UK Suddi
The news is by your side.

ಸಾರಿಗೆ ಸಂಸ್ಥೆ ಸಿಬ್ಬಂದಿ ಶುಚಿತ್ವದೆಡೆಗೆ ಗಮನಹರಿಸಿದ್ದು ಶ್ಲಾಘನೀಯ:ಜಿಲ್ಲಾ ಪ್ರದಾನ ನ್ಯಾಯಾಧೀಶ ರಾಮಚಂದ್ರ ಹುದ್ದಾರ.

ಧಾರವಾಡ :ದಿನ ನಿತ್ಯ ಜನಸಾಗರದಿಂದ ಕೂಡಿರುವ ಬಸ್ ನಿಲ್ದಾಣಗಳಲ್ಲಿ ಸಾಮಾಜಿಕ ಸಂದೇಶಗಳನ್ನು ಬಿತ್ತರಿಸಲು ಉತ್ತಮ ಅವಕಾಶ ನೀಡುತ್ತವೆ. ಬೇರೆ ಬೇರೆ ಜಾಹೀರಾತು ಬಳಕೆಗಿಂತ ನೈಸರ್ಗಿಕ ಸಂಪನ್ಮೂಲ, ಪರಿಸರ, ಸ್ವಚ್ಚತೆ, ಶುಚಿತ್ವದ ಸಂದೇಶ ಸಾರುವ ಸಂದೇಶವಾಹಕಗಳನ್ನಾಗಿ ಬಸ್ ನಿಲ್ದಾಣಗಳನ್ನು ಬಳಸಿಕೊಳ್ಳಬೇಕೆಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಹೇಳಿದರು.
ಅವರು ಇಂದು ಧಾರವಾಡ ನಗರ ಬಸ್ ನಿಲ್ದಾಣದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆಯೋಜಿಸಿದ್ದ ‘ನಮ್ಮ ಬಸ್ ನಮ್ಮ ನಿಲ್ದಾಣ’ ಸ್ವಚ್ಛತೆಗಾಗಿ ಜನಾಂದೋಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 

 

ಸಾರಿಗೆ ಸಂಸ್ಥೆ ಸಿಬ್ಬಂದಿ ಶುಚಿತ್ವದೆಡೆಗೆ ಗಮನಹರಿಸಿದ್ದು ಶ್ಲಾಘನೀಯ. ದಿನನಿತ್ಯ ಲಕ್ಷಾಂತರ ಜನ ಬೇರೆ ಬೇರೆ ಸ್ಥಳಗಳಿಂದ ಬಸ್ ನಿಲ್ದಾಣಕ್ಕೆ ಬಂದು ಸೇರುತ್ತಾರೆ. ಪ್ಲಾಸ್ಟಿಕ್ ಬಾಟಲ್, ಪೇಪರ್, ಕಸ್ ಕಡ್ಡಿ ಹೀಗೆ ವಿವಿಧ ತ್ಯಾಜ್ಯಗಳನ್ನು ಯಾವುದೇ ಭಯವಿಲ್ಲದೇ ಎಲ್ಲೆಡೆ ಬಿಸಾಡುತ್ತಾರೆ. ಇದರಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಬಸ್ ನಿಲ್ದಾಣಗಳನ್ನು ಸಾರ್ವಜನಿಕರಿಗೆ ಸ್ವಚ್ಛತೆ, ಶುಚಿತ್ವದ ಅರಿವು ಮೂಡಿಸಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಮಾಹಿತಿಗಳನ್ನು ಅಳವಡಿಸಿ, ಸಾರ್ವಜನಿಕರಿಗೆ ತಿಳುವಳಿಕೆ ಉಂಟು ಮಾಡಬೇಕೆಂದು ಅವರು ಹೇಳಿದರು. 
ಬಸ್ ನಿರ್ವಾಹಕರು ಮತ್ತು ಚಾಲಕರು ತಾವು ಉಪಯೋಗಿಸುವ ಬಸ್, ಬಸ್ ನಿಲ್ದಾಣ, ವಿಶ್ರಾಂತಿ ಗೃಹಗಳನ್ನು ಸದಾ ಸ್ವಚ್ಛವಾಗಿ ಇಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ಹಿರಿಯ ಜಿಲ್ಲಾ ನ್ಯಾಯಾಧೀಶ ಎಸ್.ಎಸ್.ಬಳ್ಳೊಳ್ಳಿ ಅವರು ಮಾತನಾಡಿ, ನಮ್ಮ ಮನೆ, ಕಚೇರಿಗಳೊಂದಿಗೆ ಮನಸ್ಸಿನ ಸ್ವಚ್ಛತೆಗೂ ಆದ್ಯತೆ ನೀಡಬೇಕಾಗಿದೆ. ಸ್ವಚ್ಛ ಮನಸ್ಸಿನಿಂದ ಇದ್ದರೆ ಮಾತ್ರ ಸ್ವಚ್ಛತೆ, ಶುಚಿತ್ವಕ್ಕೆ ಗಮನಹರಿಸಲು ಸಾಧ್ಯ ಎಂದು ತಿಳಿಸಿದರು. 

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಗಳೂರು ನಗರ ವಾಯು ಮಾಲಿನ್ಯ, ಪರಿಸರ ಮಾಲಿನ್ಯದಿಂದ ತುಂಬಿ ಅನೇಕ ರೋಗಗಳಿಗೆ ಅಲ್ಲಿನ ಜನ ಬಲಿಯಾಗುತ್ತಿದ್ದಾರೆ. ಅವಳಿನಗರದಲ್ಲಿ ದಿನೇ ದಿನೇ ಸಂಚಾರ ದಟ್ಟಣೆ, ಸಾರಿಗೆ ವಾಹನಗಳು ಹೆಚ್ಚುತ್ತಿವೆ. ಅವಳಿ ನಗರ ಬೆಳೆಯುತ್ತಿದೆ. ಅದರೊಂದಿಗೆ ಸ್ವಚ್ಛತೆ, ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಮಾಡುವುದು ನಮ್ಮ ಕರ್ತವ್ಯ. ಸಾರಿಗೆ ಸಂಸ್ಥೆ ಬಸ್ ಡೇ, ನಮ್ಮ ಬಸ್ ನಮ್ಮ ನಿಲ್ದಾಣ ಮುಂತಾದ ವಿನೂತನ ಕಾರ್ಯಕ್ರಮಗಳ ಮೂಲಕ ಪರಿಸರ ಸ್ನೇಹಿ ಜನಹಿತ ಸಾರಿಗೆಗೆ ಪ್ರಯತ್ನಿಸುತ್ತದೆ. ಅವಳಿ ನಗರದ ನಾಗರೀಕರು ಸ್ವಚ್ಛತೆ ಕಾಪಾಡಲು ಕೈಜೋಡಿಸುವ ಮೂಲಕ ಸಹಕಾರ ನೀಡಬೇಕೆಂದು ಹೇಳಿದರು. 

ಸ್ವಚ್ಛತೆಗಾಗಿ ಆಂದೋಲನದಲ್ಲಿ ವಿಭಾಗೀಯ ಸಂಚಾರ ಅಧಿಕಾರಿ ಎಸ್.ಬಿ.ಚನ್ನಪ್ಪಗೌಡರ, ಧಾರವಾಡ ಬಸ್ ಘಟಕ ವ್ಯವಸ್ಥಾಪಕ ಆರ್.ಬಿ.ರೂಡೆ,ಸಾರಿಗೆ ಘಟಕದ ಸಿಬ್ಬಂದಿ, ಅಧಿಕಾರಿಗಳು, ಚಾಲಕರು, ನಿರ್ವಾಹಕರು ಮತ್ತು ಪರಿಸರ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. 

Comments