UK Suddi
The news is by your side.

ನೀನೇ ನನ್ನ ನೀನೇ ನನ್ನ ತುಂಬಾ ತುಂಬಾ ಪ್ರೀತಿ ಮಾಡೋದು.

ನನ್ನೊಲವೆ,
ನನ್ನ ಪುಟ್ಟ ಎದೆಯಂಗಳದಲ್ಲಿ ನೀನು ಹಚ್ಚಿಟ್ಟ ಪ್ರೀತಿಯ ಹಣತೆ ಈ ಜೀವದಲ್ಲಿ ಕೊನೆಯ ಉಸಿರಿರುವವರೆಗೂ ದೇಹ ಪೂರ್ಣ ತಣ್ಣಗಾಗುವವರೆಗೂ ಎಂಥ ಬಿರುಗಾಳಿ ಬೀಸಿದರೂ ನಂದಲಾರದು. ಇದು ನಿನಗೂ ಗೊತ್ತು ಹಾಗಿದ್ದರೂ ದೂರ ಸರಿದಿರುವೆ. ಗೆಳೆಯ, ಈ ನೆನಪುಗಳೇ ಹಾಗಲ್ಲವೇ? ನೆನಪು ಹಾರಬೇಕೆಂದಷ್ಟು ಬೇಡ ಬೇಡವೆಂದರೂ ಪುನಃ ಪುನಃ ಮನದಂಗಳದಲ್ಲಿ ಬಂದು ನಿಂತು ತಕಧಿಮಿತ ಶುರು ಹಚ್ಚಿಕೊಳ್ಳುತ್ತವೆ. ಮರೆಯಬೇಕೆಂದು ಅದೆಷ್ಟು ಪ್ರಯತ್ನಿಸಿದಾಗಲೂ ನಿನ್ನೊಂದಿಗೆ ಕಳೆದ ಸವಿ ಗಳಿಗೆಗಳ ನೆನಪು ಒಂದರ ಹಿಂದೆ ಒಂದು ಸಾಲಿನಲ್ಲಿ ನಿಂತುಕೊಳ್ಳುತ್ತವೆ. ಬಾಡಿದ ನನ್ನ ಮೊಗದಲ್ಲಿ ಮತ್ತೆ ಮುಗಳ್ನಗೆ ಚೆಲ್ಲಿಸುತ್ತವೆ. ಚಿಗುರು ಮೀಸೆಯಡಿಯಲ್ಲಿ ನೀನು ನಗುವ ಪರಿಯ ಮರೆಯಬೇಕೆಂದು ಅಂದುಕೊಂಡಷ್ಟು ಸಾರಿ ನೆನಪಿಗೆ ಬರುತ್ತದೆ. ಗೆಳತಿಯರ ಜೊತೆ ನಾನಿರುವಾಗ ನೀನು ಕದ್ದು ನೋಡುತ್ತ  ಕಣ್ಣಲ್ಲೇ  ನನ್ನನ್ನು ಬರಸೆಳೆದು ಅಪ್ಪಿಕೊಳ್ಳುವಂತಿದ್ದ  ರೀತಿ ಬಿಡದೇ ಕಾಡುತ್ತಿದೆ.

ನನ್ನ ಸೌಂದರ್ಯ ರಾಶಿಗೆ ಮರುಳಾಗಿ ಲೆಕ್ಕವಿಲ್ಲದಷ್ಟು ಹುಡುಗರು ಲವ್ ಅಪ್ಲಿಕೇಷನ್ ಹಾಕಿದರೂ ಕ್ಯಾರೆ ಅನ್ನದ ಹುಡುಗಿ ನಾನು ಎನ್ನುವುದು ನಿನಗೆ ಚೆನ್ನಾಗಿ ಗೊತ್ತಿದೆ. ಅದ್ಹೇಗೋ ಕಾಣೆ ನಾ ನಿನ್ನ ಬಲೆಗೆ ಪ್ರಥಮ ನೋಟದಲ್ಲೇ ಬಿದ್ದೆ. ಅಂದು ಬಿದ್ದವಳು ಇನ್ನೂ ಎದ್ದಿಲ್ಲ ಏಳಲು ಬಯಸುವದೂ ಇಲ್ಲ. ಸನಿಹ ನೀನಿಲ್ಲವಾದಾಗಿಂದ ಹಗಲು ರಾತ್ರಿ ತಿಳಿಯುತ್ತಿಲ್ಲ ಊಟ ತಿಂಡಿ ಸೇರುತ್ತಿಲ್ಲ. ನಿನ್ನ ಹೆಸರನ್ನೇ ಕನವರಿಸುತ್ತ ನೀನು ಸಿಗುತ್ತಿಯೋ ಇಲ್ಲವೋ ಎಂಬ ಆತಂಕದಲ್ಲಿ ಬಿದ್ದು ಹೊರಳಾಡುತ್ತಿದ್ದೇನೆ. ನನ್ನ ಈ ತೊಳಲಾಟ ನಿನಗೆ ಖುಷಿ ನೀಡುತ್ತಿದೆಯೇ? ಇನ್ನೊಬ್ಬರ ತೊಳಲಾಟ ಕಂಡು ಖುಷಿ ಪಡುವಷ್ಟು ಕ್ರೂರಿ ನೀನಲ್ಲ. ನಡೆಯುವಾಗ ಸಣ್ಣ ಇರುವೆ ನಡುವೆ ಬಂದರೆ ಅದಕ್ಕೂ ಹಿಂಸಿಸುವನಲ್ಲ ನೀನು. ನನ್ನ ಅಪರೂಪದ ರೂಪಕ್ಕೆ ಮರಳಾಗಿ ಪ್ರೀತಿಸಿದವನು ನೀನಲ್ಲ. ರೂಪ ಗೌಣ. ಸದ್ಗುಣವೇ ರೂಪ ಎನ್ನುವ ಗುಣದವನು ನೀನು. 

ನೀನಿಲ್ಲದೇ ನಾನು ಬೆಳದಿಂಗಳಿಲ್ಲದ ಪೂರ್ಣಿಮೆಯಂತಾಗಿದ್ದೇನೆ. ಮಳೆ ಕಾಣದ ಇಳೆಯಂತಾಗಿದ್ದೇನೆ. ನೀನೇ ನನ್ನ ನೀನೇ ನನ್ನ ತುಂಬಾ ತುಂಬಾ ಪ್ರೀತಿ ಮಾಡೋದು  ಅಂತ ನಿನಗೂ ಗೊತ್ತು. ಹಟ ಬಿಟ್ಟು ನನ್ನನ್ನು ಮನ್ನಿಸಲು ಬೇಗ ಬಂದು ಬಿಡು ಗೆಳೆಯ, ನಿನಗಾಗಿ ಶಬರಿಯಂತೆ ಕಾಯುತಿರುವೆ.  ಪ್ರೀತಿಯನು ಧಾರೆಯೆರೆವೆ. ಸೇರಿ ಬಿಡು  ಜೀವದ ಸೆಲೆಗೆ. ಸ್ನೇಹದ ಸಿಂಚನದಲ್ಲಿ ಅರಳಿದ ಒಲವಿನ ಕುಸುಮ ನೀನು. ನನ್ನದೆಯ ಒಲವನೆಲ್ಲ ನಿನಗರ್ಪಿಸುವೆ ಬಾ ಸನಿಹಕೆ ಬಾ ನನ್ನ ಉಸಿರೆ ಬದುಕಿಗೆ ನಿನಗೆ ಜೀವ ಸಖಿಯಾಗುವೆ ನಿನ್ನೊಲವಿನಲ್ಲಿಯೇ ಮಾಗುವೆ. 

-ಜಯಶ್ರೀ.ಜೆ. ಅಬ್ಬಿಗೇರಿ 

ಬೆಳಗಾವಿ 9449234142    

                                     

Comments