UK Suddi
The news is by your side.

ಸಾವಿಗಂಜದ ಭಂಡರು.

ಪ್ರಸ್ತುತ ದಿನಗಳಲ್ಲಿ ಆತ್ಮಹತ್ಯೆ ಎನ್ನುವುದು ಸಾಮಾನ್ಯ ಎಂಬಂತಾಗಿದೆ. ಇದೊಂದು ಪಿಡುಗೆಂಬಂತೆ ವೈಭವೀಕೃತವಾಗಿದೆ.ಸಾವು ಎಂದರೇನೆಂದೇ ಅರಿಯದ ಅತೀ ಚಿಕ್ಕ ವಯಸ್ಸಿನ ಮುಗ್ಧ ಮಕ್ಕಳೂ ಕೂಡ ಇದಕ್ಕೆ ಕೊರಳೊಡ್ಡುತ್ತಿರುವುದು ನಿಜಕ್ಕೂ ಖೇದಕರ ಸಂಗತಿ

ಆತ್ಮಹತ್ಯೆ ಮಹಾಪಾಪ,ಆತ್ಮಹತ್ಯೆ ಅಪರಾಧ ಈ ಎಲ್ಲ ವಿಷಯಗಳು ಗೊತ್ತಿದ್ದೂ,ಮರಳಿ ಬಾರದ ಲೋಕಕ್ಕೇ ಹೋಗುತ್ತೇವೆಂಬ ಅರಿವಿದ್ದೂ,ದಿಢೀರೆಂದು ಸಣ್ಣಪುಟ್ಟ ಕಾರಣಗಳಿಗೂ ಜೀವ ಕಳೆದುಕೊಳ್ಳುವಷ್ಟು ವ್ಯವಧಾನವಿಲ್ಲದವರಾಗಿದ್ದೇವೆ.ಅಷ್ಟು ದೊಡ್ಡ ನಿರ್ಧಾರದ ಮೊದಲು ಒಂದು ಸಣ್ಣ ಗುರಿಯತ್ತ ಗಮನ ಕೊಡುವುದಿಲ್ಲವೇಕೆ? ಸಾವನ್ನೆ ಎದುರಿಸುವ ಧೈರ್ಯವಿರುವ,ಅಷ್ಟೊಂದು ಭಂಡತನವಿರುವ ಇವರಿಗೆ ಜೀವನದ ಸಮಸ್ಯೆಗಳ ವಿರುದ್ಧ ಹೋರಾಡುವ ಸಮಾಜಕ್ಕೆ ಎದುರಾಗಿ ನಿಲ್ಲುವ ಧೈರ್ಯವಿರುವುದಿಲ್ಲವೆ? ಖಂಡಿತ ಇದ್ದೇ ಇರುತ್ತದೆ.

ಸ್ನೇಹಿತರೇ,ಒಮ್ಮೆ ಆಲೋಚಿಸಿ ನೋಡಿ,ಸಾವನ್ನೇ ಅಪ್ಪುವ ಧೈರ್ಯ  ಮಾಡಿರುವ ನಮಗೆ ಸಂಸಾರದ ಸಮಸ್ಯೆಗಳು,ಸಮಾಜದ ಅವಮಾನಗಳು,ಜಾತಿ ಧರ್ಮದ ಭೀತಿಗಳು ಏನೇನೂ ಅಲ್ಲ.ಹೇಡಿಗಳಾಗಿ ಹೀಗೆ ಸಾಯುವ ಬದಲು ಈ ಎಲ್ಲ ಸಮಸ್ಯೆಗಳನ್ನ ಮೆಟ್ಟಿನಿಂತು,ದೇವರು ಕೊಟ್ಟ ಈ ಬದುಕಿನ ಮೇಲೆ ಸವಾರಿ ಮಾಡುವುದು ಒಳ್ಳೆಯದಲ್ಲವೆ?ಇದಕ್ಕೇನು ಹರಸಾಹಸ ಪಡಬೇಕಾಗಿಲ್ಲ ಈ ಜೀವನವೆಂಬ ಕುದುರೆಯ ಪಳಗಿಸುವ ಜಾಣತನವೊಂದಿದ್ದರೆ ಸಾಕು. ಅದರ ಮೇಲೆ ಸವಾರಿ ಮಾಡುವುದು ತುಂಬಾ ಸರಳ.

      “ಹುಟ್ಟುವ ಹಕ್ಕಿಲ್ಲದ ನಮಗೆ
        ಸಾಯುವ ಹಕ್ಕೂ ಇಲ್ಲ”.

ಹಾಗಾದರೆ, ಸಂಸಾರದ ಸಮಸ್ಯೆಗಳನ್ನು ಹೊತ್ತು,ಸಮಾಜದ ಅವಮಾನಗಳನ್ನೂ ನಿಂದನೆಗಳನ್ನೂ ಸಹಿಸಿ ಬದುಕುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಡದೇ ಇರಲಾರದು.ನನ್ನ ಪ್ರಕಾರ ಈ ಪ್ರಶ್ನೆಗೆ ಉತ್ತರ ‘ಭಂಡತನ’.ನಮ್ಮ ದೇಹಕ್ಕೆ ಒಳ್ಳೆಯ ಕೊಲೆಸ್ಟರಾಲಿನ ಅಗತ್ಯತೆ ಇರುವಂತೆ ಈ ಜೀವನವೆಂಬ ದೇಹಕ್ಕೆ ಈ ಭಂಡತನದ ಅವಶ್ಯಕತೆಯಿದೆ.ಆದರೆ ನಮ್ಮ ಆಯ್ಕೆ ಒಳ್ಳೆಯದೆ ಆಗಿರಲಿ.

        “ಬದುಕುವುದಕ್ಕಾಗಿ ಭಂಡತನವಿರಲಿ
        ಬಡಿದು ಬದುಕುವ ಭಂಡತನ ಬೇಡ”.

ನಮ್ಮ ಎಲ್ಲ ಸಾಧನೆಗಳ ಮೊದಲ ಮೆಟ್ಟಿಲೇ ಈ ಭಂಡತನ.ಅದಿಲ್ಲದಿದ್ದರೆ ಮುನ್ನಗ್ಗುವ ಧೈರ್ಯ ಮಾಡದೆ, ಹಿಂದಡಿಯಿಡಬೇಕಾಗುತ್ತದೆ.

ಒಂದು ಸ್ಪರ್ಧೆಯಂದ ಮೇಲೆ ಸೋಲು ಗೆಲುವು ಸಾಮಾನ್ಯ.ಸೋಲೊ ಗೆಲುವೋ ಭಾಗವಹಿಸುವಿಕೆ ಮುಖ್ಯ ಎನ್ನುವ ಗಟ್ಟಿತನವಿರಬೇಕು.ಸೋಲುಗಳನ್ನು ಅವಮಾನಗಳೆಂದು ಭಾವಿಸದೆ,ಗೆಲುವನ್ನು ಮುಟ್ಟಲು ಬೇಕಾದ ಮೆಟ್ಟಿಲುಗಳೆಂದುಕೊಂಡು ಅವುಗಳ ಮೇಲೆ ಹತ್ತಿ ನಿಂತಾಗ ಗೆಲುವು ಗೋಚರವಾಗುತ್ತದೆ.

ಮನುಷ್ಯ ಎಲ್ಲ ಪ್ರಾಣಿಗಳಿಗಿಂತಲೂ ಅತಿ ಬುದ್ಧಿವಂತ ಜೀವಿ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಕರ್ತವ್ಯಗಳು

ಅವನ ಹುಟ್ಟಿನ ಕ್ಷಣದಿಂದಲೇ ಆತನ ಬೆನ್ನು ಬಿದ್ದಿರುತ್ತವೆ.ಜನ್ಮ ಕೊಟ್ಟ ತಂದೆ,ತಾಯಿ,ನೆಲೆ ಕೊಟ್ಟ ಕುಟುಂಬ,ಹೆಸರು ಕೊಟ್ಟ ಸಮಾಜ ಹೀಗೆ ರಾಜ್ಯ,ದೇಶ,ಭಾಷೆ ಇವೆಲ್ಲದರ ಋುಣವೂ ನಾವು ಬೆಳಯುತ್ತಿದ್ದಂತೆ ನಮ್ಮ ಜೊತೆಯಲ್ಲೇ ಬೆಳೆದು ನಿಲ್ಲುತ್ತವೆ.ಇವೆಲ್ಲವುಗಳ ಋುಣ ತೀರಿಸುವ ಒಂದು ಸಣ್ಣ ಪ್ರಯತ್ನವನ್ನಾದರೂ ಮಾಡಲೇಬೇಕಾಗುತ್ತದೆ.

ಅಂದಾಗ ಮಾತ್ರ ಈ ಜೀವನಕ್ಕೆ ಸಾರ್ಥಕತೆಯ ಭಾವ ಮೂಡುತ್ತದೆ. ಆದರೆ ಈ ಎಲ್ಲ ಋಣಗಳ ಭಾರ ಹೊತ್ತು,ಯಾವುದೋ ಸಮಸ್ಯೆಗೊ, ಸಮಾಜದ ನಿಂದನೆಗೊ ಹೆದರಿ ಸಾವಿಗೆ ಶರಣಾಗುವುದು ಎಷ್ಟು ಸರಿ? ಎಷ್ಟೇ ಅವಮಾನ ಹಿಂಸೆಗಳಾದರೂ ಋುಣಮುಕ್ತರಾಗದೆ ಸಾಯುವ ಯೋಚನೆಯನ್ನೇ ಮಾಡಬಾರದು.ಆಗ ಮಾತ್ರ ಪ್ರತಿಯೊಬ್ಬರ ಬದುಕೂ ಒಂದು ಸವಾಲಿನಂತೆ ಇರುತ್ತದೆ.ಕಷ್ಟಗಳಿಗೆ,ಅವಮಾನಗಳಿಗೆ ಕೊನೆಗೆ ಆ ದೇವರಿಗೇ ಸವಾಲೆಸೆಯುವ ಧೈರ್ಯ ನಮ್ಮಲ್ಲಿ ತಾನೇ ತಾನಾಗಿ ಮೂಡುತ್ತದೆ ಮತ್ತು ಈ ಸಮಾಜಕ್ಕೆ, ನಮ್ಮ ಬದುಕಿನ ಸವಾಲುಗಳಿಗೆ ಉತ್ತರ ಕೊಡುವ ,ಹುಡುಕುವ ದಿಟ್ಟತನವನ್ನೂ ತೋರುತ್ತೇವೆ.ಹಾಗೇ ಮುನ್ನಗ್ಗುವ ಭಂಡತನವನ್ನೂ ಮೈಗೂಡಿಸಿಕೊಳ್ಳುತ್ತೇವೆ. ಒಂದು ಗುರಿಯತ್ತ ಸಾಗುವ ಪ್ರಯತ್ನದಲ್ಲಿ,ಹೊಗಳಿಕೆ ತೆಗಳಿಕೆಗಳೆರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಹೊಂದಿರಬೇಕು.ಆ ಪ್ರಯತ್ನದಲ್ಲಿ ಬರುವ ಸೋಲು ಗೆಲುವುಗಳಿಗೆ ಕುಗ್ಗದೆ ಹಿಗ್ಗದೆ ಮುಂದೆ ಸಾಗುತ್ತಿರಬೇಕು.ಆಗ ಮಾತ್ರವೇ ಗೆಲುವು ನಮ್ಮ ಜೊತೆಯಿರುತ್ತದೆ.

ಹಾಗಾಗಿ ಸ್ನೇಹಿತರೆ,ಸಮಸ್ಯೆಗಳಿಗೆ,ಅವಮಾನಗಳಿಗೆ,ಯಾವುದೇ ರೀತಿಯ ಭಯಗಳಿಗೆ ಸಾವೇ ಉತ್ತರವಲ್ಲ. ಇವೆಲ್ಲವುಗಳಿಂದ ಅದು ನಮ್ಮನ್ನು ಪಾರು ಮಾಡುವುದಿಲ್ಲ ಬದಲಾಗಿ ಹೇಡಿ ಎಂಬ ಹಣೆಪಟ್ಟಿಯೊಂದಿಗೆ ಅವಮಾನ ಹೊತ್ತ ಕೊನೆ ನಮ್ಮದಾಗಿರುತ್ತದೆ.ಅದು ನಮ್ಮ ಜೀವನದ ಅಂತ್ಯ ಅದನ್ನು ನಾವೇ ತಂದುಕೊಳ್ಳಬಾರದು. ನಾವು ಹುಟ್ಟಿದಾಗಲೇ ನಮ್ಮಸಾವು ಕೂಡ ನಿರ್ಧಾರವಾಗಿರುತ್ತದೆ,ಅದು ಬಂದಾಗ ಬರಲಿ ಜೀವನ ಎದುರಿಸುವ ಛಾತಿ ನಮಗಿರಲಿ.

“ಕರ್ಮಣ್ಯೇ ವಾಧಿಕಾರಸ್ಯೇ ಮಾ ಫಲೇಶು ಕದಾಚನ”

ಎನ್ನುವಂತೆ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಫಲಾಫಲಗಳನ್ನು ಆ ಭಗವಂತನಿಗೆ ಬಿಟ್ಟುಬಿಡೋಣ ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳೋಣ.ಹುಟ್ಟಿದ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ.ಅದನ್ನು ಗುರುತಿಸಿಕೊಂಡು ಅದರಲ್ಲೇ ಬೆಳೆಯುವ ಪ್ರಯತ್ನ ಮಾಡೋಣ.

         ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನುಡಿದಂತೆ:

           “ಆಗುವುದೆಲ್ಲಾ ಒಳ್ಳೆಯದಕ್ಕೆ
         ಆಗುತ್ತಿರುವುದು ಅದೂ ಒಳ್ಳೆಯದೆ
ಮುಂದೆ ಆಗಲಿರುವುದೂ ಕೂಡ ಒಳ್ಳೆಯದೆ ಆಗಲಿದೆ” 

ಹೀಗೊಂದು ಸಕಾರಾತ್ಮಕ ಯೋಚನೆಯೊಂದಿಗೆ ಜೀವನದ ಹಾದಿ ನಿರ್ಮಿಸಿಕೊಳ್ಳೋಣ.

ಹುಟ್ಟು ನಮ್ಮ ಕೈಯಲ್ಲಿಲ್ಲ ಅಂತೆಯೇ ಸಾವು ಕೂಡ ನಮ್ಮ ಕೈಯಲ್ಲಿಲ್ಲ ಆದರೆ ಇವೆರಡರ ಮಧ್ಯದ ಬದುಕು ಮಾತ್ರ ನಮ್ಮ ಕೈಯಲ್ಲೇ ಇದೆ.ಅದನ್ನು ಸರಿಯಾಗಿ ಬಳಸಿಕೊಳ್ಳೋಣ ಮತ್ತು ಸಕಾರಾತ್ಮಕವಾಗಿ ಬದುಕೋಣ.ಕೊನೆಯದಾಗಿ ಸ್ನೇಹಿತರೆ ವಿ ಕೃ ಗೋಕಾಕರ ಕೆಲವು ಸಾಲುಗಳು ನಿಮಗಾಗಿ

    ಇದ್ದ ಕೆಲವು ವರ್ಷಗಳನ್ನು -ಓ ಗೆಳೆಯ
    ಚೊಕ್ಕಾಗಿ ಕಳೆದು ಹೋಗು.
    ಇದ್ದಾಗ ಹೂವಿನಂತೆ ಗಮಗಮಿಸು.
    ಇಲ್ಲದಾಗ ಅದರ ಸವಿನೆನಪು ಉಳಿಯಲಿ.
    ಹೊಳೆಯುವ ನಕ್ಷತ್ರಗಳಲ್ಲಿ ಇಂಥ
    ಎಷ್ಟು ಸವಿನೆನಪುಗಳು ನೆಲಸಿಲ್ಲ?
    ಆ ನೆನಪುಗಳಲ್ಲಿ ನಿನ್ನದೂ ಒಂದಿರಲಿ.

✍ ಲತಾ ರಮೇಶ ವಾಲಿ

      ಸವಣೂರ,ಹಾವೇರಿ

     ಮೊ-    9880952479

   

            

Comments