೆ ಆಗಲು ಸಾಧ್ಯ.ನನ್ನ ಕವಿತೆ,ಸಾಹಿತ್ಯ ಗುರುತಿಸಿ,ಬೆಳೆಸಿದ ಸಹೃದಯರಿಗೆ ಕೃತಜ್ಞತೆ ಸಲ್ಲಿಸಿದ ಅವರು ತಮ್ಮದೇ ಹಾಡುಗಳನ್ನು ಹೇಳಿ ಕಾವ್ಯಾಸಕ್ತರನ್ನು ಹಿಡಿದಿಟ್ಟರು”ಎಂದು ಹೇಳಿದರು.

ಡಾ.ಸಂಗಮನಾಥ ಲೋಕಾಪುರ ಮಾತನಾಡಿ,ಕವಿಯೂ ಕೂಡ ಸಹಜ ಮಾನವ.ಆದರೆ ಎಲ್ಲ ಮಾನವರೂ ಕವಿಗಳಲ್ಲ.ಕಾವ್ಯ ರಚನೆಗೆ ಬೇಕಾದ ಪಾಂಡಿತ್ಯ, ಪ್ರತಿಭೆ ನಿರಂತರವಾಗಿ ಚಲನೆಯಲ್ಲಿಟ್ಟುಕೊಂಡಿರುವವರು ಕವಿಗಳಾಗುತ್ತಾರೆ. ಕಾವ್ಯ ಕಟ್ಟುವದು ಸಹಜ ಕ್ರಿಯೆ ಎಂಬಂತೆ ಕಾವ್ಯ ರಚಿಸಿರುವ ಸಿದ್ದಪ್ಪ ಬಿದರಿಯವರು ೨೮ ವರ್ಷಗಳಲ್ಲಿ  ಸಾವಿರಾರು ಕವಿತೆಗಳನ್ನು ರಚಿಸಿ ದಾಖಲೆಗೈದಿದ್ದಾರೆ.ಕರ್ನಾಟಕದ ದಿಗ್ಗಜ ಕವಿಗಳು ಬಿದರಿಯವರ ಸಾಹಿತ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ.ಬೇಂದ್ರಯವರಿಗೆ ಹೆಮ್ಮೆ,ಖುಷಿ ಕೊಡುವಂತಹ ಕವಿಯನ್ನು ಗುರುತಿಸಿ ಗೌರವಿಸಿರುವದು ಸ್ವಾಗತಾರ್ಹ ಎಂದರು.

ಡಾ.ದ ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ”ಬೇಂದ್ರೆ ಎಂದರೆ ತಾಯ್ತನದ ತುಡಿತ,ಅವರ ಸಮಷ್ಟಿ ಪ್ರಜ್ಞೆಯ ಜೊತೆ ಅನುಸಂಧಾನ ಕ್ರಿಯೆ ನಿರಂತರವಾಗಿರಬೇಕು.ಬೇಂದ್ರೆ ಅವರ ಜನಪ್ರಿಯ ಕವಿತೆಗಳನ್ನು ದಾಟಿ ಅವರ  ಕೃತಿಗಳ ಮೇಲೆ ಬೆಳಕು ಚೆಲ್ಲುವ ,ಮೌಲ್ಯಮಾಪನ ಕಾರ್ಯ ನಡೆಯಬೇಕು” ಎಂದರು.

‌ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದರು.ಡಾ. ದ ರಾ ಬೇಂದ್ರೆ ಟ್ರಸ್ಟಿನ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Comments