UK Suddi
The news is by your side.

ಮುಖ್ಯ ಮಂತ್ರಿಗಳು ಮಠ ಮಂದಿರಗಳ ಗೊಡವೆಗೆ ಬರಬಾರದು: ಕುಮಾರ ವಿರೂಪಾಕ್ಷ ಶ್ರೀ

ಉಪ್ಪಿನ ಬೆಟಗೇರಿ:  ಹಿಂದೂ ವೀರಶೈವ ಲಿಂಗಾಯತ ಮಠ ಮಂದಿರಗಳಾಗಲಿ, ಇಸ್ಲಾಂ ಧರ್ಮದ ಮಸೀದೆ ದರ್ಗಾಗಳಾಗಲಿ, ಕ್ರಿಶ್ಚಿಯನ್ ಧರ್ಮದ ಚರ್ಚಗಳಾಗಲಿ, ಮತ್ತು ಜೈನ ಬೌದ್ಧ ಧರ್ಮದ ಧಾರ್ಮಿಕ ಕೇಂದ್ರಗಳಾಗಲಿ ಇವೆಲ್ಲಾ ಆಯಾ ಧರ್ಮೀಯರ ಸೊತ್ತೇ ಹೊರತು ಸರಕಾರದ ಸೊತ್ತೆಲ್ಲವೆಂಬುದನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕೆಂದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಪೂಜ್ಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದ್ದಾರೆ.

ವಿಶೇಷವಾಗಿ ಹಿಂದೂ ಮತ್ತು ವೀರಶೈವ ಲಿಂಗಾಯತ ಮಠ ಮಂದಿರಗಳನ್ನು ಸರಕಾರ ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿರುವದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಪರಂಪರೆ ಹಾಗೂ ಅಪಾರ ಭಕ್ತ ಸಮೂಹ ಹೊಂದಿರುವ ಮಠ ಮಂದಿರಗಳು ಇಂದು ಹೆಮ್ಮರವಾಗಿ ಬೆಳೆದದ್ದು ಭಕ್ತರ ಉದಾರತೆ ಹಾಗೂ ಶ್ರೀಮಠಗಳ ಪೂಜ್ಯರ ತಪಃ ಪ್ರಭಾವ ಮತು ಸಮಾಜಸೇವಾ ಗುಣದಿಂದಲೇ ಹೊರತು ಸರಕಾರದಿಂದಲ್ಲ.
ಈ ಹಿಂದೆ ದೇಶವನ್ನಾಳಿದ ಬ್ರಿಟಿಷರೂ ಮಠ ಮಂದಿರಗಳಿಗೆ ತಮ್ಮ ಕೈಲಾದಷ್ಟು ದಾನ ಧರ್ಮ ಮಾಡಿದ್ದು ಇತಿಹಾಸವಿದೆ. ಆದರೆ ಅವರು ಇವುಗಳನ್ನು ವಶಪಡಿಸಿಕೊಳ್ಳುವ ದುಃಸ್ಸಾಹಸ ಮಾಡಿರಲಿಲ್ಲ. ಆದರೆ ಇಂದು ಮುಖ್ಯಮಂತ್ರಿಗಳು ಇಂತಹ ಕಾರ್ಯಕ್ಕೆ ಕೈಹಾಕಿರುವುದು ಸರಿಯಲ್ಲ. ತಾವು ಅಧಿಕಾರಕ್ಕೆ ಬಂದ ಆರಂಭದಿಂದಲೇ ಇದೇ ಕಾರ್ಯಕ್ಕೆ ಕೈಹಾಕಿ ಕೈ ಸುಟ್ಟುಕೊಂಡರೂ ಬುದ್ಧಿ ಕಲಿಯದ ಇವರು ಚುನಾವಣಾ ಹತ್ತಿರಕ್ಕೆ ಬಂದಿರುವಾಗಲೇ ಮತ್ತೆ ಅದೇ ಕಾರ್ಯಕ್ಕೆ ಕೈ ಹಾಕಿರುವದು ಅತ್ಯಂತ ಖಂಡನೀಯವಾಗಿದೆ.

ಸರಕಾರದಲ್ಲಿ ತಮಗೆ ಮಾಡಲಿಕ್ಕೆ ಸಾಕಷ್ಟು ಕೆಲಸವಿದ್ದರೂ ಧರ್ಮ ಒಡೆಯುವಂತಹ, ಮಠ ಮಂದಿರಗಳನ್ನು ವಶಪಡಿಸಿಕೊಳ್ಳುವಂತಹ ಹಾಗೂ ಹಿಂದ ಅಹಿಂದರೆಂದು ಸೌಲಭ್ಯಗಳನ್ನು ಕೊಡುವಲ್ಲಿ ತಾರತಮ್ಯ ಮಾಡುವಂತ ಕೆಲಸಗಳನ್ನು ಕೈ ಬಿಡಬೇಕು ಮತ್ತು ಈಗಾಗಲೇ ಸರಕಾರದ ಸುಪರ್ದಿಯಲ್ಲಿರುವ ಹಿಂದೂ ಮಂದಿರಗಳನ್ನು ಆಯಾ ಧರ್ಮದವರ ಸುಪರ್ದಿಗೆ ನೀಡಬೇಕೆಂದು ಶ್ರೀಗಳು ಬುಧವಾರದಂದು ಪತ್ರಿಕಾ ಪ್ರಕಟಣೆಯ ಮೂಲಕ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

 

Comments