ಡಾ.ಎಂ ಎಂ ಕಲಬುರ್ಗಿ ಅವರ ನಿವಾಸಕ್ಕೆ ಬೇಟಿ ನೀಡಿದ-ನಟ ಪ್ರಕಾಶ ರೈ
ಧಾರವಾಡ:ನಗರದ ಹಿರಿಯ ಸಂಶೋಧಕ ದಿವಂಗತ ಡಾ.ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ಶುಕ್ರವಾರ ನಟ ಪ್ರಕಾಶ ರೈ ಭೇಟಿ ನೀಡಿ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರ ಕುಶಲೋಪರಿ ವಿಚಾರಿಸಿದರು.
ದಿವಂಗತ ಕಲಬುರ್ಗಿ ಅವರ ಹತ್ಯೆ ನಡೆದು ಎರಡು ವರ್ಷಗಳು ಪೂರೈಸುತ್ತಿದ್ದರೂ ಇನ್ನೂ ಹಂತಕರ ಸುಳಿವು ಪತ್ತೆಯಾಗದಿರುವುದನ್ನು ಕಂಡು ಕಲಬುರ್ಗಿ ಅವರ ಪತ್ನಿ ನಟ ಪ್ರಕಾಶ ರೈ ಅವರ ಎದುರು ಕಣ್ಣೀರು ಹಾಕಿದರು.
ನಂತರ ಸುದ್ದಿಗಾರರೊಂಗಿ ಮಾತನಾಡಿದ ನಟ ಪ್ರಕಾಶ ರೈ, ನಾನು ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿರುವುದು ಕುಟುಂಬದ ಒಬ್ಬ ಸದಸ್ಯನಾಗಿಯೇ ಹೊರತು ಇದೊಂದು ಸಾಂತ್ವನದ ಭೇಟಿಯಲ್ಲ ಎಂದರು.
ಸಂಶೋಧಕ ಕಲಬುರ್ಗಿ ಅವರು ನಿಷ್ಠುರ ಸ್ವಭಾವದ ವ್ಯಕ್ತಿಗಳಾಗಿದ್ದರು. ಯಾವಾಗಿದ್ದರೂ ಅವರು ಸತ್ಯವನ್ನೇ ಹೇಳುತ್ತಿದ್ದರು. ಹೀಗಾಗಿ ಅವರ ಕೊಲೆ ನಡೆದಿದೆ. ಕಲಬುರ್ಗಿ ಅವರು ನಮಗೆಲ್ಲ ಒಂದು ದೊಡ್ಡ ಆಸ್ತಿಯಾಗಿದ್ದರು. ಇಂದು ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ. ನಮ್ಮ ಬಡತನಕ್ಕೆ ಕಾರಣರಾದವರನ್ನು ಬಿಡಬಾರದು. ಕಲಬುರ್ಗಿ ಅವರು, ಸಿಟ್ಟಿರಲಿ ಆದರೆ, ದ್ವೇಷ ಬೇಡ ಎನ್ನುತ್ತಿದ್ದರು ಎಂದರು.
ಇತ್ತೀಚೆಗೆ ಹತ್ಯೆಗೀಡಾದ ಗೌರಿ ಲಂಕೇಶ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಅವರ ಹತ್ಯೆಗೂ ನಾಲ್ಕು ದಿನ ಮುಂಚೆ ಅವರು ಸಿಎಂ ಅವರನ್ನು ಭೇಟಿ ಮಾಡಿ ಬಂದಿದ್ದರು. ಕಲಬುರ್ಗಿ ಹತ್ಯೆ ಸಂಬಂಧ ಸಿಎಂ ಬಳಿ ಗೌರಿ ಆಗ ಚರ್ಚೆ ನಡೆಸಿದ್ದರು. ಅದಾಗಿ ನಾಲ್ಕೇ ದಿನದಲ್ಲಿ ಗೌರಿ ಅವರ ಹತ್ಯೆಯೂ ಆಗಿದೆ. ಇಂಥ ಕೊಲೆಗಳಿಂದ ನಮ್ಮ ಧ್ವನಿ ತಗ್ಗಿಸಲು ಸಾಧ್ಯವಿಲ್ಲ. ಧ್ವನಿ ಎತ್ತುವವರ ಸಂಖ್ಯೆ ಹೆಚ್ಚುತ್ತಿದೆ. ನಾವು ನಿರಂತರ ಪ್ರಶ್ನೆ ಮಾಡಿದಾಗಲೇ ನಮಗೆ ನ್ಯಾಯ ಸಿಗುತ್ತದೆ. ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಅವರ ಕುಟುಂಬದವರು ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಫೆ.23 ರಂದು ಅರ್ಜಿ ವಿಚಾರಣೆ ಹೊರಬರಲಿದೆ. ಅದನ್ನು ಗಮನಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು.