UK Suddi
The news is by your side.

ಜನ ಮೆಚ್ಚಿನ ಬಜೆಟ್ ಆಗಿದೆ:ಸಚಿವ ವಿನಯ ಕುಲಕರ್ಣಿ.

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ವಿಧಾನಸಭೆಯಲ್ಲಿ ಮಂಡಿಸಿದ 2018-19ನೇ ಸಾಲಿನ ಬಜೆಟ್‍ನಲ್ಲಿ ಧಾರವಾಡ ಜಿಲ್ಲೆಯ ಅಂಚಟಗೇರಿ ಗ್ರಾಮದಲ್ಲಿ ಸಾರಿಗೆ ಸಂಸ್ಥೆ ಹೊಂದಿರುವ 56.13 ಎಕರೆ ಜಮೀನಿನಲ್ಲಿ ಟರ್ಮಿನಲ್ ಹಾಗೂ ಲಾಜಿಸ್ಟಿಕ್ ಪಾರ್ಕ್ ವೇರ್ ಹೌಸ್ ನಿರ್ಮಾಣಕ್ಕೆ 110 ಕೋಟಿ ರೂ. ಗಳನ್ನು ಘೋಷಿಸಿದ್ದಾರೆ. ಜೊತೆಗೆ ಭಾರಿ ವಾಹನ ಚಾಲಕರ ಬೇಡಿಕೆ ಸಾಕಷ್ಟು ಇರುವ ಹಿನ್ನೆಲೆಯಲ್ಲಿ ಉದ್ಯೋಗವಕಾಶವನ್ನು ಸೃಜಿಸಲು ಬೆಂಗಳೂರು ಮತ್ತು ಧಾರವಾಡಗಳಲ್ಲಿನ ಭಾರಿ ವಾಹನ ಚಾಲಕ ತರಬೇತಿ ಸಂಸ್ಥೆಗಳಲ್ಲಿ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿ 200 ಎಸ್.ಸಿ. ಹಾಗೂ ಎಸ್.ಟಿ. ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡಿ ನಂತರ ವಾಹನ ಖರೀದಿಗೆ ಕೆ.ಎಸ್.ಎಫ್.ಸಿ. ಮತ್ತು ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ನಿಯಮಿತ ಸಹಯೊಗದೊಂದಿಗೆ ಶೂನ್ಯ ಬಡ್ಡಿ ದರದಲ್ಲಿ 15 ಲಕ್ಷ ರೂ.ಗಳ ಸಾಲ ನೀಡಲು ಯೋಜನೆ ರೂಪಿಸಲಾಗಿದೆ. ಬಡ್ಡಿ ಸಹಾಯಧನಕ್ಕಾಗಿ 2.50 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ ಬಂಡವಾಳ  ಹೂಡಿಕೆಯನ್ನು ಉತ್ತೇಜಿಸಲು ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 11 ಹೊಸ ಕೈಗಾರಿಕಾ ವಸಾಹತುಗಳನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಅಭಿವೃದ್ಧಿ ಪಡಿಸಲಾಗುವುದು. ಧಾರವಾಡ ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೊರಾಂಗಣ ಜಿಮ್ ಸೌಕರ್ಯ, ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪನೆಗೆ 1 ಕೋಟಿ ರೂ. ಮೀಸಲಿಟ್ಟಿದ್ದಾರೆ. ಧಾರವಾಡದ ಕೆ.ಸಿ.ಸಿ. ಬ್ಯಾಂಕಿನ ಶತಮಾನೋತ್ಸವ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ಗಳನ್ನು ಸರ್ಕಾರ ಮತ್ತು ಅಪೆಕ್ಸ್ ಬ್ಯಾಂಕಿನಿಂದ ನೀಡಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಈ ಬಜೆಟ್ ಜನಮೆಚ್ಚಿನ ಬಜೆಟ್ ಆಗಿದೆ’ ಎಂದು ಸಚಿವ ವಿನಯ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಪ್ರಾದೇಶಿಕ ಅಸಮಾನತೆ, ಮಹಿಳಾ ಸಮಾನತೆ ತರಲು ಪೂರಕವಾಗಿದೆ. ಮಹಿಳೆಯರಿಗೆ ಸ್ನಾತಕೋತ್ತರ ಶಿಕ್ಷಣದವರೆಗೆ ಸಂಪೂರ್ಣವಾಗಿ ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರುವುದು ವರದಾನವಾಗಿದೆ. ಒಣ ಭೂಮಿ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ ಎರಡು ಸಾವಿರ ರೂ.ಗಳಂತೆ ಒಟ್ಟು ಐದು ಎಕರೆವರೆಗೆ ಹತ್ತು ಸಾವಿರ ರೂ.ಗಳ ಪ್ರೊತ್ಸಾಹ ಧನ ಘೋಷಿಸಿರುವುದು ಸಂತಸ ತಂದಿದೆ. ಒಟ್ಟಾರೆಯಾಗಿ ರಾಜ್ಯ ಬಜೆಟ್ ಅತ್ಯುತ್ತಮವಾಗಿದೆ ಎಂದು ಗಣಿ, ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

Comments