UK Suddi
The news is by your side.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಶಾಸಕ ಅರವಿಂದ್ ಬೆಲ್ಲದ ಆರೋಪ.

ಧಾರವಾಡ: ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ. ದುಷ್ಕೃತ್ಯಗಳನ್ನು ನಡೆಸುವವರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಪೊಲೀಸರ ಮೇಲೆ ನಡೆಯುತ್ತಿರುವ ರಾಜಕೀಯ ದಬ್ಬಾಳಿಕೆಯಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷದಲ್ಲಿ ಧಾರವಾಡದಲ್ಲಿ 30 ಕೊಲೆಗಳು ನಡೆದಿವೆ. ಮೊನ್ನೆಯಷ್ಟೇ ಕೋಳಿಕೇರಿಯಲ್ಲಿ ಯುವಕನ ಬರ್ಬರ ಹತ್ಯೆಯಾಗಿದೆ. ಹಾಡಹಗಲೇ ವಕೀಲನ ಮೇಲೆ ಹತ್ಯೆ ಯತ್ನ ನಡೆದಿದೆ. ಇಂಥ ದುಷ್ಕೃತ್ಯಗಳನ್ನು ನಡೆಸುವವರಿಗೆ ಪೊಲೀಸರ ಭಯವೇ ಇಲ್ಲವೇ ಎಂದು ಬೆಲ್ಲದ ಪ್ರಶ್ನಿಸಿದರು.
ವಿದ್ಯಾಕಾಶಿ, ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಿಸಿಕೊಳ್ಳುವ ಧಾರವಾಡ ಸಂಪೂರ್ಣ ಗುಂಢಾ ನಗರವಾಗಿ ಬದಲಾಗಿದೆ. ಕೊಲೆ, ಕೊಲೆಯತ್ನಗಳು, ಮೀಟರ್ ಬಡ್ಡಿಕುಳಗಳ ಆರ್ಭಟ, ಇಸ್ಪೀಟ್ ಅಡ್ಡೆಗಳ ಹಾವಳಿ ವಿಪರೀತ ಹೆಚ್ಚಾಗುತ್ತಿದೆ. ಇವುಗಳನ್ನು ಮಟ್ಟಹಾಕಬೇಕಾದ ಪೊಲೀಸರು ಏನು ಮಾಡುತ್ತಿದ್ದಾರೆ? ನಗರದಲ್ಲಿ ಒಂಟಿಯಾಗಿ ಅಡ್ಡಾಡುವ ಪರಿಸ್ಥಿತಿಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಡಳಿತಾರೂಢ ಕಾಂಗ್ರೆಸ್‍ನ ಕೆಲವರು ಪೊಲೀಸರನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಹೀಗಾಗಿ ಗುಂಢಾಗಳನ್ನು ಮಟ್ಟ ಹಾಕಲು ಪೊಲೀಸರೂ ವಿಫಲರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments