UK Suddi
The news is by your side.

ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರು ಯಾರು? 

ಹೃದಯದ ಹೃದಯವೆ,
ಯಾಕೋ ಗೊತ್ತಿಲ್ಲ ಎಲ್ಲ ಹುಡುಗರಂತೆ ನೀನಿಲ್ಲ. ರೋಡ್ ರೋಮಿಯೋನಂತೆ ತಿರುಗುತ್ತ ಹುಡುಗಿಯರಿಗೆ ಕಾಳು ಹಾಕುವ ಚಟ ನಿನಗೆ ಇಲ್ಲವೇ ಇಲ್ಲ. ಅದೇ ಗುಣ ನನ್ನನ್ನು ನಿನ್ನ ಎದೆಯ ತಾಳ ಕೇಳುವಂತೆ ಮಾಡಿತೇನೋ. ಹೆಣ್ಮಕ್ಕಳ ವಿಷಯದಲ್ಲಿ ನೀನು ತುಂಬಾ ನಿಟ್ಕಟ್ಟು. ಹುಡುಗಿಯರ ಸಿಂಗಾರ ವಯ್ಯಾರ ಬೆಡಗು ಬಿನ್ನಾಣಗಳಿಗೆ ನಿನ್ನದು ಡೋಂಟ್ ಕೇರ್ ಮೆಂಟ್ಯಾಲಿಟಿ. ಹಾಗಂತ ನೀನು ಅರಸಿಕನೇನಲ್ಲ. ಮುಖ ಆಕಾಶದ ಚಂದ್ರ ಕಂಗÀಳು ಮಿನುಗುವ ತಾರೆಗಳು. ನಗು ಬೆಳದಿಂಗಳು ಎಂದು ಹೋಲಿಸಿ ಬ್ಯೂಟಿಯನ್ನು ಶಬ್ದಗಳಲ್ಲಿ ಬಣ್ಣಿಸಿ ಕಲರ್ ಫುಲ್ ಆಗಿ ಮಾತನಾಡುವುದು ರೂಢಿಯೇ ಇಲ್ಲ. ವಾಸ್ತವಕೆ ಒತ್ತು ಕೊಡುವ ಕೆಲವೇ ಕೆಲವು ಹುಡುಗರಲ್ಲಿ ನೀನೂ ಒಬ್ಬ.

ಪೇಟೆಕೋಟು ತೊಟ್ಟು ಓಡಾಡುವ ದಿನಗಳಲ್ಲಿ ರಂಗು ರಂಗಿನ ಚಿಟ್ಟೆಗಳ ಹಿಂದೆ ಬಿದ್ದು ಮರಕೋತಿ ಆಡುತ್ತಿದ್ದಾಗಿನಿಂದ ನನಗೆ ನೀನು ಚೆನ್ನಾಗಿ ಗೊತ್ತು. ಆಗಿನಿಂದಲೂ ನಿನ್ನ ಲೋಕವೇ ಬೇರೆ ನೀನೇ ಬೇರೆ. ನಿಸರ್ಗದ ಮಡಿಲಲ್ಲಿ ಕುಂಚ ಬಣ್ಣಗಳ ನಡುವೆ ನೀನೊಬ್ಬನೇ ಕುಳಿತು, ಕಿವಿ ಚೂಪು ಮಾಡಿಕೊಂಡು ಕಣ್ಣರಳಿಸಿ ಪ್ರಕೃತಿಯ ಸಿರಿಯನ್ನು ನವಿರಾದ ಕುಂಚದ ತುದಿಯಿಂದ ದಾಖಲಿಸುವ ಗುಣ ನಿನ್ನದು. ಹುಡುಗಿಯರು ಮಾತನಾಡಿಸಿದರೆ ಪ್ರತಿಕ್ರಿಯಿಸಲು ತಡಬಡಿಸುತ್ತಿದ್ದವನು. ಈಗಲೂ ಅದೇ ಗುಣ ಮುಂದುವರೆದಿದೆ.ಎಳ್ಳು ಕಾಳಿನಷ್ಟೂ ಬದಲಾಗಿಲ್ಲ.

ಕಾಲೇಜ್ ಬ್ಯೂಟಿಯೆಂದೇ ಹೆಸರಾದವಳು ನಾ ನೀ  ಎನ್ನುವ ಚೆಲುವಿಯರು ನಿನ್ನ ಚೆಲುವಿಗೆ ಜಾಣ್ಮೆಗೆ ಮೆಚ್ಚಿ ಬೆನ್ನ ಹಿಂದೆ ಬಿದ್ದಾಗಲೂ ಕಣ್ಣೆತ್ತಿ ನೋಡದ ಗಟ್ಟಿಯಾದ ಗುಂಡಿಗೆಯುಳ್ಳ ಗಂಡು ನೀನು. ಹದಿಹರೆಯದ ಹಕ್ಕಿ ಮನದಂಗಳದಲ್ಲಿ ಕಾಲಿಟ್ಟಾಗ ಏನೆಲ್ಲ ಸವಾಲು ಎದುರಿಸಬೇಕು ಎಂಬುದರ ಬಗ್ಗೆ ಉದ್ದುುದ್ದ ಭಾಷಣಕ್ಕಾಗಿ ಕಿವಿ ಚಾಚದೇ ಜೀವನದ ಮುಖ್ಯ ತಿರುವುಗಳಲ್ಲಿ ಇತರರನ್ನು ನಾಚಿಸುವಂತೆ ಹೊಟ್ಟೆ ಕಿಚ್ಚು ಪಡಿಸುವಂತೆ ನಿನ್ನ ಓದಿನ ಬಲದಿಂದಲೇ ಧೈರ್ಯದಿಂದ ಮುನ್ನುಗ್ಗುವ ರೀತಿ ಮೆಚ್ಚುವಂತದ್ದೆ.

ಎದೆಯಲ್ಲಿ ಯೌವನದ ವಸಂತ ಕೋಗಿಲೆಯ ಇಂಚರ ನುಲಿದಾಗಲೂ ಚಳಿಗಾಲದ ಮಂಜಿನ ಗಡ್ಡೆಯಂತೆ ಕರಗದೇ ಇದ್ದೆ. ಅದೆಷ್ಟೋ ಹುಡುಗರು ಕವಲು ದಾರಿಯಲ್ಲಿ ಹಾರುವ ರೆಕ್ಕೆ ಕತ್ತರಿಸಿಕೊಂಡರೂ ನೀನು ಮಾತ್ರ ದೊಡ್ಡ ಸಮಸ್ಯೆಗಳಲ್ಲಿ ಒತ್ತಡಕ್ಕೆ ಒಳಗಾಗದೇ ಒತ್ತಡಮುಕ್ತ ಬದುಕಿನಲ್ಲಿ ಅಡಗಿರುವುದೇ ಖುಷಿ. ಉಳಿದೆಲ್ಲ ಹುಸಿ ಎಂಬ ನಿಯಮ ನೆಚ್ಚಿ  ವಿವೇಕಯುತವಾಗಿ ಮುಂದಿನ ಹೆಜ್ಜೆ ಇಟ್ಟಿದ್ದು ನಿನ್ನ ಗೆಲುವಿನ ಮಹಾದ್ವಾರಕೆ ತೋರಣ ಕಟ್ಟಿದಂತಿತ್ತು.

ಎಂಥವರಿಗೂ ಪ್ರೀತಿ ಹುಟ್ಟಿಸುವ ಚುಂಬಕ ವ್ಯಕ್ತಿತ್ವ ನಿನ್ನದು. ಇನ್ನು ಪೂರ್ತಿ ಸನಿಹವಿದ್ದ ನನ್ನನ್ನು ಬಿಟ್ಟೀತೆ? ನಿನ್ನ ಪ್ರಬುದ್ಧ ನಡೆ ನುಡಿ ಆಯಸ್ಕಾಂತದಂತೆ ಸೆಳೆಯಿತು. ಅದೊಂದು ದಿನ ಹೆದರುತ್ತಲೇ ನೀ ನಂಗೆ ತುಂಬಾ ಇಷ್ಟ ಕಣೋ ಎಂದಾಗ ಕಣ್ಣಂಚಿನಲ್ಲಿಯೇ ಹೂಂಗುಟ್ಟಿದ್ದೆ. ಅದೇ ಸಂಜೆ ಮೊಳ ಮೊಗ್ಗಿನ ಮಲ್ಲಿಗೆ ಹಿಡಿದು ಈ ಮೊಗ್ಗುಗಳು ಅರಳಿದಾಗಲೇ ಅಂದ ಚೆಂದ ಹೆಚ್ಚೋದು. ಹಾಗೆಯೇ ನಮ್ಮದು ಇನ್ನೂ ಚಿಗುರೊಡೆಯುತ್ತಿರುವ ಬದುಕು ಚಿಗುರು ಚಿಗಿತು ಹೂ ಪಲ್ಲವಿಸಿದಾಗ ತುದಿಗಾಲಲ್ಲಿ ನಿಂತು ಕಾಯುತ್ತಿರುವ ನಿನ್ನನ್ನು ಹುಡುಕಿಕೊಂಡು ಬಂದು ನಿನ್ನ ಹೃದಯ ವೀಣೆಯ ತಂತಿಯ ಮೀಟಿ ತುಟಿಯ ಬೆಲ್ಲ ನನಗೂ ತಿನಿಸಿ ನೀನೇ ಹೆಚ್ಚು ತಿನ್ನುವೆ ಎಂದದ್ದು ಮೇಲಿಂದ ಮೇಲೆ ಕಾಡಿದೆ. ಅಷ್ಟೆಲ್ಲ ಸೌಂದರ್ಯ ರಾಶಿಗಳ ಹಿಂದೆ ಸರಿಸಿ ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರು ಯಾರು? ಎಂಬ ಪ್ರಶ್ನೆ ಇಂದೇಕೋ ಅತಿಯಾಗಿ ಕಾಡುತ್ತಿದೆ. ಬೇಗ ಬಂದು ಉತ್ತರಿಸುವೆಯಾ ಗೆಳೆಯಾ? ಇತಿ ನಿನ್ನ ಉತ್ತರಕ್ಕಾಗಿ ಕಾಯುತ್ತಿರುವ ಹೃದಯದ  ಗೆಳತಿ.

 

✒ಜಯಶ್ರೀ.ಜೆ. ಅಬ್ಬಿಗೇರಿ               

ಬೆಳಗಾವಿ. 9449234142

 

Comments