UK Suddi
The news is by your side.

ಗರಗ: ಲಿಂ.ಶ್ರೀ ಜಗದ್ಗುರು ಮಡಿವಾಳ ಶಿವಯೋಗಿಗಳ ಮಹಾರಥೋತ್ಸವ ಸಂಭ್ರಮ


ಉಪ್ಪಿನ ಬೆಟಗೇರಿ: ನಾಡಿನಾದ್ಯಂತ ಹರಿದು ಬಂದ ಅಪಾರ ಭಕ್ತ ಸಾಗರದ ಭಕ್ತಿಯ ಜಯಘೋಷ, ರಥೋತ್ಸವವಕ್ಕೆ ಉತ್ತತ್ತಿ, ಲಿಂಬೆ, ಬಾಳೆಹಣ್ಣುಗಳ ಸಮರ್ಪಣೆಯ ಭಕ್ತಿಯ ಪರಾಕಾಷ್ಠೆಯೊಂದಿಗೆ ಗರಗದ ಶ್ರೀ ಗುರು ಮಡಿವಾಳ ಶಿವಯೋಗಿಗಳವರ ಮಹಾರಥೋತ್ಸವವು ಶನಿವಾರದಂದು ಶೃದ್ಧಾ ಭಕ್ತಿಯೊಂದಿಗೆ ಸಂಭ್ರಮದಿಂದ ಜರುಗಿತು.

ವೈರಾಗ್ಯ ಚಕ್ರವರ್ತಿ ಲಿಂ.ಶ್ರೀ ಜಗದ್ಗುರು ಮಡಿವಾಳ ಶಿವಯೋಗಿಗಳವರ 137 ನೇ ಪುಣ್ಯಾರಾಧನೆಯ ಜಾತ್ರಾ ಮಹೋತ್ಸವದ ಈ ರಥೋತ್ಸವಕ್ಕೆ ಸಾಯಂಕಾಲ 5 ಗಂಟೆಗೆ ಶ್ರೀ ಮಡಿವಾಳೇಶ್ವರ ಮಠದ ಪೂಜ್ಯರಾದ ಚನ್ನಬಸವ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಉಪ್ಪಿನ ಬೆಟಗೇರಿ ಮೂರುಸಾವಿರ ವಿರಕ್ತಮಠದ ಪೂಜ್ಯ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ, ಬೈಲಹೊಂಗಲ ಮೂರುಸಾವಿರ ಮಠದ ಪೂಜ್ಯ ಪ್ರಭು ನೀಲಕಂಠ ಮಹಾಸ್ವಾಮೀಜಿ, ಹುಬ್ಬಳ್ಳಿ ರುದ್ರಾಕ್ಷಿ ಮಠದ ಪೂಜ್ಯ ಬಸವಲಿಂಗ ಮಹಾಸ್ವಾಮೀಜಿ, ಬೈಲಹೊಂಗಲ ಮಡಿವಾಳೇಶ್ವರ ಮಠದ ಪೂಜ್ಯ ಮಡಿವಾಳ ಸ್ವಾಮೀಜಿ ಸೇರಿದಂತೆ ನಾಡಿನಾದ್ಯಂತ ಆಗಮಿಸಿದ್ದ ಸುಮಾರು 34 ಕ್ಕೂ ಹೆಚ್ಚು ಪೂಜ್ಯರ ಸಾನಿಧ್ಯದಲ್ಲಿ ಮತ್ತು ಶ್ರೀ ಮಡಿವಾಳೇಶ್ವರ ಕಲ್ಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಅಶೋಕ ದೇಸಾಯಿ, ಜಿ.ಪಂ.ಮಾಜಿ ಸದಸ್ಯ ಅಮೃತ ದೇಸಾಯಿ ಹಾಗೂ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ರಥೋತ್ಸವಕ್ಕೆ ಪೂಜೆ ಸಲ್ಲಿಸುವದರೊಂದಿಗೆ ಚಾಲನೆ ನೀಡಲಾಯಿತು.

ರಥೋತ್ಸವ ಮುಂದೆ ಸಾಗಿದಂತೆ ಹರ ಹರ ಮಹಾದೇವ, ಹರ ಹರ ಮಹಾದೇವ, ಶ್ರೀ ಮಡಿವಾಳೇಶ್ವರ ಮಹಾರಾಜ ಕೀ ಜೈ, ಶ್ರೀ ಮಡಿವಾಳೇಶ್ವರ ಮಹಾರಾಜ ಕೀ ಜೈ ಎಂಬ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. 1 ಲಕ್ಷದ 1 ರುದ್ರಾಕ್ಷಿಗಳ ಬೃಹತ್ ಮಾಲೆ, ಶೇವಂತಿಗೆ ಮತ್ತು ಗುಲಾಬಿ ಹೂಗಳ ಮಾಲೆಯೊಂದಿಗೆ ಅಲಂಕೃತಗೊಂಡಿದ್ದ ರಥೋತ್ಸವದಲ್ಲಿ ವಿರಾಜಮಾನರಾಗಿದ್ದ ವೈರಾಗ್ಯ ಚಕ್ರವರ್ತಿ ಲಿಂ.ಜಗದ್ಗುರು ಮಡಿವಾಳ ಶಿವಯೋಗಿಗಳವರ ಭವ್ಯ ಮೂರ್ತಿಯೊನ್ನೊಳಗೊಂಡ ರಥೋತ್ಸವವು ಅಂದಾಜು ಒಂದು ಲಕ್ಷಕ್ಕಿಂತಲೂ ಅಧಿಕ ಜನಸಾಗರದ ಮಧ್ಯೆ ಸಾಗಿತು. ರಥೋತ್ಸವದ ಮುಂದೆ ಪಲ್ಲಕ್ಕಿ ಉತ್ಸವ, ಭಜನಾ ಮೇಳ, ಜಾಂಜ್ ಮೇಳ, ಡೊಳ್ಳು ಕುಣಿತ ಸೇರಿದಂತೆ ಹಲವಾರು ಮಂಗಳ ವಾದ್ಯಗಳ ನಿನಾದ ಮಾರ್ದನಿಸಿತು.

ಚಕ್ಕಡಿ, ಟ್ರ್ಯಾಕ್ಟರ್, ಕಾರು, ದ್ವಿಚಕ್ರ ವಾಹನ, ಬಸ್, ಟಂ ಟಂ ವಾಹನ ಹಾಗೂ ಕಾಲ್ನಡಿಗೆಯ ಮೂಲಕ ಸಾಗರೋಪಾದಿಯಲ್ಲಿ ಸದ್ಭಕ್ತರು ಜಾತ್ರೆಗೆ ಆಗಮಿಸಿ ಶಿವಯೋಗಿಗಳ ದರ್ಶನ ಭಾಗ್ಯ ಪಡೆದು ಪುನೀತರಾದರು. ಭಕ್ತಾದಿಗಳಿಗೆ ಭಕ್ತರ ದೇಣಿಗೆಯಿಂದಲೇ ಬೆಳಿಗ್ಗೆ 11 ಗಂಟೆಯಿಂದಲೇ ನಿರಂತರ ಅನ್ನ ದಾಸೋಹ ಜರುಗಿತು. ರಥೋತ್ಸವಕ್ಕೆ ಕೊಲ್ಲಾಪೂರ, ಸಾಂಗ್ಲಿ, ಬೀದರ, ಹುಬ್ಬಳ್ಳಿ, ಧಾರವಾಡ, ಡಾವಣಗೇರಿ, ಬೈಲಹೊಂಗಲ, ಬ್ಯಾಡಗಿ, ರಾಣೆಬೆನ್ನೂರ, ಮುದೇನೂರ, ಅಣ್ಣಿಗೇರಿ, ಗದಗ, ರೋಣ, ನವಲಗುಂದ, ಕುಂದಗೋಳ, ಸಂಶಿ, ಶಿಶುನಾಳ, ಹಾವೇರಿ, ಹಳಿಯಾಳ, ದಾಂಡೇಲಿ ಹಾಗೂ ಗರಗ ಗ್ರಾಮದ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಎಲ್ಲ ಸಮುದಾಯದ ಸದ್ಭಕ್ತರು ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಿಸಿದರು.

ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ ಲಿಂ.ಜಗದ್ಗುರು ಶ್ರೀ ಮಡಿವಾಳೇಶ್ವರರ ಕರ್ತೃ ಗದ್ಗುಗೆಗೆ 240 ಕ್ಕೂ ಅಧಿಕ ಭಕ್ತರಿಂದ ವಿಶೇಷ ಅಭಿಷೇಕ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭಜನಾ ಸಪ್ತಾಹವನ್ನು ಇಂದು ಸಂಪನ್ನಗೊಳಿಸಲಾಯಿತು. ಫೆ.4, 5 ಮತ್ತು 6 ರಂದು ಬಯಲು ಕುಸ್ತಿಗಳು ಜರುಗಲಿದ್ದು, 7 ರಂದು ಖಾಲಿ ಗಾಡಾ ಓಡಿಸುವ ಸ್ಪರ್ಧೆ, 8 ರಂದು ಟಗರಿನ ಕಾಳಗ ಹಾಗೂ ಟ್ರ್ಯಾಕ್ಟರ ರಿವರ್ಸ ನಡೆಸುವ ಸ್ಪರ್ಧೆ ಸೇರಿದಂತೆ ಜಾತ್ರಾ ಮಹೋತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳು ಜರುಗಲಿವೆ.

  • C. M. ಲಗಮನ್ನವರ್

Comments