UK Suddi
The news is by your side.

ಹೃದಯವನ್ನೇ ಕೊಟ್ಟ ಹುಡುಗಿ ತನ್ನ ಮೊಬೈಲ್ ಕೊಡುವುದಿಲ್ಲವೇಕೆ?

ಆಕೆಯ ಜೀವವೇ ನೀವು ಎನ್ನುವಷ್ಟು ಪ್ರೀತಿಸುವ ಹುಡುಗಿ, ತನ್ನದೆಲ್ಲವನ್ನೂ ನಿಮ್ಮ ಮುಂದೆ ಬಿಚ್ಚಿಡುವ ಗೆಳತಿ.ತೀರಾ ಆಪ್ತವೆನಿಸುವ ಹೆಸರಿನಲ್ಲಿ ಬಂಧಿಸಲಾಗದ ಸಂಬಂಧ, ಪ್ರೀತಿಯೋ ಸ್ನೇಹವೋ ಹೀಗೆ ಮೇರೆ ಮೀರಿದ ಸಂಬಂಧಗಳಲ್ಲೂ ಅದ್ಯಾಕೋ ಮೊಬೈಲ್ ಮುಖ ನಗುವುದು ಕಾಣುವುದಿಲ್ಲ, ಮೊಬೈಲ್ ಕೈಗೆ ಸಿಕ್ಕರೂ ಅದಕ್ಕೆ ಬೀಗ ಜಡದಿರುತ್ತದೆ. ಇತಿ ಮಿತಿಯನು ದಾಟಿದ ಅತಿಯೆನ್ನಿಸುವಷ್ಟು ಬೆಳೆದು ನಿಂತ ಆತ್ಮೀಯತೆ ಇರುತ್ತದೆ. ಆದರೂ ಮೊಬೈಲ್ ನಿಮ್ಮ ಕೈಗಿಡುವ ವಿಷಯದಲ್ಲಿ ಮೀನ ಮೇಷ ಎಣಿಸುತ್ತಾಳೆ. ನಿಮ್ಮ ಪ್ರೀತಿಯ ಹೂವಿನ ಪರಿಮಳ ಎಲ್ಲೆಡೆ ಸೂಸುತ್ತಿದ್ದರೂ ಆಕೆ ಮತ್ತು ನಿಮ್ಮ ನಡುವೆ ಮೊಬೈಲ್ ಒಂದು ಅಡ್ಡ ಗೋಡೆಯಾಗಿ ನಿಲ್ಲುತ್ತದೆ. ಮನದ ಮೂಲೆಯಲ್ಲಿರುವುದನ್ನೆಲ್ಲ ಬಿಚ್ಚಿಟ್ಟಿರುವಾಗ ಮೊಬೈಲ್‍ಗೇಕೆ ಬೀಗ ಹಾಕಲಾಗಿದೆ? ಎನ್ನುವ ಪ್ರಶ್ನೆ ಅನೇಕ ಸಾರಿ ಕಟ್ಟಿಗೆ ಹುಳುವಿನಂತೆ ಕೊರೆಯುತ್ತದೆ. ಧೈರ್ಯ ಮಾಡಿ ಆಕೆಯಿಂದ ಮೊಬೈಲ್ ಕೇಳಿ ಪಡೆದರೆ ಅದು ಮುಖ ಮುಚ್ಚಿಕೊಂಡು ಕುಳಿತಿರುತ್ತದೆ. ಇಲ್ಲವೇ ಆಕೆ ನಿಮ್ಮ ಕೈಗಿಡುವಾಗ ಅದಕ್ಕೆ ಬೀಗ ಹಾಕಿಯೇ ಕೊಡುತ್ತಾಳೆ.
ದಿನ ನಿತ್ಯದ ಪ್ರತಿ ವಿವರ,ಮನೆಯ ಆಗು ಹೋಗುಗಳು, ಗೆಳತಿಯರ ಕುರಿತಾಗಿ, ಛೇಡಿಸುವ ಹುಡುಗರ ಬಗೆಗೆ ಹೀಗೆ ಒಂದಲ್ಲ ಎರಡಲ್ಲ ನೂರಾರು ವಿಷಯಗಳನ್ನು ಪುಂಖಾನು ಪುಂಖವಾಗಿ ನಿಮ್ಮ ಕಿವಿ ತೂತಾಗುವಂತೆ ವಿವರಸಿ ಹೇಳುವ ಜೀವದ ಹುಡುಗಿ ಮೊಬೈಲ್ ಮಾತ್ರ ಮುಚ್ಚಿಡುವುದೇಕೆ? ಎಂಬುದು ಚಿದಂಬರ ರಹಸ್ಯದಂತೆ ನಿಮ್ಮನ್ನು ಕಾಡುತ್ತದೆ. ಆಕೆಯ ಮೊಬೈಲ್‍ನಲ್ಲಿ ಅಂಥ ರಹಸ್ಯವೇನನ್ನು ಮುಚ್ಚಿಟ್ಟಿದ್ದಾಳೆ? ನನ್ನ ಬೆನ್ನ ಹಿಂದೆ ಯಾರನ್ನಾದರೂ ಪ್ರೀತಿಸುತ್ತಿರಬಹುದೇ? ಛೇ! ಹಾಗೇನಿರಲಿಕ್ಕಿಲ್ಲ. ಆದರೂ ನನ್ನಿಂದ ಅದ್ಯಾಕೆ ಮೊಬೈಲ್ ಮುಚ್ಚಿಟ್ಟು ಸತಾಯಿಸುತ್ತಿದ್ದಾಳೆ ಎಂಬ ಅನುಮಾನ ಬಿಡದೇ ಕಾಡುತ್ತದೆ. ಆಕೆಯ ಬಗ್ಗೆ ಇದ್ದದ್ದು ಇಲ್ಲದ್ದನ್ನು ಯೋಚಿಸಿ ಈ ವಿಷಯವಾಗಿ ಜಗಳವಾಡಿ ದೂರವಾಗುವ ಸನ್ನಿವೇಶವೂ ನಿರ್ಮಾಣವಾಗುತ್ತದೆ.

ವಾಸ್ತವದಲ್ಲಿ ನೀವಂದುಕೊಂಡಂತೆ ಆಕೆ ನಿಮ್ಮಿಂದ ಅತಿ ದೊಡ್ಡದನ್ನೇನೂ ಮುಚ್ಚಿಡಲು ಯತ್ನಿಸುತ್ತಿಲ್ಲ. ನಿಮ್ಮ ಕೈಗೆ ಮೊಬೈಲ್ ಕೊಟ್ಟರೆ ನೀವೆಲ್ಲಿ ಆಕೆಯ ಗೆಳತಿಯರ ಮೊಬೈಲ್ ಸಂಖ್ಯೆ ತೆಗೆದುಕೊಂಡು ತನ್ನನ್ನು ಬಿಟ್ಟು ಅವರೊಂದಿಗೆ ನಂಟು ಬೆಳಸಿದರೆ ಎನ್ನುವ ಭಯವೂ ಇರಬಹುದು. ಮೊಬೈಲ್‍ನಲ್ಲಿ ತನ್ನದೇ ಖಾಸಗಿ ಬದುಕಿನ ವಿಷಯಗಳನ್ನು ಅಡಗಿಸಿಟ್ಟುಕೊಂಡಿರಬಹುದು. ಅದನ್ನು ಆಕೆ ನಿಮ್ಮೊಂದಿಗೆ ಹಂಚಿಕೊಳ್ಳಲು ಮುಜುಗರ ಇರಬಹುದು. ನಿಮಗೆ ಗೊತ್ತಿರುವ ಜನರ ಮತ್ತು ಸ್ನೇಹಿತರ ಜೊತೆ ಅವಳು ಚಾಟ್ ನಡೆಸಿರಬಹುದು. ನಿಮಗೆ ಇಷ್ಟವಾಗದವರ ಜೊತೆ ಅವಳು ಗೆಳೆತನದ ನಂಟಿನಲ್ಲಿ ಇರಬಹುದು. ಅವರೊಂದಿಗೆ ನಿರಂತರ ಸಂಪರ್ಕದಲ್ಲಿರಬಹುದು. ಅದು ನಿಮಗೆ ಗೊತ್ತಾದರೆ ಸುಮ್ಮನೆ ರಂಪ ನಡೆದು ತನ್ನ ಪ್ರೀತಿಗೆ ಬಾಧಕವಗುತ್ತದೆ ಎಂದು ಯೋಚಿಸುತ್ತಿರಬಹುದು. ಕೇವಲ ಆಕೆ ಮಾತ್ರ ಖಾಸಗಿಯಾಗಿ ನೋಡುವ ವಿಡಿಯೋಗಳ, ಚಿತ್ರಗಳ ಬರಹಗಳ ಸಂಗ್ರಹ ಆಕೆಯ ಮೊಬೈಲ್‍ನಲ್ಲೂ ಇರಬಹುದೇನೋ?ಅದನ್ನು ನೀವು ನೋಡಿ ನಿಮ್ಮ ನೆದರಿನಲ್ಲಿ ಆಕೆ ಕೆಳಕ್ಕೆ ಬೀಳಬಹುದೆಂಬ ಆತಂಕ ಇರಬಹುದು.

ಮೊಬೈಲ್ ನಲ್ಲಿಯ ಮೆಸೇಜ್, ಕಾಲ್ ಲಿಸ್ಟ್, ಫ್ರೆಂಡ್ಸ್ ವಾಟ್ಸಪ್ ಗ್ರೂಪ್‍ನಲ್ಲಿಯ ಚಾಟಿಂಗ್ ಹೀಗೆ ಆಕೆಗೆ ಸಂಬಂಧಿಸಿದ್ದೆನ್ನೆಲ್ಲ ನೋಡುತ್ತ ಅವಳನ್ನು ಪ್ರಶ್ನಿಸಿದರೆ ಆಕೆಗೆ ಎಲ್ಲಿಲ್ಲದ ಕೋಪ ನೆತ್ತಿಗೇರುತ್ತದೆ. ಹಾಗೆಲ್ಲ ನಡೆದು ಸಂಬಂಧ ಕಳೆದುಕೊಳ್ಳಲು ಆಕೆಗೆ ಇಷ್ಟವಿಲ್ಲದ ಕಾರಣ ನಿಮ್ಮ ಕೈಗೆ ಆಕೆ ಮೊಬೈಲ್ ಕೊಡದಿರಬಹುದು.

ತೀರ ವೈಯುಕ್ತಿಕ ವಿವರಗಳನ್ನು ಮೊಬೈಲ್‍ನಲ್ಲಿ ಸಂಗ್ರಹಿಸಿಟ್ಟಿರಬಹುದು ಅವುಗಳೆಲ್ಲ ನಿಮಗೀಗ ಗೊತ್ತಾಗದಿರಲಿ ಎಂದು ಬಚ್ಚಿಟ್ಟುಕೊಳ್ಳುತ್ತಿರಬಹುದು.ಗೆಳೆತನದ ಹೆಸರಿನಲ್ಲಿ ಯಾರೋ ಈ ಹಿಂದೆ ತನ್ನ ಮೊಬೈಲಿನಲ್ಲಿನ ವಿಷಯ ಕದ್ದು ಅವಳನ್ನು ದುರುಪಯೋಗಪಡಿಸಿಕೊಳ್ಳಲು ನೋಡಿರಬಹುದು ಈಗ ಹಾಗಾಗದಿರಲಿ ಎಂಬ ಮುಂಜಾಗ್ರತೆ ಕ್ರಮವೂ ಇದಾಗಿರಬಹುದು. ನೀವು ಆಕೆಯ ಮೊಬೈಲ್‍ನಿಂದ ನೀವು ನಿಮ್ಮ ಗೆಳೆಯರಿಗೆ ಪೋನ್ ಮಾಡಿದರೆ ಅವರಿಗೆ ತನ್ನ ಮೊಬೈಲ್ ನಂಬರ್ ಗೊತ್ತಾಗಿ ಕಾಡಿಸಲು ಶುರು ಮಾಡಿದರೆ ಎಂಬ ಆತಂಕವೂ ಇರಬಹುದು. ಡೈರಿಯನ್ನು ಬರೆಯುವ ರೂಢಿಯಿದ್ದು ಆಕೆ ಮೊಬೈಲಿನಲ್ಲಿಯೇ ಅದನ್ನು ದಾಖಲಿಸಿರಬಹುದು. ನಿಮ್ಮೊಂದಿಗಿರುವ ಸಲುಗೆಯನ್ನು ತನ್ನ ಕಾಲೆಳಿಯುವ ಪರಮಾಪ್ತ ಗೆಳತಿಯೊಂದಿಗೆ ಚಾಟ್ ಮೂಲಕ ತಮಷೆ ಮಾಡಿಸಿಕೊಂಡು ಖುಷಿ ಪಡುತ್ತಿರಬಹುದು. ಮೊಬೈಲ್ ನಿಮ್ಮ ಕೈಗೆ ಕೊಟ್ಟರೆ ಆಕೆ ತನ್ನ ಗೆಳತಿಯೊಂದಿಗೆ ಚಾಟ್ ಮಾಡಿದ್ದು ನೀವು ನೋಡಿ ಬಿಟ್ಟರೆ ಎಂಬ ಹೆದರಿಕೆಯಿಂದಲೂ ಮೊಬೈಲ್ ಕೊಡದೇ ಇರಬಹುದು.

ಹೀಗೆ ಆಕೆ ಮೊಬೈಲ್ ಕೊಡದಿರುವುದಕ್ಕೆ ಕಾರಣಗಳ ಪಟ್ಟಿ ಮಾಡುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೊಗುತ್ತದೆ. ಆದರೆ ಈ ಕಾರಣಗಳಲ್ಲಿ ಯಾವುದೂ ನಿಮ್ಮ ಬೆನ್ನ ಹಿಂದಿನ ಮೋಸದಾಟವಂತೂ ಇಲ್ಲವೇ ಇಲ್ಲ. ಹೀಗಿರುವಾಗ ಆಕೆ ನಿಮಗೇಕೆ ಮೊಬೈಲ್ ಕೊಡುತ್ತಿಲ್ಲ ಎಂದು ತಲೆ ಬಿಸಿ ಮಾಡಿಕೊಳ್ಳುವ ಗೋಜಿಗೆ ಹೋಗಬೇಡಿ. ಆಕೆ ನಿಮಗಾಗಿ ತನ್ನ ಅಮೂಲ್ಯವಾದ ಹೃದಯವನ್ನೇ ಕೊಟ್ಟಿದ್ದಾಳೆ. ಅಂಥದ್ದರಲ್ಲಿ ಈ ಮೊಬೈಲ್ ಏನು ದೊಡ್ಡದಲ್ಲ. ಕೊಡದಿರುವ ಮೊಬೈಲ್ ಚಿಂತೆ ಬಿಡಿ. ಆಕೆ ಕೈಯಾರೆ ಕೊಟ್ಟ ಹೃದಯದೊಂದಿಗೆ ಹಾಯಾಗಿ ನಗುತ್ತ ಹೆಜ್ಜೆ ಹಾಕಿ ನೆಮ್ಮದಿಯಿಂದ ಇರಿ.

-ಜಯಶ್ರೀ ಜೆ. ಅಬ್ಬಿಗೇರಿ

ಬೆಳಗಾವಿ 9449234142

Comments