ಜೀವನದಲ್ಲಿ ಸಂಘರ್ಷ,ದುಃಖ,ಕಷ್ಟಗಳನ್ನು ಎದುರಿಸಬೇಕಾದರೆ, ಒಳ್ಳೆಯ ಚಿಂತನೆ ಮಾಡಬೇಕು:ಬಾಬಾ ರಾಮದೇವ್
ಹೊಸಪೇಟೆ: ಜೀವನದಲ್ಲಿ ಸಂಘರ್ಷ, ದುಃಖ, ಕಷ್ಟಗಳು ಸಹಜ. ಅವುಗಳನ್ನು ಎದುರಿಸಬೇಕಾದರೆ, ಒಳ್ಳೆಯ ಚಿಂತನೆ ಮಾಡಬೇಕು ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ್ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್, ಪತಂಜಲಿ ಕಿಸಾನ್ ಸೇವಾ ಸಮಿತಿಯಿಂದ ಭಾನುವಾರ ಏರ್ಪಡಿಸಿದ್ದ ಯೋಗಧೀಕ್ಷೆ ಮತ್ತು ರಾಷ್ಟ್ರ ನಿರ್ಮಾಣ ಉಪನ್ಯಾಸ ಕಾರ್ಯಕ್ರಮದಲ್ಲಿ ಯೋಗಸಾಧನೆಯೊಂದಿಗೆ ಆಸನಗಳ ಬಗ್ಗೆ ವಿವರಿಸಿದರು.
ಕೆಟ್ಟ ಚಿಂತನೆಗಳನ್ನು ಮಾಡಿದರೆ, ಸದಾ ಗೊಂದಲ, ಸ್ಪಷ್ಟತೆಯ ಕೊರತೆ, ಭಯದ ವಾತಾವರಣದಲ್ಲಿ ಜೀವಿಸಬೇಕಾಗುತ್ತದೆ. ಕೆಲ ಸಮಯದಲ್ಲಿ ಸಿಟ್ಟು, ಕೋಪ ಬಂದರೂ ನಿಯಂತ್ರಿಸಬೇಕು. ಇಲ್ಲವಾದರೆ, ಮೆದುಳು, ಹೃದಯ ದುರ್ಬಲಗೊಳ್ಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಈ ಎಲ್ಲ ಸಮಸ್ಯೆಗಳಿಗೆ ನಿತ್ಯ ಯೋಗಾಸನ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ, ಮನುಷ್ಯ ನಿರಾಶಾವಾದಿಯಾದರೆ ಮೃತ್ಯುವಿಗೆ ಸಮ. ಆಶಾಜೀವಿಯಾಗಿರಬೇಕು ಎಂದು ಸಲಹೆ ನೀಡಿದರು.
ಸಿಟ್ಟು, ಕೋಪ ಮಾಡಿಕೊಳ್ಳುವದರಿಂದ ಹೃದಯ, ಮೆದುಳು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನಿತ್ಯ ಸಕಾರಾತ್ಮಕ ಚಿಂತನೆಗಳನ್ನು ಮಾಡಲು ಯೋಗಾಭ್ಯಾಸ ಸಹಕಾರಿಯಾಗಲಿದೆ ಎಂದು ಯೋಗಗುರು ಬಾಬಾ ರಾಮದೇವ ಹೇಳಿದರು.
ಪ್ರತಿಯೊಬ್ಬರೂ ನಿತ್ಯ ಬಸಿಕಾ, ಕಪಾಲಬಾತಿ, ಅನಲೋಮಾ ವಿಲೋಮಾ, ಬ್ರಾಹ್ಮರಿ, ಸೂರ್ಯನಮಸ್ಕಾರ ಸೇರಿ ಕನಿಷ್ಠ ಐದು ಆಸನಗಳನ್ನಾದರೂ ಮಾಡಬೇಕು. ಕಪಾಲಬಾತಿ ಮಾಡುವುದರಿಂದ ಉಸಿರಾಟ, ಥೈರಾಯಿಡ್, ಆಸಿಡಿಟಿ ಸಮಸ್ಯೆ ದೂರವಾಗಲಿದೆ. ನಿದ್ದೆ ಚೆನ್ನಾಗಿ ಮಾಡಬಹುದು. ಜತೆಗೆ ಮುಖದಲ್ಲಿ ಕಾಂತಿ ಹೆಚ್ಚಾಗಿ ಸೌಂದರ್ಯವೂ ವೃದ್ಧಿಯಾಗಲಿದೆ ಎಂದು ವಿವರಿಸಿದರು.
ಪ್ರಸ್ತುತ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ ಅಭಿವೃದ್ದಿಯಾಗಿದೆ. ಆದರೆ, ಒಳ್ಳೆಯ ಕೆಲಸಕ್ಕೆ ಬಳಸದ ತಂತ್ರಜ್ಞಾನವನ್ನು ಶೇ.90 ರಷ್ಟು ಅಶ್ಲೀಲ ಚಿತ್ರ ವೀಕ್ಷಿಸಲು ಬಳಸಲಾಗುತ್ತಿದೆ. ಹಿರಿಯರು ಹೇಳಿಕೊಟ್ಟಿದ್ದ ಕೆಟ್ಟದ್ದನ್ನು ನೋಡಬಾರು, ಕೇಳಬಾರದು, ಮಾತನಾಡಬಾರದು ಎಂಬ ಸಣ್ಣ ಸಣ್ಣ ವಿಷಯಗಳನ್ನು ಇಂದು ಮರೆಯಲಾಗುತ್ತಿದೆ. ಅವುಗಳನ್ನು ಈಗ ಪುನಃ ಹೇಳಿಕೊಡಬೇಕಾಗಿದೆ ಎಂದು ತಿಳಿಸಿದರು.
ಬಹುರಾಷ್ಟ್ರೀಯ ಕಂಪನಿಗಳ ಉತ್ಪಾನೆಗಳನ್ನು ಖರೀದಿಸುವುದರಿಂದ ಅದರಿಂದ ಬರುವ ಕೋಟ್ಯಾಂತರ ರೂ. ವಿದೇಶಕ್ಕೆ ಹೋಗುತ್ತದೆ ಎಂದ ಬಾಬಾ ರಾಮದೇವ, ಸ್ವದೇಶಿ ನಿರ್ಮಿತ ಪತಂಜಲಿ ಸಂಸ್ಥೆಯಿಂದ ದಂತಕಾಂತಿ, ಕೇಶಕಾಂತಿ ಸೇರಿ ಹಲವು ಉತ್ಪಾದನೆಗಳನ್ನು ಸಿದ್ಧಪಡಿಸಲಾಗಿದೆ. ಅವುಗಳನ್ನು ಖರೀದಿಸುವುದರಿಂದ ವಿದೇಶಕ್ಕೆ ಹೋಗುವ ಹಣ ದೇಶದಲ್ಲೇ ಉಳಿಯಲಿದ್ದು, ಈ ಹಣದಿಂದ ಗೋಶಾಲೆ, ಧರ್ಮಶಾಲೆ, ಶಾಲೆಯನ್ನು ತೆರೆಯುವ ಮೂಲಕ ದೇಶದ ಸೇವೆ ಮಾಡಲಾಗುತ್ತಿದೆ. ವಿದೇಶಿ ಕಂಪನಿಗಳಿಂದ ಸೇವೆಯನ್ನು ನಿರೀಕ್ಷಿಸುವಂತಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆನಂದ್ಸಿಂಗ್, ಪತಂಜಲಿ ಯೋಗ ಸಮಿತಿಯ ಬವರ್ಲಾಲ್ ಆರ್ಯ, ಕವಿತಾ ಈಶ್ವರ್ಸಿಂಗ್, ಕೆ.ಬಿ.ಶ್ರೀನಿವಾಸರೆಡ್ಡಿ ಸೇರಿದಂತೆ ಸಮಿತಿಯ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.
ವರದಿ:ಮಂಜುನಾಥ ಅಯ್ಯಸ್ವಾಮಿ