ಸಂತ ಸೇವಾಲಾಲರು ಸಮಾಜದ ಎಲ್ಲ ವರ್ಗಕ್ಕೂ ಶ್ರಮ ಸಂಸ್ಕೃತಿಯ ಸಂದೇಶ ನೀಡಿದ್ದಾರೆ:ವಿಪಕ್ಷ ನಾಯಕ ಜಗದೀಶ್ ಶೆಟ್ಟರ್.
ಸಂತ ಸೇವಾಲಾಲ ಮಹಾರಾಜರು ಓರ್ವ ಧಾರ್ಮಿಕ ಮಹಾಪುರುಷರಾಗಿದ್ದು, ಸಮಾಜದ ಎಲ್ಲ ವರ್ಗಕ್ಕೂ ಶ್ರಮ ಸಂಸ್ಕೃತಿಯ ಸಂದೇಶವನ್ನು ನೀಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ ಅವರು ಹೇಳಿದರು.
ಅವರು ಇಂದು ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಸಂತ ಶ್ರಿ ಸೇವಾಲಾಲ ಮಹಾರಾಜರ 279ನೇ ಜಯಂತ್ಯೊತ್ಸವ ಉದ್ಘಾಟಿಸಿ ಮಾತನಾಡಿದರು.
ಮಹಾಪುರುಷರ ಜಯಂತಿಗಳ ಆಚರಣೆಯಿಂದ ಸಮಾಜದ ಒಗ್ಗಟ್ಟು ಮತ್ತು ಸಮಾನತೆಗಳನ್ನು ಬಲಗೊಳಿಸಿದಂತೆ ಆಗುತ್ತದೆ. ರಾಜ್ಯ ಸರಕಾರ ಸೇವಾಲಾಲರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವುದಕ್ಕೆ ನನ್ನ ಅಭಿನಂದನೆಗಳು. ವಿಶಿಷ್ಟ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳಿಸಿದ ಕೀರ್ತಿ ಬಂಜಾರ ಸಮುದಾಯಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಶ್ರಿನಿವಾಸ ಮಾನೆ ಮಾತನಾಡಿ, ಬಂಜಾರ ಸಮುದಾಯದ ಅಭಿವೃದ್ಧಿಗೆ ಹಾಗೂ ಬಂಜಾರ ತಾಂಡಾಗಳಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.ಬಂಜಾರ ಸಮುದಾಯದ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಲು ಸರಕಾರ ಬಂಜಾರ ಅಭಿವೃದ್ದಿ ನಿಗಮದ ಮೂಲಕ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಹುಬ್ಬಳ್ಳಿಯ ಬಂಜಾರ ಗುರುಪೀಠದ ತಿಪ್ಪೆಶ್ವರ ಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಅರವಿಂದ ಬೆಲ್ಲದ ವಹಿಸಿದ್ದರು.ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚೈತ್ರಾ ಶಿರೂರ,ಧಾರವಾಡ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಹಾಗೂ ಸಮಾಜದ ಮುಖಂಡರಾದ ಪಾಂಡುರಂಗ ಪಮ್ಮಾರ, ಪಿ.ಎಸ್.ರಜಪೂತ, ಜಯಸಿಂಗ ನಾಯಕ, ಡಾ.ಮುಕುಂದ ಲಮಾಣಿ, ಡಾ.ರವಿ ನಾಯಕ ಹಾಗೂ ಮುತ್ತುರಾಜ ಮಾಕಡೆವಾಲೆ, ಮಂಜುನಾಥ ಭೋವಿ ಮುಂತಾದವರು ಭಾಗವಹಿಸಿದ್ದರು.