UK Suddi
The news is by your side.

ಬಳ್ಳಾರಿ ನಗರ ಪಾಲಿಕೆಗೆ ಬೆಸ್ಟ್ ಪ್ರಾಕ್ಟಿಸ್ ಅವಾರ್ಡ್.

ಬಳ್ಳಾರಿ:ಬಳ್ಳಾರಿ ಮಹಾನಗರ ಪಾಲಿಕೆಯು ನಗರದಲ್ಲಿ ಕಳೆದ ಏಳು ತಿಂಗಳ ಹಿಂದೆ ಏರ್ಪಡಿಸಿದ್ದ ಗೋಡೆ ಚಿತ್ರಬರಹ ಉತ್ಸವಕ್ಕೆ ಸಿಮ್ಯಾಕ್ ಸಂಸ್ಥೆ ಬೆಸ್ಟ್ ಪ್ರಾಕ್ಟಿಸ್ ಅವಾರ್ಡ್ ನೀಡಿ ಗೌರವಿಸಿದೆ. 

ಜನರ ಜೀವನಶೈಲಿ ಬದಲಾವಣೆ ಅಡಿ ಮತ್ತು ಸ್ವಚ್ಛತೆಗೆ ಜನರ ಪ್ರೇರೆಪಿಸುವುದನ್ನು ಗುರುತಿಸಿ ನಗರ ಸ್ಥಳೀಯ ಸಂಸ್ಥೆಗಳ ವರ್ಗದಲ್ಲಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ನಗರದ ನಾಗರಿಕರನ್ನು ಭಾಗಿಗಳನ್ನಾಗಿ ಮಾಡಿ ಗೋಡೆ ಚಿತ್ರಬರಹ ಉತ್ಸವ ಏರ್ಪಡಿಸುವ ಮೂಲಕ ಅವರ ಜೀವನಶೈಲಿಯ ಬದಲಾವಣೆಗೆ ಮತ್ತು ಸ್ವಚ್ಛತೆಗೆ ಶ್ರಮಿಸಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಸಿಮ್ಯಾಕ್  ಸಂಸ್ಥೆ ಮತ್ತು ಪೌರಾಡಳಿತ ನಿರ್ದೇಶನಾಲಯವು ಬಳ್ಳಾರಿ ಮಹಾನಗರ ಪಾಲಿಕೆಗೆ 2016-17ನೇ ಸಾಲಿನ ಬೆಸ್ಟ್ ಪ್ರಾಕ್ಟಿಸ್ ಅವಾರ್ಡ್ ಪ್ರಕಟಿಸಿದ್ದು, ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಪರಿಸರ ಎಂಜನಿಯರ್ ಶ್ರೀನಿವಾಸ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಗೋಡೆ ಬರಹ ಚಿತ್ರ ಉತ್ಸವವಕ್ಕೆ ವಿಶೇಷ ಮುತುವರ್ಜಿ ವಹಿಸಿದ್ದ ಬಳ್ಳಾರಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಆರಂಭದಲ್ಲಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಮೂಲಕ ಆರಂಭಿಸಿದ್ದರು. ನಂತರ ನಗರದ ನಾಗರಿಕರ, ವಿವಿಧ ಸಂಘ-ಸಂಸ್ಥೆಗಳ ಮತ್ತು ಸ್ವಯಂ ಸೇವಕರ ಬೆಂಬಲ ಹಾಗೂ ಮಾಧ್ಯಮಗಳ ಅಭೂತಪೂರ್ವ ಬೆಂಬಲದ ಪರಿಣಾಮವಾಗಿ ಗೋಡೆ ಬರಹ ಚಿತ್ರ ಉತ್ಸವ ಒಂದು ಆಂದೋಲನವಾಗಿ ಮಾರ್ಪಟ್ಟಿತ್ತು. ಇದು ಬಳ್ಳಾರಿ ನಗರಕ್ಕೆ ಮಾತ್ರ ಸೀಮಿತವಾಗದೇ ಜಿಲ್ಲೆಯಲ್ಲಿನ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೂ ವ್ಯಾಪಿಸಿತ್ತು.

ಬಳ್ಳಾರಿ ಮಹಾನಗರ ಪಾಲಿಕೆಯ ಈ ಕಾರ್ಯ ಗಮನಿಸಿ ಸಿಮ್ಯಾಕ್ ಸಂಸ್ಥೆ ಪ್ರಶಸ್ತಿ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು, ಈ ಪ್ರಶಸ್ತಿ ಮಹಾನಗರ ಪಾಲಿಕೆ ಇನ್ನಷ್ಟು ಪರಿಣಾಮಕಾರಿಯಾಗಿ ಈ ರೀತಿಯ ಕೆಲಸಗಳು ಮಾಡಲು ಪ್ರೇರಣೆ ನೀಡಿದೆ ಎಂದರು. ಇದನ್ನು ನಮ್ಮ ಪಾಲಿಕೆಯ ಪೌರಕಾರ್ಮಿಕರಿಗೆ, ಬೆಂಬಲ ನೀಡಿದ ಸ್ವಯಂ ಸೇವಕರಿಗೆ ಮತ್ತು ನಗರ ನಾಗರಿಕರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.

ಗೋಡೆ ಬರಹ ಚಿತ್ರ ಉತ್ಸವದಲ್ಲಿ ಪರಿಸರ ಕಾಳಜಿಯ, ಸ್ವಚ್ಛತೆ ಸಂದೇಶ ಸಾರುವ, ಅರಣ್ಯ ರಕ್ಷಣೆ,  ಮಹಿಳಾ ಮತ್ತು ಮಕ್ಕಳ ರಕ್ಷಣೆ, ಹೆಣ್ಮಕ್ಕಳ ಶಿಕ್ಷಣ, ನಮ್ಮ ಗತವೈಭವದ ಇತಿಹಾಸದ ಸಂದೇಶ ಸಾರುವ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಸಲಾಗಿತ್ತು. 

ವರದಿ:ಮಂಜುನಾಥ ಅಯ್ಯಸ್ವಾಮಿ

Comments