UK Suddi
The news is by your side.

ಪರಶಿವನ ಮುಕ್ತ ಆಲಯ ಶಿವಮೊಗ್ಗ ಬಳಿಯ ಮತ್ತೂರಿನಲ್ಲಿ

‘ಸಂಸ್ಕೃತಗ್ರಾಮ’ವೆಂದು ದೇಶದ ಉದ್ದಗಲಕ್ಕೂ ಹೆಸರು ಮಾಡಿರುವ ಶಿವಮೊಗ್ಗ ಬಳಿಯ ಮತ್ತೂರಿನಲ್ಲಿ ಮತ್ತೊಂದು ವಿಶೇಷವಿದೆ. ಊರಿನಿಂದ ಮುಕ್ಕಾಲು ಮೈಲಿ ದೂರದಲ್ಲಿ ನೈಸರ್ಗಿಕ ಕಲ್ಲುಬಂಡೆಗಳ ಮಧ್ಯೆ ಭವ್ಯ ದೇವಾಲಯ ಸಮುಚ್ಚಯವೊಂದು ಪ್ರವಾಸಿಗರನ್ನು, ಭಕ್ತರನ್ನು ಕರೆಯುತ್ತಿದೆ. ಮತ್ತೂರಿಗೆ ಬಂದವರು ‘ಗಣಪತಿ ಗುಡ್ಡದ ಮುಕ್ತ ಶಿವಾಲಯ’ವೆಂದು ಪ್ರಸಿದ್ಧವಾಗಿರುವ ಈ ಶಿವಾಲಯವನ್ನು ಸಂದರ್ಶಿಸದೆ ಹೋಗಲಾರರು.

ಸುಮಾರು 50 ವರ್ಷಗಳ ಹಿಂದಿನ ಮಾತು. ‘ಮಿಲ್ ಆಯ್ಯು’ ಎಂದೇ ಪ್ರಸಿದ್ಧರಾದ ಹಾಸನ ಮೂಲದ ಶ್ರೀಕಂಠಯ್ಯನವರು ಒಂದು ನೂತನ ಅಕ್ಕಿ ಮಿಲ್ಲನ್ನು ಸ್ಥಾಪಿಸಲು ತುಂಗಭದ್ರಾ ನಾಲೆಯ ದಂಡೆಯನ್ನು ಮತ್ತೂರಿನ ಏರಿಯ ಬಳಿ ಆರಿಸಿಕೊಂಡರು. ಕಾಡುಗಿಡ, ಮರಬಳ್ಳಿಗಳಿಂದ ಆವೃತವಾಗಿದ್ದ ಆ ಸ್ಥಳದಲ್ಲಿ ಒಂದು ದಿನ ಆಕಸ್ಮಿಕವಾಗಿ ಕಲ್ಲಿನ ಗಣೇಶನ ಮೂರ್ತಿಯೊಂದು ಗೋಚರಿಸಿತು. ಕರಗಿ ಶಿಥಿಲವಾಗಿದ್ದ ಗಣಪನನ್ನು ರಕ್ಷಿಸುವ ಮನಸ್ಸಾಗಿ, ಶ್ರೀಕಂಠಯ್ಯನವರು ಅದಕ್ಕೊಂದು ಪುಟ್ಟ ಆವರಣವನ್ನು ಮಾಡಿಸುವ ಕನಸು ಕಂಡರು. ಗಣೇಶನ ವಿಗ್ರಹ ಸಿಕ್ಕ ವಿಚಾರವನ್ನು ಆಪ್ತರಾದ ಮಾರ್ಕಂಡೇಯ ಅವಧಾನಿಗಳಲ್ಲಿ ನಿವೇದಿಸಿಕೊಳ್ಳುತ್ತ, ತಮ್ಮ ಕನಸನ್ನು ಹಂಚಿಕೊಂಡರು. ‘ಆಲೋಚನೆ ಚೆನ್ನಾಗಿದೆ. ದೈವೇಚ್ಛೆ ಏನಿದೆಯೊ ನೋಡೋಣ’, ವೆಂದರು. ಕಾಲಚಕ್ರ ಉರುಳಿತು.

ಅವಧಾನಿಗಳಿಗೆ ಶೃಂಗೇರಿಯ ಜಗದ್ಗುರುಗಳು, ಹಿಂದೆ, ಅನುಗ್ರಹಪೂರ್ವಕವಾಗಿ ಐದುಸಾವಿರ ರೂಪಾಯಿಗಳನ್ನು ನೀಡಿ, ‘ಧರ್ಮ ಪ್ರವರ್ತಕ’ನಾಗೆಂದು ಹರಸಿದ್ದರು. ಆ ಹಣವನ್ನು ಅವಧಾನಿಗಳು ಧರ್ಮಕಾರ್ಯಕ್ಕಾಗಿ ಎಂದು ಬ್ಯಾಂಕಿನಲ್ಲಿರಿಸಿದ್ದರು. ಐದು ಸಾವಿರ ರೂಪಾಯಿ ವರ್ಷಗಳ ನಂತರ ಹದಿನೈದು ಸಾವಿರ ರೂಪಾಯಿಗಳಾಗಿತ್ತು. ಮತ್ತೊಮ್ಮೆ ಶೃಂಗೇರಿ ಸ್ವಾಮಿಗಳ ದರ್ಶನಲಾಭ ಹೊಂದಿದ್ದ ಸಂದರ್ಭದಲ್ಲಿ ಮಾರ್ಕಂಡೇಯ ಅವಧಾನಿಗಳು ಗುರುಗಳಲ್ಲಿ ವಿನಂತಿಸಿ, ಅಕಸ್ಮಾತ್ತಾಗಿ ಸಿಕ್ಕ ಗಣೇಶನಿಗೊಂದು ಆವರಣ ನಿರ್ವಿುಸುವ ಸಂಕಲ್ಪವನ್ನೂ, ಗುರುಗಳ ಆಶೀರ್ವಾದದಿಂದ ಒಟ್ಟಾಗಿರುವ ಹದಿನೈದು ಸಾವಿರ ರೂಪಾಯಿಗಳೊಂದಿಗೆ ಆರಂಭಿಸಲು ಯೋಚಿಸಿರುವ ತಮ್ಮ ಯೋಜನೆಯನ್ನೂ ವಿವರಿಸಿದರು. ಉತ್ತರವಾಗಿ ಬಂದ ಶ್ರೀಗಳ ಆಶೀರ್ವಾದದ ನುಡಿಗಳೇ ಶ್ರೀರಕ್ಷೆಯಾಯಿತು ಅವಧಾನಿಗಳಿಗೆ. ಜಗದ್ಗುರುಗಳ ಆಶೀರ್ವಚನದೊಂದಿಗೆ ಅವಧಾನಿಗಳು ಊರನ್ನು ತಲುಪಿದರು.

ಮನೆಯನ್ನು ತಲುಪುವ ವೇಳೆಗೆ, ಅವಧಾನಿಗಳ ಮನೆಯ ಬಾಗಿಲಲ್ಲಿ ಸುಮಾರು ಅರವತ್ತು ವರ್ಷ ಸಮೀಪಿಸಿದ್ದ ವ್ಯಕ್ತಿಯೊಬ್ಬರು ಕಾಣಿಸಿಕೊಂಡರು. ಪರಿಚಯ ಮಾಡಿಕೊಳ್ಳುತ್ತ ಬಂದ ವ್ಯಕ್ತಿ ಹೇಳಿದರು, ‘ನಾನು ನಾರಾಯಣ ಎಂದು. ಮುಖ್ಯ ಇಂಜಿನಿಯರ್ ಆಗಿ ಈ ವಿಭಾಗಕ್ಕೆ ಈಗಷ್ಟೇ ವರ್ಗವಾಗಿದೆ. ಇನ್ನು ಮೂರು ತಿಂಗಳಿಗೆ ನಿವೃತ್ತನಾಗಲಿದ್ದೇನೆ. ಈ ಊರಿಗಾಗಿ ನನ್ನಿಂದೇನಾದರೂ ಮಾಡಲು ಸಾಧ್ಯವಾಗುವುದಿದ್ದರೆ ನಾನು ಸಿದ್ಧ. ಅಪ್ಪಣೆ ಕೊಡಿ’. ಗಣಪತಿಗೆ ಒಂದು ಸೂರು ಮಾಡಿಸುವ ತಮ್ಮ ಮನಸ್ಸಿನ ಯೋಚನೆಯನ್ನು ಅವಧಾನಿಗಳು ನಾರಾಯಣರೊಡನೆ ಹಂಚಿಕೊಂಡರು. ಮರುದಿನವೇ ಕಾಮಗಾರಿ ಆರಂಭವಾಯಿತು. ನೋಡುತ್ತಿದ್ದಂತೆ ಗಣಪತಿ ಗುಡ್ಡದಲ್ಲಿ ಪರಿವರ್ತನೆಯಾಗಿ ಗುಡಿಯೊಂದು ತಲೆ ಎತ್ತಿತು.

ಕಲಾವಿದರೂ ಆಗಿದ್ದ ಅವಧಾನಿಗಳಿಗೆ, ಗಣಪತಿಗುಡ್ಡವನ್ನು ಇನ್ನೂ ಆಕರ್ಷಣೀಯವಾಗಿ ಮಾಡಬೇಕೆಂಬ ಆಲೋಚನೆ ಸಹಜವಾಗಿ ಮೂಡಿತು. ಸ್ಥಳದ ಮಧ್ಯಭಾಗದಲ್ಲಿದ್ದ ನೈಸರ್ಗಿಕ ಕಲ್ಲು ಬಂಡೆಯಲ್ಲೇ ಶಿವನ ಲಿಂಗವನ್ನು ಕೆತ್ತಿಸುವ ತಮ್ಮ ಅಭಿಪ್ರಾಯವನ್ನು, ಶಿವಮೊಗ್ಗದ ಶಿಲ್ಪಿಗಳಲ್ಲಿ ಹಂಚಿಕೊಂಡರು. ಸಹಜವಾಗಿ ಎಂಬಂತೆ, ಕಲ್ಲಿನಲ್ಲಿ ಉದ್ಭವವಾದಂತೆ ಲಿಂಗವನ್ನು ಕಡೆಸುವುದೆಂದೂ, ಪಾಣಿಪೀಠವನ್ನು ಬೇರೆಯಾಗಿ ಮಾಡಿಸಿ ಕೂರಿಸುವುದೆಂದೂ ತೀರ್ವನವಾಯಿತು. ಅದೃಷ್ಟವೆಂಬಂತೆ ಶಿವಲಿಂಗ, ಒಂದು ಚೂರೂ ಮುಕ್ಕಾಗದಂತೆ, ನಿರೀಕ್ಷಣೆಗೂ ಮೀರಿ, ನಯವಾಗಿ ಮೂಡಿಬಂದಿತು. ಕಡೂರಿನ ಬಳಿಯಿಂದ ಕಲ್ಲೊಂದನ್ನು ತರಿಸಿ ಪಾಣಿಪೀಠ ಮಾಡಿಸಲಾಯಿತು. ಮುಕ್ತ ಶಿವಾಲಯದ ಮಂಟಪವೂ ತಲೆ ಎತ್ತಿತು. ಕಲ್ಲಿನಲ್ಲಿ ಮೂಡಿಸಿದ ಸರ್ಪ¤ಗಳ ಮೂರ್ತಿಗಳೂ ಸ್ಥಾಪಿಸಲ್ಪಟ್ಟವು.

‘ಶಿವನನ್ನು ಆರಾಧಿಸುವ ಎಲ್ಲರೂ ಈ ಸ್ಥಳಕ್ಕೆ ಬಂದು, ಪುಷ್ಕರಿಣಿಯಲ್ಲಿ ಮಿಂದು ತಮ್ಮ ಕೈಗಳಿಂದಲೇ ಶಿವನಿಗೆ ಅಭಿಷೇಕ ನಡೆಸಬಹುದು. ಜಾತಿಯ ಕಟ್ಟುಪಾಡಿನ ಅಗತ್ಯವಿಲ್ಲ’ ಎಂದು ಹೇಳುತ್ತ, ‘ನಡೆದುದೆಲ್ಲ ಪವಾಡಸದೃಶ’ವೆಂದು ಗಣಪತಿಗುಡ್ಡದ ರೂವಾರಿ ಮಾರ್ಕಂಡೇಯ ಅವಧಾನಿಗಳು ನೆನಪಿಸಿಕೊಳ್ಳುತ್ತಾರೆ.

ಶಿವಲಿಂಗಕ್ಕೆ ಪಾಣಿಪೀಠವನ್ನು ಕಾಂಟ್ರಾಕ್ಟರೊಬ್ಬರು ಉದಾರವಾಗಿ ದಾನ ನೀಡಿದರು. ಶಿವಲಿಂಗದ ಮುಂದೆ ಸ್ಥಾಪಿಸಲು ನಂದಿಯನ್ನು ಕಾಣಿಕೆಯಾಗಿ ಕೊಡುತ್ತೇವೆಂದರು, ನಿವೃತ್ತ ಶಿಕ್ಷಕ ಕೃಷ್ಣಸ್ವಾಮಿಗಳು. ಸಂಕೀರ್ಣದ ರಚನೆಗೆ ತಗಲುವ ಸಿಮೆಂಟಿನ ಖರ್ಚೆಲ್ಲ ತಮ್ಮದೆಂದರು, ವಿಶಾಖಪಟ್ಟಣದ ಸ್ವಾಮಿಗಳೊಬ್ಬರು. ವಿಶ್ವಾಮಿತ್ರಋಷಿಯ ಕಲ್ಲಿನ ಶಿಲ್ಪವನ್ನು ಮಾಡಿಸಿ ಸ್ಥಾಪಿಸಬೇಕೆಂದು ಆಗ್ರಹಿಸಿ, ಗುಡ್ಡದ ರೂಪರೇಷೆಯನ್ನು ಸಿದ್ಧಪಡಿಸಿಕೊಟ್ಟಿದ್ದ ಹಿರಿಯ ಇಂಜಿನಿಯರ್ ಐದು ಸಾವಿರ ರೂಪಾಯಿ ನೀಡಿದರು. ಸರ್ಪ¤ಗಳ ಶಿಲಾಮೂರ್ತಿಗಳನ್ನು ಬೆಂಗಳೂರಿನ ಹೆಸರಾಂತ ಶಿಲ್ಪಿ ಕನಕಾಮೂರ್ತಿ ರೂಪಿಸಿದರೆ; ಅದರ ವೆಚ್ಚವನ್ನು ಭರಿಸಿದವರು ದಿ. ಮತ್ತೂರು ಕೃಷ್ಣಮೂರ್ತಿಗಳು.

ಸುಮಾರು ಒಂದೆಕರೆ ವಿಸ್ತೀರ್ಣದಲ್ಲಿ ರೂಪಗೊಂಡಿರುವ ಸುಂದರ ಮುಕ್ತ ಶಿವಾಲಯ ಸಂಕೀರ್ಣದ ಸುತ್ತ ಎತ್ತರದ ಕಾಂಪೌಂಡ್ ಕಟ್ಟಲಾಗಿದೆ. ಶಿವಸಂಕೀರ್ಣದ ಪಕ್ಕದಲ್ಲಿ ನಾಗ ದೇವಾಲಯವನ್ನೂ ಪ್ರತಿಷ್ಠಾಪಿಸಲಾಗಿದೆ. ಮಂಗಳ ಮೂರುತಿ ಶಿವನನ್ನು ಆರಾಧಿಸುವ ಎಲ್ಲರೂ ಪರಸ್ಪರ ದ್ವೇಷ-ಅಸೂಯೆಗಳನ್ನು ಮರೆತು, ಅಂತಃಕರಣ ತುಂಬಿದ, ಪ್ರೀತಿ-ವಾತ್ಸಲ್ಯದ ವಾತಾವರಣದಲ್ಲಿ ಬಾಳುವಂತಾಗಲಿ ಎಂದು ಅಶಿಸುವ ಅವಧಾನಿಗಳ ಕನಸು ನನಸಾಗಲಿ ಎಂದು ಹಾರೈಸೋಣ.

-ಮತ್ತೂರು ಸುಬ್ಬಣ

Comments