UK Suddi
The news is by your side.

ಅನ್ಸಾರಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯಿಂದ ಮನವಿ.

ಹೊಸಪೇಟೆ:ಪೋಲೀಸರು ನಂಬಿಕೆಗೆ ಅರ್ಹರಲ್ಲ ಎಂಬ ನೆರೆಯ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಯವರ ಹೇಳಿಕೆಯು ಖಂಡನಿಯವಾಗಿದ್ದು, ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯು ಸೋಮವಾರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿತು.

ಈಚೆಗೆ ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣಾ ಸಭೆಯಲ್ಲಿ ಇಕ್ಬಾಲ್ ಅನ್ಸಾರಿಯವರು ಮನಸ್ಸಿಗೆ ತೋಚಿದಂತೆ ಮಾತನಾಡಿದ್ದಾರೆ. ರಾಮನ ಭಕ್ತರು ಲೂಟಿಕೋರರು, ಕೊಲೆಗಡುಕರು, ಮನೆಯಲ್ಲಿ ರಾಮನ ಪೂಜೆ ಮಾಡುತ್ತಾರೆ, ಹೊರಗೆ ರಾಮನ ಹೆಸರಲ್ಲಿ ಕೊಲೆ ಮಾಡುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾರೆ. ಅಲ್ಲದೇ,ಪೋಲೀಸ್ ಇಲಾಖೆಯು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ಕಾನೂನು ಪಾಲನೆಯಂತಹ ಗುರುತರವಾದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದೆ. ಆದರೆ,ಪೋಲೀಸ್ ಅಧಿಕಾರಿಗಳು ನಂಬಿಕೆಗೆ ಅರ್ಹರಲ್ಲ. ಅವರನ್ನು ನಂಬಬೇಡಿ ಎಂಬ ಮಾತನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಹೇಳಿಳಿರುವುದು ಸರಿಯಲ್ಲ. ಸಭೆ, ಸಮಾರಂಭಗಳಲ್ಲಿ ಉಡಾಫೆಯಿಂದ ಮಾತನಾಡುತ್ತಿದ್ದಾರೆ. ಸಾಂವಿಧಾನಿಕ ಸ್ಥಾನದಲ್ಲಿರುವ ಅವರು ಸಂವಿಧಾನಕ್ಕೆ ಅಪಚಾರವೆಸಗುವ ರೀತಿಯಲ್ಲಿ ಮಾತನಾಡಿದ್ದಾರೆ. ಪ್ರಚೋದನಾತ್ಮಕ ಹೇಳಿಕೆಗಳಿಂದ ಗಂಗಾವತಿ ತಾಲ್ಲೂಕಿನಾದ್ಯಂತ ಕೋಮುಗಲಭೆಗಳು ಆಗಿವೆ. ಶಾಂತಿ ಸೌಹಾರ್ದತೆಗೆ ತಾಲ್ಲೂಕು ಹೆಸರಾಗಿತ್ತು. ಈಗ ಕೋಮು ಸೂಕ್ಷ್ಮ ಪ್ರದೇಶವೆನ್ನುವ ಅಪಕೀರ್ತಿಗೆ ಪಾತ್ರವಾಗಿದೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಅನ್ಸಾರಿಯವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲವಾದಲ್ಲಿ ಜನಾಂದೋಲನ ನಡೆಸಲಾಗುವುದು ಎಂದು ವೇದಿಕೆ ಜಿಲ್ಲಾ ಸಂಚಾಲಕ ಮೌನೇಶ ಬಡಿಗೇರ್, ಪ್ರಮುಖರಾದ ಎಂ. ಹುಲುಗಪ್ಪ, ಪಿ. ಸಿದ್ದೇಶ ಪೂಜಾರ, ಹನುಮಪ್ಪ, ನವೀನಕುಮಾರ, ಬಿ. ಮಂಜು, ಎನ್. ಶ್ರೀನಿವಾಸ, ಬಿ. ಜಗದೀಶ, ಬಿ. ನಾಗರಾಜು, ಜಿ. ಲಕ್ಷ್ಮಣ ಮನವಿಯಲ್ಲಿ ಎಚ್ಚರಿಸಿದ್ದಾರೆ.

ವರದಿ:ಮಂಜುನಾಥ ಅಯ್ಯಸ್ವಾಮಿ

Comments