UK Suddi
The news is by your side.

ಪ್ರೀತಿಯ ಮೊಗ್ಗು ತಾನಾಗಿಯೇ ಹಿಗ್ಗಿ ಹಿಗ್ಗಿ ಹೂವಾಗಲಿ.

 ಕೊರೆಯುವ ಚಳಿ ಮೆಲ್ಲನೆ ಸರಿಯುತ್ತ ತನ್ನ ಬೃಹದಾಕಾರವನ್ನು ಕಿರಿದಾಗಿಸಿಕೊಳ್ಳುವ  ಸಮಯದಲ್ಲಿ ಮೊದಲೇ ಕಚಗುಳಿಯಿಟ್ಟಂತೆ ಆಡುತ್ತಿರುವ  ಯೌವನ ಮೈಯಲ್ಲಿ ಕುಣಿಯುತ್ತಿರುವ ಯುವ ಜನತೆಗೆಲ್ಲ ಪ್ರೀತಿಯ ಕಾಲ ಮತ್ತಷ್ಟು ಕಚಗುಳಿ ಇಡಲು ಶುರು ಹಚ್ಚಿಕೊಳ್ಳುತ್ತೆ. ಪ್ರೆಮಿಗಳಿಗೆಲ್ಲ ಪ್ರಣಯದ ಪರ್ವ ಕಾಲ ಪ್ರೇಮಲೋಕದಲ್ಲಿ ಮುಳುಗಿರುವವರೆಗೆ ವಸಂತ ಕಾಲ ತನ್ನ ಮುಖಾರವಿಂದವನ್ನು ನಿಧಾನವಾಗಿ ತೋರಿಸುತ್ತ ಕಾಮುಕ ಪ್ರೀತಿಯ ಅಮಲಿನಲ್ಲಿಯೇ ಬೀಳುವಂತೆ ಮಾಡುವ ಕಾಲವೊಂದು ಬರುತ್ತೆ ಅಂತ ನಮ್ಮ ತಾತ ಮುತ್ತಾತಂದಿರು ಊಹಿಸಿರಲಿಕ್ಕಿಲ್ಲ. ಕಾಲ ತನ್ನ ಜೋಳಿಗೆಯಲ್ಲಿ ಏನೇನು ಇಟ್ಟುಕೊಂಡು ಬಂದು ನಮಗೆಲ್ಲ ಹಂಚುತ್ತೆ ಹರುವುತ್ತೆ ನಿಜಕ್ಕೂ ಅಚ್ಚರಿಯೇ! ಅದು ತನ್ನ ಒಡಲಲ್ಲಿ ಅಡಗಿಸಿರುವದನ್ನು ಹೊರ ಬಿಚ್ಚಿ ತೋರಿಸಿದಾಗ ನಾವೆಲ್ಲ ಬಿಟ್ಟ ಕಣ್ಣು ಬಿಟ್ಟು ನೋಡುವದೊಂದೇ ನಮ್ಮ ಕೈಯಲ್ಲಿರುವದು. ಅಷ್ಟೊಂದು ಶಕ್ತಿವಂತ ಈ ಕಾಲ. 

 ಭಾರತದಂತ. ತುಂಬಾ ಭಾರವಾದ (ಜನಸಂಖ್ಯೆಯಲ್ಲಿ) ದೇಶದಲ್ಲಿ ಜಾಗತೀಕರಣದಂತ ಪ್ರಮುಖ ಘಟನೆ  ಪ್ರಮುಖವಲ್ಲದ ಅಂದರೆ ಗೌಣವಾದ ಘಟನೆಗಳಿಗೆ ಪ್ರಾಮುಖ್ಯತೆಯ ಬಣ್ಣ ಕೊಟ್ಟು ಮೊದಲ ಆಧ್ಯತೆಯನ್ನು ನೀಡಿ ತನ್ನ ಬೆನ್ನ ಮೇಲೆ ಹೊತ್ತುಕೊಂಡು ನಮ್ಮ ಮುಖದ ಮುಂದೆ ತನ್ನ ಮುಖವಿರಿಸಿದೆ. ಸ್ವದೇಶಿ ಕಲ್ಪನೆಯನ್ನು ಮರೆತು ಎಷ್ಟೆಲ್ಲ ಉನ್ನತ ಸಂಸ್ಕøತಿಯಿರುವ  ದೇಶದಲ್ಲಿ ಪರದೇಸಿಗಳಂತೆ ಮುಖ ಒಣಗಿಸಿಕೊಂಡು ಪಶ್ಚಿಮದ ಕಡೆಯಿಂದ ಬೀಸುವ ಗಾಳಿಗೆ ಹಸಿದವರಂತೆ ಕುಳಿತಿದ್ದೇವೆ. ಆ ಗಾಳಿಯ ಹೊಡೆತಕ್ಕೆ ಬಲವಾದ ಬದಲಾವಣೆಗಳು ಕಂಡರಿಯದ ಕೇಳರಿಯದ ಸಂಗತಿಗಳು ನಮ್ಮ ಬುಡವನ್ನು ಅಲ್ಲಾಡಿಸುವಷ್ಟು ಜೋರಾಗಿ ಪ್ರವೇಶಿಸಿ ನಮ್ಮ ಹಿರಿಯ ಹಿತೈಷಿಗಳೆಲ್ಲ  ಬೇಡ ಬೇಡವೆಂದರೂ ಅವರ ಮಂಜಾದ  ಕಣ್ಣುಗಳಿಗೂ  ರಾಚಿ ಸ್ಪಷ್ಟವಾಗಿ ಎದ್ದು ಕಾಣುತ್ತಿವೆ. ಇದೆಂಥ ಕೆಡುಗಾಲ ಬಂತಪ್ಪಾ? ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಸಭ್ಯತೆಯಿಂದ ಹಂಚಿಕೊಳ್ಳುವದನ್ನು ಈ ರೀತಿ ಅಸಭ್ಯತೆಯಿಂದ ಇಡೀ ಜಗತ್ತಿನ  ಕಣ್ಣಿನ ಮುಂದೆ ಪ್ರದರ್ಶಿಸುವದು ನಮಗೆಲ್ಲ ಸಹ್ಯವಾದುದಲ್ಲ. ಎಂದು ಅಲವತ್ತುಕೊಳ್ಳುತ್ತ  ಮುಖ ಗಂಟು ಹಾಕಿ ಯುವಜನತೆಯ ಪ್ರೀತಿಯ ನಂಟಿನತ್ತ  ಹುಬ್ಬೇರಿಸಿ ನೋಡುವದು ಮಾಮೂಲಾಗಿ ಬಿಟ್ಟಿದೆ. ಹೊಸ ಗಾಳಿಗೆ ಮುಖವೊಡ್ಡಿದ ಯುವಜನತೆ ಇದೇ ನಿಜ ಜೀವನವೆಂದು ಭ್ರಮೆಯಲ್ಲಿ ಕೇಕೆ ಹಾಕುತ್ತ ಕಿಕ್ ಕೊಡುತ್ತಿದೆ ಎಂದು ನಶೆಯೇರಿಸಿಕೊಂಡು ದಿಕ್ಕು ಕಾಣದ ಗಾವಿಲರಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಗೊತ್ತು ಗುರಿಯಿಲ್ಲದವರಂತೆ ಪ್ರೀತಿಯ ಹೆಸರಿನಲ್ಲಿ ತಿರುಗತ್ತಲೇ ಇದ್ದಾರೆ. 

ಪ್ರತಿ ದಿನವೂ ಶುದ್ಧ ಪ್ರೀತಿ ಹಂಚುವ ದಿನ ಅದಕ್ಕಂತಲೇ ಒಂದು ದಿನ ಮಾತ್ರ ಮೀಸಲಿರಿಸುವದು ಎಂಥ ಸಂಪ್ರದಾಯ. ಪ್ರತಿ ದಿನವೂ ಪ್ರತಿ ಕ್ಷಣವೂ ಪ್ರೀತಿಯಲ್ಲಿ ಉಸಿರಾಡುವದೇ ನಮ್ಮ ಜನ್ಮ ಸಿದ್ಧ ಹಕ್ಕು  ಅದನ್ನೆಲ್ಲ ಮರೆತು ಹೀಗೆ ಕುಣಿಯುವದು ಸರಿಯೇ? ಎನ್ನೋದು  ಹಿರಿಯರ ಕಳವಳ. ಪ್ರೀತಿಗಾಗಿ ನಾವೆಲ್ಲಿ ಒಂದು ದಿನ ಮೀಸಲಿಟ್ಟಿದ್ದೀವಿ..ಪ್ರೇಮಿಗಳ ದಿನಾಚರಣೆ ಬರುವ ಮುನ್ನವೇ ಕೆಲ ದಿನಗಳಿಂದ ಇದರ ತಯಾರಿ ಭರ್ಜರಿಯಾಗಿ ನಡೆದೇ ಇರುತ್ತದೆ. ಎಲ್ಲಿ ನೋಡಿದರೂ ಇದರ ಗುಸು ಗುಸು ಕೇಳುವದು. ಮತ್ತೆ ಪಿಸುಮಾತುಗಳು ಬೀಳದೇ ಇರವು. ಸಣ್ಣ ಪುಟ್ಟ ಅಂಗಡಿ ಮುಗ್ಗಟ್ಟುಗಳಿಂದ ಹಿಡಿದುಕೊಂಡು ದೊಡ್ಡ ದೊಡ್ಡ ಮಾಲ್‍ಗಳಲ್ಲಿಯೂ ಪ್ರೇಮಿಗಳಿಗಾಗಿಯೇ ತಯಾರಿಸಲ್ಪಟ್ಟ ವಿಶೇಷ ವಿಭಿನ್ನ ಕಣ್ಮನ ಸೆಳೆಯುವ ಗಿಫ್ಟ್‍ಗಳದ್ದೇ ಹಾವಳಿ. ಹಣಕಾಸಿನ ಸ್ಥಿತಿಗತಿಯ ಮೇಲೆ ಅಂದಿನ ಪ್ರೀತಿಯ ಹೆಸರಿನ ಪ್ರೀತಿಯೂ ಸಿಗುತ್ತದೆ. ಪ್ರೀತಿಯ ಹೆಸರಿನಲ್ಲಿ ಕಾಣಿಕೆಗಳು ಮನದ ಮೂಲೆಯಲ್ಲಿ ಜಾಗ ಪqಯದಿದ್ದರೂ ಮನೆಯ ಮೂಲೆಯಲ್ಲಿ ಜಾಗ ಪಡೆಯುವದಂತೂ ಖಚಿತ. 

ಯೌವನದಲ್ಲಿ ಒಂಟಿ ಒಂಟಿಯಾಗಿರುವದು ಬೋರು ಬೋರು ಎನ್ನುವದು ಯುವಜನರ ಮಾನಸಿಕ ತುಮುಲ. ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಹೊಂದಿರದಿದ್ದರೆ ಭವಿಷ್ಯತ್ತಿಗಾಗಿ ತಯಾರಿ ನಡೆಸುವ ಸಭ್ಯ ಯುವಕರನ್ನು ಕಂಡು  ಅವರಲ್ಲಿ ಏನೋ ಐಬು ಇದೆ ಎಂದು ಶಂಕಿಸುವದಕ್ಕೂ  ಹೇಸುವದಿಲ್ಲ. ಜೀವನದಲ್ಲಿ ಪ್ರತಿಯೊಂದಕ್ಕೂ ಒಂದು ಕಾಲ ನಿಗದಿಯಾಗಿದೆ ಅದೇ ಸಮಯದಲ್ಲಿ ಅದನ್ನು ಪಡೆದು ಸ್ವಾದಿಸುವದು .ಜೀವನ ಧರ್ಮ. ಪ್ರಕೃತಿ ಸಹಜವಾಗಿ  ಪ್ರೇಮ ಕಾಲಕ್ಕೂ ಋತುಧರ್ಮಗಳಿವೆ. ಇದರಲ್ಲಿ ಯುವ ಜನತೆಗೆ ಎದ್ದು ಕಾಣುವದು ಮತ್ತು ಬಹುವಾಗಿ ಕಾಡುವದು ಒಂಟಿತನ. ಒಂಟಿತ£ವೇ  ಪ್ರೀತಿಯನ್ನು ಹುಡುಕಲು ಹಚ್ಚಿ  ಎಂಥ ಮುಗ್ಧರ ಬಾಯಲ್ಲೂ ಪ್ರೀತಿ ನಿವೇದನೆಯ ಮಾತುಗಳನ್ನಾಡಿಸಿ ಬಿಡುತ್ತದೆ. ತಮ್ಮ ಕಾಲ ಮೇಲೆ ಇನ್ನು ನಿಲ್ಲಲು ಬಾರದಿರುವ  ಪಾಲಕರ ಹಣೆಯ ಬೆವರು ಹನಿಯ ಪಾಕೆಟ್ ಮನಿಯ ಮೇಲೆ ಉಸಿರಾಡುತ್ತಿರುವ ಇವರಿಗೆ  ಆಡುವ ಕೂಸಿಗೊಂದು ಕಾಡುವ ಕೂಸಿನಂತೆ ಪ್ರೀತಿಯ ಹೆಸರಿನಲ್ಲಿ ಪ್ರೇಯಸಿಯನ್ನು ಮ್ಯಾನೇಜ್ ಮಾಡುವ ಕರ್ಮ! .ಮೊಬೈಲ್ ಕರೆನ್ಸಿ., ನೆಟ್ ಪ್ಯಾಕ್ ರಿಚಾರ್ಜ್, ಮೀಟ್ ಆದಾಗಲೊಮ್ಮೆ ಚಾಟ್  ತಿನ್ನಲು ಚಾಟ್ಸ್ ದುಕಾನವಾಲಾನ  ಉದ್ರಿ ಬಿಲ್ಲು ತೀರಿಸುವದರೊಳಗೆ ಸಾಕೆನಿಸಿದರೂ ಡೇಟಿಂಗ್ ಬಗ್ಗೆ ಕುತೂಹಲ ತೋರದೇ ಇರುವದಿಲ್ಲ ಅಂತಿಲ್ಲ. ಹೃದಯಲ್ಲಿ ಯೌವನ ತಕಧಿಮಿತದ ಹಾಡು ಹಾಡುತ್ತಿರುವಾಗ ನೋಡಿಕೊಂಡು ಸುಮ್ಮನಿರಲು ನಾವೇನೂ ಸಂನ್ಯಾಸಿ ದೀಕ್ಷೆ ಪಡೆದಿದ್ದೇವೆಯೆ?  ಎನ್ನುವದು ಯೌವನ ಹೊತ್ತು ತಿರುಗುತ್ತಿರುವವರ ದೊಡ್ಡ ಪ್ರಶ್ನೆ.                                                                                                                  ಜೀವನದ ವಸಂತಕಾಲವೇ ಯೌವನ. ಯೌವನದ ಮುಂದುವರಿದ ಭಾಗವೇ ವೃದ್ದಾಪ್ಯ. ಹೊಸದಾಗಿ ಮುದಿತನಕ್ಕೆ ಕಾಲಿಟ್ಟ ಮುದುಕರೆಲ್ಲ ಹೊಸ ಯುವPರನ್ನು ಕಂಡು ತಮ್ಮ ಯೌವನದ ದಿನಗಳ ಸವಿ ಸವಿ ನೆನಪುಗಳನ್ನು ಮೆಲುಕು ಹಾಕುತ್ತ  ಹಿಂದಿನ ಯೌವನದ ಪರದೆಗಳ ಮೇಲಿನ ಚಿತ್ರವನ್ನು ನೋಡಿ ಆ ದಿನಗಳಲ್ಲಿನ ರಸನಿಮಿಷ ಸರಸ ಸಲ್ಲಾಪ ಗಳನ್ನು  ಕಣ್ಣ ಮುಂದೆ É ತಂದುಕೊಂಡು ಬಿಳಿ ಮೀಸೆಯ ಅಡಿಯಲ್ಲಿ ಮುಸಿ ಮುಸಿ ನಗುವದನ್ನು ಮರೆಯುವದಿಲ್ಲ. ಇದೀಗ ತಾನೇ ಯೌನವವಾಸ್ಥೆಯ ಹೊಸ್ತಿಲು ದಾಟಿ ವೃದ್ದಾಪ್ಯದ ಕಡೆ ವಾಲುತ್ತಿರುವ ಯಂಗ್ ಮುದುಕಿಯರು ತಮ್ಮ ಯೌವನದ ದಿನಗಳನ್ನು ನೆನೆದು ರೋಮಾಂಚನಗೋಳ್ಳುವದು ಈ ಕ್ಷಣಗಳಲ್ಲೇ. ಮುದಿತನದಲ್ಲಿ ಹಿರಿತನವನ್ನು ಸಾಧಿಸಿದವರು ಬಚ್ಚ ಬಾಯಿ ತೆರೆದು ತಮ್ಮ ಪ್ರೀತಿಯ ಪರ್ವಕಾಲವನ್ನು ನೆನೆಯುತ್ತ ಜೋರು ಬಾಯಲ್ಲಿ ರಸಿಕತನದ ಕ್ಷಣಗಳ ಹಾಸ್ಯ ಪ್ರಸಂಗಗಳನ್ನು ಸರೀಕರೊಂದಿಗೆ ಹೇಳಿಕೊಂಡು ಗಹ ಗಹಿಸಿ ನಕ್ಕು ಸಂತಸ ಹಂಚಿಕೊಂಡು ಸಂಭ್ರಮಿಸುತ್ತಾರೆ.  

ಡೇಟಿಂಗ್ ಚಾಟಿಂಗ್ ಎನ್ನುವ ಪಾಶ್ಚಿಮಾತ್ಯದ  ಪರಿಕಲ್ಪನೆಳನ್ನು ಹೊರತು ಪಡಿಸಿ ನಿಜವಾದ ಪ್ರೇಮಿಗಳ ಜನನವೂ ಆಗಿರುವದರಲ್ಲಿ ಸಂಶಯವಿಲ್ಲ. ಶೋಕಿಗಾಗಿ ಗುಲಾಬಿ ಹೂ ಹಿಡಿದು ಅಲೆಯುವವರಿಗೆ ಇದೇ  ಕಾಲ ಸಮಯ ಅಂತ ಏನಿಲ್ಲ. ಅಂಥವರಿಗೆಲ್ಲ ಪ್ರತಿ ದಿನದ ಪ್ರತಿ ನಿಮಿಷವೂ ಪ್ರೀತಿಯ ಹೆಸರಿನಲ್ಲಿ ಪ್ರೇಮ ನಿವೇದನೆಗೆ ಸಕಾಲವೇ. ಗಾಳಕ್ಕೆ ಬಿದ್ದವರನ್ನು ಬೇಕೆನಿಸಿದಂತೆ ಉಪಯೋಗಿಸಿಕೊಂಡು ಉಂಡ ಮೇಲೆ ಬಾಳಲಿ ಈ ಬಾಳೆಲೆಯ ಉಪಯೋಗವೇನೆಂದು ಬೀಸಾಡುವವರೂ ಬೀಸಾಡಿದ ಎಲೆಗಳಾದವರ ರೋಧನ ಮುಗಿಲು ಮುಟ್ಟುವದೂ ಸರ್ವೇ ಸಾಮಾನ್ಯವೆನ್ನಿಸುವಷ್ಟರ ಮಟ್ಟಿಗೆ  ಢಾಂಬಿಕ ಕಾಮುಕ  ಪ್ರೀತಿ ಸಾಂಕ್ರಾಮಿಕವಾಗಿ ಹರಡುತ್ತಿದೆ. ನಿಜವಾಗಿಯೂ ಗಂಡು ಹೆಣ್ಣಿನ ನಡುವೆ ಹರಡಿ ಹಬ್ಬಿದ ಗುಲ್ಲೆಬ್ಬಿಸಿದ ಅನುರಾಗ ಬಂಧನದ ಲತೆಯಲ್ಲಿ ಅರಳಿದ ಹೂವುಗಳೂ ಉದುರಿ ಬಾಳುವದುಂಟು.ಬಾಡುವುದುಂಟು.  ಪ್ರೇಮದ ಲತೆಗಳು ಕಮರಿ ಹೋಗುವದೂ ಉಂಟು. ಒಂದು ಪ್ರೇಮದ ಕುಸುಮ ಉದುರಿಹೋದ ಮಾತ್ರಕ್ಕೆ  ಜೀವ£ದಲ್ಲಿ  ತನ್ನದೆಲ್ಲವನ್ನೂ  ಕಳೆದುಕೊಂಡೆ ಎಂದು ತಪ್ಪು ಭಾವಿಸಿ ಹುಸಿ ಪ್ರೀತಿಗಾಗಿ ಅಮೂಲ್ಯವಾದ  ಜೀವನವನ್ನೇ ಕಳೆದುಕೊಳ್ಳುವವರೂ ಇದ್ದಾರೆ.  ಒಮ್ಮೆ ಉದುರಿ ಹೋದರೆ ಏನಾಯ್ತು? ಜೀವನದ ಲತೆಯಲ್ಲಿ ಪ್ರೀತಿಯ ಪುಷ್ಪ ಮತ್ತೊಮ್ಮೆ ಅರಳಿಯೇ  ಅರಳುತ್ತದೆಂದು  ನಿಜ ಪ್ರೀತಿಯ ಆಗಮನಕ್ಕಾಗಿ ಒಲವಿನ ಕಂಗಳು ಹಾಸಿ ಕಾಯುವವರೇ ಜಾಣರು. 

ಹರೆಯದ ಹೃದಯದಲ್ಲಿ ಅನುರಾಗದ ಮೊಗ್ಗು ಮೂಡಿದಾಗ ಪ್ರೇಮದ ಕಾರಂಜಿ ಪುಟಿದು ಚಿಮ್ಮುವ ಆಸೆ ತಳೆದಾಗ  ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಹಾಗೆಂದ ಮಾತ್ರಕ್ಕೆ ಸುತ್ತಲೂ ವೈರಲ್‍ನಂತೆ ವೈರಸ್‍ನಂತೆ ಆವರಿಸುತ್ತಿರುವ  ಪಾಶ್ಚಾತ್ಯದ ಬಿರುಗಾಳಿಗೆ ಬಲವಂತವಾಗಿ ಅದನ್ನು ಹಿಗ್ಗಿಸದಿರಿ.. ಪ್ರೀತಿಯ ಮೊಗ್ಗು ತಾನಾಗಿಯೇ ಹಿಗ್ಗಿ ಹಿಗ್ಗಿ ಹೂವಾಗಲಿ. ಅದೇ ರೀತಿ ಜೀವನದ ಪ್ರತಿ ಪ್ರೀತಿಯೂ ಹೆಚ್ಚುತಲಿರಲಿ. 

-ಜಯಶ್ರೀ.ಜೆ. ಅಬ್ಬಿಗೇರಿ 

ಆಂಗ್ಲ ಭಾಷಾ ಉಪನ್ಯಾಸಕರು  ಸ ಪ ಪೂ ಕಾಲೇಜು ಹಿರೇಬಾಗೇವಾಡಿ.ತಾ:ಜಿ: ಬೆಳಗಾವಿ 591109               9449234142

Comments