UK Suddi
The news is by your side.

ಹೊಸಪೇಟೆ:ಸಮಾವೇಶದ ವೇದಿಕೆ ಪರಿಶೀಲಿಸಿದ ಸಚಿವ ಅನಿಲ್ ಲಾಡ್.

ಹೊಸಪೇಟೆ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಫೆ.10ರ ಕಾಂಗ್ರೆಸ್ ಸಮಾವೇಶದ ನಿಮಿತ್ತ ನಿರ್ಮಿಸಲಾಗುತ್ತಿರುವ ಬೃಹತ್ ವೇದಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪರಿಶೀಲನೆ ನಡೆಸಿದರು.

ವೇದಿಕೆ ನಿರ್ಮಾಣ ಸ್ಥಳಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಸಚಿವರು, ವೇದಿಕೆಯ ನಿರ್ಮಾಣ ಕಾರ್ಯ, ಮುಖ್ಯ ವೇದಿಕೆ, ಪಾರ್ಕಿಂಗ್ ಸ್ಥಳ, ಕಾರ್ಯಕರ್ತರು, ಅತಿಥಿಗಳು ಆಗಮಿಸುವ ದ್ವಾರಗಳ ಪರಿಶೀಲನೆ ನಡೆಸಿದರು. ಅಲ್ಲದೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಪೋಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಫೆ.10 ಸಮಾವೇಶಕ್ಕೆ ಭರ್ಜರಿ ತಯಾರಿ ನಡೆದಿದೆ. ಅದಕ್ಕಾಗಿ ಕಳೆದ ಎರಡು ದಿನಗಳಿಂದ ಬಳ್ಳಾರಿ, ಕಂಪ್ಲಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಡಗಲಿ, ಸಂಡೂರು ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಅಲ್ಲಿನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಮಾವೇಶಕ್ಕೆ ಆಹ್ವಾನಿಸುವ ಕೆಲಸ ಮಾಡಲಾಗುತ್ತಿದೆ.ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮಾಜಿಸಂಸದರು, ಜಿಪಂ, ತಾಪಂ, ಗ್ರಾಪಂ, ನಗರಪಾಲಿಕೆ, ನಗರಸಭೆ, ಪುರಸಭೆ, ಪಪಂ ಸದಸ್ಯರುಗಳು ಸೇರಿದಂತೆ ಎಲ್ಲ ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಕೊಪ್ಪಳ, ರಾಯಚೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಕಾರ್ಯಕರ್ತರು ಸೇರಿ ಅಂದಾಜು 2 ಲಕ್ಷಕ್ಕೂ ಜನರು ಭಾಗವಹಿಸುವ ನೀರಿಕ್ಷೆಯಿದೆ. ಇದಕ್ಕಾಗಿ 1.25ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ 3 ಸಾವಿರ ಬಸ್ ಗಳು ಮತ್ತು 4 ಸಾವಿರ ಟ್ರಾಕ್ಸ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ 4.60 ಲಕ್ಷ ಚದರ ಅಡಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ.ಸಮಾವೇಶದ ವೀಕ್ಷಣೆಗಾಗಿ 35 ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳಾದ ಮಂಜುನಾಥ, ಗುಜ್ಜಲ ರಘು,ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಮುಖಂಡರಾದ ಗುಜ್ಜಲ ನಾಗರಾಜ, ಎಲ್.ಸಿದ್ದನಗೌಡ, ಜೆ.ಎನ್.ಗಣೇಶ್, ಡಿವೈಎಸ್ಪಿ ಕೆ.ಶಿವಾರೆಡ್ಡಿ, ಪೌರಾಯುಕ್ತ ವಿ.ರಮೇಶ್, ಪಿಡಬ್ಲುೃ ಇಂಜಿನಿಯರ್ ಕಿಶೋರ್ ಕುಮಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಅಯ್ಯಸ್ವಾಮಿ.

Comments